Wednesday, January 26, 2022
spot_img
Homeಅಂಕಣಆರೋಗ್ಯಧಾರ - ರೋಗ ಬಾರದೇ ಇರಲು ಹೀಗೆ ಮಾಡಿರಿ (ಭಾಗ 1)

ಆರೋಗ್ಯಧಾರ – ರೋಗ ಬಾರದೇ ಇರಲು ಹೀಗೆ ಮಾಡಿರಿ (ಭಾಗ 1)

ರೋಗ ಬಂದ ಮೇಲೆ ಅದನ್ನು ಸರಿಪಡಿಸುವುದಕ್ಕಿಂತ ಒಳ್ಳೇದು ರೋಗ ಬಾರದೇ ಇರುವುದು. ಆಯುರ್ವೇದದ ಮುಖ್ಯ ಉದ್ದೇಶ ಜನರಿಗೆ ರೋಗ ಬಾರದೇ ಇರುವುದು ಹೇಗೆ ಎಂದು ತಿಳಿಸುವುದು. ದಿನನಿತ್ಯ ನಾವು ದೇಹ ಶುದ್ಧಿಯನ್ನು ಮಾಡುತ್ತೇವೆ. ಅದನ್ನು ಸರಿಯಾಗಿ ಮಾಡಿದರೆ ರೋಗ ದೂರ ಸರಿಯುವುದಲ್ಲದೆ ನಮ್ಮ ದೇಹವನ್ನು ಕೂಡ ಸದೃಢಗೊಳಿಸುತ್ತದೆ. ಆಯುರ್ವೇದದಲ್ಲಿ ದಿನಚರ್ಯ ಋತುಚರ್ಯಗಳ ವಿಸ್ತಾರವಾದ ವಿವರಣೆಯಿದೆ. ದಿನಚರ್ಯವೆಂದರೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ನಾವು ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂದು. ಹಾಗೆಯೆ ಋತುಚರ್ಯವೆಂದರೆ ಬೇರೆ ಬೇರೆ ಋತುವಿನಲ್ಲಿ ನಾವು ಪಾಲಿಸಬೇಕಾದ ನಿಯಮಗಳನ್ನು ತಿಳಿಸಿದೆ. ಇವತ್ತು ದಿನಚರಿಯ ಪಾಲಿಸುವುದರಿಂದ ಯಾವ ಯಾವ ರೋಗಗಳನ್ನು ತಡೆಯಬಹುದು ಎಂದು ತಿಳಿದುಕೊಳ್ಳೋಣ.

ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು – ಮೊದಲಿಗೆ ನಾವು ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕೆಂದು ಆಯುರ್ವೇದದಲ್ಲಿ ತಿಳಿಸಿದೆ. ಈ ಸಮಯದಲ್ಲಿ ವಾತಾವರಣ ಶುದ್ಧವಾಗಿರುತ್ತದೆ ಮನಸ್ಸು ಶಾಂತವಾಗಿರುತ್ತದೆ ಹಾಗೂ ದಿನ ಶುರು ಮಾಡಲು ಪ್ರಶಸ್ತ ಸಮಯ. ಮನಸ್ಸು ಪ್ರಸನ್ನವಾಗಿದ್ದರೆ ನಮಗೆ ರೋಗ ಹತ್ತಿರ ಸುಳಿಯುವುದಿಲ್ಲ. ಬ್ರಾಹ್ಮಿ ಮುಹೂರ್ತವೆಂದರೆ ಸೂರ್ಯೋದಯಕ್ಕಿಂತ ಒಂದೂವರೆ ಗಂಟೆ ಮೊದಲು. ಈ ಸಮಯದಲ್ಲಿ ಎದ್ದರೆ ಮಲಬದ್ಧತೆಯ ಸಮಸ್ಯೆ ಇರುವುದಿಲ್ಲ.

ಶೌಚವಿಧಿ – ಅಂದರೆ ಮಲ ತ್ಯಾಗ ಮಾಡುವುದು. ನಮ್ಮ ಜೀರ್ಣಕ್ರಿಯೆ ಸರಿಯಾಗಿದ್ದರೆ ನಾವು ತಿನ್ನುವಂತಹ ಆಹಾರ ಸರಿಯಾಗಿ ಜೀರ್ಣವಾಗುವುದು. ಆಗ ಮಲಬದ್ದತೆ ಕಾಡದು. ಆದ್ದರಿಂದ ಆಯುರ್ವೇದದಲ್ಲಿ ಹೇಳಿರುವಂತಹ ಆಹಾರ ವಿಧಿಯನ್ನು ಸರಿಯಾಗಿ ಪಾಲಿಸಿದರೆ ಮಲಬದ್ದತೆ ಕಾಡುವುದಿಲ್ಲ. ( ಆಹಾರ ವಿಧಿಯ ಬಗ್ಗೆ ಪ್ರತ್ಯೇಕ ಲೇಖನದಲ್ಲಿ ತಿಳಿಸಲಾಗಿದೆ). ಆಗ ನಮ್ಮ ಜಠರಾಗ್ನಿಯು ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಅನೇಕ ರೋಗಗಳು ಉತ್ಪನ್ನವಾಗುವುದು ಆಮದೋಷದಿಂದ ಅಂದರೆ ಜೀರ್ಣವಾಗದ ಆಹಾರದಿಂದ. ಆದ್ದರಿಂದ ನಮ್ಮ ಜೀರ್ಣಕ್ರಿಯೆ ಸರಿಯಾಗಿದ್ದರೆ ಅನೇಕ ಕಾಯಿಲೆಗಳನ್ನು ತಡೆಯಬಹುದು.

