Tuesday, December 7, 2021
spot_img
Homeಅಂಕಣಸ್ಥಿರಾಸ್ತಿ ಖರೀದಿ ಸಂದರ್ಭದಲ್ಲಿ ಅಗತ್ಯವಾಗಿ ವಹಿಸಬೇಕಾದ ಮುಂಜಾಗ್ರತ ಕ್ರಮಗಳು

ಸ್ಥಿರಾಸ್ತಿ ಖರೀದಿ ಸಂದರ್ಭದಲ್ಲಿ ಅಗತ್ಯವಾಗಿ ವಹಿಸಬೇಕಾದ ಮುಂಜಾಗ್ರತ ಕ್ರಮಗಳು

 1. ಕಷ್ಟಪಟ್ಟು ಗಳಿಸಿರುವ ಹಣವನ್ನು ವಿನಿಯೋಗಿಸಿ ಭೂಮಿ ಅಥವಾ ಕಟ್ಟಡ ಖರೀದಿ ಮಾಡುವ ಸಂದರ್ಭದಲ್ಲಿ ಖರೀದಿದಾರನು ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಅನುಸರಿಸುವುದರಿಂದ ಮುಂದಕ್ಕೆ ಮಾರಾಟಗಾರರನ್ನು ಹೊರತು ಪಡಿಸಿ ಇತರ ವ್ಯಕ್ತಿಗಳಿಂದ ಯಾವುದೇ ಕಾನೂನು ಬದ್ಧ ಕ್ಲೈಮ್, ಅಡ್ಡಿ, ಆತಂಕ ಅಥವಾ ಸಮಸ್ಯೆಗಳು ಬಾರದಂತೆ ತಡೆಯಬಹುದು ಮತ್ತು ಅನಾವಶ್ಯಕವಾಗಿ ಸಮಯ, ಹಣ ಮತ್ತು ಮಾನಸಿಕ ನೆಮ್ಮದಿ ಹಾಳಾಗದಂತೆ ಜಾಗೃತಿ ವಹಿಸಬಹುದು.
 2. ನಾವು ಖರೀದಿಸಲು ಉದ್ದೇಶಿಸಿರುವ ಯಾವುದೇ ಕೃಷಿ ಭೂಮಿ, ಮನೆ ನಿವೇಶನ, ಕಟ್ಟಡದ ಕಾನೂನು ಬದ್ಧ ಮಾಲೀಕತ್ವವನ್ನು ದೃಢಪಡಿಸಿಕೊಳ್ಳುವುದು ಮತ್ತು ಈ ಬಗ್ಗೆ ಯಾರಾದರೂ ಸೂಕ್ತ ಕಾನೂನು ತಜ್ಞರಿಂದ ಕಾನೂನು ಅಭಿಪ್ರಾಯವನ್ನು ಲಿಖಿತವಾಗಿ ಪಡಕೊಳ್ಳಬೇಕು. ಇದರಿಂದಾಗಿ ಕಮೀಷನ್ ಆಸೆಗೋಸ್ಕರ ಸುಳ್ಳು ಮಾಹಿತಿ ನೀಡಿ ಸಮಸ್ಯೆ ತಂದೊಡ್ಡುವ ಪ್ರವೃತ್ತಿ ಹೊಂದಿರುವ ಕೆಲವು ಮಧ್ಯವರ್ತಿಗಳಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ನಿವಾರಿಸಬಹುದು.
 3. ನಿವೇಶನವನ್ನು ವಾಸ್ತವ್ಯ, ವಾಣಿಜ್ಯ ಅಥವಾ ಅಪಾರ್ಟ್‍ಮೆಂಟ್ ನಿರ್ಮಿಸುವ ಉದ್ದೇಶಕ್ಕಾಗಿ ಖರೀದಿಸುವ ಸಂದರ್ಭದಲ್ಲಿ ಅವರವರ ಮಕ್ಕಳ ಶಾಲಾ ಕಾಲೇಜಿಗೆ, ಆಸ್ಪತ್ರೆ/ನರ್ಸಿಂಗ್ ಹೋಂ/ದವಾಖಾನೆ ಇವುಗಳಿಗೆ ಹತ್ತಿರ ಇರುವ ನೀರು ಸರಬರಾಜು ಸರಿಯಿರುವ, ಪರಿಸರ ಮಾಲಿನ್ಯ ಅತಿ ಕಡಿಮೆ ಇರುವ ಸ್ಥಳವನ್ನು ಆಯ್ದುಕೊಳ್ಳುವುದು ಸೂಕ್ತ.
