Saturday, October 16, 2021
spot_img
Homeಸ್ಥಳೀಯ ಸುದ್ದಿಕಗ್ಗದ ಸಂದೇಶ-ನಿನಗೆ ನೀನೆ ಗುರುವು…

ಕಗ್ಗದ ಸಂದೇಶ-ನಿನಗೆ ನೀನೆ ಗುರುವು…

“ನಿನಗಾರು ಗುರುವಹರು?ನಿನೊಬ್ಬ ತಬ್ಬಲಿಗ|
ಉಣುತ ದಾರಿಯ ಕೆಲದಿ ಸಿಕ್ಕಿದೆಂಜಲನು||
ದಿನವ ಕಳೆ;ಗುರು ಶಿಷ್ಯಪಟ್ಟಗಳು ನಿನಗೇಕೆ?
ನಿನಗೆ ನೀನೆ ಗುರುವೊ-ಮಂಕುತಿಮ್ಮ”

     ನಿನಗೆ ಯಾರು ಗುರುವಾಗಿದ್ದಾರೆ? ನೀನೊಬ್ಬ ದಿಕ್ಕಿಲ್ಲದವನು.ಬದುಕಿನ ನಡೆಯಲ್ಲಿ ದಾರಿಯ ಬದಿಯಲ್ಲಿ ದೊರೆಯುವ ಎಂಜಲನ್ನು ಉಣ್ಣುತ್ತಾ  ಕಾಲವನ್ನು ಕಳೆ.ನಿನಗೊಬ್ಬ ಗುರು, ನೀನೊಬ್ಬ ಶಿಷ್ಯ ಎಂಬ ಹಣೆಪಟ್ಟಿ ನಿನಗೇಕೆ?‌ ನಿನಗೆ ನೀನೆ ನಿಜವಾದ ಗುರು ಎಂದು ಮಾನ್ಯ ಡಿ ವಿ.ಗುಂಡಪ್ಪನವರು ಈ ಮುಕ್ತಕದಲ್ಲಿ ಹೇಳಿದ್ದಾರೆ.

ಜ್ಞಾನದ ಬೆಳಕನ್ನು ಬೀರಿ ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸುವನನ್ನು ಗುರು ಎನ್ನುತ್ತಾರೆ.ನಮ್ಮ ಬದುಕಿನಲ್ಲಿ ಗುರುವಿನ ಪಾತ್ರ ಬಹಳ ಪ್ರಾಮುಖ್ಯವಾದುದು.’ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ದಾಸವಾಣಿ ಹೇಳುವಂತೆ ನಮ್ಮ ಲೌಕಿಕ ಬಂಧನಗಳಿಂದ ಬಿಡುಗಡೆಗೆ ಪಡೆಯುವಲ್ಲಿ ಗುರುವಿನ ಮಾರ್ಗದರ್ಶನದ ಅನುಗ್ರಹ ಅಗತ್ಯ.ಬಾಳ ದಾರಿಯಲ್ಲಿ ದೊರಕಿದ ಪ್ರತಿ ಅನುಭವವು ಒಂದು ಪಾಠ.ತಿಳವಳಿಕೆ ನೀಡಿದ ಪ್ರತಿಯೊಬ್ಬರು ನಮ್ಮ ಗುರುಗಳೆ.ಆದರೆ ಡಿ ವಿ ಜಿ ಯವರು ಹೇಳುವಂತೆ ನಾವು ಪಡೆದ ಎಂಜಲು ಅಂದರೆ ಅನ್ಯರಿಂದ ದೊರೆತ ತಿಳಿವಳಿಕೆ.ಇದು ಸಾರ್ಥಕವಾಗಬೇಕಾದರೆ ನಮ್ಮ ಪ್ರಜ್ಞೆ ಜಾಗೃತವಾಗಿರಬೇಕು.ಅದಕ್ಕೆ ನಿನಗೆ ನೀನೆ ಗುರು ಎಂದಿದ್ದಾರೆ.
ಅರಿವಿನ ಬೆಳಕಾಗಿ ದಾರಿ ತೋರುವ ಗುರು ನಮ್ಮೊಳಗೆ ಇದ್ದಾನೆ.ಅಂತರಂಗದ ಆತ್ಮಸಾಕ್ಷಿಗಿಂತ ಮಿಗಿಲಾದ ಗುರುವಿಲ್ಲ.ವಚನಕಾರರು ಹೇಳುವಂತೆ ನಮ್ಮ ನಮ್ಮ ಪ್ರಜ್ಞೆಯೆ ದೇವರಾಗಬೇಕು.ಆತ್ಮಜ್ಞಾನಕ್ಕಿಂತ ಮಿಗಿಲಾದ ಜ್ಞಾನ ಬೇರಿಲ್ಲ.ನಮ್ಮೊಳಗಿನ ಪ್ರಜ್ಞೆ ಜಾಗೃತವಾಗದಿದ್ದರೆ ನಾವು ಪಡೆದ ಜ್ಞಾನವೆಲ್ಲವೂ ವ್ಯರ್ಥವಾಗುತ್ತದೆ.ಈ ಲೌಕಿಕ ಜಗತ್ತಿನಲ್ಲಿ ನಮ್ಮವರು ಯಾರೂ ಇಲ್ಲ.ದಿಕ್ಕಿಲ್ಲದ ತಬ್ಬಲಿಯ ಬಾಳು ನಮ್ಮದು.”ಉನ್ನತಿಯ ಗಳಿಸಲಿಕೆ ದುರ್ಗತಿಗೆ ಬೀಳಲಿಕೆ ಅನ್ಯರಾರು ಕಾರಣವಲ್ಲವೋ! ನಿನ್ನಿಂದಾರಯ್ಯ ಪ್ರತಿಯೋರ್ವ ಮಾನವನು ತನ್ನ ಬದುಕಿನ ಶಿಲ್ಪಿ-ಬೋಳುಬಸವ” ಎಂಬ ನಿಜಗುಣ ಕವಿಯ ನುಡಿಯಂತೆ “ಅವರು ಇವರು ಎನ್ನುವುದು ಸುಳ್ಳು ನನಗೆ ನಾನೇ ಎನ್ನುವುದು ನಿಜದ ಸೊಲ್ಲು’ಎನ್ನುವುದು ವಾಸ್ತವ.ಈ ನಿಟ್ಟಿನಲ್ಲಿ ಗುರು ಶಿಷ್ಯ ಪಟ್ಟಗಳನ್ನು ಬಿಟ್ಟು ನಮಗೆ ನಾವೆ ಬೆಳಕಾಗಬೇಕು.ಸ್ಫೂರ್ತಿಯ ಸೆಲೆಯಾಗಬೇಕು, ಪ್ರೇರಣೆಯ ಆಲೆಯಾಗಬೇಕು.ಈ ಶಕ್ತಿ ಈ ಸಕಾರಾತ್ಮಕ ದೃಷ್ಟಿಯಿಂದಲೇ ಜೀವನ ಸಾರ್ಥಕವಾಗುವುದಲ್ಲವೆ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!