ಕಗ್ಗದ ಸಂದೇಶ-ತಾಳಿದವ ಬಾಳಿಯಾನು

“ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ?|
ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ||
ವೇಳೆಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ?
ತಾಳುಮೆಯೆ ಪರಿಪಾಕ-ಮಂಕುತಿಮ್ಮ”|.

    ಅರುಣೋದಯದ ಕಾಲದಲ್ಲಿ ಬಿತ್ತಿದ ಬೀಜ ಸಂಜೆಯೊಳಗೆ ಮೊಳಕೆಯೊಡೆದು ಬೆಳೆದು ಫಲ ಕೊಡುವುದಿಲ್ಲ.ನಮ್ಮ ಕೃಷಿಯಲ್ಲಿಯೂ  ಸಮಯಕ್ಕೆ ಪ್ರಾಮುಖ್ಯತೆ ಇದೆ. ವೇಳೆ ಗಡುವನ್ನು ಮರೆತು ಆತುರಪಟ್ಟರೆ ಅಡುಗೆಯೂ ರುಚಿಯಾಗುವುದಿಲ್ಲ.ತಾಳುಮೆಯಿಂದಲೆ ಜೀವನದಲ್ಲಿ ಪರಿಪೂರ್ಣತೆ ಮತ್ತು ಪರಿಪಕ್ವತೆಯೆಂದು ಮಾನ್ಯ ಡಿ.ವಿ.ಜಿ ಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.

‘ತಾಳಿ ತಾಳಿ ಎನ್ನುವುದು ಮಂತ್ರ ತಾಳದಿದ್ದರೆ ಬಾಳು ಅತಂತ್ರ’ ಎಂಬ ಹಿರಿಯರ ಅನುಭವದ ನುಡಿಯಂತೆ ಬದುಕಿನಲ್ಲಿ ತಾಳ್ಮೆ ಕೆಟ್ಟರೆ ಬಾಳು ಗೋಳಾಗುತ್ತದೆ.ಇತ್ತೀಚಿನ ದಿನಮಾನದಲ್ಲಿ ಜನರಲ್ಲಿ ತಾಳ್ಮೆಯ ಕೊರತೆಯನ್ನು ಕಾಣುತ್ತಿದ್ದೇವೆ.ಕಾಯಲು ಯಾರೂ ತಯಾರಿಲ್ಲ. ತಕ್ಷಣ ಎಲ್ಲವೂ ಆಗಬೇಕು.’ಆತುರವೇ ಅಪಘಾತಕ್ಕೆ ಕಾರಣ’ ಎನ್ನುವುದರ ಅರಿವಿದ್ದರೂ ತಮ್ಮ ವೇಗಕ್ಕೆ ಮಿತಿ ಹಾಕಲಾರರು.ಅತೃಪ್ತಿ ಮತ್ತು ಅಸಹನೆ ನೆಮ್ಮದಿಯನ್ನು ಕೆಡಿಸುತ್ತದೆ.ಬೇಗ ಶ್ರೀಮಂತರಾಗಬೇಕು.ಬೇಗ ಪ್ರಸಿದ್ಧಿಯನ್ನು ಪಡೆಯಬೇಕು ಎನ್ನುವ ಧಾವಂತದಲ್ಲಿ ನ್ಯಾಯ ನೀತಿಯನ್ನೇ ಬದಿಗೆ ಸರಿಸುತ್ತಿದ್ದಾರೆ.ಸಾಧನೆಗೆ ಬೇಕಾದ್ದು ಸಹನೆ‌.ಕವಿ ಎನ್ ಎಸ್ ಲಕ್ಮೀನಾರಾಯಣ ಭಟ್ಟರು ” ತಾಳಿದವರೆ ಬಾಳುವರು ಆಳಗಳಿಗೆ ಇಳಿಯುವರು.ನೋವ ಕಡೆದ ಮೆಟ್ಟಿಲೇರಿ ಶಿಖರದಲ್ಲಿ ಹೊಳೆಯುವರು”ಎಂದಿದ್ದಾರೆ.
“ಬಾಳೆಲ್ಲ ಬೇವಲ್ಲ,ಬರಿ ಬೆಲ್ಲಮುಂ ಅಲ್ಲ| ಮೇಳವಿಸಿ ಕೂಡಿಹವು ಇವುಗಳೆರಡು| ಗೋಳಾಡದಿರು ಬರಿದೆ ಬಲು ಕಷ್ಟ ಬಂತೆಂದು| ತಾಳು ಸುಖ ಬರುವನಕ-ಬೋಳುಬಸವ” ಎಂದು ಕವಿ ನಿಜಗುಣ ಹೇಳಿದ್ದಾರೆ.ಶ್ರಮಕ್ಕೆ ತಕ್ಕ ಫಲ ಸಾಧನೆಗೆ ತಕ್ಕ ಪುರಸ್ಕಾರ ಸಿಕ್ಕೇ ಸಿಗುತ್ತದೆ.ಕತ್ತಲಿಲ್ಲದೆ ಬೆಳಕಿಲ್ಲ ಎಂಬಂತೆ ಕಷ್ಟಪಡದೆ ಸುಖ ಸಿಗದು.ಬದುಕಿನಲ್ಲಿ ಎದುರಾಗುವ ಎಲ್ಲವನ್ನು ಸಮಚಿತ್ತದಿಂದ ಸಹಿಸಿ ಸಕಾರಾತ್ಮಕ ಮನೋಭಾವದೊಂದಿಗೆ ತಾಳ್ಮೆಯಿಂದ ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು,ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕ.





























































































































































































































error: Content is protected !!
Scroll to Top