Wednesday, January 19, 2022
spot_img
Homeಸಂಪಾದಕೀಯಸಂಪಾದಕೀಯ - ಕೊರೋನಾ ನಾವು ಮರೆತೇ ಬಿಟ್ಟೆವು, ಆದರೆ ಅದು ನಮ್ಮನ್ನು ಮರೆತಿಲ್ಲ!

ಸಂಪಾದಕೀಯ – ಕೊರೋನಾ ನಾವು ಮರೆತೇ ಬಿಟ್ಟೆವು, ಆದರೆ ಅದು ನಮ್ಮನ್ನು ಮರೆತಿಲ್ಲ!

ಪಬ್ಲಿಕ್ ಮೆಮೊರಿ ಭಾರಿ ಶಾರ್ಟ್ ಅನ್ನುವುದು ನಮ್ಮಲ್ಲಿ ತುಂಬಾ ಸಲ ಬಳಕೆಯಾದ ಮಾತು. ಕೊರೋನಾ ಮಟ್ಟಿಗೆ ಅದು ನೂರಕ್ಕೆ ನೂರು ಸತ್ಯ ಎಂದು ಸಾಬೀತಾಗಿದೆ.

ಮೊದಲ ಬಾರಿಗೆ ಮಹಾ ಮಾರಿ ಭಾರತವನ್ನು ಅಪ್ಪಳಿಸಿದಾಗ ಇಡೀ ದೇಶದಲ್ಲಿ ಮೂರು ವಾರಗಳ ಲಾಕ್ ಡೌನ್ ಘೋಷಣೆ ಆಗಿತ್ತು. ಜನತೆ ಬೆಚ್ಚಿ ಬೀಳುವ ಸುದ್ದಿಗಳು ಪ್ರತಿ ದಿನ ಪ್ರಕಟ ಆಗುತ್ತಿದ್ದವು. ಒಂದು ಸಣ್ಣ ಮಗು ಪಾಸಿಟಿವ್ ಬಂದದ್ದಕ್ಕೆ ಇಡೀ ಬಂಟ್ವಾಳ ತಾಲೂಕಿನ ಒಂದು ಇಡೀ ಗ್ರಾಮವೇ ವಾರಗಟ್ಟಲೆ ಲಾಕ್ ಡೌನ್ ಆಯಿತು. ಹಲವು ಗ್ರಾಮಗಳು, ಹಲವು ಆಸ್ಪತ್ರೆಗಳು, ಹಲವು ನಗರಗಳು ಬ್ಲ್ಯಾಕ್ ಲಿಸ್ಟ್ ಆದವು. ಜನರು ಕೊರೋನಾಕ್ಕಿಂತ ಲಾಕ್ ಡೌನ್ ಪದ ಕೇಳಿ ಬೆಚ್ಚಿದ್ದರು.
ದಿನಕೂಲಿ ಕಾರ್ಮಿಕರು, ಬೀದಿ ಬದಿಯ ವ್ಯಾಪಾರದವರು, ದುಡಿದು ತಿನ್ನುವವರು, ಕಲಾವಿದರು, ಖಾಸಗಿ ಶಾಲೆಯ ಶಿಕ್ಷಕರು, ಕಟ್ಟಡ ಕಾರ್ಮಿಕರು… ಹೀಗೆ ಕೋಟಿ ಕೋಟಿ ಜನರು ಸಂತ್ರಸ್ತರಾದರು. ಕೋರೋನಾ ನಿಯಂತ್ರಣಕ್ಕೆ ಬಂದು ಲಾಕ್ ಡೌನ್ ಕ್ಲಿಯರ್ ಆದಾಗ ಜನ ಎಲ್ಲವನ್ನೂ ಮರೆತರು. ಮನರಂಜನಾ ತಾಣಗಳು, ಬೀಚ್ ಗಳು, ಮಂದಿರಗಳು, ಮಸೀದಿಗಳು, ಮದುವೆ ಕಾರ್ಯಕ್ರಮಗಳು ತುಂಬಿ ತುಳುಕಿದವು. ಜನರಿಗೆ ಎಲ್ಲವೂ ಮರೆತೇ ಹೋಯಿತು.

