Saturday, January 22, 2022
spot_img
Homeಸುದ್ದಿನಿಮ್ಮ ಆ್ಯಂಡ್ರಾಯ್ಡ್ ಫೋನನ್ನು ಯಾವ ರೀತಿ ಸುರಕ್ಷಿತವಾಗಿರಿಸಬಹುದು

ನಿಮ್ಮ ಆ್ಯಂಡ್ರಾಯ್ಡ್ ಫೋನನ್ನು ಯಾವ ರೀತಿ ಸುರಕ್ಷಿತವಾಗಿರಿಸಬಹುದು

ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬಳಕೆಯಾಗುತ್ತಿರುವ ಮೊಬೈಲ್ ಆಪರೇಟಿಂಗ್ ಸಿಸ್ಟಂ ಆ್ಯಂಡ್ರಾಯ್ಡ್ ಆಗಿದೆ. ಫೋನ್ ಹ್ಯಾಕ್ ಮಾಡಲು, ನಿಮ್ಮಿಷ್ಟದ ಜಾಹೀರಾತು ತೋರಿಸಲು ಟ್ರ್ಯಾಕ್ ಮಾಡಲು, ವೈರಸ್ ಹರಡಲು ಕೂಡ ಇದೇ ಆ್ಯಂಡ್ರಾಯ್ಡ್ ಸಿಸ್ಟಂ ಸೈಬರ್ ಖದೀಮರ ಅಚ್ಚುಮೆಚ್ಚಿನ ಪ್ಲಾಟ್ಫಾರ್ಮ್ ಸಹ ಆಗಿದೆ.

ಏನೇ ಆದರೂ ನಿಮ್ಮ ಆ್ಯಂಡ್ರಾಯ್ಡ್ ಫೋನ್ ಸುರಕ್ಷಿತವಾಗಿಟ್ಟುಕೊಳ್ಳುವುದು ಈಗ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ. ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್, ಯುಪಿಐ ಐಡಿ, ಇಮೇಲ್ ಹಾಗೂ ವೈಯಕ್ತಿಕ ಮಾಹಿತಿ ಎಲ್ಲವೂ ಈಗ ಫೋನಿನಲ್ಲಿರುತ್ತದೆ. ಇಂಥ ಸಮಯದಲ್ಲಿ ನಿಮ್ಮ ಆ್ಯಂಡ್ರಾಯ್ಡ್ ಫೋನ್ ಅನ್ನು ಮತ್ತಷ್ಟು ಸುರಕ್ಷಿತವಾಗಿಸಲು ಇಲ್ಲಿವೆ ಮಹತ್ವದ ಟಿಪ್ಸ್.

ಪರ್ಮಿಶನ್ ಮ್ಯಾನೇಜರ್ ಚೆಕ್ ಮಾಡಿ
ಯಾವ ಆ್ಯಪ್ ಯಾವ ಪರ್ಮಿಶನ್ ಹೊಂದಿವೆ ಎಂಬುದನ್ನು ಗಮನಿಸುವುದು ಸೂಕ್ತ. ಇದಕ್ಕಾಗಿ ಸೆಟಿಂಗ್ಸ್ಗೆ ಹೋಗಿ ಪರ್ಮಿಶನ್ ಮ್ಯಾನೇಜರ್ ಓಪನ್ ಮಾಡಿ. ಇಲ್ಲಿ ಮುಖ್ಯವಾಗಿ ನಿಮ್ಮ ಕಾಂಟ್ಯಾಕ್ಟ್ಸ್, ಬಾಡಿ ಸೆನ್ಸರ್, ಕಾಲ್ ಲಾಗ್ಸ್, ಕ್ಯಾಮೆರಾ, ಮೈಕ್ರೊಫೋನ್, ಫೈಲ್ಸ್ ಮತ್ತು ಮೀಡಿಯಾ, ಫಿಸಿಕಲ್ ಆ್ಯಕ್ಟಿವಿಟಿ, ಫೋನ್ ಮುಂತಾದುವುಗಳನ್ನು ನೋಡಲು ಯಾವೆಲ್ಲ ಆ್ಯಪ್ಗಳು ಪರ್ಮಿಶನ್ ಹೊಂದಿವೆ ಎಂದು ಚೆಕ್ ಮಾಡಿ. ಎಲ್ಲ ಆ್ಯಪ್ಗಳಿಗೆ ಸಂಪೂರ್ಣ ಫೋನಿನ ನಿಯಂತ್ರಣ ಬೇಕಾಗಿರುವುದಿಲ್ಲ ಎಂಬುದು ಗೊತ್ತಿರಲಿ. ಹೀಗಾಗಿ ಕೆಲವೊಂದು ಆ್ಯಪ್ಗಳಿಗೆ ಕೆಲ ಪರ್ಮಿಶನ್ಗಳನ್ನು ನಿರ್ಬಂಧಿಸಬೇಕು. ಅಲ್ಲದೆ ಇನ್ನು ಕೆಲವಕ್ಕೆ ಅಗತ್ಯವಿದ್ದಾಗ ಮಾತ್ರ ಬಳಸುವಂತೆ ಸೆಟಿಂಗ್ ಬದಲಾಯಿಸಬೇಕು.

