Wednesday, January 19, 2022
spot_img
HomeUncategorizedಶಿಕ್ಷಣದ ಚಿತ್ತ…ಎತ್ತಿಂದೆತ್ತ (ಅತ್ತಿಂದಿತ್ತ)

ಶಿಕ್ಷಣದ ಚಿತ್ತ…ಎತ್ತಿಂದೆತ್ತ (ಅತ್ತಿಂದಿತ್ತ)

ಮಾನವತೆಯ ನಂದನಕೆ !
ಗಮಗಮಿಪ ಚಂದನಕೆ !
ವಿನಯ ವಿದ್ಯುತ್ತಿನ ವಿಳಾಸಕೆ !
ಸಜ್ಜನಿಕೆಯ ಸಂಕೇತಕೆ !
ಗುರುತ್ವದ ಶಿಖರಕೆ !
ತತ್ವಶಾಸ್ತ್ರದ ತೇಜಕೆ !
ಶಿಷ್ಯರ ಮನಗೆದ್ದ ತಾಯ್ತನಕೆ !

ದೇಶವನ್ನು ಕಟ್ಟುವ ಗುರು ವೃಂದವನ್ನು ನೆನಪಿಸಿಕೊಳ್ಳುವಂತೆ ಮಾಡಿದ ರಾಧಾಕೃಷ್ಣನ್ ಎಂಬ ಮಹಾನ್ ಚೇತನಕ್ಕೆ ವಂದನೆ ಅಭಿನಂದನೆ.
ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದೆಡೆ ಆಗಲಿ ಮಹಾಪ್ರಸಾದವೆಂದೆನಯ್ಯ, ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದೆಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ, ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಜಂಘಿಸಿ ಬುದ್ದಿಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ, ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕೆ ನಾ ಬೆರಗಾದೆನಯ್ಯಾ ಗುಹೇಶ್ವರಾ. ಅಲ್ಲಮ ಮಹಾಪ್ರಭುಗಳ ಗುರು-ಶಿಷ್ಯರ ಬಗೆಗಿನ ಈ ಚಿಂತನೆ ಆಪ್ಯಾಯಮಾನವಾದದ್ದು.

ಸ್ವಸ್ಥ ಸಮಾಜದಿಂದಲೇ ದೇಶದ ಪ್ರಗತಿ ಸಾಧ್ಯ
ಹನ್ನೆರಡನೆಯ ಶತಮಾನದಿಂದ ಹಿಡಿದು ಸರಿಸುಮಾರು 19ನೇ ಶತಮಾನದವರೆಗೂ ಶಿಕ್ಷಣವೆನ್ನುವುದು ಸಿದ್ಧಾಂತದ ನೆಲೆಗಟ್ಟಿನಲ್ಲಿಯೇ ಗಟ್ಟಿಯಾಗಿತ್ತು ಎಂಬುದು ಇದರಿಂದ ರುಜುವಾಗುತ್ತದೆ. ಇಂದಿನ ಮತ್ತು ಹಿಂದಿನ ಶಿಕ್ಷಣದ ರೀತಿ-ನೀತಿಗೆ ಹೊಸ ಶಿಕ್ಷಣ ನೀತಿಯನ್ನು ತಳಕುಹಾಕಿ ನೋಡಿದಾಗ ಯಾವುದೋ ಲಾಬಿಯ, ಏಕಮುಖಿ ಚಿಂತನೆಯ ಅಡ್ಡ ವಾಸನೆ ಗಮನಕ್ಕೆ ಬರದಿರುವುದಿಲ್ಲ. ವಿಷಯ ಪುಷ್ಟಿ, ಬೋಧನಾ ವಿಧಾನಗಳ ಕರತಲಾಮಲಕತೆ, ಚಟುವಟಿಕೆ ನಿರೂಪಣೆ, ಸಾಧನೋಪಕರಣಗಳ ಸುಜ್ಞಾನ ಮತ್ತು ಆಧುನಿಕ ಬೆಳವಣಿಗೆಯ ಜ್ಞಾನ ಇವುಗಳನ್ನು ಯಾರು ಆಚರಿಸಿ ಬೋಧಿಸುತ್ತಾರೋ ಅವರೇ ಆಚಾರ್ಯರು ಎನಿಸಿಕೊಳ್ಳುತ್ತಾರೆ. ಶಿಕ್ಷಣದ ಗುಣಮಟ್ಟ ಶಿಕ್ಷಕರಿಂದಲೇ ನಿರೂಪಿಸಲ್ಪಡುವುದು. ಶಿಕ್ಷಕ ಯೋಗ್ಯನಾದರೆ ಶಿಕ್ಷಣದ ಗುಣಮಟ್ಟ ಯೋಗ್ಯವಾಗುವುದು. ಉತ್ತಮ ಗುಣಮಟ್ಟದ ಶಿಕ್ಷಣ ಪಡೆದ ಯುವಜನಾಂಗ ಗಟ್ಟಿಯಾಗುವುದು. ದಕ್ಷ ಯುವಕರಿಂದಲೇ ಸ್ವಸ್ಥ ಸಮಾಜದ ನಿರ್ಮಾಣ, ಸ್ವಸ್ಥ ಸಮಾಜದಿಂದಲೇ ದೇಶದ ಪ್ರಗತಿ ಸಾಧ್ಯ.

