Tuesday, September 28, 2021
spot_img
Homeದೇಶಸದಾ ಬೆಳಗುತ್ತಿರಲಿ ಸ್ವಾತಂತ್ರ್ಯದ ಹಣತೆ

ಸದಾ ಬೆಳಗುತ್ತಿರಲಿ ಸ್ವಾತಂತ್ರ್ಯದ ಹಣತೆ

ದೇಶವಿಂದು 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಸಂಭ್ರಮವನ್ನು ಸವಿಯುವ ಭಾಗ್ಯಕ್ಕೆ ನಾವೆಲ್ಲರೂ ಸಾಕ್ಷಿ ಗಳಾಗಿದ್ದೇವೆ. ಅಖಂಡ ಭಾರತವೂ ಸ್ವಾಭಿಮಾನ ಸಶಕ್ತ, ಸರ್ವಸ್ವತಂತ್ರ ರಾಷ್ಟ್ರವಾಗಿ ವಿಶ್ವದಲ್ಲಿ ಜಗದ್ಗುರುವೆನಿಸಿದೆ. ಈ ಪುಣ್ಯ ಭಾರತ ಆಧ್ಯಾತ್ಮದ ತೊಟ್ಟಿಲಾಗಿ, ಋಷಿಪುಂಗವರ ತಪೋಭೂಮಿಯಾಗಿ, ಕೆಚ್ಚೆದೆಯ ವೀರ ಕಲಿಗಳ ಕ್ಷಾತ್ರ ಭೂಮಿಯಾಗಿ, ವಿಜ್ಞಾನಿಗಳ ಶೋಧನೆಯ ಪ್ರಯೋಗಾಲಯವಾಗಿ, ಕವಿಗಳ ರಸದ ತಾಣವಾಗಿದೆ ಉತ್ತಮ ಆಡಳಿತಗಾರರ ರಾಜಾಸ್ಥಾನವಾಗಿದೆ. ಪುಣ್ಯ ಪರ್ವಗಳ ನಾಡಾದ, ಸುಸಂಸ್ಕೃತ ಸುಚರಿತ ಸಜ್ಜನ ಜನಮಾನಸರ ಪುಣ್ಯ ಪಾವನ ಭೂಮಿ ನಮ್ಮ ಭಾರತ.

