ಪ್ರತೀ 10 ವರ್ಷಗಳಿಗೊಮ್ಮೆ ಜಾತಿ ಗಣತಿ ನಡೆಸಿ: ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಪ್ರತೀ 10 ವರ್ಷಗಳಿಗೊಮ್ಮೆ ಜಾತಿವಾರು ಜನಗಣತಿ ನಡೆಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಆಗ್ರಹಿಸಿದ್ದಾರೆ. 

ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಹತ್ತು ದಿನಗಳ ಚಿಕಿತ್ಸೆ ಪಡೆದು ಮರಳಿದ ಅವರು, ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿನಾಡಿದ್ದಾರೆ. 

ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ಜಾತಿವಾರು ಜನಗಣತಿ ನಡೆಸುವುದರಿಂದ ವೈಜ್ಞಾನಿಕವಾಗಿ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಲು, ಅರ್ಹರಿಗೆ ಮೀಸಲಾತಿ ಒದಗಿಸಲು ಸಾಧ್ಯ ಎಂದು ಹೇಳಿದ್ದಾರೆ. 

 90 ವರ್ಷಗಳ ಹಿಂದಿನ ಜಾತಿ ಜನಗಣತಿ ವರದಿ ಇಟ್ಟುಕೊಂಡು ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದು ಸರಿಯಲ್ಲ. ಸ್ವಾತಂತ್ರ್ಯ ನಂತರ ಎಲ್ಲಾ ಜಾತಿ, ವರ್ಗಗಳಿಗೂ ಸೂಕ್ತ ಅವಕಾಶಗಳು ಸಿಗುತ್ತಿಲ್ಲ. ಹೀಗಾಗಿ ನಮ್ಮ ಕಾಂಗ್ರೆಸ್ ಸರ್ಕಾರ ಇದ್ದಾಗ 180 ಕೋಟಿ ಖರ್ಚು ಮಾಡಿಸಿ ಜಾತಿ ಜನಗಣತಿ ಮಾಡಿಸಲಾಗಿತ್ತು. ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರೂ ಪ್ರಧಾನಿ ಮೋದಿ ಅವರ ಬಳಿಗೆ ನಿಯೋಗ ಕರೆದೊಯ್ದು ಜಾತಿ ಜನಗಣತಿ ಬೇಡಿಕೆ ಮುಂದಿಟ್ಟಿದ್ದಾರೆ. ಹೀಗಾಗಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಸೆನ್ಸನ್ ನಡೆಯುವ ರೀತಿಯಲ್ಲೇ ಜಾತಿಗಣತಿ ನಡೆದರೆ ಒಳ್ಳೆಯದು. ಜಾತಿ ಜನಗಣತಿ ಅನುಷ್ಠಾನದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲೂ ಹೋರಾಟ ಮಾಡುತ್ತೇವೆ. ಧ್ವನಿ ಎತ್ತುತ್ತೇವೆ ಎಂದು ತಿಳಿಸಿದ್ದಾರೆ. 

ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರ್ಪಡೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಜಿ.ಟಿ.ದೇವೇಗೌಡ ನನ್ನ ಜತೆಗೆ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಜತೆಗೂ ಚರ್ಚಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್ ಜತೆಗೆ ಚರ್ಚಿಸುವುದಾಗಿ ತಿಳಿಸಿದ್ದೇನೆ. ಈ ವಿಚಾರದಲ್ಲಿ ಸದ್ಯಕ್ಕೆ ನಡೆದಿರುವುದು ಇಷ್ಟೇ ಬೆಳವಣಿಗೆ. ಹೈಕಮಾಂಡ್ ಜತೆ ಚರ್ಚಿಸಿದ ಬಳಿಕ ಮುಂದಿನ ಬೆಳವಣಿಗೆ ತಿಳಿಸಲಾಗುವುದು ಎಂದರು.





























































































































































































































error: Content is protected !!
Scroll to Top