ಹೊಸ ರೀತಿ-ನೀತಿ ನೋಡಲು ಸರಳ, ಸುಂದರ ಆದರೆ ಮನಸ್ಸಿನಾಳದಲ್ಲಿ ಗೊಂದಲದ ಅನುಭವ. ಸಂವೇದನಾಶೀಲ ಆದರೆ ಪರರನ್ನು ಅನುಕರಿಸಿದ ಭಾವನೆಯಿಂದ ಹುಟ್ಟಿದ ಕೃತಕತೆ, ಹಳೆಯದನ್ನೆಲ್ಲ ತೊರೆಯುವ ಉಲ್ಲಾಸ, ಹೊಸದೇನು ಕಾಣದ ಅತಂತ್ರ ಸ್ಥಿತಿ, ಸ್ಪರ್ಧಾತ್ಮಕ ಬದುಕಿನ ಜೊತೆ ಓಡಿದ ಗೆಲುವು. ಆದರೆ ಎಲ್ಲೋ ಮಧ್ಯದಲ್ಲಿ ಕಳೆದುಹೋಗುತ್ತಿರುವ ಭಯ. ಇದು ಇಂದಿನ ಯುವಜನಾಂಗ ಹೊಸ ಶಿಕ್ಷಣ ನೀತಿಯಿಂದ ಎದುರಿಸಬೇಕಾಗಿರುವ ಪರಿಸ್ಥಿತಿಯ ನೈಜ ಚಿತ್ರಣ.