ಮತ್ತೆ ಎರಡನೇ ಬಾರಿಗೆ ಮಹಾಮಾರಿಯ ಅಲೆ ಅಪ್ಪಳಿಸಿದಾಗ ನಮ್ಮಲ್ಲಿ ಮತ್ತೆ ಸಿದ್ಧತೆಯ ಕೊರತೆ ಕಾಡಿತು. ಮೊದಲನೇ ಅಲೆ ನಗರಗಳಿಗೆ ಸೀಮಿತವಾಗಿತ್ತು. ಎರಡನೇ ಅಲೆ ಗ್ರಾಮಾಂತರ ಭಾಗವನ್ನು ಹೆಚ್ಚು ಅಲುಗಾಡಿಸಿ ಬಿಟ್ಟಿತು. ಮೊದಲ ಅಲೆಗಿಂತ ಎರಡನೇ ಅಲೆ ಹೆಚ್ಚು ಹಾನಿ ಮಾಡಿತು. ಮತ್ತೆ ಲಾಕ್ ಡೌನ್ ಬಿಸಿ ತಟ್ಟಿತು. ಈ ಬಾರಿ ಆಕ್ಸಿಜನ್ ಕೊರತೆಯಿಂದ ಹೆಚ್ಚು ಸಾವುನೋವುಗಳು ಸಂಭವಿಸಿದವು. ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಕರ್ನಾಟಕ ಸರಕಾರಕ್ಕೆ ಎರಡನೇ ಅಲೆಯ ಬಗ್ಗೆ ಎಚ್ಚರಿಕೆ ಕೊಟ್ಟಿದ್ದವು. ಆದರೆ ನಮ್ಮ ಸರಕಾರ ಅದನ್ನು ಎದುರಿಸಲು ಸಿದ್ಧತೆ ಮಾಡಿರಲಿಲ್ಲ. ಲೋಕಸಭಾ ಉಪಚುನಾವಣೆ, ಗ್ರಾಮ ಪಂಚಾಯತ್ ಚುನಾವಣೆ, ಜಾತ್ರೆ, ಕುಂಭ ಮೇಳಗಳು ಎರಡನೇ ಅಲೆಯ ಭೀಕರತೆಗೆ ಕಾರಣ ಆದವು. ಮತ್ತೆ ಲಾಕ್ ಡೌನ್ ಸಂಕಟ, ಆರ್ಥಿಕ ಸಂಕಷ್ಟ ಕಾಡಿದವು. ಸರಕಾರ ಅಥವಾ ಜನರು ಈ ಬಾರಿಯಾದರೂ ಬುದ್ದಿ ಕಲಿಯಬೇಕಾಗಿತ್ತು. ಮತ್ತೆ ದೇಶದ ಆರ್ಥಿಕತೆ ಹಳ್ಳ ಹಿಡಿದಿದ್ದವು. ಆದರೆ ಇನ್ನೂ ಕೆಲವರು ಬುದ್ದಿ ಕಲಿತಂತೆ ಕಾಣುವುದಿಲ್ಲ!

