Tuesday, September 28, 2021
spot_img
Homeಅಂಕಣಕಗ್ಗದ ಸಂದೇಶ- ನೆಮ್ಮದಿಯೇ ಬಾಳಿನ ಬೆಳಕು...

ಕಗ್ಗದ ಸಂದೇಶ- ನೆಮ್ಮದಿಯೇ ಬಾಳಿನ ಬೆಳಕು…

“ನಗುನಗುವ ಕಣ್ಗಳಿಗೆ ಹೊಗೆಯನೂದಲು ಬೇಡ|
ಜಗವ ಸುಡುಗಾಡೆನುವ ಕಡುತಪಸು ಬೇಡ||
ಮಗುವು ತಾಯ್ತಂದೆ ಕಣ್ಮುಂದೆ ನಡೆವಂತೆ ನಡೆ|
ಮಿಗೆ ಚಿಂತೆ ತಲೆಹರಟೆ -ಮಂಕುತಿಮ್ಮ”

    ನಗುವಿನಿಂದ ಹೊಳೆಯುವ ಕಣ್ಣುಗಳಿಗೆ ಹೊಗೆಯನ್ನು ಊದಿ ಕಣ್ಣೀರು ತರಿಸಬೇಡ.ಈ ಜಗತ್ತು ಕೆಟ್ಟು ಸುಡುಗಾಡಾಗಿದೆ ಎನ್ನುವ ಹಠಮಾರಿಯ ಮನೋಭಾವ ಬೇಡ.ಮುಗ್ಧ ಮನಸ್ಸಿನ ಮಗು ಸಂತೋಷದಿಂದ ತನ್ನ ತಂದೆತಾಯಿಯಗಳ ಮುಂದೆ ಓಡಾಡುವಂತೆ ಜೀವನದಲ್ಲಿ ನಡೆಯಬೇಕು.ಅತಿಯಾದ ಕಳವಳಕ್ಕೆ ಒಳಗಾಗದೆ;ಅಧಿಕ ಪ್ರಸಂಗದ ಮಾತನಾಡದೆ ಚಿಂತೆಯನ್ನು ಬಿಟ್ಟು ನೆಮ್ಮದಿಯಿಂದ ಬಾಳಬೇಕೆಂದು   ಮಾನ್ಯ ಡಿ.ವಿ .ಜಿ ಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
 
ಸಂತೋದಲ್ಲಿರುವವರನ್ನು ನೋಡಿ  ಸಂತೋಷ ಪಡುವುದು ಮನುಷ್ಯ ಧರ್ಮ.ಸಂತೋಷದಿಂದ ನಗುವವರ ಕಣ್ಗೆ ಹೊಗೆಯನ್ನು ಊದಿ ಉರಿ ತರಿಸುವುದು ಅಧರ್ಮ.ಇತರರ ಸಂತೋಷಕ್ಕೆ  ನೆಮ್ಮದಿಗೆ ನಾವು ಕಾರಣವಾಗಬೇಕೆ ಹೊರತು ಸಂಕಟಕ್ಕಲ್ಲ.ಸಂತೋಷವಿರುವ ಕಡೆ ದುಃಖವನ್ನು ತರದಿರುವುದೇ ದೊಡ್ಡ ಉಪಕಾರವಾಗುತ್ತದೆ.ಈ ಜಗತ್ತು  ಕೆಟ್ಟು ಹೋಗಿದೆ. ‌ಇಲ್ಲಿ ಇರುವವರೆಲ್ಲ ಕೆಟ್ಟವರಾಗಿದ್ದಾರೆ  ಎಂದು ಜಗತ್ತನ್ನು ಹಳಿಯಬೇಡ.ನಾವು ಕೆಡಬಹುದೇ ಹೊರತು ಕಾಲ ಮತ್ತು ಜಗತ್ತು ಎಂದಿಗೂ ಕೆಡುವುದಿಲ್ಲ.ದೃಷ್ಟಿಯಂತೆ ಸೃಷ್ಟಿ. ನಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡಾಗ ಜಗತ್ತು ಸುಂದರವಾಗಿ ಕಾಣುತ್ತದೆ.'ನೀನು ಒಳ್ಳೆಯವನಾದರೆ ಇಡೀ ಜಗತ್ತೆ ಒಳ್ಳೆಯದು' ಎಂಬ ಹಿರಿಯರ ಅನುಭವದ ಮಾತು ಸುಳ್ಳಾಗಲು ಸಾಧ್ಯವೆ?

ಮಗುವು ತನ್ನ ರಕ್ಷಕರಾಗಿ ತಾಯಿತಂದೆ ಇದ್ದಾರೆ ಎನ್ನುವ ದೃಢವಾದ ನಂಬಿಕೆಯಿಂದ ಚಿಂತೆ ಮಾಡದೆ ನಡೆಯುವಂತೆ ನಾವು ಕೂಡ ನಮ್ಮನ್ನು ಕಾಯುವವನೊಬ್ಬ ಇದ್ದಾನೆ ಎನ್ನುವ ಭರವಸೆಯಿಂದ ಬದುಕಿನಲ್ಲಿ ಮುನ್ನಡೆಯಬೇಕು.ಈ ಸೃಷ್ಟಿ ಇರುವುದು ಎಷ್ಟು ಸತ್ಯವೋ ಸೃಷ್ಟಿಕರ್ತನಿರುವುದು ಅಷ್ಟೇ ಸತ್ಯ.ಅವನಿದ್ದಾನೊ ಇಲ್ಲವೊ ಚರ್ಚೆ ಮಾಡುವುದು ಅಧಿಕಪ್ರಸಂಗಿತನವಾಗುತ್ತದೆ(ತಲೆಹರಣೆ) ನಮಗೆ ಅವನೇ ತಂದೆತಾಯಿ.ಅವನಲ್ಲಿ ನಂಬಿಕೆಯಿಲ್ಲದಿದ್ದರೆ ತಬ್ಬಲಿಗಳಂತೆ ಹೆದರಿ ಬದುಕಬೇಕಾಗುತ್ತದೆ.ಪ್ರಪಂಚವನ್ನು ಸರಿಯಿಲ್ಲ ಎಂದು ಬೈದರೆ ಭಗವಂತನನ್ನು ಬೈಯ್ದಂತೆ.ಸೃಷ್ಟಿ ಕರ್ತನೆ ಸರಿಯಿಲ್ಲ ಎಂದಂತಾಗುತ್ತದೆ.ದೇವರನ್ನು ಬೈಯುವುದನ್ನು ಬಿಟ್ಟು ಅವನಲ್ಲಿ ದೃಢವಾದ ನಂಬಿಕೆಯನಿಟ್ಟು ತಿದ್ದಿ ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ

ಅಧ್ಯಕ್ಷರು,ಕನ್ನಡ ಸಾಹಿತ್ಯ ಪರಿಷತ್ , ಕಾರ್ಕಳ ಘಟಕ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!