Tuesday, December 7, 2021
spot_img
Homeಸಂಪಾದಕೀಯಸಂಪಾದಕೀಯ- ಪವರ್ ಫುಲ್ ಖಾತೆಗೆ ಫವರ್ ಫುಲ್ ಮಿನಿಸ್ಟರ್

ಸಂಪಾದಕೀಯ- ಪವರ್ ಫುಲ್ ಖಾತೆಗೆ ಫವರ್ ಫುಲ್ ಮಿನಿಸ್ಟರ್

ಕಾರ್ಕಳ : ಕರ್ನಾಟಕದ ನೂತನ ಸಚಿವ ಸಂಪುಟದ ಖಾತೆಗಳು ಘೋಷಣೆ ಆಗಿದ್ದು ಕಾರ್ಕಳದ ಶಾಸಕ ವಿ. ಸುನೀಲ್ ಕುಮಾರ್ ಅವರಿಗೆ ಅತ್ಯಂತ ಹೆಚ್ಚು ಪ್ರಭಾವಿ ಖಾತೆಯಾದ ಇಂಧನ ಖಾತೆ ದೊರೆತಿದೆ. ಅದರ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ದೊರೆತಿವೆ. ಮೊದಲ ಬಾರಿಗೆ ಸಚಿವ ಸ್ಥಾನ ಅಲಂಕರಿಸಿದ ಒಬ್ಬ ಮಂತ್ರಿಗೆ ದೊಡ್ಡ ಜವಾಬ್ದಾರಿಯನ್ನೇ ಮುಖ್ಯಮಂತ್ರಿ ನೀಡಿದ್ದಾರೆ. ಆ ಹೊಣೆಗಾರಿಕೆ ನಿಭಾಯಿಸಲು ಸುನಿಲ್‌ ಅತ್ಯಂತ ಅರ್ಹರು.

ಇಡೀ ಕ್ಯಾಬಿನೆಟ್ ಸಚಿವರಲ್ಲಿ ಸುನೀಲ್ ಅತ್ಯಂತ ಕಿರಿಯರು. ಆದರೆ, ಅವರ ಉತ್ಸಾಹ, ಜ್ಞಾನ ಮತ್ತು ಆಡಳಿತ ಅನುಭವ ನೋಡಿದರೆ ಅವರು ಹೆಚ್ಚು ಕ್ರಿಯಾಶೀಲರಾಗಿ ಕಾಣುತ್ತಾರೆ. ನಾನು ಯಾವ ಖಾತೆ ಕೊಟ್ಟರೂ ಸಿದ್ಧ ಎಂದು ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಧ್ಯಮದ ಮುಂದೆ ಹೇಳಿದ್ದರು. ಅವರ ಮೇಲೆ ಭರವಸೆ ಇಟ್ಟ ಮುಖ್ಯಮಂತ್ರಿ ಬೊಮ್ಮಾಯಿ ಅವರು ತುಂಬಾ ಸವಾಲು ಇರುವ ಎರಡು ಖಾತೆ ನೀಡಿದ್ದಾರೆ.
ಇಂಧನ ಖಾತೆಯನ್ನು ಈ ಹಿಂದೆ ಎಚ್.ಡಿ. ರೇವಣ್ಣ ಡಿ.ಕೆ. ಶಿವಕುಮಾರ್‌, ಈಶ್ವರಪ್ಪ ನಿಭಾಯಿಸಿದ್ದರು. ಇದೇ ಖಾತೆಯನ್ನು ಶೋಭಾ ಕರಂದ್ಲಾಜೆ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದರು. ರಾಜ್ಯವು ಈಗಲೂ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬಿ ಆಗಿಲ್ಲ. ನಮ್ಮಲ್ಲಿ ರಾಯಚೂರು ಮತ್ತು ಪಡುಬಿದ್ರಿಯಲ್ಲಿ ಎರಡು ಉಷ್ಣ ವಿದ್ಯುತ್ ಸ್ಥಾವರ ಇವೆ. ಹತ್ತಾರು ಜಲ ವಿದ್ಯುತ್ ಸ್ಥಾವರಗಳು ಇವೆ. ಅದರಲ್ಲಿ ಸಾಕಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿದ್ದರೂ ಬೇಸಿಗೆ ಕಾಲದಲ್ಲಿ ನದಿಗಳು ಬತ್ತಿ ಹೋಗುವ ಕಾರಣ ವಿದ್ಯುತ್ ಕೊರತೆ ಇಲ್ಲದಿಲ್ಲ.

