Wednesday, January 19, 2022
spot_img
Homeಅಂಕಣಕಾನೂನು ಕಣಜ: ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984

ಕಾನೂನು ಕಣಜ: ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984

 1. ಸಾರ್ವಜನಿಕ ಕ್ಷೇತ್ರದಲ್ಲಿನ ಆಡಳಿತ ನಿರ್ವಹಣೆ ಮತ್ತು ಕಾರ್ಯ ಚಟುವಟಿಕೆಗಳಲ್ಲಿ ನಡೆಯುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ ಮತ್ತು ಅಶಿಸ್ತಿನ ಪ್ರಕರಣಗಳನ್ನು ತಡೆಗಟ್ಟುವ ಅಥವಾ ನಿಯಂತ್ರಿಸುವ ಉದ್ದೇಶದಿಂದ ಆಡಳಿತ ಸುಧಾರಣಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 ರ ಕಾನೂನು ದಿನಾಂಕ 15-01-1986 ರಿಂದ ಜಾರಿಗೆ ಬಂದಿರುತ್ತದೆ.
 2. ಭಾರತ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಅಥವಾ ಯಾವುದೇ ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿರುವ ನ್ಯಾಯಾಧೀಶರನ್ನು ಲೋಕಾಯುಕ್ತರನ್ನಾಗಿಯೂ
  ಮತ್ತು ಯಾವುದೇ ರಾಜ್ಯದ ಉಚ್ಚ ನ್ಯಾಯಾಲಯ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿರುವ ನ್ಯಾಯಾಧೀಶರನ್ನು ಉಪಲೋಕಾಯುಕ್ತರನ್ನಾಗಿಯೂ ಕರ್ನಾಟಕ ಲೋಕಾಯುಕ್ತ ಅಧಿನಿಯಮದಂತೆ ನೇಮಕ ಮಾಡಬಹುದಾಗಿದೆ.
 3. ರಾಜ್ಯದ ಮುಖ್ಯಮಂತ್ರಿ, ಇತರ ಮಂತ್ರಿಗಳು, ಸರ್ಕಾರದ ಎಲ್ಲಾ ಸಾರ್ವಜನಿಕ ಅಧಿಕಾರಿಗಳು, ಸಹಕಾರಿ ಸಂಘಗಳ ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸರ್ಕಾರದಿಂದ ರಚಿತವಾದ ಯಾವುದೇ ಪ್ರಾಧಿಕಾರ, ನಿಗಮ ಅಥವಾ ಮಂಡಳಿಯ ಅಧ್ಯಕ್ಷರು, ಸದಸ್ಯರು, ಸರ್ಕಾರದ ನಿಯಂತ್ರಣದಲ್ಲಿರುವ ಯಾವುದೇ ಸ್ಥಳೀಯ ಆಡಳಿತ ಸಂಸ್ಥೆ ಅಂದರೆ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಸಿಟಿ ಕಾರ್ಪೋರೇಶನ್ ಮತ್ತು ವಿಶ್ವ
  ವಿದ್ಯಾನಿಲಯಗಳ ಆಡಳಿತ ವರ್ಗ ಮತ್ತು ಸಿಬ್ಬಂದಿ ವರ್ಗ, ಸಾರ್ವಜನಿಕರಿಂದ ದೇಣಿಗೆ ಪಡೆಯುವ ಸರ್ಕಾರದ ನಿಯಂತ್ರಣಕ್ಕೊಳಪಟ್ಟ ಯಾವುದೇ ಶಿಕ್ಷಣ ಹಾಗೂ ಧಾರ್ಮಿಕ ಸಂಸ್ಥೆಯ ಆಡಳಿತ ವರ್ಗ ವಗೈರೆ ಎಲ್ಲರೂ ಈ ಮೇಲ್ಕಾಣಿಸಿದ ಲೋಕಾಯುಕ್ತ ಕಾಯಿದೆಯ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕ ನೌಕರರಾಗಿರುತ್ತಾರೆ.
