Saturday, December 4, 2021
spot_img
Homeಅಂಕಣಮಿತಿಮೀರಿದ ಬಡ್ಡಿ ವಿಧಿಸುವಿಕೆಯನ್ನು ನಿಷೇಧಿಸುವ ಕರ್ನಾಟಕ ಕಾಯ್ದೆ 2004 ರ ಕಾನೂನು ಮಾಹಿತಿ

ಮಿತಿಮೀರಿದ ಬಡ್ಡಿ ವಿಧಿಸುವಿಕೆಯನ್ನು ನಿಷೇಧಿಸುವ ಕರ್ನಾಟಕ ಕಾಯ್ದೆ 2004 ರ ಕಾನೂನು ಮಾಹಿತಿ

  1. ಸಾಲ ನೀಡುವ ಅಥವಾ ಸಾಲ ಪಡಕೊಳ್ಳುವ ವ್ಯವಹಾರವು ವಾಣಿಜ್ಯ ಕ್ಷೇತ್ರದ ಒಂದು ಬಹಳ ಪ್ರಮುಖವಾದ ಅಂಗ. ಸಾಲ ನೀಡುವ ವ್ಯಕ್ತಿ ಸಾಲ ಪಡಕೊಂಡವನಿಂದ ನಿರ್ದಿಷ್ಟ ಮತ್ತು ಸಮಂಜಸವಾದ ದರದ ಬಡ್ಡಿ ವಿಧಿಸಿ ವಸೂಲು ಮಾಡುವ ಕ್ರಮವು ಕಾನೂನು, ನೀತಿ ಮತ್ತು ಮಾನವೀಯತೆಯ ದೃಷ್ಟಿಯಿಂದ ನ್ಯಾಯೋಚಿತವಾಗಿರುತ್ತದೆ. ಆದರೆ ನೀಡಿರುವ ಸಾಲದ ಮೇಲೆ ಬೇಕಾಬಿಟ್ಟಿಯಾಗಿ ಮಿತಿಮೀರಿದ ಬಡ್ಡಿ ವಿಧಿಸಿ ಸಾಲವನ್ನು ಕಾನೂನು ಬಾಹಿರವಾಗಿ ವಸೂಲು ಮಾಡುವ ಕ್ರಮವು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಕಾರಣ ಸಮಾಜದ ಎಲ್ಲಾ ವರ್ಗದ ವ್ಯಕ್ತಿಗಳು ಕೆಲವು ಸಂದರ್ಭಗಳಲ್ಲಿ ಅನಿವಾರ್ಯವಾಗಿ ಮಿತಿಮೀರಿದ ಬಡ್ಡಿ ವಿಧಿಸುವವರಿಂದ ಸಾಲ ಪಡೆದು ಮತ್ತು ಈ ಸಂದರ್ಭದಲ್ಲಿ ಸಹಿ ಮಾಡಿದ ಖಾಲಿ ಚೆಕ್‍ಗಳನ್ನು ಅಥವಾ ತಮ್ಮ ಜಮೀನಿಗೆ ಅಥವಾ ಸ್ವತ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಾಲ ನೀಡುವವರಿಗೆ ನೀಡಿ ಆ ನಂತರ ಬಹಳ ಕಷ್ಟವನ್ನು ಅನುಭವಿಸುವ ಮತ್ತು ತಮ್ಮ ಮನೆ ಮಠಗಳನ್ನು ಮತ್ತು ಸಮಾಜದಿಂದ ಹೊಂದಿರುವ ಗೌರವ, ಮರ್ಯಾದೆಯನ್ನು ಕಳಕೊಂಡು ಶೋಷಣೆಗೆ ಒಳಗಾಗಿರುವ ಅನೇಕ ಪ್ರಸಂಗಗಳನ್ನು ನಾವು ನೋಡಿರಬಹುದು. ಈ ರೀತಿಯ ಶೋಷಣೆಯಿಂದ ಮುಗ್ಧ ಜನರನ್ನು ರಕ್ಷಿಸುವ ಉದ್ದೇಶದಿಂದ ಮಿತಿಮೀರಿದ ಬಡ್ಡಿಯನ್ನು ವಿಧಿಸುವವರಿಗೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಮಿತಿಮೀರಿದ ಬಡ್ಡಿ ವಿಧಿಸುವಿಕೆಯನ್ನು ನಿಷೇಧಿಸುವ ಕರ್ನಾಟಕ ಕಾಯ್ದೆ 2004 ರ ಕಾಯ್ದೆಯನ್ನು ದಿನಾಂಕ 05.09.2003 ರಿಂದ ಪೂರ್ವಾನ್ವಯವಾಗುವಂತೆ 2004ರಲ್ಲಿ ಜಾರಿಗೆ ತರಲಾಗಿದೆ.