ಏನು ಮಾಡಬಹುದಾಗಿದೆ

ಯಥೇಚ್ಛವಾಗಿ ವಿದ್ಯುತ್‌ ಪೂರೈಕೆಯಾಗುತ್ತಿದ್ದರೂ ವಿದ್ಯುತ್‌ ವಿತರಣೆ ಕೇಂದ್ರದಿಂದ ಸರಿಯಾದ, ಸಮರ್ಪಕವಾದ ರೀತಿಯಲ್ಲಿ ವಿದ್ಯುತ್ ಸರಬರಾಜಗದೇ ಇರುವುದು ದೊಡ್ಡ ಸವಾಲು. ಹೀಗಾಗಿ ವಿದ್ಯುತ್‌ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಅವಶ್ಯಕತೆಯಿದೆ. ಇದರೊಂದಿಗೆ ಗ್ರಾಮೀಣ ಭಾಗದಲ್ಲಿ 40 ವರ್ಷಗಳ ಹಿಂದೆ ಅಳವಡಿಸಿದ ವಿದ್ಯುತ್‌ ತಂತಿಗಳನ್ನು ಬದಲಾಯಿಸುವ ಅನಿರ್ವಾಯರ್ತೆಯೂ ಇದೆ. ಹೀಗೆ ಮಾಡಿದಲ್ಲಿ‌ ಗುಣಮಟ್ಟದ ವಿದ್ಯುತ್ ಪೂರೈಕೆಯೊಂದಿಗೆ ವೃಥಾ ವಿದ್ಯುತ್ ಪೋಲಾಗುವುದನ್ನು ತಡೆಗಟ್ಟಬಹುದಾಗಿದೆ. ‌

ಶಿವನಸಮುದ್ರದ ಜಲ ವಿದ್ಯುತ್ ಯೋಜನೆಯು ಭಾರತದಲ್ಲಿ ಮೊದಲಿನದ್ದು. ಆದರೆ, ಮುಂದೆ ಅದು ತಾಂತ್ರಿಕವಾಗಿ ಅಪ್ಡೇಟ್ ಆಗಿಲ್ಲ. ಲಿಂಗನಮಕ್ಕಿ ಕತೆ ಕೂಡ ಹಾಗೇ ಇದೆ. ಇವುಗಳನ್ನು ನಿಭಾಯಿಸಲು ವೈಜ್ಞಾನಿಕ ದೃಷ್ಟಿಕೋನ ಬೇಕಾಗಿದೆ.

ಹಾಗೆಯೇ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಕೊರತೆ ಕಾಡಿದಾಗ ಸಹಜವಾಗಿ ವಿದ್ಯುತ್ ಕೊರತೆ ಇದ್ದೆ ಇದೆ. ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೈತರಿಗೆ ಉಚಿತ ವಿದ್ಯುತ್ ಎಂಬ ಜನಪ್ರಿಯ ಯೋಜನೆ ಜಾರಿ ಮಾಡಿದ್ದರು. ಅದು ನಿಜಕ್ಕೂ ಅದ್ಭುತವಾದ ಯೋಜನೆ. ಆದರೆ, ಗ್ರಾಮಾಂತರ ಭಾಗದಲ್ಲಿ ರೈತರ ಹೆಸರಿನಲ್ಲಿ ಕರೆಂಟ್ ಕಳ್ಳತನ ಮಾಡುವ ಮತ್ತು ರೈತರಿಗೆ ಉಚಿತ ವಿದ್ಯುತ್‌ ಎಂಬ ಕಾರಣಕ್ಕಾಗಿ ಕೆಲವರು ಅಗತ್ಯವಿಲ್ಲದಿದ್ದರೂ ಪಂಪ್‌ ಚಲಾಯಿಸುವುದು ಕಂಡು ಬರುತ್ತಿದೆ. ಸುನೀಲ್ ಕುಮಾರ್ ಅದನ್ನು ಹೇಗೆ ನಿಭಾಯಿಸುವರು ಎನ್ನುವುದು ಸದ್ಯದ ಕುತೂಹಲ. ಅದರ ಜೊತೆಗೆ ಮಳೆಗಾಲದಲ್ಲಿ ಪವರ್ ಗ್ರಿಡ್ ಕೈ ಕೊಡುವುದು, ಪ್ರವಾಹದಲ್ಲಿ ಮೋಟಾರ್ ಹಾಳಾಗುವುದು ಇದ್ದೆ ಇದೆ. ಕೆಲವೊಂದು ಆಯಾಕಟ್ಟಿನ ಜಾಗದಲ್ಲಿ ಅದಕ್ಷ ಅಧಿಕಾರಿಗಳು ಇದ್ದಾರೆ.