 4. ನಿವೇಶನವು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತನೆ ಹೊಂದಿರುವ ಸಂದರ್ಭದಲ್ಲಿ ಈ ಕುರಿತು ಸಂಬಂಧಪಟ್ಟ ನಗರ ಅಥವಾ ಪಟ್ಟಣಾಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಪಡೆದ ಬಡಾವಣೆಯಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
 5. ನಿವೇಶನ ಅಥವಾ ಕಟ್ಟಡವು ಸರ್ಕಾರವು ಯಾವುದಾದರೂ ಸಾರ್ವಜನಿಕ ಉದ್ದೇಶಕ್ಕಾಗಿ ಭೂಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಿರುವ ಭೂಮಿಯ ವ್ಯಾಪ್ತಿಯೊಳಗೆ ಬರುವುದಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
 6. ಖರೀದಿಸಲು ಉದ್ದೇಶಿಸಿರುವ ಸ್ಥಿರಾಸ್ತಿ ಕಟ್ಟಡಕ್ಕೆ ಸಂಬಂಧಿಸಿದಂತೆ ಯಾವುದಾದರೂ ನ್ಯಾಯಾಲಯದಲ್ಲಿ ಅಥವಾ ಪ್ರಾಧಿಕಾರದಲ್ಲಿ ವ್ಯಾಜ್ಯ (ಲಿಟಿಗೇಷನ್) ಇರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಒಳ್ಳೆಯದು.
 7. ಖರೀದಿಸಲು ಉದ್ದೇಶಿಸಿರುವ ಸ್ಥಿರಾಸ್ತಿಯನ್ನು ಅಳತೆ ಮಾಡಿಸಿ ನೋಡಿ ಅದರ ವಿಸ್ತೀರ್ಣವನ್ನು ಖಚಿತಪಡಿಸಿಕೊಳ್ಳುವುದು ಸೂಕ್ತ.
 8. ಖಾಸಗಿ ಬಡಾವಣೆಯಲ್ಲಿ ಸ್ಥಿರಾಸ್ತಿ ಖರೀದಿ ಮಾಡುವುದಿದ್ದರೆ ಅದನ್ನು ಅಭಿವೃದ್ಧಿಪಡಿಸಿದ ವ್ಯಕ್ತಿ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪತ್ರ ಮತ್ತಿತ್ತರ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿದ್ದಾರೆಯೇ ಮತ್ತು ಸರ್ಕಾರ/ಪ್ರಾಧಿಕಾರಗಳಿಗೆ ಸಲ್ಲಬೇಕಾದ ಶುಲ್ಕ ಇತ್ಯಾದಿಗಳನ್ನು ಪಾವತಿಸಿದ್ದಾರೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು.
 9. ಒಂದು ವೇಳೆ ಸ್ಥಿರಾಸ್ತಿಯನ್ನು ಅದರ ಮಾಲೀಕರ ಪರವಾಗಿ ಅವರ ಪವರ್ ಆಫ್ ಅಟಾರ್ನಿ ಹೋಲ್ಡರ್ ಮೂಲಕ ಖರೀದಿಸುವ ಸಂದರ್ಭದಲ್ಲಿ ಮಾರಾಟಗಾರ/ಜಿ.ಪಿ.ಎ. ಹೋಲ್ಡರ್ ಹೊಂದಿರುವ ಪವರ್ ಆಫ್ ಅಟಾರ್ನಿಯ ನೈಜತೆ ಮತ್ತು ಊರ್ಜಿತವನ್ನು ದೃಢಪಡಿಸಿಕೊಳ್ಳಬೇಕು. ಕಾರಣ ಕೆಲವು ಸಂದರ್ಭದಲ್ಲಿ ಭೂಮಾಲೀಕನ ಮತ್ತು ಪವರ್ ಆಫ್ ಅಟಾರ್ನಿ ಹೋಲ್ಡರ್‍ನ ನಡುವಿನ ಸಂಘರ್ಷದಿಂದ ಪವರ್ ಆಫ್ ಅಟಾರ್ನಿ ರದ್ದಾಗಿರುವ ಸಾಧ್ಯತೆಗಳು ಇರುತ್ತದೆ. ಈ ವಿಷಯವು ಖರೀದಿದಾರನ ಗಮನಕ್ಕೆ ಬಾರದೆ ಇದ್ದಲ್ಲಿ ಖರೀದಿದಾರ ಮುಂದಕ್ಕೆ ಸಮಸ್ಯೆಗೀಡಾಗುವ ಸಂದರ್ಭ ಇರುತ್ತದೆ. ಆದುದರಿಂದ ಆಸ್ತಿ ಖರೀದಿಗಿಂತ ಮುಂಚೆ ಖರೀದಿದಾರ ಆಸ್ತಿ ಖರೀದಿಯ ವ್ಯವಹಾರದ ವಿಷಯವನ್ನು ಲಿಖಿತವಾಗಿ ಸಂಬಂಧಪಟ್ಟ ಮಾಲೀಕನಿಗೆ ತಿಳಿಸುವುದರಿಂದ ಮುಂದಕ್ಕೆ ಮಾಲೀಕನ ಅಥವಾ ಆತನ ಪ್ರತಿನಿಧಿಗಳಿಂದ ಯಾವುದೇ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಬಹುದು.