ಮೆಸೇಜುಗಳ ಮೂಲಕ ಬಂದ ಲಿಂಕ್ಗಳನ್ನು ಕ್ಲಿಕ್ ಮಾಡಿ ಅದರಿಂದ ಆ್ಯಪ್ ಅಥವಾ ಎಪಿಕೆ ಫೈಲ್ಗಳನ್ನು ಡೌನ್ಲೋಡ್ ಮಾಡುವುದು ಅಪಾಯಕಾರಿಯಾಗಿರುತ್ತದೆ. ತುಂಬಾ ಚಿರಪರಿಚಿತ ಆ್ಯಪ್ ಆಗಿದ್ದರೂ ಅದನ್ನು ಪ್ಲೇ ಸ್ಟೋರ್ನಿಂದಲೇ ಪಡೆದುಕೊಳ್ಳಿ. ಇದರ ಜೊತೆಗೆ ಗೂಗಲ್ ಪ್ಲೇ ಪ್ರೊಟೆಕ್ಟ್ ಆನ್ ಮಾಡಿಟ್ಟುಕೊಂಡಲ್ಲಿ ಸ್ಪೈವೇರ್ ಆ್ಯಪ್ಗಳು ಇನ್ಸ್ಟಾಲ್ ಆಗದಂತೆ ತಡೆಯಬಹುದು.

ಗೊತ್ತಿಲ್ಲದ ಮೂಲದಿಂದ ಅಥವಾ ಥರ್ಡ್ ಪಾರ್ಟಿ ವೆಬ್ಸೈಟಿನಿಂದ ಎಲ್ಲ ಆ್ಯಪ್ಗಳು ಇನ್ಸ್ಟಾಲ್ ಆಗುವುದನ್ನು ತಡೆಗಟ್ಟಲು ಸೆಟಿಂಗ್ಸ್ನಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. install unknown apps ಎಂಬ ಆಪ್ಷನ್ ಅನ್ನು ಡಿಸೆಬಲ್ ಮಾಡಿದರೆ ನಿಮಗೆ ತಿಳಿಯದೆ ಹೊರಗಿನ ಆ್ಯಪ್ಗಳು ಇನ್ಸ್ಟಾಲ್ ಆಗುವುದನ್ನು ತಪ್ಪಿಸಬಹುದು.

ಯಾವೆಲ್ಲ ಆ್ಯಪ್ಗಳು ಇನ್ಸ್ಟಾಲ್ ಆಗಿವೆ ಚೆಕ್ ಮಾಡಿ
ಫೋನಿನಲ್ಲಿ ಇನ್ಸ್ಟಾಲ್ ಆಗಿರುವ ಆ್ಯಪ್ಗಳು ಯಾವುವು, ಯಾವೆಲ್ಲ ಎಪಿಕೆ ಫೈಲ್ಗಳು ಅಡಗಿವೆ ಎಂಬುದರ ಮೇಲೆ ನಿಗಾ ಇಡುವುದು ಒಳಿತು. ನೀವಾಗಿಯೇ ಇನ್ಸ್ಟಾಲ್ ಮಾಡದ ಆ್ಯಪ್ಗಳೇನಾದರೂ ಬಂದು ಕುಳಿತಿವೆಯಾ ಎಂದು ಚೆಕ್ ಮಾಡಿ. ಸ್ಪೈವೇರ್ಗಳು, ಮಾಲ್ವೇರ್ಗಳು ಹಾಗೂ ಇನ್ನಿತರ ಆ್ಯಡ್ವೇರ್ ಆ್ಯಪ್ಗಳು ರಹಸ್ಯವಾಗಿ ಫೋನಲ್ಲಿ ಕುಳಿತು ಮತ್ತಷ್ಟು ಹೊಸ ಹ್ಯಾಕ್ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡುತ್ತಿರುತ್ತವೆ. ಆ ಮೂಲಕ ನಿಮ್ಮ ಫೋನಿನಲ್ಲಿರುವ ಡೇಟಾವನ್ನು ಹೊರಗಡೆ ಎಲ್ಲೋ ಇರುವ ಸರ್ವರ್ಗೆ ವರ್ಗಾಯಿಸುತ್ತವೆ.
ಇನ್ನು ಇಂಥ ಸ್ಪೈವೇರ್ ಆ್ಯಪ್ಗಳ ಐಕಾನ್ ಕೂಡ ಹೋಮ್ ಸ್ಕ್ರೀನ್ ಮೇಲೆ ಕಾಣಿಸುವುದಿಲ್ಲ. ಹೀಗಾಗಿ ನೀವಾಗಿಯೇ ಆಗಾಗ ಸೆಟಿಂಗ್ಸ್ಗೆ ಹೋಗಿ ಯಾವೆಲ್ಲ ಆ್ಯಪ್ಗಳು ಫೋನಿನಲ್ಲಿವೆ ಎಂದು ನೋಡುತ್ತಿರಬೇಕು.