ಇನ್ನು ಉಷ್ಣ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲ್ಲು ಆಧಾರಿತ ಆದವುಗಳು. ಕಲ್ಲಿದ್ದಲು ನಮಗೆ ಹೊರ ರಾಜ್ಯಗಳಿಂದ ಬರಬೇಕು. ಅವುಗಳು ಉಂಟುಮಾಡುವ ಪರಿಸರ ಸಮಸ್ಯೆಗಳ ಬಗ್ಗೆ ಬಹಳ ದೊಡ್ಡ ಲೇಖನವನ್ನೆ ಬರೆಯಬಹುದು. ಇಲ್ಲಿನ ಭೂಮಿ, ನೀರು, ಗಾಳಿ ಎಲ್ಲವನ್ನೂ ಕಲುಷಿತ ಮಾಡುವ ಉಷ್ಣ ವಿದ್ಯುತ್ ಸ್ಥಾವರಗಳು ವಿದ್ಯುತ್ ಉತ್ಪಾದನೆ ಮಾಡಿ ಹೆಚ್ಚು ವಿದ್ಯುತ್ತನ್ನು ಹೆಚ್ಚು ದರಕ್ಕೆ ಹೊರ ರಾಜ್ಯಕ್ಕೆ ನೀಡುತ್ತಿದೆ. ಈ ಸ್ಥಾವರಗಳು ಖಾಸಗಿ ಕಂಪೆನಿಗಳ ಕಪಿಮುಷ್ಠಿಯಲ್ಲಿವೆ.

ಮುಂದುವರೆದ ರಾಷ್ಟ್ರಗಳಲ್ಲಿ ಕಲ್ಲಿದಲ್ಲು ಆಧಾರಿತವಾದ ಸ್ಥಾವರಗಳು ಔಟ್ಡೇಟ್ ಆಗಿವೆ. ಅಲ್ಲಿ ಪರಿಸರಕ್ಕೆ ಹೆಚ್ಚು ತೊಂದರೆ ಮಾಡದ ಪೆಟ್ರೋಲಿಯಂ ಅಥವಾ ಕಾಕಂಬಿ ಆಧಾರಿತ ಸ್ಥಾವರಗಳಿವೆ. ರಾಯಚೂರು ಉಷ್ಣ ವಿದ್ಯುತ್ ಸ್ಥಾವರ ಅದರ ಅರ್ಧ ಸಾಮರ್ಥ್ಯದ ವಿದ್ಯುತ್ ಕೂಡ ಉತ್ಪಾದನೆ ಮಾಡುತ್ತಿಲ್ಲ. ಇದರಿಂದ ಕರ್ನಾಟಕದಲ್ಲಿ ವಿದ್ಯುತ್ ಕೊರತೆ ಇದೆ. ಇದು ಬಹು ದೊಡ್ಡ ಸವಾಲು.