ದಂತಧಾವನ – ಅಂದರೆ ಹಲ್ಲನ್ನು ಉಜ್ಜುವುದು. ಆಯುರ್ವೇದದಲ್ಲಿ ಹೇಳಿರುವ ಪ್ರಕಾರ ಅರ್ಕ, ಖದೀರ, ಕಹಿಬೇವು, ಅರ್ಜುನ ಇದರ ಕಡ್ಡಿಯನ್ನು ಹಲ್ಲುಜ್ಜಲು ಬಳಸುವುದು ಹಿತಕರ. ಖಾರ, ಕಹಿ, ಕಷಾಯ ರಸವಿರುವ ದ್ರವ್ಯಗಳನ್ನು ಬಳಸಿದರೆ ಹಲ್ಲುಗಳಿಗೆ ಒಳ್ಳೆಯದು. ಈಗಿನ ಕಾಲದಲ್ಲಿ ಆಯುರ್ವೇದ ಟೂತ್ಪೇಸ್ಟನ್ನು ಬಳಸಬಹುದು. ದಂತಮಂಜನವನ್ನು ಕೂಡ ಬಳಸಬಹುದು. ದಂತಮಂಜನ ಪೌಡರನ್ನು ಮೂರನೇ ಬೆರಳಿನಿಂದ ಎಲ್ಲ ಹಲ್ಲುಗಳನ್ನು ಉಜ್ಜಬೇಕು. ಹಲ್ಲು ಉಜ್ಜಿದ ಬಳಿಕ ತ್ರಿಫಲ ಚೂರ್ಣ ಅಥವಾ ತ್ರಿಕಟು ಚೂರ್ಣ ಅಥವಾ ತ್ರಿಜಾತಿ ಚೂರ್ಣವನ್ನು ಜೇನುತುಪ್ಪದಲ್ಲಿ ಬೆರೆಸಿ ದಂತಗಳಿಗೆ ಉಜ್ಜಬೇಕು. ಬಳಿಕ ನೀರಿನಿಂದ ಬಾಯನ್ನು ಸರಿಯಾಗಿ ತೊಳೆಯಬೇಕು. ಹೀಗೆ ಮಾಡುವುದರಿಂದ ಹಲ್ಲುಗಳು ಸದೃಡವಾಗಿರುತ್ತದೆ ಹಾಗೂ ದಂತಕ್ಷಯ, ದಂತ ಹುಳು ಹಾಗೂ ಇನ್ನಿತರ ದಂತ ರೋಗಗಳು ಹಾಗೂ ವಸಡಿನ ಸಮಸ್ಯೆ ಸುಳಿಯುವುದಿಲ್ಲ. ಮೊದಲಿಗೆ ಕೆಳಗಿನ ದಂತ ಪಂಕ್ತಿಯನ್ನು ಉಜ್ಜಿ ಬಳಿಕ ಮೇಲಿನ ದಂತಪಂಕ್ತಿಯನ್ನು ಉಜ್ಜಬೇಕು. ನೀರಿನಿಂದ ಸರಿಯಾಗಿ ಬಾಯಿಯನ್ನು ತೊಳೆದು ನಂತರ ಬಾಯಲ್ಲಿ ನೀರು ತುಂಬಿಸಿ ಕಣ್ಣುಗಳನ್ನು ಶುದ್ಧ ನೀರಿನಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ದೃಷ್ಟಿ ದೋಷಗಳು ದೂರವಾಗುತ್ತದೆ. ಕಣ್ಣುಗಳಿಗೆ ಒಳ್ಳೆಯದು.

ಜೀವಹಾನಿಲೇಖನ- ಅಂದರೆ ನಾಲಿಗೆಯನ್ನು ಸರಿಯಾಗಿ ಶುದ್ಧ ಮಾಡುವುದು. ಇದರಿಂದ ಬಾಯಿ ರುಚಿ ಹೆಚ್ಚುತ್ತದೆ ಹಾಗೂ ಬಾಯಿ ದುರ್ಗಂಧ ಕಡಿಮೆಯಾಗುತ್ತದೆ. ಅನೇಕ ರೋಗಗಳು ಮಾಯವಾಗುತ್ತವೆ.
ಮುಂದುವರಿಯುವುದು.

ಡಾ. ಹರ್ಷಾ ಕಾಮತ್

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!