Saturday, January 22, 2022
spot_img
Homeಅಂಕಣಕಾನೂನು ಕಣಜ - ಜೀವನಾಂಶದ ಬಗೆಗಿನ ಕಾನೂನು ಮಾಹಿತಿ

ಕಾನೂನು ಕಣಜ – ಜೀವನಾಂಶದ ಬಗೆಗಿನ ಕಾನೂನು ಮಾಹಿತಿ

 1. ಯಾವುದೇ ವಿವಾಹಿತ ಪತಿಯು ತನ್ನ ಪತ್ನಿಯನ್ನು ಅಥವಾ ಯಾವುದೇ ಒಬ್ಬ ವ್ಯಕ್ತಿಯು ತನ್ನ ತಂದೆ, ತಾಯಿ, ತನ್ನ ಮಕ್ಕಳನ್ನು ಸಂರಕ್ಷಿಸಿ ಅವರಿಗೆ ಅಗತ್ಯವುಳ್ಳ ಜೀವನಾವಶ್ಯಕಗಳನ್ನು ಪೂರೈಸಿ ಅವರನ್ನು ಸಂರಕ್ಷಿಸುವುದು ಕಾನೂನು ವಿಧಿಸಿದ ಜವಾಬ್ದಾರಿಯಾಗಿರುತ್ತದೆ.
 2. ಅನೇಕ ಸಂದರ್ಭಗಳಲ್ಲಿ ಈ ರೀತಿಯ ಹೊಣೆಗಾರಿಕೆಯನ್ನು ನಿಭಾಯಿಸುವ ಶಕ್ತಿ ಮತ್ತು ಸಾಮರ್ಥ್ಯ ಇದ್ದಾಗಿಯೂ, ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ತನ್ನ ಪತ್ನಿ, ವೃದ್ಧ ತಂದೆ, ತಾಯಿ ಮತ್ತು ಅಪ್ರಾಪ್ತ ವಯಸ್ಸಿನ (ಮೈನರ್) ಮಕ್ಕಳನ್ನು ನಿರ್ಲಕ್ಷಿಸಿ ಅವರನ್ನು ಕಡೆಗಣಿಸಿ ತಮ್ಮ ಕಾನೂನು ಬದ್ಧ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸುವುದುಂಟು. ಈ ಸಂದರ್ಭದಲ್ಲಿ ಈ ರೀತಿಯಾಗಿ ನಿರ್ಲಕ್ಷ್ಯಕ್ಕೊಳಗಾದವರು ಅಥವಾ ನಿರಾಕರಿಸಲ್ಪಟ್ಟವರು ತಮ್ಮ ಜೀವನ ನಿರ್ವಹಣೆಗಾಗಿ, ಪಾಲನೆ ಪೋಷಣೆಗೆ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಜೀವನಾಂಶಕ್ಕೆ ಸಂಬಂಧಪಟ್ಟ ಕಾನೂನು ಅಂತಹವರ ಸಹಾಯಕ್ಕೆ ಬರುತ್ತದೆ.
 3. ಜೀವನಾಂಶ ಎಂದರೆ ಯಾವುದೇ ಒಬ್ಬ ವ್ಯಕ್ತಿಗೆ ಆತನ ಸಾಮಾನ್ಯ ಜೀವನ ಸಾಗಿಸಲು ಬೇಕಾದಂತಹ ಆಹಾರ, ಬಟ್ಟೆ, ಔಷಧಿ, ಆಶ್ರಯ, ವಿದ್ಯಾಭ್ಯಾಸ ಮುಂತಾದವುಗಳನ್ನು ಪಡೆಯಲು ಅತ್ಯಾವಶ್ಯಕವಾಗಿ ಬೇಕಾದ ಹಣದ ವ್ಯವಸ್ಥೆ.
 4. ತನ್ನನ್ನು ತಾನು ಸಂರಕ್ಷಿಸಿಕೊಳ್ಳುವ ಸಾಮರ್ಥ್ಯ ಇಲ್ಲದ, ಅಂದರೆ ತನ್ನ ಸಾಮಾಜಿಕ ಸ್ಥಾನಮಾನಕ್ಕನುಗುಣವಾಗಿ ಜೀವನ ಸಾಗಿಸಲು ತನಗೆ ಬೇಕಾದ ಆಹಾರ, ಬಟ್ಟೆ, ಔಷಧಿ, ಆಶ್ರಯ, ವಿದ್ಯಾಭ್ಯಾಸ ಮುಂತಾದವುಗಳಿಗಾಗಿ ಖರ್ಚು ಮಾಡಲು ತನ್ನದೇ ಆದ ಆದಾಯವಿಲ್ಲದ –
  ಎ) ಹೆಂಡತಿ
  ಬಿ) ನ್ಯಾಯ ಸಮ್ಮತ ಹಾಗೂ ನ್ಯಾಯ ಸಮ್ಮತವಲ್ಲದ ಅಪ್ರಾಪ್ತ ವಯಸ್ಸಿನ ಮಗ ಮತ್ತು ಅವಿವಾಹಿತ ಮಗಳು
  ಸಿ) ನ್ಯಾಯ ಸಮ್ಮತ ಹಾಗೂ ನ್ಯಾಯ ಸಮ್ಮತವಲ್ಲದ ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಕಲತೆ ಹೊಂದಿದ ಮಗ-ಮಗಳು (ಅಪ್ರಾಪ್ತ ಅಥವಾ ವಯಸ್ಕ)
  ಡಿ) ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾದ ತಂದೆ ಮತ್ತು ತಾಯಿ
  ಇವರುಗಳು ಕ್ರಿಮಿನಲ್ ಪ್ರೋಸಿಜರ್ ಕೋಡಿನ ಪ್ರಕಾರ ಜೀವನಾಂಶ ಪಡೆಯಲು ಅರ್ಹರಾಗಿರುತ್ತಾರೆ.
