Tuesday, December 7, 2021
spot_img
Homeಅಂಕಣಕಗ್ಗದ ಸಂದೇಶ-ಮನ್ನಣೆಯ ದಾಹಕ್ಕೆ ಕೊನೆಯಿಲ್ಲ...

ಕಗ್ಗದ ಸಂದೇಶ-ಮನ್ನಣೆಯ ದಾಹಕ್ಕೆ ಕೊನೆಯಿಲ್ಲ…

“ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ|
ಚಿನ್ನದಾತುರಕ್ಕಿಂತ ಹೆಣ್ಣುಗಂಡೊಲವು||
ಮನ್ನಣೆಯ ದಾಹವೀಯೆಲ್ಲಕುಂ ತೀಕ್ಷ್ಣತಮ|
ತಿನ್ನುವುದಾತ್ಮವನೆ ಮಂಕುತಿಮ್ಮ|”

ಬದುಕಿನ ಸಹಜ ಹಸಿವನ್ನು ತಣಿಸಲು ಅನ್ನಬೇಕು.ಈ ಅನ್ನದ ಬಯಕೆಗಿಂತ ಚಿನ್ನ ಬೇಕು ಎನ್ನುವ ಬಯಕೆ ಪ್ರಬಲವಾದುದು.ಚಿನ್ನದ ದಾಹಕ್ಕಿಂತಲೂ ತೀವ್ರತರವಾದುದು ಹೆಣ್ಣು ಗಂಡಿನ ನಡುವಿನ ಪರಸ್ಪರ ಆಕರ್ಷಣೆ. ಆದರೆ ಈ ಎಲ್ಲಕ್ಕಿಂತ ತೀವ್ರತರವಾದ ಬಯಕೆಯೆಂದರೆ ಮನ್ನಣೆ ದೊರೆಯಬೇಕೆನ್ನುವುದು.ಇದು ನಮ್ಮ ಆತ್ಮಕ್ಕೆ ಹಾನಿ ಮಾಡುತ್ತದೆ ಎಂದು ಮಾನ್ಯ ಡಿ.ವಿ.ಜಿ ಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.


ಬಯಕೆಯಿಲ್ಲದೆ ಬದುಕಿಲ್ಲ ಎನ್ನುವುದು ನಿಜ.ಅದು ಹಿತಮಿತವಾಗಿದ್ದಾಗ ಬದುಕಿಗೆ ಶೋಭೆ.ಎಲ್ಲರೂ ದುಡಿಯುವುದು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವುದಕ್ಕಾಗಿ.ಈ ರೀತಿಯ ಹೊಟ್ಟೆಬಟ್ಟೆಯ ಬಯಕೆ ಸಹಜ ಮತ್ತು ಅಗತ್ಯವೂ ಕೂಡ. ಅನ್ನದ ಬಯಕೆಗಿಂತ ತೀವ್ರವಾದದ್ದು ಚಿನ್ನದ ಆಶೆ. ಚಿನ್ನದ ದಾಹಕ್ಕಿಂತಲೂ ತೀವ್ರತರವಾದದ್ದು ಹೆಣ್ಣು ಗಂಡಿನ ಪರಸ್ಪರ ಆಕರ್ಷಣೆ.ಇತಿಹಾಸದ ಪುಟಗಳನ್ನು ತಿರುಗಿಸಿದಾಗ ಇದಕ್ಕೆ ನಮಗೆ ಅನೇಕ ಪುರಾವೆಗಳು ಸಿಗುತ್ತವೆ.ಚಿನ್ನದ ಜಿಂಕೆಯ ಆಸೆಗೆ ಸೀತೆ ಸಂಕಷ್ಟಕ್ಕೀಡಾದರೆ ಹೆಣ್ಣಿನ ಬಯಕೆಗೆ ರಾವಣ ಬಲಿಯಾಗುತ್ತಾನೆ.ಅನ್ನದ,ಚಿನ್ನದ,ಹೆಣ್ಣುಗಂಡಿನ ಆಕರ್ಷಣೆಗಿಂತ ಪ್ರಬಲವಾದದ್ದು ಮನ್ನಣೆಯ ದಾಹ.
“ಪೀಡಿಸುತ್ತಿಹೆ ಏಕೆ? ತೊಲಗಾಚೆ,ಕೀರ್ತಿ ಶನಿ.ಸಾಕೆನೆಗೆ ನಿನ್ನ ಸಹವಾಸ ವಿಭವ ಭ್ರಾಂತಿ! ,ಬಾ ಬಳಿಗೆ ಸಾಮಾನ್ಯತಾ ದೇವಿ” ಎಂಬ ರಾಷ್ಟ್ರಕವಿ ಕುವೆಂಪು ಅವರ ನುಡಿ ಮನ್ನಣೆಯ ಬಯಕೆ ಶನಿಯಂತೆ ನಮ್ಮನ್ನು ಕಾಡುತ್ತದೆ.ಇದರಿಂದ ನಾವು ದೂರವಿರಬೇಕು ಎನ್ನುವುದನ್ನು ತಿಳಿಸುತ್ತದೆ.ಪ್ರಸಿದ್ಧಿ,ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯಲು ಜನ ತಮ್ಮತನವನ್ನು ಬಿಟ್ಟು ಯಾವ ಮಟ್ಟಕ್ಕೂ ಇಳಿಯುತ್ತಾರೆ.ಯಾವ ತ್ಯಾಗಕ್ಕೂ ಸಿದ್ಧರಾಗುತ್ತಾರೆ.
ಮನ್ನಣೆಯನ್ನು ಬಯಸುವುದು ಮನುಷ್ಯನ ಸಹಜ ಗುಣ ನಿಜ.ಸಮಾಜದಲ್ಲಿ ನನಗೆ ಗೌರವ ದೊರೆಯಬೇಕು ಗೌರವಯುತವಾಗಿ ನಾನು ಬಾಳಬೇಕು ಎನ್ನುವ ಬಯಕೆಯೂ ತಪ್ಪಲ್ಲ ಆದರೆ ಇದು ತೀವ್ರವಾಗಿ ಹುಚ್ಚು ಹಿಡಿದರೆ ಬಹಳ ಕಷ್ಟ.ಮನ್ನಣೆಯೆ ಜೀವನ ಅದಿಲ್ಲದೆ ಬದುಕಿಲ್ಲ ಎನ್ನುವ ಭಾವ ಸಲ್ಲದು.ಒಳ್ಳೆಯವರಾಗಿದ್ದರೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರೆ ಮನ್ನಣೆ ತಾನಾಗಿಯೆ ಬರುತ್ತದೆ.ಅದಕ್ಕಾಗಿ ಲಾಬಿ ಮಾಡುವುದು ಒತ್ತಾಯ ಒತ್ತಡ ತರುವುದು ತರವಲ್ಲ.ಇದು ನಮ್ಮ ಆತ್ಮಕ್ಕೆ ಹಾನಿಯುಂಟು ಮಾಡುತ್ತದೆ.ಮನ್ನಣೆಯ ಬೆನ್ನುಹತ್ತದೆ ಮೌಲ್ಯಗಳನ್ನು ಅಳವಡಿಸಿಕೊಂಡು ಬಾಳಿದಾಗ ಜೀವನ ಸಾರ್ಥಕವಾಗುವುದಲ್ಲವೇ
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕನ್ನಡ‌ಸಾಹಿತ್ಯ ಪರಿಷತ್ ,ಕಾರ್ಳಳ ಘಟಕ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!