  2. ಮಿತಿಮೀರಿದ ಬಡ್ಡಿಯೆಂದರೆ ಕರ್ನಾಟಕ ಲೇವಾದೇವಿ ಅಧಿನಿಯಯದ ಕಲಂ 28ರ ಕೆಳಗೆ ರಾಜ್ಯ ಸರ್ಕಾರವು ನಿಗದಿಪಡಿಸಿದ ಬಡ್ಡಿ ದರಕ್ಕಿಂತ ಹೆಚ್ಚಾಗಿರುವ ಬಡ್ಡಿ ಎಂದು ಅರ್ಥ.
  3. ಮೇಲೆ ಹೇಳಿದಂತೆ ಸರ್ಕಾರ ನಿಗದಿಪಡಿಸಿದ ಬಡ್ಡಿಯ ದರಕ್ಕಿಂತ ಹೆಚ್ಚಿನ ಬಡ್ಡಿಯನ್ನು ವಸೂಲು ಮಾಡುವ ಯಾವುದೇ ವ್ಯಕ್ತಿ ಈ ಕಾಯ್ದೆಯ ಕಲಂ 3ರ ಪ್ರಕಾರ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮಾತ್ರವಲ್ಲದೆ ಈ ರೀತಿಯ ಸಾಲ ಅಥವಾ ಅದರ ಮೇಲಿನ ಬಡ್ಡಿಯನ್ನು ವಸೂಲು ಮಾಡುವ ಸಲುವಾಗಿ ಸಾಲ ಪಡೆದಾತನಿಗೆ ಅಥವಾ ಆತನ ಮನೆಯವರಿಗೆ ಬೆದರಿಕೆ ಒಡ್ಡಿದರೆ, ಹಲ್ಲೆ ನಡೆಸಿದರೆ ಅಥವಾ ಯಾವುದೇ ರೀತಿಯ ಕಾನೂನು ಬಾಹಿರವಾದ ಕ್ರಮಕೈಗೊಂಡಲ್ಲಿ ಅಂತಹ ವ್ಯಕ್ತಿಯ ವಿರುದ್ಧ ಸಾಲ ಪಡೆದಾತ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದೆ. ಮೇಲ್ಕಾಣಿಸಿದ ಕಾನೂನನ್ನು ಉಲ್ಲಂಘಿಸಿ ಸಾಲ ಪಡಕೊಂಡ ವ್ಯಕ್ತಿಯನ್ನು ಪೀಡಿಸಿದರೆ ಅಥವಾ ತೊಂದರೆ ನೀಡಿದರೆ ಅಥವಾ ಈ ಕುರಿತು ದುಷ್ಪ್ರೇರಣೆ ನೀಡಿದರೆ ಅಂತಹ ವ್ಯಕ್ತಿಗೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ಮತ್ತು 30,000/- ದಂಡ ವಿಧಿಸಲು ಅವಕಾಶವಿದೆ.
  4. ಮೇಲ್ಕಾಣಿಸಿದ ಕಾನೂನಿನ ಪ್ರಕಾರ ಸಾಲ ಪಡೆದಾತ ತಾನು ಪಡಕೊಂಡ ಸಾಲದ ಮೊಬಲಗನ್ನು ಅಥವಾ ಬಾಕಿ ಉಳಿದಿರುವ ಅದರ ಅಂಶವನ್ನು ಮೇಲ್ಕಾಣಿಸಿದಂತೆ ರಾಜ್ಯ ಸರ್ಕಾರ ನಿಗದಿಪಡಿಸಿದ ಬಡ್ಡಿಯನ್ನು ಲೆಕ್ಕ ಹಾಕಿ ಅಧಿಕಾರವ್ಯಾಪ್ತಿ ಹೊಂದಿದ ನ್ಯಾಯಾಲಯದಲ್ಲಿ ಅರ್ಜಿ ಜೊತೆಗೆ ಸಂದಾಯ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ರೀತಿ ಆತನು ಅರ್ಜಿಯ ಜೊತೆ ತನ್ನಿಂದ ಬಾಕಿ ಇರುವ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಟ್ಟಾಗ ಸಾಲ ಕೊಟ್ಟವನಿಗೆ ಅಥವಾ ಸಂಬಂಧಿಸಿದ ವ್ಯಕ್ತಿಗೆ ಅರ್ಜಿಯ ಒಂದು ಪ್ರತಿಯನ್ನು ನ್ಯಾಯಾಲಯ ಕಳಿಸುವುದಲ್ಲದೆ 15 ದಿನಗಳೊಳಗಾಗಿ ಇಲ್ಲವೇ ನ್ಯಾಯಾಲಯ ನಿಗದಿಪಡಿಸಿದ ಅವಧಿಯೊಳಗಾಗಿ ತನ್ನ ಲಿಖಿತ ಹೇಳಿಕೆ ಸಲ್ಲಿಸಲು
    ನ್ಯಾಯಾಲಯ ನಿರ್ದೇಶಿಸುತ್ತದೆ. ಅದರ ನಂತರ ನ್ಯಾಯಾಲಯವು ಸೂಕ್ತ ವಿಚಾರಣೆ ನಡೆಸಿ ಉಭಯ ಪಕ್ಷಕಾರರ ಅಹವಾಲನ್ನು ಆಲಿಸಿ ಮತ್ತು ಪರಿಶೀಲಿಸಿ ಸೂಕ್ತ ಆಜ್ಞೆ ಮಾಡುವ ಅಧಿಕಾರವನ್ನು ನ್ಯಾಯಾಲಯ ಹೊಂದಿರುತ್ತದೆ.
