Wednesday, January 19, 2022
spot_img
HomeUncategorizedಕಾರ್ಯಾಂಗದ ಮೇಲೆ ಶಾಸಕಾಂಗದ ಗದಾ ಪ್ರಹಾರ ಎಷ್ಟು ಸರಿ ?

ಕಾರ್ಯಾಂಗದ ಮೇಲೆ ಶಾಸಕಾಂಗದ ಗದಾ ಪ್ರಹಾರ ಎಷ್ಟು ಸರಿ ?

ಮಂಗಳೂರಿನಲ್ಲಿ ನಿನ್ನೆ ಕರ್ನಾಟಕದ ನೂತನ ಮುಖ್ಯಮಂತ್ರಿ ಮೊದಲ ಬಾರಿ ಬಂದಿದ್ದಾಗ ಒಂದು ಮುಖ್ಯ ಸಭೆ ನಡೆಯಿತು. ಅದರಲ್ಲಿ ಎಲ್ಲಾ ಅಧಿಕಾರಿಗಳಿದ್ದರು. ಸಭೆಯ ಮಧ್ಯೆ ಜಿಲ್ಲಾಧಿಕಾರಿ ಮತ್ತು ಹಿರಿಯ ಜಿಲ್ಲಾ ಆರೋಗ್ಯಾಧಿಕಾರಿ ಕಾರ್ಯವೈಖರಿ ಮೇಲೆ ಸಿಟ್ಟು ಮಾಡಿಕೊಂಡರು ಸಿಎಂ ಬೊಮ್ಮಾಯಿ. ಎಲ್ಲರ ಮುಂದೆ ಜಿಲ್ಲಾಧಿಕಾರಿ ಅವರನ್ನು ಏರುಧ್ವನಿಯಲ್ಲಿ ಬೈದರು. ಅದೇ ಸಿಟ್ಟನ್ನು ಆರೋಗ್ಯಾಧಿಕಾರಿ ಮೇಲೂ ವ್ಯಕ್ತಪಡಿಸಿದರು. ಹಿರಿಯ ವಯಸ್ಸಿನ ವೈದ್ಯಾಧಿಕಾರಿ ಮೇಲೆ ಏಕವಚನ ಪ್ರಯೋಗ ಮಾಡಿದ ಸಿಎಂ ಬೊಮ್ಮಾಯಿ ಅವರು ಏನೋ, ನಿದ್ದೆ ಮಾಡ್ತಾ ಇದ್ದೀಯ ? ಕಾಮನ್ ಸೆನ್ಸ್ ಇದೆಯಾ ನಿನಗೆ ? ಹೀಗೆಲ್ಲ ಬಯ್ಯುತ್ತಾ ಮುಂದುವರೆದರು. ಅದು ನಿನ್ನೆ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಜಿಲ್ಲಾ ಮಟ್ಟದ ಎರಡು ಅಧಿಕಾರಿಗಳು ತಲೆ ತಗ್ಗಿಸಬೇಕಾದ ಸನ್ನಿವೇಶ ನಿರ್ಮಾಣವಾಯಿತು.

