ಸಚಿವ ಸುನಿಲ್‌ ಕುಮಾರ್‌ ಅವರಿಂದ ಜನ-ಸ್ಪಂದನ ಕಾರ್ಯಕ್ರಮ

ಪಂಚಾಯತ್‌ಗಳಿಂದ ಭರಪೂರ ಮನವಿ

ಬೇಡಿಕೆ ಪಟ್ಟಿ ನೀಡದ ಹೆಬ್ರಿ ಪಂಚಾಯತ್‌

ಕಾರ್ಕಳ : ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ಅವರು ಆ. 27ರಂದು ಕಾರ್ಕಳ ಹೆಬ್ರಿ ಉಭಯ ತಾಲೂಕಿನ ವಿವಿಧ ಗ್ರಾ.ಪಂ.ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಬೆಳಗ್ಗೆ ಗಂಟೆ 7:30ಗೆ ಹಿರ್ಗಾನ ಗ್ರಾ.ಪಂ.ಗೆ ಭೇಟಿ ನೀಡುವ ಮೂಲಕ ಜನ-ಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವರು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಗ್ರಾ.ಪಂ. ವತಿಯಿಂದ ಹರಿಯಪ್ಪನಕೆರೆ ಜೀರ್ಣೋದ್ಧಾರ, ಅದೇ ಪರಿಸರದಲ್ಲಿ ವಾಕಿಂಗ್‌ ಟ್ರಾಕ್‌, ಉದ್ಯಾನವನ ಹಾಗೂ ಗೋಶಾಲೆ ನಿರ್ಮಿಸುವಂತೆ ಮನವಿ ಸಲ್ಲಿಸಲಾಯಿತು.‌

ಮರ್ಣೆ
ಮರ್ಣೆ ಪೇಟೆಯಲ್ಲಿ ಮಾರ್ಕೆಟ್‌ ರಚಿಸುವಂತೆ, ಒಳಚರಂಡಿ ಕಾಮಗಾರಿ, ರಿಕ್ಷಾ ತಂಗುದಾಣ ನಿರ್ಮಿಸುವಂತೆ ಮತ್ತು ನಿವೇಶನ ರಹಿತರಿಗೆ ವಸತಿ ಕಲ್ಪಿಸಿಕೊಡುವಂತೆ ಗ್ರಾ.ಪಂ. ವತಿಯಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಕಡ್ತಲ
ಕಡ್ತಲದಲ್ಲಿ ಸಮುದಾಯ ಭವನ, ಪಶುವೈದ್ಯಕೀಯ ಆಸ್ಪತ್ರೆ ತೆರೆಯುವಂತೆ, ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ, ಈ ಭಾಗದ ಮೊಬೈಲ್ ನೆಟ್‌ವರ್ಕ್‌ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಲಾಯಿತು.

ಶಿವಪುರ
ವಿದ್ಯಾರ್ಥಿಗಳ ಆನ್‌ಲೈನ್‌ ಶಿಕ್ಷಣಕ್ಕೆ ನೆಟ್‌ವರ್ಕ್‌ ಸಮರ್ಪಕವಾಗಿ ಸಿಗದ ಕಾರಣ ತೊಂದರೆಯಾಗುತ್ತಿದೆ. ಹೀಗಾಗಿ ಈ ಪ್ರದೇಶದಲ್ಲಿ ಟವರ್‌ ನಿರ್ಮಿಸುವಂತೆ ಸಚಿವರಲ್ಲಿ ವಿನಂತಿಸಲಾಯಿತು.

ಚಾರ
ಚಾರ ಗ್ರಾಮ ಪಂಚಾಯತ್‌ನಲ್ಲಿ ಗ್ರಂಥಾಲಯ ತೆರೆಯುವಂತೆ, ಗ್ರಾಮ ವಿಕಾಸದಡಿ ಚಾರ ಪಂಚಾಯತ್‌ಗೆ ಅನುದಾನ ಒದಗಿಸುವಂತೆ ಬೇಡಿಕೆ ನೀಡಲಾಯಿತು.

