Homeಅಂಕಣಕಗ್ಗದ ಸಂದೇಶ-ನನ್ನಕರ್ಮ ನನ್ನ ಫಲ

Related Posts

ಕಗ್ಗದ ಸಂದೇಶ-ನನ್ನಕರ್ಮ ನನ್ನ ಫಲ

“ತನ್ನ ಶಿಲುಬೆಯ ತಾನೆ ಹೊತ್ತನಲ ಗುರು ಯೇಸು|
ನಿನ್ನ ಕರ್ಮದ ಹೊರೆಯ ಬಿಡದೆ ನೀನೆ ಹೊರು||
ಖಿನ್ನನಾಗದೆ ತುಟಿಯ ಬಿಗಿದು ಶವಭಾರವನು|
ಬೆನ್ನಿನಲಿ ಹೊತ್ತು ನಡೆ-ಮಂಕುತಿಮ್ಮ”.

    ನಮಗೆ ಬರುವ ಕಷ್ಟ ನಷ್ಟಗಳನ್ನು ನಾವೇ ಎದುರಿಸಬೇಕು.ತನ್ನನ್ನು ಏರಿಸಿದ ಶಿಲುಬೆಯನ್ನು ತಾನೇ ಕಷ್ಟಪಟ್ಟು  ಬೆಟ್ಟದ ತುದಿಗೆ ಹೊತ್ತುಕೊಂಡು ಹೋದ ಏಸು ನಮಗೆ ಮಾದರಿಯಾಗಬೇಕು.ತನ್ನ ಕರ್ಮ ಫಲವನ್ನು ಖಿನ್ನನಾಗದೆ ಬಾಯಿಬಿಟ್ಟು ಗೋಳಾಡದೆ ತುಟಿಬಿಗಿದು ಅನುಭವಿಸಬೇಕು,ಏಸು ತನ್ನ ಶಿಲುಬೆಯ ಭಾರವನ್ನು ಬೆನ್ನಿನಲಿ ಹೊತ್ತುನಡೆದಂದೆ ತಮ್ಮತಮ್ಮ ಕರ್ಮದ ಫಲವನ್ನು ತಾವೇ ಅನುಭವಿಸುತ್ತಾ ಬದುಕಿನಲ್ಲಿ ಮುನ್ನಡೆಯಬೇಕು ಎಂದು ಮಾನ್ಯ ಡಿ.ವಿ.ಜಿ ಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
       ಕರ್ಮವೆಂದರೆ ಕೆಲಸ ಮಾಡಿದುದು ಎಂಬ ಅರ್ಥದೊಂದಿಗೆ ಹಿಂದೆ ಮಾಡಿದುದರಿಂದ ಮುಂದೆ ಬಂದೇ ಬರುವ,ಬರಲಿರುವ,ಅಥವಾ ಬಂದ ಫಲ ಎಂಬ ಅರ್ಥವೂ ಇದೆ.ನಾವು ಮಾಡಿದ ಕರ್ಮದ ಫಲವನ್ನು ನಾವೇ ಉಣ್ಣಲೇಬೇಕೆಂಬುದಕ್ಜೆ  ಕರ್ಮ ಸಿದ್ಧಾಂತವೆಂದು ಹೆಸರು.ಈ ಜನ್ಮದ ಕರ್ಮಫಲದೊಂದಿಗೆ ಜನ್ಮಜನ್ಮಾಂತರಗಳಿಂದ ಬಂದ ಕರ್ಮಫಲವನ್ನೂ ಅನುಭವಿಸಬೇಕಾಗುತ್ತದೆ.ನಾವು ಮಾಡುವ ಪ್ರತಿ ಕಾರ್ಯಗಳು ನಮ್ಮ ಸುಖದುಃಖಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಮರೆಯಬಾರದು.ಕರ್ಮ ಮಾಡಿದವರು ಅದಕ್ಕೆ ನಿಯತವಾದ ಫಲವನ್ನು ಅನುಭವಿಸಲೇಬೇಕಾಗುತ್ತದೆ.ಪಾಪಭೀತಿಗೆ ಬಲವಾದ ಕಾರಣವೆಂದರೆ ಕರ್ಮ ಸಿದ್ಧಾಂತವೇ!

ವೇದಾಂತದಲ್ಲಿ ಹೇಳಿದಂತೆ ಕರ್ಮದಲ್ಲಿ ಪಾಪಕರ್ಮ,ಪುಣ್ಯಕರ್ಮ ಮತ್ತು ಮಿಶ್ರಕರ್ಮ ಎಂಬ ಮೂರು ವಿಧಗಳಿವೆ.ಮಾತು ಮತ್ತು ಮೈಗಳಿಂದ ಪರರಿಗೆ ಉಪಕಾರ ಮಾಡುವುದು ಪುಣ್ಯಕರ್ಮ.ದುಃಖವನ್ನು ಉಂಟುಮಾಡುವುದು ಪಾಪಕರ್ಮ. ಎರಡು ಬೆರಕೆಯಾದರೆ ಮಿಶ್ರಕರ್ಮ.’ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಂ’ ಎಂಬ ಉಕ್ತಿ ಇದನ್ನು ಸಮರ್ಥಿಸುತ್ತದೆ.ನಾವು ಮಾಡುವ ಕಾರ್ಯಗಳು ಒಳ್ಳೆಯದಾಗಿದ್ದರ ಫಲವು ಚೆನ್ನಾಗಿರುತ್ತದೆ,ಜೀವನದ ಅನುಭವವೂ ಸಿಹಿಯಾಗಿರುತ್ತದೆ.ಉಪ್ಪು ತಿಂದವನೆ ನೀರು ಕುಡಿಯಬೇಕೇ ಹೊರತು ಬೇರೆಯವರು ನೀರು ಕುಡಿದರೆ ಗಂಟಲಿನ ಕ್ಷಾರ ಕಡಿಮೆಯಾಗದು.ಸತ್ಕಾರ್ಯಗಳನ್ನು ಮಾಡುತ್ತಾ ಸನ್ಮಾರ್ಗದಲ್ಲಿ ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೇ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು,ಕನ್ನಡ ಸಾಹಿತ್ಯ ಪರಿಷತ್ ,ಕಾರ್ಕಳ ಘಟಕ.

LEAVE A REPLY

Please enter your comment!
Please enter your name here

Latest Posts

error: Content is protected !!