Saturday, October 16, 2021
spot_img
Homeಸ್ಥಳೀಯ ಸುದ್ದಿಶಾಸಕ ಸುನಿಲ್‌ ಕುಮಾರ್‌ಗೆ ಒಲಿಯಿತು ಸಚಿವ ಸ್ಥಾನ

ಶಾಸಕ ಸುನಿಲ್‌ ಕುಮಾರ್‌ಗೆ ಒಲಿಯಿತು ಸಚಿವ ಸ್ಥಾನ

ಕಾರ್ಕಳ : ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಸುನಿಲ್‌ ಕುಮಾರ್‌ ಅವರಿಗೆ ಮುಖ್ಯಮಂತ್ರಿ ಕಚೇರಿಯಿಂದ ಕರೆ ಬಂದಿದೆ. ಹೀಗಾಗಿ ಮೂರು ಬಾರಿ ಶಾಸಕರಾಗಿರುವ ಸುನಿಲ್‌ ಕುಮಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರುತ್ತಿದ್ದಾರೆ.‌ ಸುನಿಲ್‌ ಕುಮಾರ್‌ ಅವರು ಸರಕಾರದ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕ್ರಿಯಾಶೀಲ ಶಾಸಕರಾಗಿ, ಸಮರ್ಥ ನಾಯಕ, ಚತುರ ಸಂಘಟಕರಾಗಿರುವ ಸುನಿಲ್‌ ಶಾಸಕರಾಗಿ ಕಾರ್ಕಳವನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಿದ್ದರು.

ಬಾಲ್ಯ-ಶಿಕ್ಷಣ
ಶಿಕ್ಷಕ ಎಂ.ಕೆ. ವಾಸುದೇವ ಹಾಗೂ ಕೆ.ಪಿ. ಪ್ರಮೋದ ದಂಪತಿ ಪುತ್ರರಾಗಿರುವ ಸುನಿಲ್‌ ಕುಮಾರ್‌ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಾರ್ಕಳ ಪುಲ್ಕೇರಿ ರಾಮಪ್ಪ ಪ್ರಾಥಮಿಕ ಶಾಲೆಯಲ್ಲಿ, 7ನೇ ತರಗತಿವರೆಗೆ ಬಸವನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ಶಿವಮೊಗ್ಗದ ಹಿಟ್ಟಾಳದಲ್ಲಿ ಪೂರೈಸಿರುತ್ತಾರೆ. ಪದವಿ ವಿದ್ಯಾಭ್ಯಾಸವನ್ನು ಚಿಕ್ಕಮಗಳೂರಿನಲ್ಲಿ ಪಡೆದ ಇವರು ಆ ಬಳಿಕ ಚಿಕ್ಕಮಗಳೂರಿನಲ್ಲಿ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ್ದರು.

ರಾಜಕೀಯ ಪ್ರವೇಶ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮೂಲಕ ಗುರುತಿಸಿಕೊಂಡಿದ್ದ ಸುನಿಲ್‌ ಕುಮಾರ್‌ ಅವರು 2004ರಲ್ಲಿ ರಾಜಕೀಯ ಪ್ರವೇಶ ಮಾಡಿದರು. 2004ರ ವಿಧಾನ ಸಭೆ ಚುನಾವಣೆಯಲ್ಲಿ ಕಾರ್ಕಳದಿಂದ ಸ್ಪರ್ಧಿಸಿದ ಸುನಿಲ್‌ ಕುಮಾರ್‌ ಕಾಂಗ್ರೆಸ್‌ನ ಹಿರಿಯ ಮುಖಂಡ ಎಚ್.‌ ಗೋಪಾಲ ಭಂಡಾರಿಯವರನ್ನು ಸುಮಾರು 10 ಸಾವಿರಕ್ಕಿಂತಲೂ ಅಧಿಕ ಮತಗಳಿಂದ ಸೋಲಿಸಿದ್ದರು. 2008ರ ಚುನಾವಣೆಯಲ್ಲಿ ಗೋಪಾಲ ಭಂಡಾರಿಯವರ ಎದುರು 1537 ಮತಗಳಿಂದ ಪರಾಭವಗೊಂಡ ಸುನಿಲ್‌ ಕುಮಾರ್‌ 2012ರ ಉಡುಪಿ-ಚಿಕ್ಕಮಗಳೂರು ಉಪಚುನಾವಣೆಯಲ್ಲಿ ಅಂದು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಕೆ. ಜಯಪ್ರಕಾಶ್‌ ಹೆಗ್ಡೆ ಎದುರು ಸೋಲನುಭವಿಸಿದರು.
2013ರ ವಿಧಾನಸಭಾ ಚುನಾವಣೆಯಲ್ಲಿ ಗೋಪಾಲ ಭಂಡಾರಿಯವರನ್ನು 4 ಸಾವಿರ ಮತಗಳ ಅಂತರದಿಂದ ಸೋಲಿಸಿದ ಸುನಿಲ್‌ ಕುಮಾರ್‌ ಮುಖ್ಯ ಸಚೇತಕರಾದರು. 2018ರ ಚುನಾವಣೆಯಲ್ಲಿ 42,566 ಮತಗಳ ಅಂತರದಿಂದ ಗೋಪಾಲ ಭಂಡಾರಿಯವರ ಎದುರು ಗೆದ್ದ ಸುನಿಲ್‌ ಕುಮಾರ್‌ ಸರಕಾರದ ಮುಖ್ಯ ಸಚೇತಕರಾಗಿ ಇದೀಗ ಸಚಿವರಾಗುತ್ತಿದ್ದಾರೆ.

ಕಾರ್ಕಳ ವಿಧಾನ ಸಭಾ ಕ್ಷೇತ್ರವನ್ನು 6 ಬಾರಿ ಪ್ರತಿನಿಧಿಸಿದ್ದ ಎಂ. ವೀರಪ್ಪ ಮೊಯ್ಲಿ 1992-94ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆ ಬಳಿಕ ಇದೀಗ ಕಾರ್ಕಳಕ್ಕೆ ಸಚಿವ ಸ್ಥಾನ ದೊರೆತಿರುವುದು ಇಡೀ ಕಾರ್ಕಳದಲ್ಲಿ ಸಂಭ್ರಮ ಮನೆ ಮಾಡಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!