ಮಲೆನಾಡಿನಲ್ಲಿ ವೇಗವಾಗಿ ಧುಮ್ಮಿಕ್ಕುವ ಜಲಪಾತಗಳು ತುಂಬಾ ಇವೆ. ಅಲ್ಲಿ ಸಣ್ಣ ಸಣ್ಣ ಟರ್ಬೈನ್ ಇಟ್ಟರೆ ಸಾಕಷ್ಟು ವಿದ್ಯುತನ್ನು ಉತ್ಪಾದನೆ ಮಾಡಬಹುದು. ಅದರ ಬಗ್ಗೆ ಈವರೆಗೆ ಯಾವ ಸಚಿವರೂ ಪ್ರಯತ್ನ ಮಾಡಿಲ್ಲ. ಸುನೀಲ್ ಕುಮಾರ್ ಮಾಡುತ್ತಾರೆ ಎಂಬ ವಿಶ್ವಾಸವಿದೆ.

ವಿದ್ಯುತ್ ಯೋಜನೆಗಳಿಗೆ ಪರ್ಯಾಯ ಮೂಲಗಳನ್ನು ಹುಡುಕುವುದು ಇಂದಿನ ಅಗತ್ಯ. ಪವನ ವಿದ್ಯುತ್, ಸೌರ ವಿದ್ಯುತ್, ಸಮುದ್ರದ ಅಲೆಗಳಿಂದ ವಿದ್ಯುತ್, ಸಾವಯವ ವಿದ್ಯುತ್ ಭೂಗರ್ಭ ಉಷ್ಣ ಶಕ್ತಿ ಹೀಗೆ ಹೊಸ ಹೊಸ ಮೂಲಗಳನ್ನು ದೇಶದಲ್ಲಿ ಅನ್ವೇಷಣೆ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಅವುಗಳು ಜನಪ್ರಿಯ ಆಗಿಲ್ಲ. ಒಂದೇ ಒಂದು ಅಣುವಿದ್ಯುತ್ ಸ್ಥಾವರ ಕೈಗಾದಲ್ಲಿ ಇದ್ದು ಅದು ಕೂಡ ಸ್ವಾವಲಂಬಿ ಆಗಿಲ್ಲ. ಪರಿಸರ ಸಮಸ್ಯೆಗಳು ಮುಗಿಯುವುದೇ ಇಲ್ಲ.

ಕರ್ನಾಟಕ ರಾಜ್ಯವು ವಿದ್ಯುತ್ ಹೆಚ್ಚು ಖರೀದಿ ಮಾಡುವುದು ಹೊರ ರಾಜ್ಯಗಳಿಂದ. ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರದಿಂದ. ಆದ್ದರಿಂದ ವಿದ್ಯುತ್ ದುಬಾರಿ ಆಗ್ತಾ ಇದೆ. ಸಣ್ಣ, ಮಧ್ಯಮ ವರ್ಗದ ಕೈಗಾರಿಕೆಗಳು ಇವತ್ತು ಸೋಲಲು ವಿದ್ಯುತ್ ಸಮಸ್ಯೆ ಕೂಡ ಕಾರಣ ಎನ್ನಲಾಗಿದೆ. 24×7× 365 ದಿನಗಳು ಮೂರು ಫೇಸ್ ವಿದ್ಯುತ್ ಒದಗಿಸುವ ರಾಜ್ಯವಾಗಿ ಕರ್ನಾಟಕವನ್ನು ರೂಪಿಸುವ ಜಾಣ್ಮೆ ಸುನೀಲ್ ಕುಮಾರ್ ಅವರಿಗಿದೆ.

ಕನ್ನಡ ಸಂಸ್ಕೃತಿ ಇಲಾಖೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸುನಿಲ್ ಕುಮಾರ್ ಅವರಿಗೆ ದೊರೆತಿದೆ. 1996-97ರ ಅವಧಿಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದ ಸುನಿಲ್‌ ಕುಮಾರ್‌ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒದಗಿ ಬಂದಿದ್ದು, ಪೂರಕವೇ ಆಗಿದೆ. ಹಿಂದೆ ಸಿ.ಟಿ. ರವಿ, ಅರವಿಂದ ಲಿಂಬಾವಳಿ ಮೊದಲಾದವರು ಈ ಖಾತೆ ನಿಭಾಯಿಸಿದ್ದರು. ಕನ್ನಡ ಭಾಷೆ, ಜಾನಪದ, ಸಾಹಿತ್ಯ, ಕಲೆ, ನಾಟಕ, ಸಂಸ್ಕೃತಿ, ಸಹೋದರ ಭಾಷೆಗಳಾದ ಕೊಂಕಣಿ, ತುಳು, ಬ್ಯಾರಿ, ಕೊಡವ, ಅರೆಭಾಷೆ ಅಕಾಡೆಮಿಗಳು ನೇರವಾಗಿ ಈ ಖಾತೆಗೆ ಒಳಪಡುತ್ತವೆ. ಇದು ಸುನೀಲ್ ಅವರ ಆಸಕ್ತಿಯ ಕ್ಷೇತ್ರವೂ ಹೌದು.