ಅಧಿಕಾರಿಗಳ ತಪ್ಪು ಇರಬಹುದು. ಅವರ ಕರ್ತವ್ಯ ಲೋಪ ಎಂದು ಬೇಕಾದರೂ ಕರೆಯಿರಿ. ಆದರೆ ಅದನ್ನು ಮೆತ್ತಗೆ ಹೇಳಬಹುದಿತ್ತು ಅಥವಾ ಅವರನ್ನು ಪರ್ಸನಲ್ ಆಗಿ ಕರೆದು ಬಯ್ಯಬಹುದಿತ್ತು. ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕಾದದ್ದು ಮಂತ್ರಿಗಳ ಕರ್ತವ್ಯ. ಆದರೆ, ಸಿಎಂ ಗಮನಿಸಬೇಕಾದ ಒಂದು ಅಂಶ ಅಂದರೆ ಭ್ರಷ್ಟಾಚಾರ ಬೇರೆ, ಕರ್ತವ್ಯ ಲೋಪ ಬೇರೆ. ಭ್ರಷ್ಟರಿಗೆ ಮುಲಾಜಿಲ್ಲದೆ ಕಠಿಣ ಶಿಕ್ಷೆ ಕೊಡಬಹುದು. ಸಾರ್ವಜನಿಕವಾಗಿ ನಿಂದನೆ ಮಾಡಬಹುದು. ಅಮಾನತು ಅಸ್ತ್ರ ಬಳಸಬಹುದು. ಎಲ್ಲಾ ಅಧಿಕಾರವೂ ಮಂತ್ರಿಗಳಿಗೆ ಇದೆ.

ಆದರೆ ಕರ್ತವ್ಯ ಲೋಪ ಯಾಕೆ ಆಯ್ತು? ಅದಕ್ಕೇನು ಕಾರಣ ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಪಡೆಯಬೇಕು ಅಲ್ವಾ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂದಾಜು ಎರಡು ವರ್ಷಗಳಿಂದ ಕೋರೋನ ನಿಯಂತ್ರಣಕ್ಕೆ ಬಂದಿಲ್ಲ. ಜಿಲ್ಲಾಡಳಿತ, ವೈದ್ಯಾಧಿಕಾರಿಗಳು ರಾತ್ರಿ ಹಗಲು ದುಡಿದು ಹೈರಾಣ ಆಗಿದ್ದಾರೆ. ಕೋರೋನಾ ಹರಡಲು ಇನ್ನೂ ಅನೇಕ ಕಾರಣಗಳು ಇವೆ. ನಿನ್ನೆ ನಡೆದ ಸಿಎಂ ಅವರ ಅಷ್ಟೂ ಸಭೆಗಳಲ್ಲಿ ಸೋಷಿಯಲ್ ಡಿಸ್ಟೆನ್ಸ್ ಇರಲಿಲ್ಲ. ಹಲವರ ಮಾಸ್ಕ್ ಮಿಸ್ಸಿಂಗ್. ಇತ್ತೀಚೆಗೆ ನಡೆದ ರಾಜಕೀಯ ಸಭೆಗಳು ಹೆಚ್ಚು ಕಾಯಿಲೆ ಹರಡುವ ಸಾಧ್ಯತೆ ಇದೆ. ದೊಡ್ಡ ಪ್ರಮಾಣದಲ್ಲಿ ಜನ ಸೇರುವ ಹಬ್ಬಗಳನ್ನು ಸರಕಾರ ಈ ವರ್ಷ ನಿಯಂತ್ರಣ ಮಾಡಲು ಹೊರಟಿದೆ. ಅದೇ ಸಂದರ್ಭದಲ್ಲಿ ಮಂತ್ರಿ, ಮುಖ್ಯಮಂತ್ರಿಗಳು ನಡೆಸುವ ಸಭೆಗಳಿಗೆ ಯಾವ ನಿರ್ಬಂಧವೂ ಇಲ್ಲ. ಇದನ್ನು ಯಾರು ನಿಯಂತ್ರಿಸಬೇಕು ? ದೊಡ್ಡ ಮಟ್ಟದ ಆರೋಗ್ಯ ವ್ಯವಸ್ಥೆಗಳನ್ನು ಆರಂಭ ಮಾಡಲು ಸರಕಾರದ ಬಳಿ ದುಡ್ಡಿನ ಕೊರತೆ ಇದೆ. ಅದು ಅಧಿಕಾರಿಗಳ ಕೈಕಟ್ಟಿ ಹಾಕಿದೆ. ಇದನ್ನು ಸಿಎಂ ಅರ್ಥ ಮಾಡಿಕೊಳ್ಳಬೇಕಿತ್ತು.