  5. ಸಾಲ ಪಡಕೊಂಡವನು ಈ ಮೇಲ್ಕಾಣಿಸಿದಂತೆ ಅರ್ಜಿ ಸಲ್ಲಿಸಿದಾಗ, ಆತನಿಗೆ ಈ ಹಿಂದೆ ನೀಡಲಾಗಿದ್ದ ಸಾಲ ಅಥವಾ ಅದರ ಮೇಲಿನ ಬಡ್ಡಿ ಹಣದ ಮರುಪಾವತಿಗಾಗಿ ಅಥವಾ ಭದ್ರತೆಗಾಗಿ ಒತ್ತಾಯದಿಂದ ಅಥವಾ ಬಲತ್ಕಾರದಿಂದ ಆತನ ಚರ ಅಥವಾ ಸ್ಥಿರ ಸ್ವತ್ತನ್ನು ಅಥವಾ ಆಸ್ತಿಯನ್ನು ಸಾಲ ನೀಡಿರುವ ವ್ಯಕ್ತಿ ಈ ಮೊದಲೇ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದ್ದರೆ ನ್ಯಾಯಾಲಯವು ಅಂತಹ ಸ್ವತ್ತಿನ ಅಥವಾ ಆಸ್ತಿಯ ಸ್ವಾಧೀನವನ್ನು ಸಾಲ ಪಡಕೊಂಡಾತನಿಗೆ ವಾಪಸ್ಸು ಕೊಡಿಸುವ ಬಗ್ಗೆ ಸೂಕ್ತ ಆದೇಶ ನೀಡುವ ಅಧಿಕಾರ ಹೊಂದಿರುತ್ತದೆ.
  6. ಸಾಲ ಪಡಕೊಂಡ ವ್ಯಕ್ತಿಯು ತಾನು ಪಡಕೊಂಡ ಸಾಲ ಮತ್ತು ಅದರ ಮೇಲಿನ ಬಡ್ಡಿಯನ್ನು ತೀರಿಸುವುದಕ್ಕಾಗಿ ಅರ್ಜಿ ಸಲ್ಲಿಸಿದಾಗ, ಒಂದು ವೇಳೆ ಆತ ಈ ಹಿಂದೆ ನಿಗದಿತ ಬಡ್ಡಿಗಿಂತ ಹೆಚ್ಚಿನ ಬಡ್ಡಿ ಹಣವನ್ನು ಸಾಲ ನೀಡಿದವನಿಗೆ ಪಾವತಿಸಿದ್ದರೆ ಅದನ್ನು ಸಾಲದ ಹಣಕ್ಕೆ ಹೊಂದಿಸಿ ವಜಾವಟ್ಟು ಮಾಡುವ ಕುರಿತು ನ್ಯಾಯಾಲಯವು ಆದೇಶ ಮಾಡಬಹುದಾಗಿದೆ.
  7. ಸಾಲ ಪಡಕೊಂಡ ವ್ಯಕ್ತಿ ಅಥವಾ ಆತನ ಕುಟುಂಬದ ಯಾವುದೇ ಸದಸ್ಯ ಸಾಲ ನೀಡಿದವನಿಂದ ಅಥವಾ ಆತನ ಜನರಿಂದ ಸಾಲ ವಸೂಲಾತಿ ಬಗ್ಗೆ ಬೆದರಿಕೆ, ಒತ್ತಾಯ, ಶೋಷಣೆ ಅಥವಾ ತೊಂದರೆಗಳಿಂದ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಇವೆಲ್ಲಕ್ಕೂ ಸಾಲ ನೀಡಿದ ವ್ಯಕ್ತಿಯೇ ಜವಾಬ್ದಾರಿಯಾಗುತ್ತಾನೆ ಮತ್ತು ಇಂತಹ ಸಂದರ್ಭದಲ್ಲಿ ಸಾಲ ಪಡಕೊಂಡವನ ಆತ್ಮಹತ್ಯೆಗೆ ತಾನು ಕಾರಣವಲ್ಲ ಎಂಬುದನ್ನು ಸಾಬೀತು ಪಡಿಸುವ ಸಂಪೂರ್ಣ ಜವಾಬ್ದಾರಿ ಮತ್ತು ಹೊಣೆಯು ಸಾಲ ಕೊಟ್ಟವನ ಮೇಲೆ ಇರುತ್ತದೆ.
ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!