Wednesday, January 26, 2022
spot_img
HomeUncategorizedಫೋಟೋಗ್ರಫಿ ಲೆಜೆಂಡ್ ಜಿನೇಶ್ ಪ್ರಸಾದ್‌

ಫೋಟೋಗ್ರಫಿ ಲೆಜೆಂಡ್ ಜಿನೇಶ್ ಪ್ರಸಾದ್‌

ಇಂದು ಫೋಟೋಗ್ರಾಫಿ ದಿನ. ಇಡೀ ಜಗತ್ತಿಗೆ ಸ್ಮೈಲ್ ಪ್ಲೀಜ್ ಎಂದು ಹೇಳಿ ನಗಿಸುವ ಜಗತ್ತಿನ ಎಲ್ಲ ಫೋಟೋಗ್ರಾಫರ್ ಸ್ನೇಹಿತರಿಗೆ ನ್ಯೂಸ್‌ ಕಾರ್ಕಳ ವತಿಯಿಂದ ಶುಭಾಶಯಗಳು.

ಕಾರ್ಕಳದಲ್ಲಿ ಪೊರ್ಲು ಫೋಟೋಗ್ರಾಫಿ ಸಂಸ್ಥೆ ಹುಟ್ಟು ಹಾಕಿ, ಇದೀಗ ಜಾಗತಿಕ ಮನ್ನಣೆ ಪಡೆದ ಅಂತಾರಾಷ್ಟ್ರೀಯ ಖ್ಯಾತ ಛಾಯಾಚಿತ್ರಗ್ರಾಹಕ ಜೀನೇಶ್ ಪ್ರಸಾದ್‌ ಪರಿಚಯಿಸುವ ಲೇಖನವಿದು.

ನೆಲ್ಲಿಕಾರು ಜೈನ ಬಸದಿಯ ಬಳಿಯ ಹೊಸಮನೆ ಶ್ರೀ ರತ್ನಾವರ್ಮ ಶೆಟ್ಟಿ ಹಾಗೂ ಲಕ್ಷ್ಮೀಮತಿ ದಂಪತಿ ಪುತ್ರನಾಗಿರುವ ಜಿನೇಶ್‌ ಅವರಿಗೆ ಬಾಲ್ಯದಿಂದಲೂ ಫೋಟೋಗ್ರಪಿ ಹವ್ಯಾಸ. ಓರ್ವ ಆದರ್ಶ ಶಿಕ್ಷಕನ ಮಗನಾಗಿರುವ ಜಿನೇಶ್‌ ಪದವಿ ಶಿಕ್ಷಣವನ್ನು ಪಡೆಯಲು ಉಜಿರೆ ಎಸ್‌ಡಿಎಂ ಕಾಲೇಜಿಗೆ ಸೇರ್ಪಡೆಯಾದರು. ಆ ಬಳಿಕ ಉದ್ಯೋಗ ಅರಸಿ ಬೆಂಗಳೂರಿನತ್ತ ತೆರಳಿದರು. ಆ ಸಮಯದಲ್ಲಿ ವಿದ್ಯಾರ್ಥಿವೇತನದ 100 ರೂಪಾಯಿಯಲ್ಲಿ AGFA Click 3 ಕ್ಯಾಮರ ಖರೀದಿಸಿದರು. ಈ ವೇಳೆ ಬೆಂಗಳೂರಿನ ಚಿತ್ರಕಲಾ ಪರಿಷತ್‌ ಸೇರಿದ ಜಿನೇಶ್‌ ಅವರು ಆರ್ಥಿಕ ಸಂಕಷ್ಟದಿಂದಾಗಿ ನಾಲ್ಕು ವರ್ಷಗಳ ಕೋರ್ಸ್ ಪೂರ್ಣಗೊಳಿಸಲಾಗದೇ ಒಂದೇ ವರ್ಷಕ್ಕೆ ಮೊಟಕುಗೊಳಿಸಿದರು.
ಆದರೂ ಫೋಟೋಗ್ರಫಿ ಪ್ರೀತಿ ಬಿಡದ ಜಿನೇಶ್‌ 15 ದಿನಗಳ ಫೋಟೋಗ್ರಫಿ ತರಬೇತಿ ಪಡೆದು ಫೋಟೋಗ್ರಾಫರ್ ಆಗುವ ಸಂಕಲ್ಪ ತೊಟ್ಟರು. ಇದೇ ಹವ್ಯಾಸ ಅವರನ್ನು ದೇಶ ಸುತ್ತುವಂತೆ ಮಾಡಿತ್ತು. ಮುಂಬೈ, ಗೋವಾ, ಕೊಲ್ಕತ್ತಾ, ಚೆನ್ನೈ, ಡೆಲ್ಲಿ, ಗುಜರಾತ್, ಹೈದರಾಬಾದ್‌ ಸೇರಿದಂತೆ ದೇಶದ ವಿವಿಧ ಪಟ್ಟಣ-ಹಳ್ಳಿಗಳನ್ನು ಸುತ್ತಿ ಅದೆಷ್ಟೋ ಸಾವಿರ ಕಲಾತ್ಮಕ, ಸೃಜನಾಶೀಲ ಛಾಯಾಚಿತ್ರವನ್ನು ತನ್ನ ಕೈಚಳಕದಿಂದ ಕ್ಲಿಕ್ಕಿಸಿದರು. 12 ರಾಷ್ಟ್ರಗಳಿಗೆ ಪ್ರವಾಸ ಮಾಡಿ ಅಲ್ಲೂ ನೂರಾರು ಫೋಟೋಗಳನ್ನು ಸೆರೆ ಹಿಡಿದರು. ಇವೆಲ್ಲ ಚಿತ್ರಗಳು ವಿವಿಧ ಛಾಯಾಚಿತ್ರ ಪ್ರದರ್ಶನಗಳಲ್ಲಿ ಗಮನ ಸೆಳೆದವು.