ಹೊಸ ತಂತ್ರಜ್ಞಾನದ ಕ್ರಾಂತಿಯಿಂದಾಗಿ ಇಂದಿನ ಯುವಜನತೆಯ ದೃಷ್ಟಿ ಉನ್ನತ ಶಿಕ್ಷಣಕ್ಕಿಂತ ವೃತ್ತಿ ಶಿಕ್ಷಣದ ಕಡೆಗೆ ವಾಲುತ್ತಿದೆ. ವಿದ್ಯಾಭ್ಯಾಸ ಜ್ಞಾನಾರ್ಜನೆ ಗಳ ದೀರ್ಘಕಾಲಿಕ ಪರಿಶ್ರಮದ ತರುವಾಯ ಬರಬಹುದಾದ ಪ್ರತಿಫಲಕ್ಕಾಗಿ ಕಾಯುವಷ್ಟು ವ್ಯವಧಾನ ಇಲ್ಲದ ಪರಿಸ್ಥಿತಿ, ಸಂಪ್ರದಾಯ ಮೂಢನಂಬಿಕೆ ದುಶ್ಚಟಗಳಿಗೆ ಅಂಟಿಕೊಂಡ ಮನಸ್ಥಿತಿ, ಸ್ವಾರ್ಥ ಸಾಧನೆಗಾಗಿ ಬಲಿಪಶುಗಳಾಗುವ ವಿದ್ಯಾರ್ಥಿ ಸಮುದಾಯ ಹೀಗೆ ಹತ್ತು ಹಲವು ಪ್ರತಿಕೂಲತೆಗಳು ಯುವಜನಾಂಗದ ಮಾನಸಿಕತೆಯನ್ನು ಗೊಂದಲಕ್ಕೀಡು ಮಾಡಿದೆ. ಇಂದು ಎಲ್ಲರಿಗೂ ಅವರವರ ಅಸ್ತಿತ್ವ ಉಳಿಸಿಕೊಳ್ಳುವುದೇ ಒಂದು ದೊಡ್ಡ ಪ್ರಶ್ನೆಯಾಗಿದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೊದಲನೆಯವನಾಗುವುದೇ ಅತಿ ಮುಖ್ಯವಾಗಿದೆ. ತುತ್ತು ಅನ್ನಕ್ಕಾಗಿ ಗೇಣು ಬಟ್ಟೆಗಾಗಿ ಇಂದಿನ ಯುವಜನತೆ ಆಶಾಡಭೂತಿಯಾಗಿ ಬೆಳೆಯುತ್ತಿರುವ ನಿರುದ್ಯೋಗದ ಎದುರು ಅತಂತ್ರರಾಗುತ್ತಿದ್ದಾರೆ. ಬಂಡಾಯವೆದ್ದು ಇತಿಹಾಸದ ದಾರಿಯನ್ನು ಬದಲಿಸಬೇಕೆಂಬ ಭಗತ್ ಸಿಂಗ್‌ ನ ಕಿಚ್ಚು ಇಂದು ನಮ್ಮಲ್ಲಿಲ್ಲ. 10 ರ ಜೊತೆಗೆ 11 ಎಂಬಂತೆ ಜೈ ಎನ್ನುವ ಮನೋಭಾವ. ಇದು ಭಾರತದಂತಹ ವಿಕಾಸಶೀಲ ರಾಷ್ಟ್ರಕ್ಕೆ ಅಸಾಧ್ಯವಾದ ಕೊಡಲಿಯೇಟು. ಈ ವೈಪರೀತ್ಯಕ್ಕೆ ಪ್ರತ್ಯಕ್ಷ-ಪರೋಕ್ಷ ಹೊಣೆ ಯಾರು ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರು ಹಾಕಿಕೊಳ್ಳಬೇಕಾಗಿದೆ. ನಾನು ಮತ್ತು ನನ್ನದು ಮಾತ್ರ ಎಂಬ ಸ್ವಾರ್ಥಪರ ಜೊಳ್ಳು ಹಾರಿಹೋಗಿ ನಾವು ಮತ್ತು ನಮ್ಮದು ಎಂಬ ಸಮಷ್ಟಿಯ ಚಿಂತನೆ ಬಂದಾಗ ಮಾತ್ರ ಶಿಕ್ಷಣದ ಚಿತ್ತ ಅತ್ತಿಂದಿತ್ತ ಹೋಗದೆ ಲಕ್ಷ್ಯ ಬೇಧಿಸುವಲ್ಲಿ ಸಕ್ಷಮವಾದಿತು.

ಶಿಕ್ಷಕ ಅನುದಿನವೂ ವಿದ್ಯಾರ್ಥಿಯಾಗಿರಬೇಕು !
ಅಧ್ಯಯನ ಅಧ್ಯಾಪನದಿ ನಿರತನಾಗಿರಬೇಕು !
ಶಿಷ್ಯನ ಚಿತ್ತಾಪಹಾರಿ ಬೋಧನಾ ಕೌಶಲವಿರಬೇಕು
ಶಿಷ್ಯನು ಅಡಿಗಡಿಗೆ ಗುರುವನು ನೆನಪಿಸುತಿರಬೇಕು !
ಗುರುಶಿಷ್ಯರ ನೆನಪು ಅಜರಾಮರವಾಗಿರಬೇಕು
ಎಂದಳಾ ತುಳಸಿಪ್ರಿಯೆ ಭಗವತಿ

ಮಾಲತಿ. ಜಿ. ಪೈ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!