Sunday, January 16, 2022
spot_img
Homeಅಂಕಣಕರ್ಮಯೋಗಿ ಮುದ್ರಾಡಿ ಮೋಹನ್‌ ಸ್ವಾಮೀಜಿ ಇನ್ನು ನೆನಪು ಮಾತ್ರ…

ಕರ್ಮಯೋಗಿ ಮುದ್ರಾಡಿ ಮೋಹನ್‌ ಸ್ವಾಮೀಜಿ ಇನ್ನು ನೆನಪು ಮಾತ್ರ…

ದೈವ ಭಕ್ತ, ಮುದ್ರಾಡಿ ಆದಿಶಕ್ತಿ ಮತ್ತು ನಂದೀಕೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ, ಕರ್ಮಯೋಗಿ ಎಂದೇ ಭಕ್ತ ಸಮೂಹದಲ್ಲಿ ಗುರುತಿಸಿಕೊಂಡಿದ್ದ ಮುದ್ರಾಡಿ ಶ್ರೀ ದೇವಿ ನಿಲಯದ ಧರ್ಮಯೋಗಿ ಮೋಹನ್‌ ಸ್ವಾಮೀಜಿ ಬುಧವಾರ ರಾತ್ರಿ ನಿಧನರಾದರು.

ಒಂದು ಕಾಲದಲ್ಲಿ ಹುಲಿ ಚಿರತೆಗಳ ಆವಾಸ ಸ್ಥಾನವಾಗಿದ್ದ ಮುದ್ರಾಡಿಯ ಸಮೀಪದ ಬಚ್ಚಪ್ಪು ರಸ್ತೆಯ ಪಕ್ಕದಲ್ಲಿ ಭಕ್ತಿಯ ವಿಶೇಷ ಪ್ರೇರಣೆಯಿಂದ ದೇವಿಯ ಒಂದು ಪೋಟೊ ಇಟ್ಟು ಆದಿಶಕ್ತಿಯ ಸೇವೆ ಮಾಡುತ್ತ ಬಂದು ಮುದ್ರಾಡಿ ಶ್ರೀದೇವಿ ನಿಲಯದಲ್ಲಿ ತಾಯಿಯನ್ನು ಆರಾಧಿಸಿಕೊಂಡು ಇದೀಗ ನಾಡಿನಲ್ಲಿ ಅಪರೂಪ ಎಂಬಲ್ಲಿ ದೈವದೇವರುಗಳ ವಿಶೇಷ ಕ್ಷೇತ್ರವಾಗಿ ಮುದ್ರಾಡಿ ಆದಿಶಕ್ತಿ ಮತ್ತು ನಂದೀಕೇಶ್ವರ ದೇವಸ್ಥಾನ ಹಾಗೂ ಬ್ರಹ್ಮಬೈದರ್ಕಳ ಗರಡಿಯನ್ನು ಸ್ಥಾಪಿಸಿ ಕ್ಷೇತ್ರವನ್ನು ನಾಡಿನಲ್ಲಿ ಎತ್ತರಕ್ಕೆ ಏರಿಸಿದ್ದಾರೆ.