ಸರ್ವ ಜನಾಂಗದ ಶಾಂತಿಯ ನಾಡಿನಲ್ಲಿ ಹತ್ತು ಹಲವು ಮತ ಧರ್ಮಗಳು, ನಾನಾ ಕುಲ ಪಂಥ ಪಂಗಡಗಳು, ಸ್ನೇಹ ಸೌಹಾರ್ದತೆಯಲ್ಲಿ ಭ್ರಾತೃತ್ವವದ ಪ್ರೇಮವನ್ನು ಸಾರಿದೆ. ವಿಶ್ವ ವಸುದೈವ ಕುಟುಂಬಕಂ ತತ್ತ್ವದಡಿ ಜಗಕೆ ವಿಶ್ವ ಭ್ರಾತೃತ್ವದ ಪ್ರೀತಿಯ ಕರೆಯನ್ನು ನೀಡಿದೆ. ಭರತಭೂಮಿಯ ವೈವಿಧ್ಯಮಯ ಸಂಸ್ಕೃತಿಯಲಿ ಅದೆಷ್ಟೋ.. ಆಚರಣೆಗಳು, ಸಂಪ್ರದಾಯಗಳು, ಸಾಮಾಜಿಕ ಬದುಕಿನ ಪದ್ಧತಿಗಳು. ತೊಡುವ ವೇಷಭೂಷಣಗಳು ಅದೆಷ್ಟೋ ಆಡುವ ಭಾಷಾ ಭೂಷಣಗಳು ಹಲವಾರು. ಸೇವಿಸುವ ಆಹಾರದಲ್ಲಿ ವೈವಿಧ್ಯತೆಗಳು. ಇಲ್ಲಿಯ ಸಂಗೀತ ಸಾಹಿತ್ಯ ಲಲಿತ ಕಲಾ ಪ್ರಕಾರಾದಿಗಳು ಸಾಂಸ್ಕೃತಿಕ ಲೋಕದ ಅನಾವರಣವನ್ನು ಮಾಡುತ್ತಿದೆ. ಶತ ಶತಮಾನಗಳಿಂದಲೂ ತನ್ನ ಇತಿಹಾಸವನ್ನು ಸಾರುತ್ತಿರುವ ವೈಭವೋಪೇತ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳು, ಸ್ಮಾರಕಗಳು. ಎಲ್ಲಕ್ಕಿಂತಲೂ ಮಿಗಿಲಾಗಿ ವಸುಧೆಯ ಸೃಷ್ಟಿಯಲ್ಲಿ ವಿಶ್ವದ ವಿಶೇಷ ವಳಯವಾಗಿ ಪ್ರಕೃತಿ ಸೌಂದರ್ಯದ ಸೊಬಗಿನಲಿ ಸ್ವರ್ಗದ ಸ್ಪರ್ಧಿಯಂತಿರುವ ಸುಂದರ ತಾಯ್ನೆಲವಾಗಿದೆ. ಈ ದೇಶದ ವೈವಿಧ್ಯಮಯ ಸಂಸ್ಕೃತಿ ಯು ಐಕ್ಯತೆಯಲ್ಲಿ ಬಾಳುವ ಶಾಂತಿಯ ಸಂದೇಶವಿದೆ. ಈ ನೆಲದ ಪಾದ ಸ್ಪರ್ಶಕ್ಕೆ ಹಾತೊರೆಯುತ್ತಾ, ಬದುಕಿನ ಜಂಜಾಟದಲ್ಲಿ ಬೇಸತ್ತ ಪಾಶ್ಚಾತ್ಯ ಮನಸ್ಸುಗಳು ಶಾಂತಿಯನ್ನರಸುತ್ತ ಶಾಂತಿಯ ಧಾಮವೆನಿಸಿದ ನಮ್ಮ ಭಾರತಕ್ಕೆ ಬಂದು ಒಂದಿಷ್ಟು ದಿನ ಇದ್ದು ಹೋಗುತ್ತಿದ್ದಾರೆ.

ಆದರೆ ಎಪ್ಪತ್ತೈದು ವರ್ಷಗಳ ಹಿಂದಿನ ಭಾರತದ ಸ್ವಾತಂತ್ರ್ಯ ಹೋರಾಟ ಕಥೆ ರೋಚಕವಾದದ್ದು. ಹಳ್ಳಿಗಳ ದೇಶವಾಗಿ ಮುಗ್ಧ ಮನಸ್ಸುಗಳ ಪ್ರೀತಿಯ ಆಶ್ರಯ ತಾಣವಾಗಿ ಇದ್ದ ಭಾರತಕ್ಕೆ ಇದ್ದಕ್ಕಿದ್ದಂತೆ ವಿದೇಶಿ ವ್ಯಾಪಾರಿಗಳಾಗಿ ಅರಬ್ಬರು, ಡಚ್ಚರು, ಪ್ರೆಂಚರು, ರೋಮನ್ನರು ಪೋರ್ಚುಗೀಸರು ಆಂಗ್ಲರ ಆಗಮನವಾಯಿತು. ಅದರಲ್ಲೂ ಕಪಟ ಕುತಂತ್ರಿ ಬ್ರಿಟಿಷರು ತಮ್ಮ ಸ್ವಾರ್ಥಬುದ್ಧಿಗೆ ಭಾರತವನ್ನೇ ತನ್ನ ಆಡೊಂಬಲವನ್ನಾಗಿ ಮಾಡಬೇಕೆಂಬ ಧೂರ್ತ ಯೋಚನೆಯನ್ನು ಮಾಡಿದರು. ಮತ್ತೆ ಇಲ್ಲೇ ಠಿಕಾಣಿ ಹೂಡಿದ್ದರಲ್ಲದೇ..ನಮಗೆ ನಿಧಾನಗತಿಯಲ್ಲೇರುವ ವಿಷವಾಗಿ ಪರಿಣಮಿಸಿದರು. ಏನೂ ಅರಿಯದವರೆಂದುದೂ ಭಾರತೀಯರ ಪ್ರಾಮಾಣಿಕ ಮನಸ್ಸುಗಳ ದೌರ್ಬಲ್ಯವೆಂದೂ ಅರಿತುಕೊಂಡ ಆಂಗ್ಲರ ಹುಚ್ಚು ಯೋಚನೆಗಳು ಯಾಜಮಾನಿಕೆಯ ರೀತಿಯಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸಲು ಪ್ರಾರಂಭಿಸಿದ್ದರು. ಆದರೆ ಮತ್ತೆ ಸೆಟೆದು ನಿಂತ ಭಾರತೀಯರ ಕಲಿತನ ಅರಿವಾದುದ್ದು ಸ್ವಾತಂತ್ರ್ಯ ಆಗ್ನಿಯ ಕ್ರಾಂತಿಯ ಕಿಡಿಯ ತಾಪದಲ್ಲಿ ಬೆಂದಾಗಲೇ. ಈ ನಾಡಿನ ನಿಷ್ಕಪಟ ಶ್ರಮಜೀವಿಗಳು ಕಾಯಕ ನೇಗಿಲ ಯೋಗಿ ಅನ್ನದಾತ ನಮ್ಮರೈತರು ಬೆಳೆದ ಸಾಂಬಾರ ಪದಾರ್ಥಗಳ ಮೇಲೆ ಕಣ್ಣು ಬಿದ್ದುದ್ದಲ್ಲದೇ ಅತೀ ವ್ಯಾಮೋಹವೂ ಉಂಟಾಯಿತು. ಅದನ್ನು ಕಡಿಮೆ ಬೆಲೆಕೊಂಡು ತಮ್ಮ ತಮ್ಮ ದೇಶದ ಆರ್ಥಿಕ ಬಂಡವಾಳಗಳನ್ನು ಗಟ್ಟಿಗೊಳಿಸಲು ತೊಡಗಿದರು. ಅಲ್ಲಲ್ಲಿ ವಸಾಹತುಗಳನ್ನು ಸ್ಥಾಪಿಸಿದರು. ಮುಂದೆ ತಮ್ಮದೇ ಕಾನೂನು ಕಾಯ್ದೆಗಳನ್ನು ಜಾರಿಗೆ ತಂದರು..

