ಸಂಪಾದಕೀಯ: ಸಂಪುಟ ರಚನೆ ಎಂಬ ಹಗ್ಗದ ಮೇಲಿನ ನಡಿಗೆ

ಕರ್ನಾಟಕದ ಮಟ್ಟಿಗೆ ಸಿಎಂ ಆಯ್ಕೆ ಎಷ್ಟು ಕಠಿಣವೊ ಅದಕ್ಕಿಂತ ಕಠಿಣ ಆದದ್ದು ಸಂಪುಟ ರಚನೆ. ಇದು ಯಾವುದೇ ಮುಖ್ಯಮಂತ್ರಿಗೂ ಹಗ್ಗದ ಮೇಲಿನ ನಡಿಗೆಯೇ ಸರಿ.

ಕರ್ನಾಟಕದ ಇತಿಹಾಸವನ್ನು ನೋಡಿದಾಗ ಎಂಭತ್ತರ ದಶಕದವರೆಗೆ ರಾಜಕೀಯವು ಜಾತಿ ಆಧಾರಿತ ಆಗಿರಲಿಲ್ಲ. ಹಾಗೆ ಆಗಿದ್ದರೆ ಬ್ರಾಹ್ಮಣರಾದ ರಾಮಕೃಷ್ಣ ಹೆಗಡೆ, ಅತ್ಯಂತ ಕಡಿಮೆ ಮತದಾರರನ್ನು ಹೊಂದಿರುವ ಸಮುದಾಯದಿಂದ ಬಂದ ವೀರಪ್ಪ ಮೊಯ್ಲಿ ಅವರು ಸಿಎಂ ಆಗಲು ಸಾಧ್ಯವೇ ಇರಲಿಲ್ಲ. ಅವರೆಲ್ಲರೂ ಮುಖ್ಯಮಂತ್ರಿ ಆಗಿದ್ದು ತಮ್ಮ ಸಾಮರ್ಥ್ಯ, ಶಕ್ತಿಯಿಂದ ಹೊರತು ಸಮುದಾಯದ ಬೆಂಬಲದಿಂದ ಅಲ್ಲ. ರಾಮಕೃಷ್ಣ ಹೆಗಡೆ ಅವರು ತಮ್ಮ ದಿಟ್ಟ ನಿರ್ಧಾರ ಹಾಗೂ ನಿಲುವುಗಳಿಂದ ರಾಜ್ಯದ ಮನ ಗೆದ್ದರು. ಇಲ್ಲಿನ ಆಡಳಿತ ಇಲ್ಲಿಂದಲೇ ಹೊರತು ದೆಹಲಿಯಿಂದ ಅಲ್ಲ ! ಎಂಬ ಘೋಷಣೆ ಹೊರಡಿಸಿದ್ದೇ ರಾಮಕೃಷ್ಣ ಹೆಗಡೆಯವರು. ಎಷ್ಟೋ ಬಾರಿ ಪಕ್ಷದ ಹೈಕಮಾಂಡನ್ನು ಎದುರು ಹಾಕಿಕೊಂಡು ಅವರು ಆಡಳಿತ ನಡೆಸಿದ್ದರು.