ಸ್ಟುಡಿಯೋ ಸ್ಥಾಪನೆ
ಪ್ರಾರಂಭದಲ್ಲಿ 1987ರಲ್ಲಿ ತನ್ನ ಹುಟ್ಟೂರಾದ ನೆಲ್ಲಿಕಾರಿನಲ್ಲಿ ಪೊರ್ಲು ಎಂಬ ಹೆಸರಿನ ಸ್ಟುಡಿಯೋ ತೆರೆದರು. ಫೋಟೋ ಚೆನ್ನಾಗಿ ಮೂಡುವುದು ಕ್ಯಾಮೆರಾ ಗುಣಮಟ್ಟದಿಂದ ಅಲ್ಲ, ಫೋಟೋಗ್ರಾಫರ್ ದೃಷ್ಟಿ, ಆಂಗಲ್, ಬೆಳಕಿನ, ವರ್ಣ ವಿನ್ಯಾಸ ಮತ್ತು ಸೌಂದರ್ಯ ಪ್ರಜ್ಞೆಯಿಂದ ಎಂದು ಬಲವಾಗಿ ನಂಬಿದ ಅವರು ಪೊರ್ಲು ಸ್ಟುಡಿಯೋ ಹೆಸರನ್ನೇ ಬ್ರಾಂಡ್‌ ಆಗುವ ರೀತಿಯಲ್ಲಿ ಪರಿವರ್ತಿಸಿದರು. ಪೊರ್ಲು ಭಾರೀ ಹೆಸರು ತಂದು ಕೊಟ್ಟಿತು. ಕಾರ್ಕಳದಲ್ಲಿ ಮೊದಲು ಫೋಟೋ ಸ್ಟುಡಿಯೋ ಸ್ಥಾಪಿಸಿ ಇತಿಹಾಸ ಬರೆದ ಐ. ಗೋಪಾಲ್ ಪೈ ಮತ್ತು ಏ.ಸಿ. ಅಮೀನ್ ಅವರು ಕೂಡ ಜಿನೇಶ್‌ ಪ್ರಸಾದ್‌ ಅವರ ಮೇಲೆ ಪ್ರಭಾವ ಬೀರಿದ್ದರು.

ಅರಸಿ ಬಂದ ಪ್ರಶಸ್ತಿಗಳು
ಕಾರ್ಕಳದಲ್ಲಿ 1989ರಲ್ಲಿ ಅನಂತಶಯನ ಸದಾನಂದ ಕ್ಲಾಂಪೆಕ್ಸ್‌ನಲ್ಲಿ ಪೊರ್ಲು ಸ್ಟುಡಿಯೋ ಸ್ಥಾಪಿಸಿದರು. ಅದು ಜನಪ್ರಿಯತೆಯ ಉತ್ತುಂಗದಲ್ಲಿ ಇತ್ತು. ಆದರೆ, ಕ್ರಿಯಾಶೀಲ ಮನಸ್ಸು ಯಾವಾಗಲೂ ಹೊಸತನ್ನು ಹುಡುಕುವುದರಿಂದ ಜಿನೇಶ್‌ ಅಲ್ಲಿಂದ ಮುಂದುವರಿಯುತ್ತ ಸಾಗಿದರು. ಕ್ಯಾಮೆರಾ ಬೆನ್ನಿಗೆ ಏರಿಸಿಕೊಂಡು ಮತ್ತೆ ದೇಶ ವಿದೇಶ ಸುತ್ತಿದರು. ಅವರ ಆಕರ್ಷಕ ಫೋಟೋಗಳು ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಮ್ಯಾಗಝೀನಲ್ಲಿ ಪ್ರಕಟವಾದವು. ಕಂಬಳ, ಮಹಾಮಸ್ತಕಾಭಿಷೇಕ, ಕುಂಭ ಮೇಳ, ದೈವದ ಕೋಲ, ಕೂಡ್ಲಿಗಿಯ ಕೆಂಡ ಎರಚುವ ಸಂಸ್ಕೃತಿ, ನಡಾವಳಿ, ಸಂಕ್ರಾಂತಿ ಮೊದಲಾದವುಗಳನ್ನು ಸೊಗಸಾಗಿ ಸೆರೆ ಹಿಡಿದರು. ಧರ್ಮಸ್ಥಳದ ತುಳು ಸಮ್ಮೇಳನದಲ್ಲಿ ಅವರು ಸೆರೆ ಹಿಡಿದ ಫೋಟೋಗಳು ಭಾರೀ ಜನಪ್ರಿಯತೆ ಪಡೆಯಿತು. ಫೋಟೋಗ್ರಫಿಗಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸುಮಾರು 200ಕ್ಕಿಂತಲೂ ಅಧಿಕ ಪ್ರಶಸ್ತಿಗಳು ಜಿನೇಶ್‌ ಅವರನ್ನು ಅರಸಿ ಬಂದವು. ಇದು ಅವರ ಕಲಾತ್ಮಕತೆ, ಸೃಜನಶೀಲತೆಗೆ ಹಿಡಿದ ಕೈಗನ್ನಡಿ. ರಾಷ್ಟ್ರ, ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗೆ ಹಲವಾರು ಬಾರಿ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸಿದ್ದರು.

