Saturday, October 16, 2021
spot_img
Homeರಾಜ್ಯರಾಷ್ಟ್ರೀಯ ಶಿಕ್ಷಣ ನೀತಿ-2020 ಆದೇಶ ಕೂಡಲೇ ಹಿಂಪಡೆಯಿರಿ: ಸಿದ್ದರಾಮಯ್ಯ ಆಗ್ರಹ

ರಾಷ್ಟ್ರೀಯ ಶಿಕ್ಷಣ ನೀತಿ-2020 ಆದೇಶ ಕೂಡಲೇ ಹಿಂಪಡೆಯಿರಿ: ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಕನ್ನಡ ಭಾಷಾ ಕಲಿಕೆಗೆ ಧಕ್ಕೆಯಾಗುವ, ಉನ್ನತ ಶಿಕ್ಷಣ ವ್ಯವಸ್ಥೆಯ್ನೇ ಧ್ವಂಸಗೊಳಿಸುವ ಹಲವು ಅಪಾಯಕಾರಿ ಅಂಶ ಇರುವ ನೂತನ ಶಿಕ್ಷಣ ನೀತಿ 2020ನ್ನು ಪ್ರಸಕ್ತ ಸಾಲಿನಿಂದಲೇ ಜಾರಿಗೊಳಿಸುವ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆದು ವಿಸ್ತೃತ ಚರ್ಚೆ ಬಳಿಕ ಜಾರಿಗೆ ಕ್ರಮವಹಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಯಾವುದೇ ಚರ್ಚೆ ನಡೆಸದೆ ಆದೇಶ ಹೊರಡಿಸಿರುವುದು ಸರ್ವಾಧಿಕಾರಿ ನಿಲುವು, ದೇಶದ ಒಕ್ಕೂಟ ತತ್ವಕ್ಕೆ ಮಾಡಿರುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಾಡಿನ ಶಿಕ್ಷಣ ತಜ್ಞರು, ಉಪನ್ಯಾಸಕರು, ಹಿರಿಯರು ಮತ್ತು ವಿರೋಧ ಪಕ್ಷಗಳ ಮುಖಂಡರು ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ರಾಜ್ಯದ ಮೇಲೆ ಹೇರಬೇಡಿ, ಸಂಬಂಧಿಸಿದ ವಲಯಗಳ ಜನರ ಜೊತೆಗೆ ವಿಸ್ತೃತ ಚರ್ಚೆ ನಡೆಸಿ, ಸಾಧಕ ಬಾಧಕಗಳನ್ನು ಪರಿಶೀಲಿಸಿದ ನಂತರ ತೀರ್ಮಾನಿಸಿ ಎಂದು‌ ಹೇಳಿದ್ದೆವು.

ಹಾಗೆ ಮಾಡದೆ ಈ ಅನಾಹುತಕಾರಿ ನೀತಿಯನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೆ ಜಾರಿಗೊಳಿಸಲು ಆದೇಶ ಹೊರಡಿಸಲಾಗಿದೆ. ಈ ಆದೇಶದಲ್ಲಿ ಹಲವಾರು ಅಪಾಯಕಾರಿಯಾದ ಅಂಶಗಳಿವೆ; ಬಡವರ, ಮಧ್ಯಮ ವರ್ಗದವರ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯುವ ಕನಸಿಗೆ ನೇರವಾಗಿ ಬೆಂಕಿ ಇಡುವ ಪ್ರಕ್ರಿಯೆಯ ಭಾಗವಾಗಿ ಈ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಹೊರಡಲಾಗಿದೆ ಎಂದು ಅವರು ಟೀಕಿಸಿದ್ದಾರೆ.

ಕನ್ನಡ ಭಾಷಾ ವಿಷಯವನ್ನು ಕೇವಲ ಎರಡು ಸೆಮಿಸ್ಟರುಗಳಿಗೆ ಅಂದರೆ ಒಂದು ವರ್ಷಕ್ಕೆ ಮಾತ್ರ ಕಲಿಸುವುದಾಗಿ ಹಿಂದೆ ಹೇಳಿದ್ದರು. ರಾಜ್ಯದ ವಿವಿಧ ವಲಯಗಳಿಂದ ಪ್ರಬಲ ಪ್ರತಿರೋಧ ಬಂದ ಮೇಲೆ ಶಿಕ್ಷಣ ಸಚಿವರಾದ ಡಾ. ಅಶ್ವತ್ಥ ನಾರಾಯಣ ಅವರು ಈ ಸಮಸ್ಯೆಯನ್ನು ಸರಿಪಡಿಸುವುದಾಗಿ ಹೇಳಿಕೆ ಕೊಟ್ಟಿದ್ದರು. ಆದರೆ ಸರ್ಕಾರ ನಿನ್ನೆ ಹೊರಡಿಸಿರುವ ಆದೇಶದಲ್ಲಿ ಅದರ ಕುರಿತು ಸ್ಪಷ್ಟತೆ ಇಲ್ಲ. ಒಂದು ವರ್ಷಕ್ಕೆ ಸೀಮಿತಗೊಳಿಸುವರೊ ಇಲ್ಲ ಹಿಂದೆ ಇದ್ದಂತೆ ಎರಡು ವರ್ಷಗಳೂ ಕಲಿಸುವರೊ ಅಥವಾ ನಾವು ಒತ್ತಾಯ ಮಾಡಿದಂತೆ ಧಾರವಾಡ ಮುಂತಾದ ವಿ ವಿ ಗಳಲ್ಲಿರುವಂತೆ ಮೂರೂ ವರ್ಷಗಳಿಗೆ ಕಲಿಸಲಾಗುವುದೊ ಎಂಬುದರ ಬಗ್ಗೆ ಸರ್ಕಾರದ ಆದೇಶ ಮೌನವಾಗಿದೆ.