ಆದರೆ, ಮುಂದೆ ರಾಜ್ಯದ ರಾಜಕಾರಣ ಹೊಸ ದಾರಿ ಹಿಡಿಯಿತು. ಬಹುಸಂಖ್ಯಾತ ಸಮುದಾಯಗಳನ್ನು ಖುಷಿ ಪಡಿಸುವ, ಅಲ್ಪಸಂಖ್ಯಾತ ಮತ ಬ್ಯಾಂಕನ್ನು ಖಾತರಿ ಪಡಿಸುವ, ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸುವ ಸರಕಾರಗಳು ಬಂದವು. ಅಹಿಂದ ಚಳುವಳಿ ಹುಟ್ಟುಹಾಕಿದ ಸಿಎಂ ಸಿದ್ಧರಾಮಯ್ಯ ಅವರು ಅಲ್ಪ ಸಂಖ್ಯಾತರ, ಹಿಂದುಳಿದ ವರ್ಗಗಳ ಹಾಗೂ ದಲಿತರ ಮತಗಳ ಮೇಲೆ ಕಣ್ಣಿಟ್ಟು ಅಧಿಕಾರ ನಡೆಸಿದರು. ಇವತ್ತು ಪರಿಸ್ಥಿತಿ ಹೇಗಿದೆ ಎಂದರೆ ಯಾವ ಸರಕಾರ ಬಂದರೂ ಕರ್ನಾಟಕದಲ್ಲಿ ಬಲಿಷ್ಟ ಸಮುದಾಯವಾದ ಲಿಂಗಾಯತ, ಒಕ್ಕಲಿಗ, ಕುರುಬ, ವಾಲ್ಮೀಕಿ, ಅಲ್ಪಸಂಖ್ಯಾತ ಜನಾಂಗವನ್ನು ಖುಷಿ ಪಡಿಸದೇ ಆಡಳಿತ ನಡೆಸುವುದು ಸುಲಭವೇ ಅಲ್ಲವಾಗಿದೆ. ಆಯಾ ಜನಾಂಗದ ನಾಯಕರು, ಮಠಾಧಿಪತಿಗಳು ತಮ್ಮ ಸಮುದಾಯದವರನ್ನು ಮಂತ್ರಿ, ಸಿಎಂ ಮಾಡಲು ಬೀದಿಗೆ ಇಳಿದು ಹೋರಾಟ ಮಾಡುವುದು ಸಾಮಾನ್ಯ ಆಗಿದೆ. ಬಜೆಟ್ ಮಂಡನೆ, ಅನುದಾನ ಘೋಷಣೆ ಮಾಡುವಾಗ, ಸಚಿವ ಸ್ಥಾನ ನೀಡುವಾಗ… ಹೀಗೆ ಪ್ರತಿಯೊಂದು ಸಂದರ್ಭದಲ್ಲೂ ಅವರ ಸಮುದಾಯದ ನಾಯಕರು ತಮ್ಮ ಹಿತಾಸಕ್ತಿಗಳನ್ನು ಕಾಪಾಡುವ ದೃಷ್ಟಿಯಿಂದ ಒತ್ತಡವನ್ನು ಹೇರುತ್ತಾರೆ. ಅದು ಚುನಾವಣೆಯಲ್ಲಿ ತಮ್ಮ ಸಮಾಜದ ಅಭ್ಯರ್ಥಿಯನ್ನು ಗೆಲ್ಲಿಸುವ ಹಂತದಿಂದ ಆರಂಭ ಆಗುತ್ತದೆ. ಅಭಿವೃದ್ದಿ ಮಂತ್ರಕ್ಕಿಂತ ತಮ್ಮ ಸಮುದಾಯದ ಪ್ರತಿಷ್ಠೆಯನ್ನು ಅವರು ಆದ್ಯತೆಯಾಗಿ ಪರಿಗಣಿಸುತ್ತಾರೆ. ಮಠಾಧಿಪತಿಗಳು ಧರ್ಮೋಪದೇಶ ಮಾಡುವುದನ್ನು ಬಿಟ್ಟು ವಿಧಾನ ಸೌಧಕ್ಕೆ ಬಂದು ಯಾರು ಮಂತ್ರಿ ಆಗಬೇಕು, ಯಾರು ಸಿಎಂ ಆಗಬೇಕು ಅನ್ನುವುದನ್ನು ನಿರ್ಧಾರ ಮಾಡುವ ಮಟ್ಟಕ್ಕೆ ರಾಜಕೀಯ ಪರಿಸ್ಥಿತಿ ತಲುಪಿ ಆಗಿದೆ. ಇದು ದುರಂತವೇ ಸರಿ !

