Sunday, September 26, 2021
spot_img
HomeUncategorizedನಾಗರ ಪಂಚಮಿ ನಾಡಿಗೆ ದೊಡ್ಡದು

ನಾಗರ ಪಂಚಮಿ ನಾಡಿಗೆ ದೊಡ್ಡದು

ಶ್ರಾವಣ ಬಂತು ಶ್ರಾವಣ…. ಆಷಾಢ ಕಳೆದು ಶ್ರಾವಣ ಮಾಸ ಬಂತೆಂದರೆ ಜನರಲ್ಲಿ ಎಲ್ಲಿಲ್ಲದ ಹುಮ್ಮಸ್ಸು ಮನೆ ಮಾಡುತ್ತದೆ. ಏಕೆಂದರೆ ಶ್ರಾವಣದಲ್ಲಿ ಹಬ್ಬ-ಹರಿದಿನಗಳು ಸಾಲು ಸಾಲಾಗಿ ಬಂದು ಜನರಲ್ಲಿ ನವಚೈತನ್ಯವನ್ನು ಮೂಡಿಸುತ್ತದೆ. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿ ದಿನದಂದು ಬರುವ ಹಬ್ಬವೇ ನಾಗರಪಂಚಮಿ. ನಾಗದೇವರ ಬಗ್ಗೆ ಹಿಂದೂ ಧರ್ಮದಲ್ಲಿ ಅಪಾರ ನಂಬಿಕೆ ಮತ್ತು ಭಕ್ತಿ ಅನಾದಿಕಾಲದಿಂದಲೂ ಮನೆ ಮಾಡಿದೆ. ಈ ದಿನ ಶ್ರದ್ಧಾಭಕ್ತಿಯ ಪೂಜೆ ಮಾತ್ರವಲ್ಲ ಜೊತೆಗೆ ಉಪವಾಸ ವ್ರತವನ್ನು ಕೂಡ ಕೈಗೊಳ್ಳಲಾಗುತ್ತದೆ.” ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ
ಕಂಬಲಂ ಶಂಖಪಾಲಂ ದೃತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ “ಎಂಬ ಶ್ಲೋಕವು ನಾಗದೇವರ ವಿವಿಧ ನಾಮಧೇಯಗಳನ್ನು ತಿಳಿಸುತ್ತದೆ. ಪುರಾಣದ ಪ್ರಕಾರ ನಾಗದೇವತೆಗಳು ಪಾತಾಳದಲ್ಲಿ ವಾಸಿಸುತ್ತಿದ್ದರೆಂದು ಪ್ರತೀತಿ. ಆದ್ದರಿಂದ ಭೂಮಿಯ ಮೇಲೆ ನಾಗದೇವರ ಕಲ್ಲಿಗೆ ಹಾಲೆರೆಯುವುದರಿಂದ ಪಾತಾಳ ಲೋಕದಲ್ಲಿ ಇರುವ ಹಾವುಗಳಿಗೆ ಅಭಿಷೇಕ ಮಾಡಿದಂತಾಗುತ್ತದೆ ಎಂಬ ನಂಬಿಕೆಯೂ ಇದೆ.
ಈ ಶುಭದಿನದಂದು ಹಾಲು, ಸೀಯಾಳ ಮತ್ತು ಪಂಚ ದ್ರವ್ಯಗಳನ್ನು ಬಳಸಿ ನಾಗದೇವರ ಪೂಜೆಗೈಯುತ್ತೇವೆ. ಅಭಿಷೇಕದ ನಂತರ ನಾಗ ದೇವರಿಗೆ ಇಷ್ಟವಾದ ಹಿಂಗಾರ ಕೇದಗೆ ಹೂಗಳಿಂದ ಅಲಂಕರಿಸಲಾಗುತ್ತಿದೆ.
ನಾಗರಪಂಚಮಿ ಹಬ್ಬ ಬರುವುದು ಮುಂಗಾರು ಮಳೆಯ ಆರ್ಭಟದ ಮಧ್ಯದಲ್ಲಿ. ರೈತರು ಸಾಮಾನ್ಯವಾಗಿ ಕೃಷಿಕೆಲಸಗಳನ್ನು ನಿರ್ವಹಿಸಿ ಒಂದು ಹಂತಕ್ಕೆ ಬಂದಿರುವ ಪರ್ವಕಾಲದಲ್ಲಿ .ತಾವು ಬೆಳೆದ ಫಸಲು ಚೆನ್ನಾಗಿ ಬರಲಿ ಎಂದು ತನು ಎರೆಯುವ ಮೂಲಕ ನಾಗದೇವರನ್ನು ಬೇಡಿಕೊಳ್ಳುತ್ತಾರೆ.