ಲಾಕ್ಸ್ಕ್ರೀನ್ ಮೇಲೆ ಎಲ್ಲ ನೋಟಿಫಿಕೇಶನ್ ಕಾಣಿಸುವುದು ಬೇಕಿಲ್ಲ
ನಮಗೆ ಆಗಾಗ ಬರುವ ಮೆಸೇಜುಗಳ ಮಾಹಿತಿಗಳೆಲ್ಲವೂ ಬೇರೆಯವರಿಗೆ ಕಾಣಿಸಬೇಕಿಲ್ಲ. ಕೆಲವೊಮ್ಮೆ ಅತ್ಯಂತ ಗೌಪ್ಯವಾದ ವೈಯಕ್ತಿಕ ಮೆಸೇಜುಗಳು ಬಂದಾಗ ಅದು ಲಾಕ್ಸ್ಕ್ರೀನ್ ಮೇಲೆ ಕಾಣಿಸಿದರೆ ಪಕ್ಕದಲ್ಲಿರುವವರಿಗೂ ಅದು ಗೊತ್ತಾಗಬಹುದು. ಇದು ನಮ್ಮ ಖಾಸಗಿತನಕ್ಕೆ ಧಕ್ಕೆ ತರುವ ವಿಚಾರವಾಗಿರುತ್ತದೆ. ಹೀಗಾಗಿ ಸೆಟಿಂಗ್ಸ್ಗೆ ಹೋಗಿ ಲಾಕ್ ಸ್ಕ್ರೀನ್ ನೋಟಿಫಿಕೇಶನ್ಗಳನ್ನು ಲಿಮಿಟ್ ಮಾಡುವುದು ಸುರಕ್ಷಿತ.

ಬೇರೆಯವರಿಗೆ ಫೋನ್ ಕೊಡುವ ಮುನ್ನ ಆ್ಯಪ್ ಪಿನ್ನಿಂಗ್ ಆನ್ ಮಾಡಿ
ಯಾವುದೋ ಗೇಮ್ ಆಡಲು ಅಥವಾ ಇನ್ನೇನೋ ನೋಡಲು ಬೇರೆಯವರಿಗೆ ನಿಮ್ಮ ಫೋನ್ ಕೊಡುವುದಾದರೆ ಅದಕ್ಕೂ ಮುನ್ನ ಆ್ಯಪ್ ಪಿನ್ನಿಂಗ್ ಆನ್ ಮಾಡಿ. ಹೀಗೆ ಮಾಡುವುದರಿಂದ ಸದ್ಯ ಚಾಲ್ತಿಯಲ್ಲಿರುವ ಆ್ಯಪ್ ನೀವಾಗಿಯೇ ಅನ್ ಪಿನ್ ಮಾಡುವವರೆಗೆ ಚಾಲ್ತಿಯಲ್ಲಿರುತ್ತದೆ. ಗೇಮ್ ಆಡಿ ಕೊಡ್ತೀನಿ ಎಂದು ಫೋನ್ ತೆಗೆದುಕೊಂಡವರು ನಿಮ್ಮ ಫೋನ್ ಜಾಲಾಡುವುದನ್ನು ಇದರಿಂದ ತಪ್ಪಿಸಬಹುದು.

​ಫೈಂಡ್ ಮೈ ಡಿವೈಸ್ ಚಾಲನೆಯಲ್ಲಿಡಿ
ನಿಮ್ಮ ಗೂಗಲ್ ಅಕೌಂಟಿನ ಟು ಫ್ಯಾಕ್ಟರ್ ಆಥೆಂಟಿಕೇಶನ್ ಯಾವಾಗಲೂ ಚಾಲನೆಯಲ್ಲಿರುವಂತೆ ಹಾಗೂ ಫೈಂಡ್ ಮೈ ಡಿವೈಸ್ ಆನ್ ಆಗಿರುವಂತೆ ನೋಡಿಕೊಳ್ಳಿ. ಒಂದೊಮ್ಮೆ ನಿಮ್ಮ ಫೋನ್ ಕಳೆದುಹೋದಲ್ಲಿ ಫೈಂಡ್ ಮೈ ಡಿವೈಸ್ ಮೂಲಕ ಅದನ್ನು ಪತ್ತೆ ಹಚ್ಚಬಹುದು ಅಥವಾ ಅದರಲ್ಲಿರುವ ಎಲ್ಲ ಡೇಟಾವನ್ನು ರಿಮೋಟ್ ಆಗಿಯೇ ಡಿಲೀಟ್ ಮಾಡಬಹುದು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!