ಈ ಆದೇಶದಲ್ಲಿರುವ ಅತ್ಯಂತ ಕೆಟ್ಟ ಮತ್ತು ಅಪಾಯಕಾರಿಯಾದ ಹಾಗೂ ಜಗತ್ತಿನ ಯಾವ ದೇಶಗಳಲ್ಲೂ ಇಲ್ಲದ ಕಲಿಕಾ ಕ್ರಮವನ್ನು ಈ ಆದೇಶದಲ್ಲಿ ಪ್ರಸ್ತಾಪಿಸಿದ್ದಾರೆ. ಅದರ ಪ್ರಕಾರ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಯು ಶೇ. 40 ರಷ್ಟು ಕ್ರೆಡಿಟ್ಟುಗಳನ್ನು/ ಅಂಕಗಳನ್ನು/ ಆನ್ ಲೈನ್ ಮೂಲಕ ಕೇಳಿ ಪಡೆಯಬಹುದು. ತರಗತಿಗಳಿಗೆ ಹಾಜರಾಗಬೇಕಾದ ಅಗತ್ಯವಿಲ್ಲ. ಯಾವುದೇ ವಿಶ್ವವಿದ್ಯಾಲಯದಿಂದ ಶೇ 50 ರಷ್ಟು ಅಂಕ /ಕ್ರೆಡಿಟ್ಟುಗಳನ್ನು‌ ಪಡೆಯಬೇಕು. ಇದರಿಂದಾಗಿ ಪ್ರಾಕ್ಟಿಕಲ್ ತರಗತಿಗಳನ್ನು ಹೊರತುಪಡಿಸಿ ಇನ್ನುಳಿದಂತೆ ತರಗತಿಗಳಿಗೆ ಹಾಜರಾಗುವ ಅಗತ್ಯವಿಲ್ಲ. ಈ ನೀತಿಯ ಪ್ರಕಾರ ವಿಶ್ವ ವಿದ್ಯಾಲಯಗಳನ್ನು ದೂರ ಶಿಕ್ಷಣ ಕೇಂದ್ರಗಳಂತೆ ಮಾಡಲಾಗುತ್ತಿದೆ,

ಆ ಮೂಲಕ ಅನೇಕ ಸರ್ಟಿಫಿಕೇಟ್ ಕೋರ್ಸ್ ಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ, ನಿಧಾನಕ್ಕೆ ಸರ್ಕಾರಿ ವಿವಿಗಳನ್ನು ಮುಚ್ಚಿ ಖಾಸಗಿ ವಿವಿಗಳನ್ನು ಹೆಚ್ಚಿಸಲು, ಖಾಸಗಿಯವರಿಗೆ ವಿಪರೀತ ಹಣ ಮಾಡಲು ಬೇಕಾದ ವೇದಿಕೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಸೃಷ್ಟಿಸಿಕೊಡಲು ಕೇಂದ್ರ- ರಾಜ್ಯ ಬಿಜೆಪಿಗಳು ಹೊರಟಿವೆ.

ಬಿಜೆಪಿಯು ಉನ್ನತ ಶಿಕ್ಷಣವನ್ನು‌ ಸರಿಪಡಿಸುವ ನೆಪದಲ್ಲಿ ಎಲ್ಲವನ್ನೂ ಧ್ವಂಸ ಮಾಡುತ್ತಿದೆ. ಖಾಸಗಿ ಬಂಡವಾಳಿಗರು ಶಿಕ್ಷಣದ ದಿಕ್ಕು ದೆಸೆಗಳನ್ನು ನಿರ್ಧರಿಸುವ ಹೊಲಸು ಕ್ರಮವನ್ನು ಪರಿಚಯಿಸಲಾಗುತ್ತಿದೆ. ಇದು ಸ್ಪಷ್ಟವಾಗಿ ಜನವಿರೋಧಿ ಕ್ರಮ. ದೇಶದ್ರೋಹವೆಂದರೆ ಜನದ್ರೋಹವೆ ಎಂದು ಅರಿತುಕೊಳ್ಳಬೇಕೆಂದು ಹೇಳಿದ್ದಾರೆ. 

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!