ಹಾಗೆಂದು ಎಲ್ಲಾ ಅಧಿಕಾರಿಗಳು ಸಾಚಾ ಎಂದು ಹೇಳಲಾಗದು. ಇನ್ನೊಂದು ಆಕ್ಷೇಪ ಎಂದರೆ ಅವರು ಬಳಸಿದ ಭಾಷೆ. ರಾಜ್ಯದ ನಾಯಕತ್ವ ತೆಗೆದುಕೊಂಡವರು ಸಾರ್ವಜನಿಕ ಆಗಿ ಸ್ವಲ್ಪ ಹೆಚ್ಚು ಗೌರವಯುತ ಭಾಷೆಯನ್ನು ಬಳಸಬೇಕು. ಅದು ಅವರ ಸಂಸ್ಕೃತಿ. ತಾನು ಸ್ಟ್ರಿಕ್ಟ್ ಎಂದು ತೋರಿಸಬೇಕಾದ ಭರದಲ್ಲಿ ಕೆಟ್ಟ ಭಾಷೆ ಬಳಸಬಾರದು. ಅದು ಒಮ್ಮೆ ಅವರನ್ನು ಜನರ ಮುಂದೆ ಹೀರೋ ಮಾಡಬಹುದು. ಆದರೆ ಪ್ರಜ್ಞಾವಂತ ನಾಗರಿಕರಿಗೆ ಇದು ಸರಿಯೆನಿಸದು. ಬೊಮ್ಮಾಯಿ ಸಾಹೇಬರು ತುಂಬಾ ಓದಿದವರು. ಗೌರವಾನ್ವಿತ ಕುಟುಂಬದಿಂದ ಬಂದವರು. ಅವರು ಆ ಭಾಷೆಯನ್ನು ಬಳಸಬಾರದು. ಇದರಿಂದಾಗಿ ಆಗುವ ಅಡ್ದ ಪರಿಣಾಮಗಳ ಅರಿವು ಅವರಿಗೆ ಇರಬೇಕು.

ಒಮ್ಮೆ ಜಿಲ್ಲಾ ಮಟ್ಟದ ಅಧಿಕಾರಿಗಳು ಬೈಸಿಕೊಂಡರು ಅಂದ್ರೆ ಅವರೊಂದಿಗೆ ಕೆಲಸ ಮಾಡುವ ಬೇರೆ ಬೇರೆ ಇಲಾಖೆಗಳ ಸಾವಿರಾರು ಅಧಿಕಾರಿಗಳ ಮುಂದೆ ಅವರು ನಿಲ್ಲುವುದು ಹೇಗೆ ? ಆದೇಶಗಳನ್ನು ನೀಡುವುದಾದರೂ ಹೇಗೆ ? ಅದರಲ್ಲಿ ಕೂಡ ವೈದ್ಯರ ಮೇಲೆ ಗದಾಪ್ರಹಾರ ಮಾಡಿದರೆ ಅದು ಪೂರ್ತಿ ನೋವನ್ನು ಬಿಟ್ಟು ಹೋಗುವುದು. ಈಗಲೇ ಕರ್ನಾಟಕದಲ್ಲಿ ವೈದ್ಯರ, ಆರೋಗ್ಯ ಸಿಬ್ಬಂದಿ ಕೊರತೆಯಿದೆ. ಅದರ ನಡುವೆ ಹೋರಾಟ ನಡೆಸುವ ಬದುಕು ಅವರದ್ದು. ಎಷ್ಟೋ ವೈದ್ಯರು ರಾತ್ರಿ ಹಗಲು ಕೋವಿಡ್ ಕರ್ತವ್ಯ ಮಾಡಿ ಆರೋಗ್ಯ ಕೆಡಿಸಿಕೊಂಡವರು ಇದ್ದಾರೆ. ಎಷ್ಟೋ ಕಡೆ ವೈದ್ಯರ ಮೇಲೆ ದೈಹಿಕ, ಮಾನಸಿಕ ಹಲ್ಲೆಗಳು ನಡೆದಿವೆ. ಪಂಚಾಯತ್ ಸದಸ್ಯರು ಕೂಡ ವೈದ್ಯರನ್ನು ಬಯ್ಯುವ ಘಟನೆಗಳು ತುಂಬಾ ನಡೆದಿವೆ. ಹಾಗಿರುವಾಗ ವೈದ್ಯರು ನೆಮ್ಮದಿಯಿಂದ ಕೆಲಸ ಮಾಡುವುದಾದರೂ ಹೇಗೆ ?