 4. ಸಾರ್ವಜನಿಕ ಕ್ಷೇತ್ರದಲ್ಲಿನ ದುರಾಡಳಿತದ ಪರಿಣಾಮವಾಗಿ ಅಥವಾ ಸಾರ್ವಜನಿಕ ಆಡಳಿತಕ್ಕೆ ಸಂಬಂಧಪಟ್ಟ ಕುಂದುಕೊರತೆಗಳಿಂದ ಯಾವುದೇ ವ್ಯಕ್ತಿ ಅನ್ಯಾಯ ಅಥವಾ ತೊಂದರೆಗೆ ಒಳಗಾದ ಸಂದರ್ಭದಲ್ಲಿ ಅಂತಹ ವ್ಯಕ್ತಿ
  ಕರ್ನಾಟಕ ಲೋಕಾಯುಕ್ತ ಅಧಿನಿಯಮದ ಪ್ರಕಾರ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ದೂರನ್ನು ಸಲ್ಲಿಸಬಹುದು.
 5. ಲೋಕಾಯುಕ್ತ ಸಂಸ್ಥೆಗೆ ನೀಡುವ ದೂರು ನಿರ್ದಿಷ್ಟ ನಮೂನೆಯಲ್ಲಿ ಇರಬೇಕಾಗಿದ್ದು ಅದರೊಂದಿಗೆ ಫಿರ್ಯಾದುದಾರ ಒಂದು ಪ್ರಮಾಣ ಪತ್ರವನ್ನು ಸಹ ಲಗತ್ತಿಸಬೇಕು. ಆ ದೂರಿನ ಒಂದು ಪ್ರತಿಯನ್ನು ಎದುರಾಳಿಗೆ ಅಂದರೆ ಸಂಬಂಧಪಟ್ಟ ಸಾರ್ವಜನಿಕ ನೌಕರನಿಗೆ ಮತ್ತು ಆತನ ಮೇಲಧಿಕಾರಿಗೆ ಕಳುಹಿಸಿ ಕೊಡಬೇಕಾಗುತ್ತದೆ. ಆ ದೂರಿಗೆ ಸಂಬಂಧಪಟ್ಟಂತೆ ತಕರಾರು ಸಲ್ಲಿಸಲು ಸದರಿ ಸಾರ್ವಜನಿಕ ನೌಕರನಿಗೆ ಅವಕಾಶ ಕಲ್ಪಿಸಿಕೊಡಲಾಗುವುದು. ದೂರನ್ನು ಮತ್ತು ಸಂಬಂಧಿಸಿದ ನೌಕರ ಸಲ್ಲಿಸುವ ತಕರಾರನ್ನು ಪರಿಶೀಲಿಸಿ ಲೋಕಾಯುಕ್ತರು ಇಲ್ಲವೇ ಉಪಲೋಕಾಯುಕ್ತರು ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತಾರೆ. ಫಿರ್ಯಾದುದಾರನಿಗೆ ಅನ್ಯಾಯ ಅಥವಾ ಯಾವುದೇ ತೊಂದರೆಯಾಗಿದೆ ಎಂದು ತನಿಖೆಯಲ್ಲಿ ಕಂಡು ಬಂದಲ್ಲಿ ಅದನ್ನು ಒಂದು ನಿರ್ದಿಷ್ಟ ಅವಧಿಯೊಳಗೆ ಮತ್ತು ನಿರ್ದಿಷ್ಟ ರೀತಿಯಲ್ಲಿ ಸರಿಪಡಿಸುವಂತೆ ಲೋಕಾಯುಕ್ತರು ಇಲ್ಲವೇ ಉಪಲೋಕಾಯುಕ್ತರು ಶಿಫಾರಸ್ಸು ಮಾಡಲು ಅವಕಾಶ ಇದೆ. ಸಾರ್ವಜನಿಕ ನೌಕರನ ವಿರುದ್ಧ ಮಾಡಿರುವ ಆಪಾದನೆ ಸಮರ್ಥನೀಯವೆಂದು ಕಂಡು ಬಂದಲ್ಲಿ ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಹ ಅಧಿಕಾರ
  ಇರುತ್ತದೆ. ಸಾರ್ವಜನಿಕ ನೌಕರನ ವಿರುದ್ಧ ಮಾಡಿರುವ ಆಪಾದನೆ ನಿಜವೆಂದು ಪುಷ್ಟೀಕರಿಸುವ ಸಾಕ್ಷಿ ಪುರಾವೆ ಇದೆಯೆಂದು ಲೋಕಾಯುಕ್ತರಿಗೆ ಅಥವಾ ಉಪಲೋಕಾಯುಕ್ತರಿಗೆ ಮನವರಿಕೆ ಆದಲ್ಲಿ ಮತ್ತು ಅಂತಹ ವ್ಯಕ್ತಿ ಆ