ಆದಿಶಕ್ತಿ ಸಹಿತ ಕಲಿಯುಗದ ಹಿಂದಿನ ಶಕ್ತಿಕೇಂದ್ರವನ್ನು ಭಗೀರಥ ಪ್ರಯತ್ನದಿಂದ ಪುನರ್‌ನಿರ್ಮಿಸಿದ ಮೋಹನ್‌ ಸ್ವಾಮೀಜಿ ಅವರ ಸಾಧನಾ ಕ್ಷೇತ್ರ, ಸರ್ವಧರ್ಮದ ಭಕ್ತರಿಗೆ ಇಷ್ಟಾರ್ಥಗಳನ್ನು ಕರುಣಿಸುತ್ತಿದೆ. ಮುದ್ರಾಡಿ ಶ್ರೀ ಆದಿಶಕ್ತಿ ದೇವಸ್ಥಾನವು ನಿಸರ್ಗ ರಮಣೀಯ ಪ್ರದೇಶದಲ್ಲಿ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿದ್ದು ಕೆಲಸಗಳು ಭರದಿಂದ ನಡೆಯುತ್ತಿದ್ದು ಬಹುತೇಕ ಕೆಲಸಗಳು ಮುಕ್ತಾಯದ ಹಂತಕ್ಕೆ ಬಂದು ಇದೇ ಆಗಸ್ಟ್‌ ತಿಂಗಳಿನಲ್ಲಿ ಬ್ರಹ್ಮಕಲಶೋತ್ಸವವನ್ನು ನಡೆಸಲು ದಿನವನ್ನೂ ಕೂಡ ನಿಗದಿ ಮಾಡಲಾಗಿತ್ತು. ತಾಯಿಗೆ ಗುಡಿ ಕಟ್ಟಿ ಪೂಜಿಸುತ್ತ ಭವ್ಯ ದೇಗುಲ ನಿರ್ಮಾಣದ ಕನಸು ಹೊತ್ತು ಕನಸು ನನಸಾಗುವ ಆಗುವ ಕೊನೆಯ ಗಳಿಗೆಯಲ್ಲೇ ವೈಭವವನ್ನು ನೋಡುವ ಭಾಗ್ಯ ಅವರಿಗಿಲ್ಲದಾಯಿತು. ಅಪಾರ ದೈವ ಭಕ್ತರಾದ ನೇರ ನಡೆ ನುಡಿಯ ಕರ್ಮಯೋಗಿ ಶ್ರೀ ದೇವಿ ನಿಲಯ ಮೋಹನ್‌ ಪಾತ್ರಿಯವರಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲದೆ ಮುಂಬಯಿ,ಪೂನಾ, ಸಾಂಗ್ಲಿ, ಗುಜರಾತ್‌, ಬೆಂಗಳೂರು, ದುಬೈ, ಮಸ್ಕತ್‌ ಹೈದರಬಾದ್‌ ಸಹಿತ ದೇಶವಿದೇಶಗಳಲ್ಲೂ ಮುದ್ರಾಡಿ ಶ್ರೀಆದಿಶಕ್ತಿ ತಾಯಿ ಮತ್ತು ಮೋಹನ್‌ ಸ್ವಾಮೀಜಿಯ ಭಕ್ತರಿದ್ದಾರೆ. ಹಿಂದೂ ಮುಸ್ಲಿಂ, ಜೈನ, ಕ್ರೈಸ್ತ ಧರ್ಮಗಳ ಭಕ್ತರು ಕೂಡ ಆದಿಶಕ್ತಿಯನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. 40 ವರ್ಷಗಳ ಹಿಂದಯೆ ಶ್ರೀದೇವಿ ನಿಲಯದಲ್ಲಿ ನಮ ತುಳುವೆರ್‌ ಕಲಾ ಸಂಘಟನೆ, ಆಧಿಶಕ್ತಿ ಭಜನ ಸಂಘ, ಯಕ್ಷಗಾನ ಸಂಘ ಸಹಿತ ಕಲೆಗೆ ಸಂಬಂಧಿಸಿದ ಹಲವು ಸಂಘಟನೆಯನ್ನು ಸ್ಥಾಪಿಸಿ ತನ್ನ ಮಕ್ಕಳ ಮೂಲಕ ನಾಡಿಗೆ ನೀಡಿದ್ದಾರೆ. ಈಗ ಹಿರಿಯ ಪುತ್ರ ಸುಕುಮಾರ್‌ ಮೋಹನ್‌ ನೇತ್ರತ್ವದಲ್ಲಿ ಮುದ್ರಾಡಿ ನಮ ತುಳುವೆರ್‌ ಕಲಾ ಸಂಘಟನೆ ವಿಶ್ವದೆತ್ತರಕ್ಕೆ ಏರಿದೆ. ತುಳಕ್ಷೇತ್ರ ಮತ್ತು ಕಲೆಯನ್ನು ಮನಗಂಡು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದಾಗ ಮೋಹನ್‌ ಸ್ವಾಮೀಜಿ ಅತ್ಯಂತ ಸಂತಸಗೊಂಡು ಸಾರ್ಥಕ ಭಾವನೆ ಹೊಂದಿದ್ದರು. ನಾಡಿನ ಬಹುತೇಕ ಮಂದಿ ಮುದ್ರಾಡಿ ಕ್ಷೇತ್ರಕ್ಕೆ ಬಂದಿದ್ದಾರೆ. ರಾಜಕಾರಣಿಗಳು, ಕಲಾ ಆರಾಧಕರು, ಅಧಿಕಾರಿಗಳು, ರಂಗ ಕರ್ಮಿಗಳು ಸಾಹಿತಿಗಳು, ಸ್ವಾಮೀಜಿಗಳು ಆದಿಶಕ್ತಿ ಕ್ಷೇತ್ರಕ್ಕೆ ಆಗಮಿಸಿ ಕಲಾ ಸೇವೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಕಲೆಯ ಸಾಧನೆಯಿಂದಾಗಿ ಮುದ್ರಾಡಿ ಶ್ರೀದೇವಿ ಪರಿಸರ ಈಗ ನಾಟ್ಕದೂರು ಆಗಿದೆ. ಕ್ಷೇತ್ರದ ಮಹಿಮೆ ಶಾಶ್ವತವಾಗಿ ಕಲೆಯ ಮೂಲಕ ವಿಜೃಂಭಿಸಬೇಕು ಎನ್ನುವ ಮಹದಾಸೆಯಿಂದ ” ಮುದ್ರಾಡಿ ಶ್ರೀ ಆದಿಶಕ್ತಿ ಮಹಾತ್ಮೆ” ಯಕ್ಷಗಾನವಾಗಿದೆ. ಅತ್ಯಂತ ಕಡುಬಡತನದ ಕುಟುಂಬದಲ್ಲಿ ಹುಟ್ಟಿ ಶ್ರೀದೇವಿಯ ಆರಾಧನೆಯ ಮೂಲಕ ಕಷ್ಟನಷ್ಟ ಸುಖದು:ಖಗಳ ನೋವುಂಡು ಎತ್ತರಕ್ಕೆ ಏರಿದ ಅವರ ಸಾಧನೆ ಅದ್ಭುತ. ಮೋಹನ್‌ ಪಾತ್ರಿ ಧರ್ಮಪತ್ನಿ
ಕಮಲಾ ಮೋಹನ್‌ ಅಪಾರವಾಗಿ ಪತಿಯ ಸೇವೆಯನ್ನು ಮಾಡಿದ್ದಾರೆ. ವಿಶೇಷ ಧೈವ ಭಕ್ತೆಯಾಗಿ ಮೋಹನ್‌ ಸ್ವಾಮೀಜಿಯ ಹಿಂದೆ ನಿಂತು ಎಲ್ಲವನ್ನು ಮುನ್ನಡೆಸಿದ್ದಾರೆ. ಹಿರಿಯ ಪುತ್ರ ಸುಕುಮಾರ್‌ ಮೋಹನ್‌ ನಾಡಿನ ಖ್ಯಾತ ರಂಗ ನಟ ನಿರ್ದೇಶಕರಾಗಿ ಕಲೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿ ವಿವಿಧ ಸಂಘಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಏಕಮಾತ್ರ ಪುತ್ರಿ ಸುಗಂಧಿ ಉಮೇಶ್‌ ಕಲ್ಮಾಡಿ ರಂಗದ ಅದ್ಭುತ ನಟಿಯಾಗಿದ್ದಾರೆ. ಪುತ್ರರಾದ ಸುಧೀಂದ್ರ ಮೋಹನ್‌, ಸುರೇಂದ್ರ ಮೋಹನ್‌, ಅಳಿಯ ಉಮೇಶ್‌ ಕಲ್ಮಾಡಿ, ಸೊಸೆಯಂದಿರು, ಮೊಮ್ಮಕ್ಕಳು ಕೂಡ ಬಣ್ಣಹಚ್ಚಿ ಕಲಾ ಸೇವೆ ಮಾಡಿದ್ದನ್ನು ಮೋಹನ್‌ ಸ್ವಾಮೀಜಿ ಕಣ್ತುಂಬಿಕೊಂಡು ಧನ್ಯರಾಗಿದ್ದರು. ತನ್ನ ಇಡಿ ಕುಟುಂಬವನ್ನೇ ಕಲೆಯ ಸೇವೆಗೆ ಸಮರ್ಪಿಸಿದ್ದಾರೆ. ನನ್ನದೇನಿಲ್ಲ. ಎಲ್ಲವೂ ಆ ತಾಯಿ. ಕ್ಷೇತ್ರಕ್ಕೆ ಮಹಿಮರಾದ ನೀವೆಲ್ಲ ಬರುತ್ತೀರಿ ಎಂದರೆ ಅದೂ ತಾಯಿಯ ಮಹಿಮೆ. ನಾವು ನೀಡುವ ಆದರ ಆತೀಥ್ಯ ಗೌರವವೂ ತಾಯಿಯ ಪ್ರಸಾದ. ಎಲ್ಲವನ್ನೂ ಆ ತಾಯಿ ನಡೆಸಿಕೊಂಡು ಹೋಗುತ್ತಾಳೆ, ನಾನೂ ಹಾಗೇಯೇ ನಡೆಯುತ್ತೇನೆ ಎಂದು ನುಡಿಯುತ್ತಿದ್ದರು. ಇನ್ನೂ ಮುಂದೆಯು ಎಲ್ಲರನ್ನೂ ಆ ತಾಯಿ ಮುನ್ನಡೆಸಲಿ… ಪೂಜ್ಯರಾದ ಮೋಹನ್‌ ಸ್ವಾಮೀಜಿ ಕಂಡ ಕನಸುಗಳು ನನಸಾಗಲಿ….. “ಎಲ್ಲರೂ ಕೈ ಹಿಡಿದು ಮುನ್ನಡೆಸಿ ತಾಯಿಯ ಕೃಫೆಗೆ ಪಾತ್ರರಾಗಲಿ……. ಅವರ ಪವಿತ್ರ ಆತ್ಮಕ್ಕೆ ತಾಯಿ ಚಿರಶಾಂತಿ ನೀಡಲಿ. “ಅಯ್ಯ” ನಿಲ್ಲದ ದೇವಿ ನಿಲಯದ ಕುಟುಂಬಕ್ಕೆ ಎಲ್ಲವನ್ನೂ ಸಹಿಸುವ ಶಕ್ತಿ ದೊರೆಯಲಿ……..

ಸುಕುಮಾರ್‌ ಮುನಿಯಾಲ್‌

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!