 5. ಸಮಾಜದ ಎಲ್ಲಾ ಧರ್ಮದ ವ್ಯಕ್ತಿಗಳಿಗೆ ಅನ್ವಯವಾಗುವಂತೆ ಕ್ರಿಮಿನಲ್ ಪ್ರೋಸಿಜರ್ ಕೋಡಿನ ಕಲಂ 125ರಡಿಯಲ್ಲಿ ಜೀವನಾಂಶಕ್ಕಾಗಿ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಕಾನೂನಿನ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
 6. ಕಾನೂನಿನನ್ವಯ ಹಿಂದೂ ಅಥವಾ ಕ್ರಿಶ್ಚಿಯನ್ ಪುರುಷನೊಬ್ಬನು ತಾನು ಮದುವೆಯಾಗಿರುವ ಮೊದಲ ಹೆಂಡತಿ ಜೀವಂತವಿದ್ದಾಗ ಬೇರೆಯವಳೊಂದಿಗೆ ವಿವಾಹ ಆಗುವುದು ಕಾನೂನು ಬಾಹಿರವಾದ್ದರಿಂದ ಅಂತಹ ಹಿಂದೂ ಅಥವಾ ಕ್ರಿಶ್ಚಿಯನ್ ಮಹಿಳೆಯು ತನ್ನ ಪತಿಯಿಂದ ಜೀವನಾಂಶ ಪಡೆಯಲು ಮೇಲೆ ಹೇಳಿದ ಕ್ರಿಮಿನಲ್ ಪ್ರೋಸಿಜರ್ ಕೋಡಿನ ಕಲಂ 125ರಡಿಯಲ್ಲಿ ಅರ್ಹಳಲ್ಲ. ಆದರೆ ಆತಳು 2005ರ ಕೌಂಟುಬಿಕ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ತನ್ನ ಪತಿಯಿಂದ ಜೀವನಾಂಶವನ್ನು ಮತ್ತು ಇತರ ಪರಿಹಾರವನ್ನು ಕೇಳುವ ಕಾನೂನು ಬದ್ಧ ಅಧಿಕಾರ ಹೊಂದಿರುತ್ತಾಳೆ.
 7. ತನ್ನ ಜೀವನೋಪಾಯಕ್ಕೆ ಯಾವುದೇ ಸ್ವಂತ ಆದಾಯ ಹೊಂದಿರದ ಪತ್ನಿಯು ತನ್ನ ಪತಿಯಿಂದ ನ್ಯಾಯಬದ್ಧ ಕಾರಣಕ್ಕಾಗಿ ಪ್ರತ್ಯೇಕವಾಗಿ ವಾಸ ಮಾಡಿಕೊಂಡಿರುವ ಸಂದರ್ಭದಲ್ಲಿ ಆಕೆಯು ತನ್ನ ಪತಿಯಿಂದ ಜೀವನಾಂಶ ಕೇಳಬಹುದು. ಮಹಿಳೆಯೊಬ್ಬಳ ಪತಿಯು ಬೇರೆ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಲ್ಲಿ ಅಥವಾ ಎರಡನೇ ಮದುವೆಯಾದಲ್ಲಿ ಅಥವಾ ಆತನು ತನ್ನ ಪತ್ನಿಯೊಂದಿಗೆ ಕ್ರೂರ ಮತ್ತು ನಿರ್ಲಕ್ಷ್ಯತನದಿಂದ ವರ್ತಿಸಿದ್ದಲ್ಲಿ ಅಂತಹ ಮಹಿಳೆಯು ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸ ಮಾಡಿಕೊಂಡಿರುವ ಸಂದರ್ಭದಲ್ಲಿ ತನ್ನ ಪತಿಯಿಂದ ಜೀವನಾಂಶ ಪಡೆಯುವ ಹಕ್ಕನ್ನು ಹೊಂದಿರುತ್ತಾಳೆ.