 10. ಆಸ್ತಿಯ ಮೂಲಪತ್ರ (ಪೇರೆಂಟ್ ಡೀಡ್) ಇದು ಆಸ್ತಿ ಖರೀದಿಗೆ ಬಹಳ ಮುಖ್ಯವಾದ ದಾಖಲೆ. ಖರೀದಿಸಲು ಉದ್ದೇಶಿಸಿರುವ ಸ್ಥಿರಾಸ್ತಿ ಅಥವಾ ಕಟ್ಟಡ ಹಿಂದೊಮ್ಮೆ ದೊಡ್ಡ ಆಸ್ತಿಯ ಭಾಗವಾಗಿದ್ದರೆ ಅದು ಈಗಿನ ಮಾಲೀಕರಿಗೆ ಯಾವಾಗ ಮತ್ತು ಹೇಗೆ ಬಂದಿತು ಮತ್ತು ಸದರಿ ಆಸ್ತಿ ಅಥವಾ ಕಟ್ಟಡದ ಮೇಲೆ ಯಾರೆಲ್ಲ ವ್ಯಕ್ತಿಗಳಿಗೆ ಯಾವ ರೀತಿಯ ಹಕ್ಕು ಅಥವಾ ಹಿತಾಸಕ್ತಿ ಇದೆ ಎಂಬ ವಿಚಾರವನ್ನು ಆಸ್ತಿಯ ಮೂಲಪತ್ರದಿಂದ ಪರಿಶೀಲಿಸಿಕೊಳ್ಳಬಹುದು. ಹಾಗೇಯೇ ಸದರಿ ಆಸ್ತಿಯು ವರ್ಗಾವಣೆ ಮಾಡಲಿಚ್ಚಿಸುವ ವ್ಯಕ್ತಿಯ ಸ್ವಯಾರ್ಜಿತವೇ, ಪಿತ್ರಾರ್ಜಿತವೇ ಅದರ ಮೇಲೆ ಆತನ ಸಂಪೂರ್ಣ ಒಡೆತನ ಇದೆಯೇ ಇಲ್ಲವೆ, ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಅದು ಸೇರಿದಾದ್ದಲ್ಲಿ ಪರಭಾರೆ ನಿಷೇಧಿಸಿರುವ ಜಮೀನಾಗಿದ್ದರೆ ಅದನ್ನು ಕೂಡಾ ಪರಿಶೀಲಿಸಬಹುದು. ಆರ್.ಟಿ.ಸಿ. ಕೇವಲ ಕಂದಾಯ ದಾಖಲೆಯಾಗಿರುತ್ತದೆ ಹೊರತು ಆರ್.ಟಿ.ಸಿ ಯಿಂದ ಯಾವುದೇ ಆಸ್ತಿಯ ಮಾಲೀಕತ್ವವನ್ನು ಖಾತರಿಪಡಿಸಿಕೊಳ್ಳಲು ಆಗುವುದಿಲ್ಲ.
 11. ಆಸ್ತಿ ಅಥವಾ ಕಟ್ಟಡಕ್ಕೆ ಸಂಬಂಧಪಟ್ಟ ಪಂಚಾಯಿತಿ / ನಗರ ಸಭೆ / ಕಾರ್ಪೋರೇಷನ್ ಅಧಿಕಾರಿಗಳು ನೀಡಿದ ಖಾತಾ ಪತ್ರದ ನೈಜತೆಯನ್ನು ಸರಿಯಾಗಿ ಪರೀಕ್ಷಿಸಿ ತಿಳಿದುಕೊಳ್ಳುವುದು ಸೂಕ್ತ.