ತಮ್ಮನೂ ಫೋಟೋಗ್ರಾಫರ್‌

ಜಿನೇಶ್‌ ಪ್ರಸಾದ್‌ ಅವರ ತಮ್ಮ ಪದ್ಮಪ್ರಸಾದ್‌ ಜೈನ್‌ ಕೂಡ ಕಾರ್ಕಳದ ಖ್ಯಾತ ಛಾಯಾಗ್ರಾಹಕರಲ್ಲಿ ಓರ್ವರು. ಕಾರ್ಕಳ ಮಾರ್ಕೆಟ್‌ ರಸ್ತೆಯಲ್ಲಿ ಶಿಲ್ಪಾ ಸ್ಟುಡಿಯೋ ನಡೆಸುತ್ತಿರುವ ಇವರು ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಲ್ಲೂ ಗುರುತಿಸಿಕೊಂಡವರು.

ಮಗ ಪರಂ ಜೈನ್
ಮಗ ಪರಂ ಜೈನ್‌ ಅಪ್ಪನ ಪ್ರಭಾವದಿಂದ ಬಹಳ ಚೆನ್ನಾಗಿ ಫೋಟೋ ಸೆರೆಹಿಡಿಯುತ್ತಾರೆ. ಮೂಡಬಿದಿರೆ ರೋಟರಿ ಆಂಗ್ಲ ಮಾ‍ಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿರುವ ಪರಂ ಫೋಟೋಗ್ರಫಿಗಾಗಿ ಸಣ್ಣ ವಯಸ್ಸಿನಲ್ಲಿ ಹತ್ತಾರು ಪ್ರಶಸ್ತಿ ಪಡೆದಿರುವುದು ಕೂಡ ಅಭಿನಂದನೀಯ. ಹಿರಿಯ ಮಗ ಗಮನ್‌ ಜೈನ್‌ ನಿಟ್ಟೆ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಓದುತ್ತಿದ್ದಾರೆ. ಜಿನೇಶ್‌ ಪತ್ನಿ ರಮ್ಯಾ ಅವರು ಜಿನೇಶ್‌ ಅವರ ಹವ್ಯಾಸಕ್ಕೆ ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅ‍ಧ್ಯಕ್ಷ ಡಾ. ಮೋಹನ್‌ ಆಳ್ವ ಅವರು ನನ್ನ ಕಲೆಗೆ ಬಹುದೊಡ್ಡ ತಿರುವು ನೀಡಿದವರು. ಪ್ರತಿಯೊಂದನ್ನೂ ಬಹಳ ಸೂಕ್ಷ್ಮವಾಗಿ ಗಮನಿಸುವ ಆಳ್ವರು ನನ್ನ ಛಾಯಾಚಿತ್ರವನ್ನು ಮೆಚ್ಚಿ ಸಾಕಷ್ಟು ಪ್ರೋತ್ಸಾಹ ನೀಡಿರುತ್ತಾರೆ. ಕಾರ್ಕಳ, ಮೂಡಬಿದ್ರೆ ಜನತೆ ನನ್ನ ಪ್ರವೃತ್ತಿಯನ್ನು ಬೆಂಬಲಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ.
ಜಿನೇಶ್‌ ಪ್ರಸಾದ್‌

ಜಿನೇಶ್‌ ಪ್ರಸಾದ್‌ : 7019199747

ಲೇಖನ : ರಾಜೇಂದ್ರ ಭಟ್‌ ಕೆ.
ಜೇಸಿಐ ರಾಷ್ಟ್ರಮಟ್ಟದ ತರಬೇತುದಾರರು

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!