ಹೀಗೆ ಪರಿಸ್ಥಿತಿ ಮುಂದುವರೆದರೆ ಎಂಬಿಬಿಎಸ್ ಮಾಡಲು, ಐಎಎಸ್ ಓದಲು ಯಾರು ಮುಂದೆ ಬರುತ್ತಾರೆ ? ರಾಜಕಾರಣಿಗಳು ಕೆಟ್ಟ ಭಾಷೆಯಲ್ಲಿ ಬಯ್ಯುವುದನ್ನು ಅಭ್ಯಾಸ ಮಾಡಿಕೊಂಡರೆ ಅಧಿಕಾರಿಗಳು ಮನಸ್ಸಿಲ್ಲದ ಮನಸ್ಸಿನಿಂದ ಕೆಲಸ ಮಾಡಬೇಕಾಗಬಹುದು. ಶಾಸಕಾಂಗವು ಕಾರ್ಯಾಂಗದ ಮೇಲೆ ಈ ರೀತಿ ಸವಾರಿ ಮಾಡಲು ಹೊರಟರೆ ಪ್ರಜಾಪ್ರಭುತ್ವದ ವ್ಯವಸ್ಥೆ ಕುಸಿದು ಬೀಳುವುದು ನಿಶ್ಚಿತ.

ಭ್ರಷ್ಟರಿಗೆ ರಕ್ಷಣೆ ಬೇಡ. ಅಧಿಕಾರಿಗಳಲ್ಲಿ ಸಾಕಷ್ಟು ಸಂಖ್ಯೆಯ ಭ್ರಷ್ಟರು, ಕೆಲಸ ಕಳ್ಳರು ಇದ್ದಾರೆ. ಅವರಿಗೆ ದಂಡನೆ ಖಂಡಿತ ಬೇಕು. ರಾಜಕಾರಣಿಗಳಲ್ಲಿ ಕೂಡ ಸಾಕಷ್ಟು ಸಂಖ್ಯೆಯ ಭ್ರಷ್ಟರು, ಸೋಮಾರಿಗಳು ಇದ್ದಾರೆ. ಅವರನ್ನು ಯಾರು ಬಯ್ಯಬೇಕು ? ಅವರಿಗೂ ರಿಯಾಯಿತಿ ಬೇಡ ಅಲ್ವಾ?

ಅಧಿಕಾರಿ ಸ್ಥಾನ ಪಡೆದವರು ಬಯ್ಯುವುದನ್ನೆ ಅಸ್ತ್ರ ಮಾಡಿಕೊಂಡರೆ ಇಡೀ ವ್ಯವಸ್ಥೆ ಹಾಳಾಗುವುದು. ಇಂದು ಸಿಎಂ ಮಾಡಿದ್ದನ್ನು ನಾಳೆ ಇತರ ಸಚಿವರು, ಎಂಎಲ್ಎಗಳು, ಪಂಚಾಯತ್ ಸದಸ್ಯರು ಕಾಪಿ ಮಾಡಲು ಹೊರಟರೆ ಪರಿಸ್ಥಿತಿ ಕೈ ಮೀರಿ ಹೋಗಬಹುದು.

