Wednesday, January 26, 2022
spot_img
Homeಅಂಕಣಕ್ರಿಶ್ಚಿಯನ್‌ ಧರ್ಮೀಯರ ಆಸ್ತಿಯ ವಾರೀಸುತನ– ಕಾನೂನು ಮಾಹಿತಿ

ಕ್ರಿಶ್ಚಿಯನ್‌ ಧರ್ಮೀಯರ ಆಸ್ತಿಯ ವಾರೀಸುತನ– ಕಾನೂನು ಮಾಹಿತಿ

ಸಮಾಜದ ವಿವಿಧ ಧರ್ಮದ ವ್ಯಕ್ತಿಗಳಿಗೆ ಸಂಬಂಧಪಟ್ಟ ಆಸ್ತಿಯ ವಾರೀಸುತನದ ಮತ್ತು ಉತ್ತರಾಧಿಕಾರದ ಕುರಿತು ಪ್ರತ್ಯೇಕವಾದ ಮತ್ತು ವಿಭಿನ್ನವಾದ ಕಾನೂನು ಜಾರಿಯಲ್ಲಿದೆ. ಈ ಪ್ರಕಾರ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ವ್ಯಕ್ತಿಗಳ ಆಸ್ತಿಯ ವಾರೀಸುತನ ಮತ್ತು ಉತ್ತರಾಧಿಕಾರದ ಕುರಿತು ಭಾರತೀಯ ವಾರೀಸು ಅಧಿನಿಯಮ 1925 (ಇಂಡಿಯನ್ ಸಕ್ಸೇಶನ್ ಆ್ಯಕ್ಟ್ 1925) ಜಾರಿಯಲ್ಲಿರುತ್ತದೆ.

ಹಿಂದೂ ಧರ್ಮದಲ್ಲಿ ಇರುವಂತಹ “ಅವಿಭಕ್ತ ಕುಟುಂಬ” ಮತ್ತು “ಪಿತ್ರಾರ್ಜಿತ ಆಸ್ತಿ” ಇವುಗಳ ಪರಿಕಲ್ಪನೆ ಕ್ರಿಶ್ಚಿಯನ್‍ ಧರ್ಮಿಯರಲ್ಲಿ ಇರುವುದಿಲ್ಲ. ಕ್ರಿಶ್ಚಿಯನ್ ವ್ಯಕ್ತಿಗೆ ಆಸ್ತಿಯು ತನ್ನ ತಂದೆಯಿಂದ, ತಾಯಿಯಿಂದ, ರಕ್ತ ಸಂಬಂಧಿಗಳಿಂದ, ವೀಲುನಾಮೆ, ದಾನವಾಗಿ ಸಂಬಂಧಿಕರಿಂದ ಅಥವಾ ಸಂಬಂಧಿಕರಲ್ಲದವರಿಂದ ಯಾವುದೇ ಮೂಲಗಳಿಂದ ಬಂದಿದ್ದರೂ ಸಹಾ ಅವೆಲ್ಲವೂ ಆತನ ಸ್ವರ್ಯಾಜಿತ ಆಸ್ತಿಯೇ ಆಗುತ್ತದೆ. ಆದ ಕಾರಣ ಕ್ರಿಶ್ಚಿಯನ್ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ತನ್ನ ಎಲ್ಲಾ ಆಸ್ತಿಯ ಮೇಲೆ ಸಂಪೂರ್ಣ ಮಾಲೀಕತ್ವವನ್ನು ಹೊಂದಿ ತನ್ನ ಇಚ್ಛಾನುಸಾರ ವಿಲೇವಾರಿ ಮಾಡುವ ಹಕ್ಕನ್ನು ಹೊಂದಿರುತ್ತಾನೆ. ಈ ಕಾರಣದಿಂದ ಆತನ ಜೀವಿತಾವಧಿಯಲ್ಲಿ ಆತನ ಹೆಂಡತಿ ಮಕ್ಕಳಿಗೆ ಅಥವಾ ಇತರ ಸಂಬಂಧಿಗಳಿಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ಆತ ತನ್ನ ಜೀವಿತಾವಧಿಯಲ್ಲಿ ತನ್ನ ಆಸ್ತಿಯ ಕುರಿತು ಯಾವುದೇ ಸೂಕ್ತ ದಾಖಲೆ ಬರೆಸಿ ಇಡದಿದ್ದಲ್ಲಿ ಆತನ ಮರಣದ ನಂತರವೇ ಆತನ ವಾರೀಸುದಾರರು ವಾರೀಸುತನದ ಪ್ರಕಾರ ಆಸ್ತಿಯ ಮೇಲಿನ ಹಕ್ಕನ್ನು ಹೊಂದಲು ಅರ್ಹರಾಗಿರುತ್ತಾರೆ.