 8. ವಿಚ್ಛೇದಿತ ಮಹಿಳೆಯೂ ಜೀವನಾಂಶಕ್ಕೆ ಅರ್ಹಳಾಗಿರುತ್ತಾಳೆ. ತನ್ನ ಪತಿಯಿಂದ ವಿವಾಹ ವಿಚ್ಛೇದನ ಪಡೆದ ಮಹಿಳೆ ಮರು ಮದುವೆ ಆಗುವವರೆಗೆ ತನ್ನ ವಿಚ್ಛೇದಿತ ಪತಿಯಿಂದ ಜೀವನಾಂಶ ಪಡೆಯುವ ಹಕ್ಕನ್ನು ಆತಳು ಹೊಂದಿರುತ್ತಾಳೆ.
 9. ವಿಚ್ಛೇದಿತ ಮುಸ್ಲಿಂ ಮಹಿಳೆಯ ಹಕ್ಕುಗಳ ರಕ್ಷಣಾ ಅಧಿನಿಯಮ 1986ರ ಕಾನೂನಿನ ಅಡಿಯಲ್ಲಿ ವಿಚ್ಛೇದಿತ ಮುಸ್ಲಿಂ ಮಹಿಳೆಯ ಇದ್ದತ್ ಅವಧಿ ಪೂರ್ಣಗೊಳ್ಳುವುದರೊಳಗಾಗಿ ಆಕೆಯ ವಿಚ್ಛೇದಿತ ಪತಿಯು ಆಕೆಯ ಭವಿಷ್ಯತ್ತಿನ ಜೀವನ ನಿರ್ವಹಣೆಗಾಗಿ ಸೂಕ್ತ ಜೀವನಾಂಶದ ವ್ಯವಸ್ಥೆಯನ್ನು ಮಾಡುವ ಹೊಣೆಗಾರಿಕೆಯನ್ನು ಹೊಂದಿರುತ್ತಾನೆ.
 10. ಜೀವನಾಂಶದ ಹಕ್ಕನ್ನು ಚಲಾಯಿಸುವ ವ್ಯಕ್ತಿ ತನ್ನನ್ನು ಸಂರಕ್ಷಿಸಲು ಹೊಣೆಗಾರನಾಗಿರುವ ವ್ಯಕ್ತಿಯ ವಿರುದ್ಧ ಸಂಬಂಧಪಟ್ಟ ಅಧಿಕಾರ ವ್ಯಾಪ್ತಿ ಹೊಂದಿರುವ ಕುಟುಂಬ ನ್ಯಾಯಾಲಯ ಅಥವಾ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳವರ ನ್ಯಾಯಾಲಯಕ್ಕೆ ಜೀವನಾಂಶದ ಅರ್ಜಿ ಸಲ್ಲಿಸಿ ಜೀವನಾಂಶ ಪಡೆಯಬಹುದಾಗಿದೆ.
 11. ಜೀವನಾಂಶಕ್ಕೆ ಸಂಬಂಧಪಟ್ಟ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ಮಾಡುವ ಸಂದರ್ಭದಲ್ಲಿ ಅರ್ಜಿದಾರ ಮತ್ತು ಎದುರುದಾರರ ಆದಾಯ, ಸಾಮಾಜಿಕ ಸ್ಥಾನಮಾನ, ಅವರೊಳಗಿನ ವಿವಾದದ ಕಾರಣ, ಮತ್ತಿತರ ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಅವಲೋಕಿಸ ಬೇಕಾಗುತ್ತದೆ.
 12. ಜೀವನಾಂಶವನ್ನು ಅರ್ಜಿ ದಾಖಲು ಮಾಡಿದ ದಿನಾಂಕ ಅಥವಾ ಅರ್ಜಿಯ ಮೇಲೆ ನ್ಯಾಯಾಲಯವು ಮಾಡುವ ಆದೇಶದ ದಿನಾಂಕದಿಂದ ಮಂಜೂರು ಮಾಡಬಹುದಾಗಿದೆ.
 13. ಅರ್ಜಿದಾರರಿಗೆ ಜೀವನಾಂಶವನ್ನು ನೀಡಲು ನಿರ್ದೇಶಿತನಾದ ವ್ಯಕ್ತಿಯು ಜೀವನಾಂಶವನ್ನು ನೀಡಲು ನಿರಾಕರಿಸಿದಲ್ಲಿ ಆತನ ಆಸ್ತಿಯನ್ನು ಜಪ್ತಿ ಮಾಡಿ ಮಾರಾಟ ಮಾಡಿ ಬಂದ ಹಣದಿಂದ ಜೀವನಾಂಶವನ್ನು ಕೊಡಿಸುವ ಅಧಿಕಾರ ಅಥವಾ ಜೀವನಾಂಶ ನೀಡಲು ನಿರಾಕರಿಸಿದ ವ್ಯಕ್ತಿಯನ್ನು ಜೈಲಿಗೆ ಕಳುಹಿಸುವ ಅಧಿಕಾರವನ್ನು ನ್ಯಾಯಾಲಯವು ಹೊಂದಿರುತ್ತದೆ.

ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!