ಇಂತಹ ಸಂದರ್ಭದಲ್ಲಿ ತಾಯಿ ಭಾರತ ಮಾತೆಯು ಕನಸಿನಲ್ಲಿ ಬಂದು ಈ ಕ್ಷಾತ್ರವೀರರೆನಿಸಿದ ಮಕ್ಕಳ ಮುಂದೆ ಅನ್ಯರ ಧಾಷ್ಟ್ಯ ಆಕ್ರಮಣಗಳು ಮೋಸ ವಂಚನೆಗಳು ಹೇಗೆ ಈ ಮಣ್ಣಿನ ಜನತೆಯನ್ನು.ಅಧೀರನ್ನಾಗಿ ಮಾಡಬಹುದೆಂದು ತಿಳಿಸಿದಳೋ..ಮತ್ತೆ ತಾಯಿ ಭಾರತೀ ಮಕ್ಕಳು ಘರ್ಜನೆಯ ಕೇಸರಿಯಂತೆ ಹೋರಾಟದ ರಣಾಗ್ನಿಯ ಕಿಡಿ ಹೊತ್ತಿ ಉರಿಯಲಾರಂಭಿಸಿತು. ಬ್ರಿಟಿಷರ ಪ್ರತೀ ತಂತ್ರಗಳ ಕುತಂತ್ರಗಳನ್ನು ಬಯಲಿಗೆಳೆದರು. ದೇಶಪ್ರೇಮಿಗಳು ಕೆಚ್ಚೆದೆಯ ಕಲಿಗಳು ರಾಷ್ಟ್ರ ಬಂಧು ಭಕ್ತರು ಬ್ರಿಟಿಪರ ವಿರುದ್ಧ ತೊಡೆ ತಟ್ಟಿ ಚಲೇ ಜಾವ್ ಘೋಷಣೆಯೊಂದಿಗೆ. ಒಂದಿನಿತು ಮಿರಮಿಸಿದಂತೆ ಬೆನ್ನಟ್ಟಿದರು. ಕ್ಷಣ ಕಾಲವೂ ಇಲ್ಲೇ ಝುಂಡಾ ಊರಲು ಬಿಡದೇ ಎಲ್ಲೆಂದರಲ್ಲಿ ಭಾರತ ತಿರಂಗವನ್ನೇ ಬಾನೆತ್ತರದಲ್ಲಿ ಹಾರಿಸಿದರು. ಕೋಟಿ.ಕೋಟಿ.ಭಾರತೀಯರ ಆತ್ಮಭಿಮಾನದ ಸಂಕೇತವಾಗಿ ಸ್ವಚ್ಛಂಧವಾಗಿ ರಾಜಿಸಿತ್ತು..