 12. ಖರೀದಿಸಲು ಉದ್ದೇಶಿಸಿರುವ ಆಸ್ತಿ ಅಥವಾ ಕಟ್ಟಡಕ್ಕೆ ಸಂಬಂಧಪಟ್ಟಂತೆ ಋಣಭಾರ ರಾಹಿತ್ಯ ಪತ್ರ (ನಿಲ್ ಎನ್‍ಕಂಬರೆನ್ಸ್ ಪ್ರಮಾಣ ಪತ್ರ) ವನ್ನು ಸಂಬಂಧಪಟ್ಟ ಉಪನೋಂದಣಾಧಿಕಾರಿಗಳ ಕಛೇರಿಯಿಂದ ಪಡೆಯಬಹುದಾಗಿದ್ದು ಇದರಿಂದ ಸಂಬಂಧಪಟ್ಟ ಸ್ಥಿರಾಸ್ತಿಯ ಮಾಲೀಕನ ಹಕ್ಕುಗಳ ಮತ್ತು ಸದರಿ ಆಸ್ತಿ ಅಥವಾ ಕಟ್ಟಡದ ಮೇಲೆ ಇರಬಹುದಾದ ಯಾವುದೇ ಸಾಲ ಜವಾಬ್ದಾರಿಗಳನ್ನು ಖಚಿತ ಪಡಿಸಿಕೊಳ್ಳಬಹುದು.
 13. ಭೂಮಿಯು ಯಾವುದೇ ವಾಸ್ತವ್ಯ, ವಸತಿ ಅಥವಾ ವಾಣಿಜ್ಯ ಉದ್ದೇಶಕ್ಕಾಗ್ಕಿ ಪರಿವರ್ತಿತಗೊಂಡಿದ್ದರೆ ಈ ಸಂಬಂಧ ಕಂದಾಯ ಇಲಾಖೆಯವರು ನೀಡಿರುವ ಕನ್ವರ್ಷನ್ ಸರ್ಟಿಫಿಕೇಟ್‍ನ ಮತ್ತು ನಕ್ಷೆಯ ನೈಜತೆಯನ್ನು ದೃಢಪಡಿಸಿಕೊಳ್ಳುವುದು ಸೂಕ್ತ.
 14. ನಿವೇಶನವನ್ನು ಅಭಿವೃದ್ಧಿಪಡಿಸಿದ ಭೂಮಿಯು ಲೇಔಟ್‍ನ ಒಂದು ಭಾಗವಾಗಿದ್ದರೆ ಸೂಕ್ತ ಪ್ರಾಧಿಕಾರದಿಂದ ಪಡೆದಿರುವ ಅನುಮತಿ ಪತ್ರದ ನೈಜತೆಯನ್ನು ಪರಿಶೀಲಿಸಿಸಬೇಕು.
 15. ನಿರ್ಮಾಣಗೊಂಡಿರುವ ಮನೆ ಅಥವಾ ಕಟ್ಟಡವನ್ನು ಖರೀದಿಸುವ ಸಂದರ್ಭದಲ್ಲಿ ಆ ಕಟ್ಟಡಕ್ಕೆ ಸಂಬಂಧಪಟ್ಟ ಪ್ರಾಧಿಕಾರದ ಅನುಮೋದನೆ ಪತ್ರ, ನೀಲಿನಕಾಶೆ, ಕಟ್ಟಡ ಲೈಸೆನ್ಸ್, ಮನೆ ತೆರಿಗೆ ರಶೀದಿ, ವಿದ್ಯುಚ್ಛಕ್ತಿ ಬಿಲ್ ಇತ್ಯಾದಿ ದಾಖಲೆಗಳನ್ನು ಪರಿಶೀಲಿಸಬೇಕು ಮತ್ತು ಆ ಕಟ್ಟಡವನ್ನು ನಿರ್ಮಿಸುವ ಉದ್ದೇಶಕ್ಕಾಗಿ ಸರಕಾರ ಅಥವಾ ಯಾವುದಾದರೂ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಸಾಲವನ್ನು ಪಡೆಯಲಾಗಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಬೇಕು.
ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!