ಡಾ. ರಾಜೇಂದ್ರ ಕೆ.ವಿ. ಬಗೆಗೆ ಒಂದಿಷ್ಟು
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಡಾ. ರಾಜೇಂದ್ರ ಕೆ.ವಿ. 2013ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ. ದಾವಣಗೆರೆ ಬಾಪೂಜಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದ ಬಳಿಕ ನಾಗರಿಕ ಸೇವಾ ಪರೀಕ್ಷೆ ಎದುರಿಸಿದ್ದ ರಾಜೇಂದ್ರ ಅವರು 2013ರಲ್ಲಿ 32ನೇ ರ್ಯಾಂಕ್‌ನೊಂದಿಗೆ ಐಎಎಸ್‌ ಅಧಿಕಾರಿಯಾಗಿ ಆಯ್ಕೆಯಾದರು. ಕರ್ನಾಟಕ ರಾಜ್ಯಕ್ಕೆ ಮೊದಲಿಗರು ಎಂಬ ಹಿರಿಮೆ ಅವರದ್ದು. ಪ್ರೊಬೇಷನರಿ ಅವಧಿಯನ್ನು ಬೀದರ್‌ ಜಿಲ್ಲೆಯಲ್ಲಿ ಪೂರ್ಣಗೊಳಿಸಿದ್ದ ಇವರು 2015ರಲ್ಲಿ ದ.ಕ. ಜಿಲ್ಲೆಯ ಪುತ್ತೂರು ಉಪ ವಿಭಾಗಾಧಿಕಾರಿ ಹುದ್ದೆಗೆ ನಿಯುಕ್ತಿಗೊಂಡಿದ್ದರು. ಬಳಿಕ ಬಳ್ಳಾರಿ ಹಾಗೂ ಬೆಳಗಾವಿ ಜಿ.ಪಂ. ಸಿಇಒ ಆಗಿ ಕರ್ತವ್ಯ ನಿರ್ವಹಿಸಿದ್ದರು. ಸಿಂಧೂ ಬಿ. ರೂಪೇಶ್‌ ವರ್ಗಾವಣೆಯಾದ ಬಳಿಕ ಮಂಗಳೂರು ಡಿಸಿಯಾಗಿ ಅಧಿಕಾರ ವಹಿಸಿ ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿದ್ದರು.

ತನ್ನ ಖಡಕ್‌ತನ, ದಕ್ಷತೆ, ಪ್ರಾಮಾಣಿಕತೆ, ಬದ್ಧತೆ, ಕಾರ್ಯಶೈಲಿ ಮೂಲಕವೇ ಡಿಸಿ ಹುದ್ದೆಗೊಂದು ಘನತೆ, ಗೌರವ ತಂದುಕೊಟ್ಟ ಡಾ. ರಾಜೇಂದ್ರ ಕೆ.ವಿ. ಓರ್ವ ಅತ್ಯುತ್ತಮ ಅಧಿಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಬೆಳಗಾವಿಯಲ್ಲಿ ಸಿಇಒ ಆಗಿದ್ದ ಸಂದರ್ಭ ಸ್ವತಃ ವೈದ್ಯರಾಗಿರುವ ರಾಜೇಂದ್ರ ಅವರು ಪತ್ನಿ ಡೆಲಿವರಿಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಮೂಲಕ ಸರಕಾರಿ ಆಸ್ಪತ್ರೆ ಕುರಿತು ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾಡಿದ್ದರು. ಭ್ರಷ್ಟಾಚಾರಕ್ಕೆ ಎಡೆಮಾಡಿ ಕೊಡದ ಇಂತಹ ಅಧಿಕಾರಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಸರಕಾರ ಮಾಡಿದಲ್ಲಿ ಮತ್ತಷ್ಟು ಅಧಿಕಾರಿಗಳಿಗೆ ಪ್ರೇರಣೆಯಾಗುವುದಂತು ಸತ್ಯ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!