  ಹುದ್ದೆಯಲ್ಲಿ ಮುಂದುವರೆಯತಕ್ಕದ್ದಲ್ಲವೆಂದು ಅವರಿಗೆ ಮನವರಿಕೆಯಾದಾಗ ಅವರು ತಮ್ಮ ವರದಿಯಲ್ಲಿ ಸೂಕ್ತ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಆ ಬಗೆಗೆ ಸರ್ಕಾರವು ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಪಾಲರಿಗೆ ಒಂದು ವಿಶೇಷ ವರದಿಯನ್ನು ಕಳುಹಿಸಲು ಅವಕಾಶವಿದೆ. ಅಂತಹ ವರದಿ ರಾಜ್ಯಪಾಲರಿಗೆ ಬಂದಾಗ ಆ ಬಗೆಗೆ ಅವರು ಮಾಡಿದ ಟಿಪ್ಪಣಿಯನ್ನು ವರದಿಯೊಂದಿಗೆ ವಿಧಾನಮಂಡಲದ ಎರಡೂ ಸದನಗಳ ಮುಂದೆ ಇಡಲಾಗುತ್ತದೆ.
 6. ಇದಲ್ಲದೆ ತನಿಖೆಯ ನಂತರ ಒಬ್ಬ ಸಾರ್ವಜನಿಕ ನೌಕರ ಕ್ರಿಮಿನಲ್ ಅಪರಾಧವನ್ನು ಎಸಗಿರುತ್ತಾನೆಂಬುದು ಕಂಡು ಬಂದಲ್ಲಿ ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲು ಲೋಕಾಯುಕ್ತರು ಮತ್ತು
  ಉಪಲೋಕಾಯುಕ್ತರು ಆಜ್ಞೆ ಮಾಡಬಹುದಾಗಿದೆ.
 7. ಸಾರ್ವಜನಿಕ ಜೀವನದಲ್ಲಿಯ ನಿಷ್ಕಳಂಕ ಕಾರ್ಯನಿರ್ವಹಣೆಗೆ ಅನುಕೂಲವಾಗಲೆಂಬ ಉದ್ದೇಶದಿಂದ ಅಧಿನಿಯಮದಲ್ಲಿ ಕಾಣಿಸಿದ ಸಾರ್ವಜನಿಕ ನೌಕರರು ಅಂದರೆ ಮುಖ್ಯ ಮಂತ್ರಿಯವರು, ಸಚಿವರು, ಶಾಸಕಾಂಗದ
  ಸದಸ್ಯರು ಹಾಗೂ ವಿಶೇಷ ಅಧಿಸೂಚನೆಯಲ್ಲಿ ಕಾಣಿಸಲಾದ ನೌಕರರು ಪ್ರತಿ ವರ್ಷ ಜೂನ್ 30ರ ಒಳಗಾಗಿ ತಮ್ಮ ಹಾಗೂ ತಮ್ಮ ಕುಟುಂಬದ ಆಸ್ತಿ ಹಾಗೂ ಹೊಣೆಗಾರಿಕೆಗಳ ಬಗೆಗಿನ ವಿವರಗಳನ್ನು ತಪ್ಪದೆ ಸಲ್ಲಿಸಬೇಕಾಗುತ್ತದೆ.
 8. ಈ ಅಧಿನಿಯಮದಂತೆ ನಿರ್ವಹಿಸುವ ಕಾರ್ಯಗಳಲ್ಲಿ ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರು ಇವರಿಗೆ ನೆರವಾಗಲು ಕೆಲವು ಅಧಿಕಾರಿಗಳು ಮತ್ತು ನೌಕರರು ಇರುತ್ತಾರೆ. ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು, ಪೊಲೀಸರು, ಅಭಿಯಂತರರು ಮತ್ತು ಲೆಕ್ಕಧಿಕಾರಿಗಳು ತಮ್ಮ ಮಾತೃ ಇಲಾಖೆಯಿಂದ ನಿಯೋಜನೆಯ ಮೇರೆಗೆ ಲೋಕಾಯುಕ್ತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ.
ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!