ಈಗ ಲಾಕ್ ಡೌನ್ ಕ್ಲಿಯರ್ ಆಗಿದೆ. ದೇವಸ್ಥಾನ, ಚರ್ಚು, ಮಸೀದಿಗಳು ತೆರೆದಿವೆ. ಎಲ್ಲಾ ಸೇವೆಗಳು ಆರಂಭ ಆಗಿವೆ. ಖಾಸಗಿ ಬಸ್ಸುಗಳು 50% ಜನ ಮಾತ್ರ ತುಂಬಿಸಬೇಕು ಎನ್ನುವ ಕಾರಣಕ್ಕೆ ಎರಡು ಬಾರಿ ಒಟ್ಟು 55% ಟಿಕೆಟ್ ದರ ಏರಿಕೆ ಮಾಡಿದ್ದವು. ಆದರೆ ಬಸ್ಸು ಜಂಗುಳಿ ಕಡಿಮೆ ಆಗಲೇ ಇಲ್ಲ! ಬಸ್ಸುಗಳಲ್ಲಿ 50% ನಿಯಮ ಗಾಳಿಗೆ ತೂರಲಾಗಿದೆ. ಜನರು ರಾಜಾರೋಷವಾಗಿ ಓಡಾಡಲು ತೊಡಗಿದ್ದಾರೆ. ಸಂತೆಗಳು ಸೋಷಿಯಲ್ ಡಿಸ್ಟೆನ್ಸ್ ಮರೆತಿವೆ. ಮಂತ್ರಿಗಳ ಸಭೆಗಳು, ಸಮಾರಂಭಗಳು ಜನ ದಟ್ಟಣೆಯ ಸಮಾರಂಭಗಳು ಮತ್ತೆ ಆರಂಭ ಆಗಿವೆ. ಹರಟೆ ಹೊಡೆಯುವ ತಾಣಗಳು, ಸೋಮಾರಿ ಕಟ್ಟೆಗಳು ನಿಬಿಢ ಜನಸಂಖ್ಯೆಯ ಸ್ಥಾನಗಳು ಆಗಿವೆ. ಹೊಟೇಲು, ರೆಸ್ಟಾರೆಂಟ್, ಜಿಮ್, ಮಾರ್ಕೆಟ್, ಈಜು ಕೊಳಗಳು, ಕೋಚಿಂಗ್ ಸೆಂಟರ್ ಗಳು, ಬಸ್ಸು ನಿಲ್ದಾಣಗಳು ಮತ್ತೆ ಜನರ ದಟ್ಟಣೆಯಿಂದ ನಲುಗಿವೆ. ಮಾಸ್ಕ್, ಸ್ಯಾನಿಟೈಸರ್, ಸೋಷಿಯಲ್ ಡಿಸ್ಟೆನ್ಸ್ ಇದೆಲ್ಲವೂ ಜನರಿಗೆ ಮರೆತೇ ಹೋಗಿದೆ.
ಕೋರೋನಾ ಬಗ್ಗೆ ಜನರಿಗೆ ಈಗ ಯಾವ ಭಯವೂ ಇಲ್ಲ. ಅದು ಅಷ್ಟು ಮಾರಣಾಂತಿಕ ವೈರಸ್ ಕಾಯಿಲೆ ಅಲ್ಲ, ನಾವು ಸುಮ್ಮನೆ ಅದಕ್ಕೆ ಹೆದರಿದ್ದು! ಅದಕ್ಕೆ ಲಾಕ್ ಡೌನ್ ಅಗತ್ಯವೇ ಇರಲಿಲ್ಲ ಅಂತ ವಾದ ಮಾಡುವವರು ಬಹಳ ಮಂದಿ! ಅದನ್ನು ವೈದ್ಯರೂ ಒಪ್ಪುತ್ತಾರೆ. ಆದ್ರೆ ಆ ವೈರಸ್ ನಮ್ಮ ದೇಹವನ್ನು ಪ್ರವೇಶ ಮಾಡುವ ವಿಧಾನ ಬೇರೆಯವರಿಗೆ ಬೇರೆಯಾಗಿ ಇರುತ್ತದೆ! ಸಕ್ಕರೆ ಕಾಯಿಲೆ, ರಕ್ತದ ಒತ್ತಡ, ಅಸ್ತಮಾ, ಬ್ರಾಂಕೈಟಿಸ್, ಇಸ್ನೊ ಫೀಲಿಯ ಮೊದಲಾದ ಶ್ವಾಸಕೋಶ ಸಂಬಂಧದ ಕಾಯಿಲೆ ಇರುವವರಿಗೆ ಅದು ಮಾರಣಾಂತಿಕ ಆಗ್ತಾ ಇದೆ. ಇನ್ನೊಂದು ಗಮನಿಸಬೇಕಾದ ಅಂಶ ಅಂದ್ರೆ ಅದು ಹರಡುವ ವಿಧಾನ ಮತ್ತು ವೇಗ. ಒಮ್ಮೆ ಅದು ಹರಡಲು ಆರಂಭ ಆಯಿತು ಅಂದ್ರೆ ಮತ್ತೆ ಅದು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದನ್ನೆಲ್ಲ ನಾವು ಮರೆಯಬಾರದು.