ಒಬ್ಬ ಕ್ರಿಶ್ಚಿಯನ್ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ತನ್ನ ಆಸ್ತಿಯ ವಿಲೇವಾರಿ ಕುರಿತು ಯಾವುದೇ ಸಮರ್ಥವಾದ ದಾಖಲೆಯನ್ನು ಬರೆಸಿ ಇಡದಿದ್ದಲ್ಲಿ ಆತನ ಆಸ್ತಿಯು ಆತನ ಪತ್ನಿ ಮತ್ತು ರಕ್ತ ಸಂಬಂಧಿಕರಿಗೆ ಈ ರೀತಿಯಾಗಿ ಪ್ರಾಪ್ತವಾಗುತ್ತದೆ.
(ಎ) ಮೃತ ವ್ಯಕ್ತಿಯು ತನ್ನ ಪತ್ನಿ ಹಾಗೂ ಮಕ್ಕಳನ್ನು ಹೊಂದಿದ್ದರೆ ಆತನ ಒಟ್ಟು ಆಸ್ತಿಯ ಮೂರನೇ ಒಂದು ಭಾಗವನ್ನು ಆತನ ವಿಧವೆ ಪತ್ನಿ ಹಾಗೂ ಉಳಿದ ಮೂರನೇ ಎರಡು ಭಾಗವನ್ನು ಆತನ ಮಕ್ಕಳು ಒಟ್ಟಾಗಿ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
(ಬಿ) ಮೃತ ವ್ಯಕ್ತಿಯು ತನ್ನ ನೇರ ವಂಶಜರನ್ನು ಹೊಂದಿರದೆ ತನ್ನ ವಿಧವೆ ಪತ್ನಿಯನ್ನು ಮತ್ತು ರಕ್ತ ಸಂಬಂಧಿಗಳನ್ನು ಹೊಂದಿದ್ದಲ್ಲಿ ಆತನ ಒಟ್ಟು ಆಸ್ತಿಯ ಅರ್ಧ ಭಾಗವನ್ನು ಆತನ ಪತ್ನಿ ಹಾಗೂ ಉಳಿದ ಅರ್ಧ ಭಾಗವನ್ನು ಆತನ ರಕ್ತ ಸಂಬಂಧಿಕರು ಒಟ್ಟಾಗಿ ಪಡೆಯಲು ಅರ್ಹರಾಗಿರುತ್ತಾರೆ.
(ಸಿ) ಮೃತ ವ್ಯಕ್ತಿಯು ತನ್ನ ಯಾವುದೇ ನೇರ ವಂಶಜರನ್ನು ಮತ್ತು ರಕ್ತ ಸಂಬಂಧಿಕರನ್ನು ಹೊಂದಿರದೆ ಕೇವಲ ತನ್ನ ವಿಧವೆ ಪತ್ನಿಯನ್ನು ಹೊಂದಿದ್ದಲ್ಲಿ ಆತನ ಸಂಪೂರ್ಣ ಆಸ್ತಿಯನ್ನು ಪಡೆಯಲು ವಿಧವೆ ಪತ್ನಿಯು ಅರ್ಹಳಾಗಿರುತ್ತಾಳೆ.
(ಡಿ). ಮೃತ ವ್ಯಕ್ತಿಯ ವಿಧವೆ ಪತ್ನಿ ಇರದೇ ಆತನ ನೇರ ವಂಶಜರು ಇದ್ದರೆ ಅಂತಹ ನೇರ ವಂಶಜರು ಮೃತ ವ್ಯಕ್ತಿಯ ಆಸ್ತಿಯನ್ನು ಒಟ್ಟಾಗಿ ಪಡೆಯಲು ಅರ್ಹರಾಗಿರುತ್ತಾರೆ. ಒಂದು ವೇಳೆ ನೇರ ವಂಶಜರು ಇಲ್ಲದಿದ್ದರೆ ಆಸ್ತಿಯು ಮೃತ ವ್ಯಕ್ತಿಯ ರಕ್ತ ಸಂಬಂಧಿಗಳಿಗೆ ಪ್ರಾಪ್ತವಾಗುತ್ತದೆ.
(ಇ) ಮೃತ ವ್ಯಕ್ತಿಯ ವಿಧವೆ ಪತ್ನಿ, ನೇರ ವಂಶಜರು ಅಥವಾ ಇತರ ಯಾರೂ ರಕ್ತ ಸಂಬಂಧಿಗಳು ಇಲ್ಲದಿದ್ದಲ್ಲಿ ಆತನ ಎಲ್ಲಾ ಆಸ್ತಿಯು ಸರಕಾರಕ್ಕೆ ಸೇರುತ್ತದೆ.
6.ಮೃತ ಕ್ರಿಶ್ಚಿಯನ್ ಪುರುಷ ವ್ಯಕ್ತಿಯ ಆಸ್ತಿಯನ್ನು ಆತನ ವಿಧವೆ ಪತ್ನಿ ಎಷ್ಟು ಪ್ರಮಾಣದಲ್ಲಿ ಮತ್ತು ಯಾವ ವಿಧದಲ್ಲಿ ಪಡೆಯುತ್ತಾಳೆಯೋ, ಅದೇ ರೀತಿಯಾಗಿ ಅದೇ ಪ್ರಮಾಣದಲ್ಲಿ ಮೃತ ಕ್ರಿಶ್ಚಿಯನ್ ಮಹಿಳೆಯ ಆಸ್ತಿಯನ್ನು ಆಕೆಯ ಪತಿ ಪಡೆಯಲು ಅರ್ಹನಾಗಿರುತ್ತಾನೆ.

ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!