ಇದರಿಂದಾಗಿ ನಿಜವಾದ ಯೋಗ್ಯತೆ ಇರುವವರಿಗೆ ಸಚಿವ ಸ್ಥಾನ ಸಿಗದೇ ಬಕೆಟ್ ಹಿಡಿಯುವವರಿಗೆ, ಸಮುದಾಯದ ಬೆಂಬಲ ಇರುವವರಿಗೆ ಮಂತ್ರಿ ಪದವಿ ಸಿಗುತ್ತದೆ. ಮುಖ್ಯಮಂತ್ರಿಗೆ ಬ್ಯಾಲೆನ್ಸ್ ಮಾಡಲು ಕಷ್ಟ ಅನ್ನಿಸಿದಾಗ ಪಕ್ಷದ ಹೈಕಮಾಂಡ್ ಮಧ್ಯ ಪ್ರವೇಶ ಮಾಡುವುದು ಅನಿವಾರ್ಯ ಅನ್ನುವ ಹಂತಕ್ಕೆ ನಾವು ಇಂದು ಬಂದಿದ್ದೇವೆ.

ಪ್ರಾದೇಶಿಕ ನ್ಯಾಯ ಸರಿ. ಜಿಲ್ಲಾವಾರು ಹಂಚಿಕೆ ತಪ್ಪಲ್ಲ. ಆದರೆ ಕರ್ನಾಟಕದ ಪ್ರಬಲ ಸಮುದಾಯವಾದ ಒಕ್ಕಲಿಗ, ಲಿಂಗಾಯತ, ಕುರುಬ, ವಾಲ್ಮೀಕಿ ಜನಾಂಗದವರು ತಮಗೆ ಇಷ್ಟು ಮಂತ್ರಿ ಪದವಿ ಬೇಕು ಎಂದು ಹಠ ಹಿಡಿದರೆ ಸಿಎಂ ಏನು ಮಾಡಬೇಕು ? ಅದರಲ್ಲಿ ಕೂಡ ಅದೇ ಖಾತೆ, ಇದೇ ಖಾತೆ ಬೇಕು ಎಂದು ಹಠ ಹಿಡಿದರೆ ಏನು ಮಾಡಬೇಕು ? ಉದಾಹರಣೆಗೆ ಪ್ರಬಲ ಸಮುದಾಯ ಆದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ನಾಯಕರು ಮಹತ್ವದ ಖಾತೆಗಳ ಬೇಡಿಕೆ ಇರಿಸಿ ಬ್ಲಾಕ್ ಮೇಲ್ ಹಂತಕ್ಕೆ ಇಳಿದು ಬಿಡುತ್ತಾರೆ. ದಲಿತರು, ಅಲ್ಪ ಸಂಖ್ಯಾತರು, ಕುರುಬರು, ವಾಲ್ಮೀಕಿ ಜನಾಂಗದವರು ಕರ್ನಾಟಕದಲ್ಲಿ ನಿರ್ಣಾಯಕವಾಗಿ ನಿಂತು ತಮ್ಮ ಹಕ್ಕು ಮಂಡಿಸುತ್ತಾರೆ. ಕರಾವಳಿ ಕರ್ನಾಟಕದ ಕಡೆಗೆ ಬಂದಾಗ ಬಂಟರು ಮತ್ತು ಬಿಲ್ಲವರು ತಮ್ಮ ತಮ್ಮ ಅಭ್ಯರ್ಥಿಗಳ ಬೆನ್ನಿಗೆ ನಿಂತು ಬಿಡುತ್ತಾರೆ.
ನಿಜವಾದ ಅರ್ಹತೆ, ಉತ್ಸಾಹ, ಜ್ಞಾನ, ದೂರದೃಷ್ಟಿ ಮತ್ತು ಸಾಮಾಜಿಕ ಕಳಕಳಿ ಇರುವವರು ಮಂತ್ರಿ ಆಗಬೇಕು ಎನ್ನುವುದು ನ್ಯೂಸ್ ಕಾರ್ಕಳದ ಆಶಯ. ಒಬ್ಬ ಜನ ಪ್ರತಿನಿಧಿ ಕೇವಲ ಒಂದು ಸಮುದಾಯದ ಮುಖವಾಣಿ ಆಗಿ ಕೆಲಸ ಮಾಡುವುದಾದರೆ ಸಂವಿಧಾನಕ್ಕೆ ಅರ್ಥವೇ ಇರುವುದಿಲ್ಲ.





























































































































































































































error: Content is protected !!
Scroll to Top