ಆದರೆ, ಕೋರೋನಾ ಕಾರಣದಿಂದಾಗಿ ಈ ಖಾತೆಗೆ ಬಜೆಟ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಮೀಸಲಾಗಿರಿಸಿಲ್ಲ. ಇಲಾಖೆಯ ಆಯಕಟ್ಟಿನ ಜಾಗಗಳಲ್ಲಿ ಆಸಕ್ತಿಯಿಂದ ಕೆಲಸ ಮಾಡದವರೇ ತುಂಬಿದ್ದಾರೆ. ತಮ್ಮ, ತಮ್ಮವರ ಹಿತವನ್ನು ಕಾಪಾಡುವ ಪ್ರವೃತ್ತಿಗಳು ಎದ್ದು ಕಾಣುತ್ತಿವೆ. ನಿಜವಾದ ಪ್ರತಿಭೆ ಇರುವ ಕಲಾವಿದರಿಗೆ, ತಂಡಕ್ಕೆ ಅನುದಾನ ದೊರೆಯದೇ, ಪ್ರಭಾವಿಗಳಿಗೆ ಮಾತ್ರ ಲಭ್ಯವಾಗುತ್ತಿವೆ. ಸರಕಾರವೇ ನಡೆಸುವ ಹಲವು ಕಲಾಮೇಳಗಳು, ಕಲಾ ಉತ್ಸವಗಳು, ಸಾಂಸ್ಕೃತಿಕ ಉತ್ಸವಗಳು ಯುವಜನರನ್ನು ಸೆಳೆಯಲು ವಿಫಲ ಆಗುತ್ತಿವೆ. ಅಲ್ಲಿ ಕೂಡ ಫೇಕ್ ಆರ್ಟಿಸ್ಟ್‌ಗಳು ಭಾರೀ ಸಂಖ್ಯೆಯಲ್ಲಿ ಮೆರೆಯುತ್ತಾರೆ. ಮುಖ್ಯವಾಗಿ ಕನ್ನಡ ಸಾಹಿತ್ಯ, ಭಾಷೆ, ಸಂಸ್ಕೃತಿ ಇವುಗಳ ಮೇಲೆ ಸುನೀಲ್ ಕುಮಾರ್ ಅವರಿಗೆ ಹೆಚ್ಚು ಆಸಕ್ತಿ ಇರುವ ಕಾರಣ ಮತ್ತು ಈ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ ಮತ್ತು ಪ್ರಾಯೋಜಕರನ್ನು ಸೆಳೆಯಲು ಅವರಿಗೆ ಸಾಧ್ಯವಿದೆ. ಎಲ್ಲವನ್ನೂ ಸರಕಾರವೇ ಮಾಡಲು ಸಾಧ್ಯವೇ ಇಲ್ಲ. ಮುಖ್ಯವಾಗಿ ಉಡುಪಿ ಜಿಲ್ಲೆಗೊಂದು ಸುಸಜ್ಜಿತ ನಾಟಕ ಮಂದಿರ ಬೇಕು ಅನ್ನುವುದು ಬಹು ವರ್ಷಗಳ ಕನಸು. ರಂಗಾಯಣ ಸಂಸ್ಥೆಯ ಶಾಖೆಯು ಉಡುಪಿಯಲ್ಲಿ ಆಗಬೇಕು ಎಂಬ ಬೇಡಿಕೆಯಿದೆಯೂ ಇದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!