ನಾಗರಪಂಚಮಿಯ ಕುರಿತಾಗಿ ಅನೇಕ ಕಥಾಹಂದರಗಳಿವೆ. ಈ ಹಬ್ಬ ಅಣ್ಣ-ತಂಗಿಯ ಸಂಬಂಧವನ್ನು ಬೆಸೆಯುವ ಹಬ್ಬ ಕೂಡ ಹೌದು. ಬಹಳ ಹಿಂದೆ ದೇವಶರ್ಮ ಎಂಬ ಬ್ರಾಹ್ಮಣನು ವಾಸವಾಗಿದ್ದನು. ಆತನಿಗೆ ಎಂಟು ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳಿದ್ದಳು. ಆ ಹೆಣ್ಣು ಮಗು ಗರುಡನಿಂದ ತೊಂದರೆಗೆ ಒಳಗಾದ ನಾಗರಹಾವಿಗೆ ರಕ್ಷಣೆಯನ್ನು ನೀಡಿದ್ದಳು. ಇದರಿಂದ ಸಂತುಷ್ಟಗೊಂಡ ವಾಸುಕಿಯು ಆಕೆಗೆ ಬಂಗಾರದ ನಾಣ್ಯ ನೀಡಿದ್ದನು. ಆ ಹೆಣ್ಣುಮಗಳ ಅಣ್ಣಂದಿರು ಅತಿ ಆಸೆಗೊಂಡು ತುಂಬಾ ನಾಣ್ಯಗಳು ಬೇಕೆಂದು ವಾಸುಕಿಯನ್ನು ಪೀಡಿಸಲಾರಂಭಿಸಿದರು. ಇದರಿಂದ ಕೋಪಗೊಂಡ ವಾಸುಕಿಯು ಅವಳ ಅಣ್ಣಂದಿರನ್ನು ಸಾಯಿಸಿ ಬಿಟ್ಟಿತ್ತು. ಆಗ ಆ ಹೆಣ್ಣುಮಗಳು ಸಹೋದರರನ್ನು ಬದುಕಿಸಿ ಕೊಡುವಂತೆ ವಾಸುಕಿಯನ್ನು ಅಂಗಲಾಚಿದಳು. ಅದರಂತೆ ಆಕೆಗೆ ಅಣ್ಣಂದಿರನ್ನು ಮರುಜೀವ ನೀಡಿದ ಪುಣ್ಯ ದಿನವೂ ಪಂಚಮಿಯ ದಿನವಾಗಿದೆ. ಆದ್ದರಿಂದ ಸಹೋದರರ ಶ್ರೇಯಸ್ಸಿಗೋಸ್ಕರ ಹೆಣ್ಣುಮಕ್ಕಳು ಹೆಚ್ಚಾಗಿ ಶ್ರದ್ಧಾಭಕ್ತಿಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ನಾಗರಪಂಚಮಿಯ ಮಾಂಗಲ್ಯ ರಕ್ಷಣೆಗೆ ಮತ್ತು ಸಂತಾನ ಭಾಗ್ಯ ಕರುಣಿಸುವ ಬೇಡಿಕೆಗೆ ಅಸ್ತು ಎನ್ನುವ ಶುಭ ದಿನವಾಗಿದೆ.
ಹೆಚ್ಚಾಗಿ ನಾಗಬನಗಳು ಪ್ರಕೃತಿಯ ಮಧ್ಯಭಾಗದಲ್ಲಿ ನೀರಿನ ಸೆಳೆ ಇರುವ ತಾಣಗಳಲ್ಲಿ ಬಹು ಆಕರ್ಷಕವಾಗಿ ಕಂಡು ಬರುತ್ತವೆ. ಇಂತಹ ಪ್ರಕೃತಿ ಮಡಿಲಿನಲ್ಲಿರುವ ನಾಗಬನಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಒಟ್ಟಿನಲ್ಲಿ ನಾಗರಪಂಚಮಿಯ ಪ್ರಕೃತಿಯೊಡನೆ ಭಕ್ತಿಭಾವದ ಕೊಂಡಿಯನ್ನು ಬೆಸೆಯುವ ಹಬ್ಬವಾಗಿದೆ. ಎಲ್ಲರೂ ಒಂದಾಗಿ ಶ್ರದ್ದಾಭಕ್ತಿಯಿಂದ ಪ್ರಾಕೃತಿಕ ನಿಲುವಿನಲ್ಲಿ ನಾಗರಪಂಚಮಿಯನ್ನು ಆಚರಿಸಿ ಶ್ರೇಯಸ್ಸನ್ನು ಆಶಿಸೋಣ.

ಸವಿತಾ
ಶಿಕ್ಷಕಿ, ಶ್ರೀ ಭುವನೇಂದ್ರ ಶಾಲೆ, ಕಾರ್ಕಳ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!