Homeಸ್ಥಳೀಯ ಸುದ್ದಿರಾಜ್ಯದ ಗಮನ ಸೆಳೆದ ಆರ್‌ಎಸ್ಎಸ್ ಹುಡುಗ‌

Related Posts

ರಾಜ್ಯದ ಗಮನ ಸೆಳೆದ ಆರ್‌ಎಸ್ಎಸ್ ಹುಡುಗ‌


ಬಿಪಿನ್‌ ಚಂದ್ರ ಪಾಲ್‌ ಅಂದೇ ಗುರುತಿಸಿದ್ದರು ಸುನಿಲ್‌ ಪ್ರತಿಭೆ

ಕಾರ್ಕಳ : 1992-94ರ ಅವಧಿಯಲ್ಲಿ ಕಾರ್ಕಳದವರೇ ಆದ ಎಂ. ವೀರಪ್ಪ ಮೊಯ್ಲಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿರುವುದು ಈಗ ಇತಿಹಾಸ. ಅನಂತರ ಕಾರ್ಕಳಕ್ಕೆ ಮಂತ್ರಿ ಸ್ಥಾನವೂ ದೊರೆತಿಲ್ಲ. ಗೋಪಾಲ್ ಭಂಡಾರಿ ಮೂರು ಬಾರಿ ಶಾಸಕರಾಗಿ ಚುನಾಯಿತರಾದರೂ ಸಚಿವ ‍ಸ್ಥಾನ ದೊರೆತಿರಲಿಲ್ಲ. ಸುನೀಲ್ ಕುಮಾರ್ ಮೂರು ಬಾರಿ ಎಂಎಲ್ಎ ಆದರೂ ಬೇರೆ ಬೇರೆ ಕಾರಣಕ್ಕೆ ಅವರಿಗೆ ಮಂತ್ರಿ ಪದವಿ ದೊರೆತಿರಲಿಲ್ಲ. ಸರಕಾರದ ಮುಖ್ಯ ಸಚೇತಕ ಎನ್ನುವ ಹುದ್ದೆ ದೊರೆತರೂ ಅದು ಸುನೀಲ್ ಕುಮಾರ್ ಅವರ ವ್ಯಕ್ತಿತ್ವಕ್ಕೆ ಮತ್ತು ಗಾಂಭೀರ್ಯಕ್ಕೆ ತಕ್ಕದಾದ ಹುದ್ದೆ ಅಲ್ಲ ಎನ್ನುವ ಮಾತು ಕೇಳಿಬರುತ್ತಿತ್ತು. ಇದೀಗ ಕಾರ್ಕಳದ ಜನರ ಕನಸು ನನಸಾಗಿದೆ. ಒಬ್ಬ ವರ್ಚಸ್ವಿ ನಾಯಕರಾಗಿ ರಾಜ್ಯ ಮಟ್ಟದಲ್ಲಿ ಮಿಂಚುತ್ತಿರುವ ಸುನಿಲ್ ಕುಮಾರ್ ಇಂದು ಸಚಿವ ಸ್ಥಾನದ ಪ್ರಮಾಣ ತೆಗೆದುಕೊಳ್ಳುವ ಮೂಲಕ ಕಾರ್ಕಳ ಹೆಬ್ರಿ ತಾಲೂಕಿನಾದ್ಯಂತ ಸಂಭ್ರಮ ಮೂಡಿಸಿದೆ. ಅದರ ಜೊತೆ ಕಾರ್ಕಳದ ಇತಿಹಾಸವನ್ನು ಗಮನಿಸಿದಾಗ ಕೆ.ಎಸ್. ಮೊಹಮ್ಮದ್ ಮಸೂದ್ ಅವರು ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾಗಿ, ಕಾರ್ಕಳದವರೇ ಆದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಕೂಡ ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾಗಿ ಕೆಲಸ ಮಾಡಿದ್ದು ಕೂಡ ಉಲ್ಲೇಖನೀಯ.

