ಆರೋಗ್ಯಧಾರ- ಮೂರು ಹನಿ ತುಪ್ಪ ರೋಗದಿಂದ ಮುಕ್ತ

ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಹಾಗೂ ಮಾನಸಿಕ ಕಾಯಿಲೆಗಳನ್ನು ದೂರಮಾಡಲು ಶುದ್ಧ ತುಪ್ಪ ಸರ್ವಶ್ರೇಷ್ಠ ಎಂದು ಆಯುರ್ವೇದದಲ್ಲಿ ಹೇಳಿದೆ. “ ನಾಸಾ ಹಿ ಶಿರಸೋ ದ್ವಾರಂ” ಅಂದರೆ ಮೂಗು ಶಿರಸ್ಸಿಗೆ ದ್ವಾರ ಎಂದರ್ಥ. ಯಾವುದಾದರೂ ಔಷಧ ಶಿರಸಿಗೆ ತಲುಪಬೇಕಾದರೆ ಅದು ಮೂಗಿನ ಮೂಲಕ.
ಧೀ, ಧೃತಿ, ಸ್ಮೃತಿಯನ್ನು ಹೆಚ್ಚಿಸುತ್ತದೆ ಹಸುವಿನ ಹಾಲಿನ ತುಪ್ಪ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರು ಬೇಕಾದರೂ ಇದನ್ನು ಉಪಯೋಗಿಸಬಹುದು. ಮೂಗಿಗೆ ಎಣ್ಣೆ ಅಥವಾ ತುಪ್ಪ ಹಾಕುವುದು ಆಯುರ್ವೇದದ ದಿನಚರ್ಯೆದಲ್ಲಿ ತಿಳಿಸಿದೆ. ಇದನ್ನು ಪ್ರತಿಮರ್ಶ ನಸ್ಯ ಎಂದು ಕರೆಯುತ್ತಾರೆ. ಇವತ್ತು ಮೂಗಿಗೆ ಶುದ್ಧ ತುಪ್ಪ ಹಾಕುವುದರಿಂದ ಏನೆಲ್ಲ ಲಾಭಗಳಿವೆ ಎಂದು ತಿಳಿದುಕೊಳ್ಳೋಣ.

ತುಪ್ಪದ ಗುಣಗಳು- ತುಪ್ಪವು ಶೀತವೀರ್ಯ, ವಾತ ಹಾಗೂ ಪಿತ್ತದೋಷವನ್ನು ನಿಯಂತ್ರಿಸುತ್ತದೆ.

ತುಪ್ಪವನ್ನು ಮೂಗಿಗೆ ಹಾಕುವ ಕ್ರಮ
ತುಪ್ಪವನ್ನು ಗಾಜಿನ ಬಾಟಲಿಯಲ್ಲಿ ಶೇಖರಿಸಿ. ಬಿಸಿನೀರಿನಲ್ಲಿ ಈ ತುಪ್ಪವಿರುವ ಗಾಜಿನ ಬಾಟಲಿಯನ್ನು ಇಟ್ಟು ತುಪ್ಪವನ್ನು ಕರಗಿಸಿ. ಬೆಳಿಗ್ಗೆ ಎದ್ದ ತಕ್ಷಣ ತಮ್ಮ ನಿತ್ಯಕರ್ಮಗಳನ್ನು ಮುಗಿಸಿ ಹಾಸಿಗೆಯ ಮೇಲೆ ಮಲಗಿ ಎರಡು ಎರಡು ಹನಿ ಶುದ್ಧವಾದ ತುಪ್ಪವನ್ನು ಮೂಗಿಗೆ ಹಾಕಬೇಕು. ತುಪ್ಪವು ಗಂಟಲಿಗೆ ಬಂದರೆ ಅದನ್ನು ಉಗುಳಬೇಕು ನುಂಗಬಾರದು. ಇದು ಕಷ್ಟವಾದಲ್ಲಿ ಚಿಕ್ಕ ಬೆರಳನ್ನು ತುಪ್ಪದಲ್ಲಿ ಅದ್ದಿ ಮೂಗಿನ ಒಳಗೆ ಸವರಬಹುದು.

ಉಪಯೋಗಗಳು
• ಸ್ಮರಣಶಕ್ತಿ, ಗ್ರಹಣಶಕ್ತಿ, ಧಾರಣ ಶಕ್ತಿ ಹೆಚ್ಚಿಸುತ್ತದೆ. ವಿದ್ಯಾರ್ಥಿಗಳಿಗೆ, ಮರವು ಜಾಸ್ತಿ ಇರುವ ವ್ಯಕ್ತಿಗಳಿಗೆ ಅಥವಾ ವೃದ್ಧರಿಗೆ ಇದು ಅತ್ಯುತ್ತಮ ಔಷಧ. ಅತ್ಯಧಿಕ ಕೋಪವಿರುವ ವ್ಯಕ್ತಿಗೆ ಪರಿಣಾಮಕಾರಿ. ಮನಸ್ಸು ಶಾಂತವಾಗಿರಲು ಸಹಾಯಕಾರಿ.
• ಮಾನಸಿಕ ಒತ್ತಡ, ಖಿನ್ನತೆ, ತಲೆನೋವು ನಿದ್ರಾಹೀನತೆಗೆ ಇದು ಯೋಗ್ಯ ದ್ರವ್ಯ.
• ಕೂದಲಿನ ಸಮಸ್ಯೆಗೆ, ಬಿಳಿ ಕೂದಲು, ಕೂದಲು ಉದುರುವಿಕೆಗೆ ಪ್ರಯೋಜನಕಾರಿ.
• ದೇಹದಿಂದ ವಿಷಕಾರಕ ಅಂಶಗಳನ್ನು ಹೊರಗೆ ಹಾಕುತ್ತದೆ.
• ಕುತ್ತಿಗೆಯ ಸಮಸ್ಯೆ, ಕಣ್ಣಿನ ಸಮಸ್ಯೆ, ಕಿವಿಯ ಸಮಸ್ಯೆ, ತಲೆಯ ಸಮಸ್ಯೆ, ಮೂಗಿನ ಸಮಸ್ಯೆ, ಬಾಯಿಯ ಸಮಸ್ಯೆ, ಸರ್ವೈಕಲ್ ಸ್ಪಾಂಡಿಲೈಟಿಸ್ ಎಲ್ಲವನ್ನೂ ದೂರಮಾಡುತ್ತದೆ. ಕುತ್ತಿಗೆ ಮೇಲಿನ ಎಲ್ಲಾ ಅಂಗಗಳ ಅನೇಕ ರೋಗಗಳನ್ನು ತಡೆಯುತ್ತದೆ.

ಯಾವಾಗ ಉಪಯೋಗಿಸಬಾರದು
ಮೋಡವಿದ್ದಾಗ, ಮಳೆಗಾಲದಲ್ಲಿ, ನೆಗಡಿ, ಕೆಮ್ಮು ಇದ್ದಾಗ ಉಪಯೋಗಿಸುವುದು ಅಷ್ಟು ಸರಿಯಲ್ಲ.
ದಿನಾಲು ಎರಡು ಹನಿ ತುಪ್ಪವನ್ನು ಬಳಸಿ ಆರೋಗ್ಯದಿಂದಿರಿ.

ಡಾ. ಹರ್ಷಾ ಕಾಮತ್





























































































































































































































error: Content is protected !!
Scroll to Top