ಹೆಬ್ರಿ
ಬಹುತೇಕ ಎಲ್ಲ ಪಂಚಾಯತ್‌ಗಳಿಂದಲೂ ಸಚಿವರಿಗೆ ಬೇಡಿಕೆ ಪಟ್ಟಿ ಸಲ್ಲಿಸಲಾಗಿದ್ದರೂ ಹೆಬ್ರಿ ಪಂಚಾಯತ್‌ ವತಿಯಿಂದ ಮಾತ್ರ ಮನವಿ ಪತ್ರ ನೀಡಲಾಗಿಲ್ಲ. ಈ ಕುರಿತು ನ್ಯೂಸ್‌ ಕಾರ್ಕಳದೊಂದಿಗೆ ಮಾತನಾಡಿದ ಪಂಚಾಯತ್‌ ಅಧ್ಯಕ್ಷೆ ಮಾಲತಿ, ಪ್ರತಿ ಬಾರಿ ಸುನಿಲ್‌ ಕುಮಾರ್‌ ಅವರಿಗೆ ನಮ್ಮ ಪಂಚಾಯತ್‌ ವತಿಯಿಂದ ಬೇಡಿಕೆ ಸಲ್ಲಿಸಲಾಗುತ್ತಿತ್ತು. ಅವರ ಪ್ರಯತ್ನದ ಫಲವಾಗಿ ಬಹುತೇಕ ಎಲ್ಲ ಬೇಡಿಕೆಯೂ ಈಡೇರಿದೆ. ಈ ಬಾರಿ ಅವರಿಗೆ ಬೇಡಿಕೆ ಸಲ್ಲಿಸದೇ ನಮ್ಮ ಪಂಚಾಯತ್‌ಗೆ ಭೇಟಿ ನೀಡಿದಾಗ ಅಭಿನಂದಿಸಿದ್ದೇವೆ ಎಂದರು.

ನಾಡ್ಪಾಲು
ಸೀತಾನದಿ-ನೆಲ್ಲಿಕಟ್ಟೆ, ಸೋಮೇಶ್ವರ, ಮಡಮಕ್ಕಿ ಪ್ರದೇಶಕ್ಕೆ ಬಸ್‌ ಸೌಲಭ್ಯವಿಲ್ಲ. ಇಲ್ಲಿನ ಎಸ್‌ಟಿ, ಎಸ್‌ಇ ಕಾಲೋನಿಯಲ್ಲಿ ಗುಣಮಟ್ಟದ ವಿದ್ಯುತ್‌ ಪೂರೈಕೆಯಾಗದ ಕುರಿತು, ಹಳೆ ವಿದ್ಯುತ್‌ ತಂತಿ ಬದಲಾಯಿಸುವ ಬಗ್ಗೆ ಮನವಿ ನೀಡಲಾಯಿತು. ದೇಗುಲ, ದೈವಸ್ಥಾನ ಜೀರ್ಣೋದ್ಧಾರ ಕುರಿತು ಮನವಿ ಸಲ್ಲಿಸಲಾಯಿತು.

ಮುದ್ರಾಡಿ
ವಿದ್ಯುತ್ ಪರಿರ್ವತಕ ಅಳವಡಿಸುವಂತೆ, ಸ್ಥಳೀಯ ರಸ್ತೆ, ಮದಗ ರಸ್ತೆ ಅಭಿವೃದ್ಧಿಗಾಗಿ ಮನವಿ ಸಲ್ಲಿಸಲಾಯಿತು. ಮದಗ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ ನೀಡುವುದಾಗಿ ಇದೇ ಸಂದರ್ಭ ಸಚಿವ ಸುನಿಲ್‌ ಕುಮಾರ್ ಘೋಷಿಸಿದರು.

ವರಂಗ
ವರಂಗ ಪಂಚಾಯತ್‌ಗೆ ಖಾಯಂಮಾತಿಯಲ್ಲಿ ಪಿಡಿಒ ನೇಮಕಗೊಳಿಸುವಂತೆ, ಬಾಲವನ ನಿರ್ಮಾಣ, ರಿಂಗ್‌ ರೋಡ್‌ ನಿರ್ಮಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಮುಟ್ಲುಪಾಡಿಯಲ್ಲಿ ನೆಟ್‌ವರ್ಕ್‌ ಸಮಸ್ಯೆಯಿದ್ದು, ಸಮಸ್ಯೆ ನಿವಾರಿಸುವಂತೆಯೂ ಸ್ಥಳೀಯರು ಮನವಿ ಸಲ್ಲಿಸಿದರು.





























































































































































































































error: Content is protected !!
Scroll to Top