ತೊಂಬತ್ತರ ದಶಕದ ಉತ್ತರಾರ್ಧದಲ್ಲಿ ಕಾರ್ಕಳದ ಗ್ರಾಮ ಗ್ರಾಮಗಳಲ್ಲಿ ಭಜರಂಗ ದಳದ ರಾಜ್ಯ ನಾಯಕರಾಗಿ ಉಗ್ರ ಹಿಂದುತ್ವದ ಭಾಷಣ ಮಾಡುತ್ತಿದ್ದ ಕುರ್ತಾ ಪೈಜಾಮಾ ಹುಡುಗ ಇದೀಗ ರಾಜ್ಯ ಸರಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಆಗ ಅವರ ಭಾಷಣಗಳು ಕಿಡಿ ಕಾರುತ್ತಿದ್ದವು. ಅಯೋಧ್ಯೆಯ ಬಾಬರಿ ಮಸೀದಿ ಘಟನೆ ಹಿನ್ನೆಲೆಯಾಗಿದ್ದರಿಂದ ಭಾಷಣಕ್ಕೆ ನೂರಾರು ಯುವಕ ಯುವತಿಯರು ಅವರ ಭಾಷಣ ಆಲಿಸಲು ಸೇರುತ್ತಿದ್ದರು. ಕೇಸರಿ ಶಾಲು ಫ್ಯಾಶನ್ ಆಗಿತ್ತು. ಬಜಗೋಳಿಯಲ್ಲಿ ಅಂದು ನಡೆದ ಹಿಂದೂ ಸಮಾಜೋತ್ಸವ ಭಾಷಣ ಕೇಳಿದ್ದ ಈಗಿನ ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್‌ಚಂದ್ರ ಪಾಲ್‌ ನಕ್ರೆ ಎಂಎಲ್ಎ ಆಗಿದ್ದ ಗೋಪಾಲ್ ಭಂಡಾರಿ ಅವರಲ್ಲಿ ಸುನಿಲ್‌ ಕುಮಾರ್ ಬಗ್ಗೆ ಎಚ್ಚರ ವಹಿಸಿ, ಈ ಹುಡಗನೇ ಮುಂದಿನ ವಿಧಾನ ಸಭಾ ಚುನಾವಣೆಗೆ ಅಭ್ಯರ್ಥಿಯಾಗಲಿದ್ದಾನೆ ಎಂದಿದ್ದರಂತೆ. ಆಗ ಭಂಡಾರಿ ಅವರು ಪರವಾಗಿಲ್ಲ ಬೀಪಿನ್ ರೇ, ಆ ರೀತಿ ಆಗಲು ಸಾಧ್ಯವಿಲ್ಲ ಎಂದು ನಗೆಬೀರಿ ಗಂಭೀರವಾಗಿ ತಗೊಂಡಿರಲಿಲ್ಲವಂತೆ.

ಆದರೆ ಮುಂದೆ 2004ರ ಚುನಾವಣೆಯಲ್ಲಿ ಭಂಡಾರಿ ಅವರ ವಿರುದ್ಧ ಬಿಜೆಪಿ ನಾಯಕರು ಸುನಿಲ್ ಕುಮಾರ್ ಅವರನ್ನು ಕರೆದು ನಿಲ್ಲಿಸಿದರು. ಸತತ ಸೋಲುತ್ತಿದ್ದ ಬಿಜೆಪಿಗೆ ಸುನಿಲ್ ಅನಿವಾರ್ಯ ಆಯ್ಕೆಯೂ ಆಗಿದ್ದರು. ಅವರ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮಕ್ಕೆ ಹರಿದು ಬಂದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಕೇಸರಿ ಶಾಲುಗಳು ಭಂಡಾರಿ ಅವರ ಎದೆ ತಲ್ಲಣ ಮಾಡಿದ್ದಂತು ನಿಜ. ಆ ಚುನಾವಣೆಯಲ್ಲಿ ಸುನೀಲ್ ಕುಮಾರ್ ಅವರು ಭಂಡಾರಿ ವಿರುದ್ಧ 10,000ಕ್ಕಿಂತ ಅಧಿಕ ಅಂತರದಿಂದ ಗೆದ್ದರು. ಮುಂದೆ ರಾಜಕೀಯದ ಏಳು ಬೀಳುಗಳನ್ನು ಕಂಡ ಸುನೀಲ್ ಕುಮಾರ್ ಅವರು ಇಂದು ಮೊದಲ ಬಾರಿಗೆ ಕರ್ನಾಟಕ ರಾಜ್ಯದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

LEAVE A REPLY

Please enter your comment!
Please enter your name here

Latest Posts

error: Content is protected !!