ಇದೀಗ ಕೇರಳದಲ್ಲಿ ಮೂರನೇ ಅಲೆ ಆರಂಭ ಆಗಿದೆ. ಪ್ರತೀ ದಿನವೂ 20,000ಕ್ಕಿಂತ ಅಧಿಕ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ಕರ್ನಾಟಕಕ್ಕಿಂತ ಹೆಚ್ಚು ಅಡ್ವಾನ್ಸ್ ಆಗಿರುವ ವೈದ್ಯಕೀಯ ವ್ಯವಸ್ಥೆ ಹೊಂದಿರುವ ಕೇರಳ ರಾಜ್ಯವು ಬೆಚ್ಚಿ ಬೀಳುತ್ತಿದೆ. ಬೆಂಗಳೂರು ನಗರದ ದಿನಂಪ್ರತಿ ಕೇಸುಗಳ ಸಂಖ್ಯೆ 2000 ದಾಟಿ ಮುಂದೆ ಹೋಗುತ್ತಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಪಾಸಿಟಿವ್ ಸಂಖ್ಯೆ ದಿನವೂ ಏರಿಕೆ ಕಾಣುತ್ತಾ ಇವೆ ಅನ್ನುವುದನ್ನು ಗಮನಿಸಿ. ಕೊರೋನಾ ರೂಪಾಂತರ ಆಗಿ ನಮ್ಮಲ್ಲಿ ಪ್ರವೇಶ ಮಾಡಿತು ಅಂದರೆ (ಉದಾಹರಣೆಗೆ ಬ್ಲಾಕ್ ಫಂಗಸ್) ಅದಕ್ಕೆ ನಮ್ಮ ಬಳಿಯಲ್ಲಿ ಸೂಕ್ತವಾದ ಔಷಧಿ ದೊರೆಯುತ್ತಿಲ್ಲ. ಈ ಅಲೆಯು ಮೊದಲಿನ ಎರಡು ಅಲೆಗಿಂತ ಹೆಚ್ಚು ಶಕ್ತಿಶಾಲಿ ಆಗಿರುತ್ತದೆ ಎನ್ನುತ್ತಾರೆ ಸಂಶೋಧಕರು. ಕೇರಳ ರಾಜ್ಯವು ಈಗಲೇ ವಾರಾಂತ್ಯದ ಲಾಕ್ ಡೌನ್ ಆರಂಭ ಮಾಡಿದೆ. ಮಹಾರಾಷ್ಟ್ರ ರಾಜ್ಯವು ಮಹಾಮಾರಿಯ ದಾಳಿಗೆ ಈಗಲೇ ಜರ್ಜರಿತ ಆಗಿದೆ. ಆದ್ರೆ ಕರ್ನಾಟಕ ?

ತಕ್ಷಣ ಕೇರಳ ಗಡಿಯನ್ನು ಮುಚ್ಚಬೇಕು. ಅಲ್ಲಿಂದ ಬರುವ ಪ್ರತೀ ಒಬ್ಬರನ್ನು ಕೂಡ ಪರೀಕ್ಷೆ ಮಾಡದೆ ಒಳಗೆ ಬಿಡಬಾರದು. ಸರಕಾರಿ ಮತ್ತು ಖಾಸಗಿ ಬಸ್ಸುಗಳಲ್ಲಿ 50% ಸೀಟು ಕಾನೂನು ತಕ್ಷಣ ಜಾರಿಗೆ ಬೇಕು. ಜಾತ್ರೆ, ಉತ್ಸವ, ಹಬ್ಬಗಳ ಆಚರಣೆ ಸರಳವಾಗಿ ನಡೆಯಬೇಕು. ಮದುವೆ, ಸಮಾರಂಭ ನಡೆಸುವವರು 100 ಮಂದಿಯ ಒಳಗೆ ಜನ ಸೇರಿಸಿ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜನರು ಜಾಗೃತ ಆಗಬೇಕು. ಸಾರ್ವಜನಿಕ ಸಭೆ ಸಮಾರಂಭಗಳನ್ನು ವಿರಳ ಸಂಖ್ಯೆಯ ಜೊತೆಗೆ ಮಾಡಬೇಕು. ಕಾನೂನು ಬಿಗಿ ಮಾಡುವುದಕ್ಕಿಂತ ಜನ ಜಾಗೃತಿ ಅಗತ್ಯ ಎಂದು ನ್ಯೂಸ್ ಕಾರ್ಕಳ ಅನಿಸಿಕೆ. ನಾವು ಎಚ್ಚರದಿಂದಿರುವುದು ಅಗತ್ಯ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!