ಬ್ರಿಟಿಷರ ಪಾಲಿಗೆ ಭಾರತೀಯರೆಲ್ಲರೂ ಸಿಂಹ ಸ್ವಪ್ನ ರಾಗಿಯೇ ಕಾಣಿಸಿಕೊಂಡರು. ದೇಶದ ಮೂಲೆ ಮೂಲೆಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಕೋಟಿ ಕೋಟಿ ಭಾರತೀಯ ಹೃದಯ ಸಂಜಾತರಲ್ಲಿ ಸ್ವಾತಂತ್ರ್ಯ ದ ಹಣತೆಯು ಸದಾ ಬೆಳಗಲಾರಂಭಿಸಿತು. ಬ್ರಿಟಿಷರ ಗುಲಾಮಗಿರಿತನದ ಕತ್ತಲಲ್ಲಿ ನರಳಾಡುತ್ತಿರುವವರಿಗೆ ದೇಶದ ಕಲಿಗಳು ತನ್ನ ಪ್ರಾಣಾರ್ಪಣೆಯನ್ನು ಮಾಡುತ್ತಲೇ ಸ್ವಾತಂತ್ರ್ಯ ಹಣತೆಯ ಬೆಳಕಾಗಿ ಧೈರ್ಯ ಸ್ಥೈರ್ಯವನ್ನು ತುಂಬಿದರು. ಹೀಗೆ ಬ್ರಿಟಿಷರನ್ನು ಭಾರತದ ನೆಲದಿಂದೊಡಿಸುವ ದೃಢ ಹೋರಾಟ ಕಿಚ್ಚು ಪಂಜಿನ ಬೆಳಕಿನಂತೆ ಭಾರತ ಮೂಲೆ ಮೂಲೆಗಳಲ್ಲಿ ಹೊತ್ತಿ ಉರಿಯಿತು. ಈ ಹೋರಾಟಕ್ಕೆ ಸಂದ ಶ್ರೇಷ್ಠ ಜಯದ ಸಂದೇಶವೇ ಭಾರತ ಸ್ವಾತಂತ್ರ್ಯ ಪಡೆಯಿತು ಎಂಬ ಶುಭ ಸುದ್ದೊ ಎಲ್ಲೆಡೆಯೂ ಮೊಳಗಿತು.

ಭಾರತ ದೇಶವು ಸರ್ವತಂತ್ರ ಸ್ವತಂತ್ರ ರಾಷ್ಟ್ಪ ಸ್ವಾತಂತ್ರ್ಯಕ್ರಾಂತಿಕಾರರ ತ್ಯಾಗಭೂಮಿಯ ಮಣ್ಣಿಗೆ ಭಾರತೀಯರೇ ವಾರಿಸುದಾರರೆಂಬ ಬದ್ಧ ತೀರ್ಮಾನದ ದಿಟ್ಟ ಸಂದೇಶ ವಿಶ್ವದಗಲಕ್ಕೂ ಹಬ್ಬಿತ್ತು. 1947 ಅಗಷ್ಟ್ 15 ಭಾರತ ಸ್ವಾತಂತ್ರ್ಯ ಗೊಂಡು ನಭೋಂಗಣದಲ್ಲಿ ಪ್ರಜೆಗಳು ಹಕ್ಕಿಗಳಂತೆ ಬಂಧ ವಿಮುಕ್ತರಾಗಿ ಸ್ವಚಂದವಾಗಿ ಹಾರಾಡಿದರು. ಸಂಭ್ರಮಿಸಿದರು ಇದು ತ್ಯಾಗ ಬಲಿದಾನಗಳ ಪ್ರತೀಕವಾಯಿತು. ನಮಗೆ ದೊರೆತ ಸ್ವಾತಂತ್ರ್ಯ. ನಿರಾಯಾಸವಾಗಿ ಬಂದದ್ದಲ್ಲ ಈ ಸ್ವಾತಂತ್ರ್ಯ ಅದೆಷ್ಟೋ. ದೇಶಬಂಧು ರಾಷ್ಟ್ರ ನಾಯಕರು ತಮ್ಮ ಪ್ರಾಣವನ್ನು ಸ್ವಾತಂತ್ರ್ಯ ದೇವಿಯ ಹಣತೆಗೆ ತೈಲವಾಗಿ ಭಾರತ ದೇಶವನ್ನು ಬೆಳಗುತ್ತಲೇ ಮೆರೆದರು ಮರೆಯಾದರು. ಜಗದ್ವಂದ್ಯ ಭಾರತವನ್ನಾಗಿ ಮಾಡಿದರು. ಆ ಧೀರ ಶೂರ ವೀರ ಹುತಾತ್ಮರ ಓಜಸ್ಸು ತೇಜಸ್ಸು ಮೇಧಸ್ಸಿನ ಸರ್ವಶ್ರೇಷ್ಠ ತ್ಯಾಗದ ಪುಣ್ಯ ಫಲವೇ ಈ ಪರಮ ಪವಿತ್ರ ಸ್ವಾತಂತ್ರ್ಯ. ಆ ಬಳಿಕ ದೇಶವು ಸಾಗಿ ಬಂದ ಹಾದಿಯಲ್ಲಿ ಕಂಡ ಕನಸುಗಳ ನನಸಾದರೆ ಭಾರತೀಯರ ನೆಮ್ಮದಿ ಯ ಬದುಕಿಗೆ ಇನ್ನಷ್ಟು ಕನಸುಗಳನ್ನು ನನಸಾಗಿಸುವ ಜವಾಬ್ದಾರಿ ನಮಸ್ತ ಭಾರತೀಯರದ್ದು. ಮುಂದೆ ಈ ಮಹತ್ತರದ ಕನಸುಗಳನ್ನು ಸಾಕಾರಗೊಳಿಸುವ ಯೋಚನೆ ಯೋಜನೆ ನಮ್ಮದಾಗಬೇಕು. ಈ ಸ್ವಾತಂತ್ರ್ಯ ವನ್ನು ಉಳಿಸುತ್ತಾ ಬಲಿದಾನಗೈದ ಪವಿತ್ರ ಆತ್ಮಗಳಿಗೆ ಕೃತಾರ್ಥರಾಗಿರುವ ಬದ್ಧತೆ ನಮ್ಮದಾಗಬೇಕು.

ಈ ದಿನದ ಸ್ವಾತಂತ್ರ್ಯದ ಅಮೃತ ಮಹೋತ್ಸವವು ದೇಶದ ಸಂವಿಧಾನದ ಗೌರವ ಸಲ್ಲಿಸುತ್ತಾ ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಐಕ್ಯತೆಯನ್ನು ಸಾಧಿಸುತ್ತಾ ಜಗಕ್ಕೆ ಅಮೃತ್ವದ ಶಾಂತಿಯನ್ನು ನೀಡುವಂತಾಗಲಿ. ನಮ್ಮೀ ಭಾರತವನ್ನು ಭವ್ಯ ಆತ್ಮನಿರ್ಭರ ಭಾರತವನ್ನಾಗಿಸಿ ಭವ್ಯ ಭಾರತವನ್ನಾಗಿಸೋಣ. ಈ ಸ್ವಾತಂತ್ರ್ಯ ಹಣತೆಯೂ ಸದಾ ಕಾಲ ಬೆಳಗುತ್ತಿರಲಿ. ಆ ಬೆಳಕಿನ ಕಾಂತಿಯಲ್ಲಿ ತಾಯಿಭಾರತಿಯ ಮೊಗದ ಕಾಂತಿಯು ಶೋಭಿಸಲಿ ಭಾರತಮಾತೆಯು ವಿಶ್ವದಾತೆಯಾಗಲಿ.

ಗಣೇಶ್‌ ಜಾಲ್ಸೂರು

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!