Saturday, July 24, 2021
spot_img
Homeಸ್ಥಳೀಯ ಸುದ್ದಿಆರೋಪ ಸಾಬೀತಾದರೆ ಗಲ್ಲಿಗೇರಲು ಸಿದ್ಧ: ನಕಲಿ ಎಫ್‌ಬಿ ಅಕೌಂಟ್‌ ಕುರಿತು ತನಿಖೆ ಏಕಿಲ್ಲ ? ಪ್ರಶ್ನಿಸಿದ...

ಆರೋಪ ಸಾಬೀತಾದರೆ ಗಲ್ಲಿಗೇರಲು ಸಿದ್ಧ: ನಕಲಿ ಎಫ್‌ಬಿ ಅಕೌಂಟ್‌ ಕುರಿತು ತನಿಖೆ ಏಕಿಲ್ಲ ? ಪ್ರಶ್ನಿಸಿದ ರಾಧಾಕೃಷ್ಣ ನಾಯಕ್‌

ಕಾರ್ಕಳ : ತನಿಖೆಯ ನೆಪದಲ್ಲಿ ಕಾರ್ಕಳ ಪೊಲೀಸ್ ಅಧಿಕಾರಿ ಮಧು ಅವರು ತನ್ನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿರುತ್ತಾರೆ. ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ನಾನು ಮತ್ತು ನನ್ನ ಕುಟುಂಬ ಬದುಕಿನುದ್ದಕ್ಕೂ ದೇಶ, ದೇಶದ ಸಂವಿಧಾನ, ದೇಶದ ಸೈನಿಕರ ಬಗ್ಗೆ ಅಪಾರ ಭಕ್ತಿ ‌ಮತ್ತು ಗೌರವ ಹೊಂದಿದವರು. ದೇಶ ಪ್ರೇಮ ನನ್ನ ರಕ್ತದ ಪ್ರತಿ ಕಣ ಕಣದಲ್ಲೂ ಇದೆ. ನನಗೆ ಯಾವ ವ್ಯಕ್ತಿಯಿಂದಲೂ ದೇಶ ಪ್ರೇಮದ ಪಾಠ ಅಗತ್ಯವಿರುವುದಿಲ್ಲ ಎಂದು ರಾಧಾಕೃಷ್ಣ ನಾಯಕ್‌ ಹೇಳಿದರು.
ಕಾರ್ಕಳದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಆಯೋಜಿಸಿದ ರಾಧಾಕೃಷ್ಣ ನಾಯಕ್‌ ಯಾರೋ ಕಿಡಿಗೇಡಿಗಳು ನನ್ನ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಸೈನಿಕರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿರುತ್ತಾರೆ. ಈ ಬಗ್ಗೆ ನಾನೇ ಬೆಂಗಳೂರಿನ ಉತ್ತರ ಗಂಗಮ್ಮನ ಗುಡಿ ಸೈಬರ್ ಠಾಣೆಯಲ್ಲಿ 26-8-2020 ದೂರು ದಾಖಲಿಸಿ ತನಿಖೆ ನಡೆಸುವಂತೆ ಮನವಿ ಸಲ್ಲಿಸಿರುತ್ತೇನೆ. ನೀವು ನೀಡಿದ ದೂರು ಸರಿಯಾಗಿಲ್ಲ ಮತ್ತೊಮ್ಮೆ ದೂರು ನೀಡಿ ಎಂದು ಅದೇ‌ ಠಾಣೆಯಿಂದ ಕರೆ ಬಂದ ಹಿನ್ನೆಲೆಯಲ್ಲಿ 04-09-2020 ರಂದು ಮತ್ತೊಮ್ಮೆ ದೂರು ಸಲ್ಲಿಸಿದ್ದೆ. ಈ ಮಧ್ಯೆ ನಾನು ಕೆಲಸ ಮಾಡುತ್ತಿದ್ದ ಬೇಕರಿ ಮಾಲೀಕರಿಗೂ ನಕಲಿ ಖಾತೆ ಸೃಷ್ಟಿಸಿದ ಕಿಡಿಗೇಡಿಗಳು ಕರೆ ಮಾಡಿ ನನ್ನ ಬಗ್ಗೆ ಬೇಡದ ವಿಚಾರ ತಿಳಿಸಿ, ಕೆಲಸದಿಂದ ತೆಗೆಸುವಲ್ಲಿ ಯಶಸ್ವಿಯಾಗಿರುತ್ತಾರೆ. ಇದರಿಂದ ಮನನೊಂದ ನಾನು ಕಾರ್ಕಳಕ್ಕೆ ಬಂದು ಟೆಂಪೋ ಚಲಾಯಿಸಿಕೊಂಡು ಕುಟುಂಬದ ನಿರ್ವಹಣೆ ಮಾಡುತ್ತಿದ್ದೆ ಎಂದವರು ತಿಳಿಸಿದರು.
04-04-2021 ರಂದು‌ ಎರಡನೇ ಬಾರಿ ಹೃದಯಾಘಾತವಾದ ಕಾರಣ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೃದಯದಲ್ಲಿ ಸ್ಟಂಟ್ ಅಳವಡಿಸಿಲಾಗಿತ್ತು. ಎಪ್ರಿಲ್ 23‌ ರಂದು ಕಾರ್ಕಳ ನಗರ ಪೊಲೀಸ್ ಠಾಣೆಯಿಂದ ಠಾಣೆಗೆ ಹಾಜರಾಗುವಂತೆ ನೋಟೀಸ್ ಬಂದಿದ್ದು‌, ಅದರಂತೆ ಹಾಜರಾಗಿದ್ದೆ. ಠಾಣಾಧಿಕಾರಿ ಮಧು ಅವರು ಇಲ್ಲದಿದ್ದ ಕಾರಣ ಪೊಲೀಸರು ನನ್ನ ಹೇಳಿಕೆ ಪಡೆದು ಕಳುಹಿಸಿ, ಠಾಣಾಧಿಕಾರಿ ಬಂದ ಅನಂತರ ಬರುವಂತೆ ಕಳುಹಿಸಿರುತ್ತಾರೆ. ಅನಂತರ ಈ ಕಾರಣಕ್ಕಾಗಿ ಎರಡು ಬಾರಿ ಹೋದರೂ ಅವರು ಸಿಗದ ಕಾರಣ ವಾಪಾಸು ‌ಬಂದಿರುತ್ತೇನೆ‌. ಈ ಎಲ್ಲಾ ಸಂದರ್ಭದಲ್ಲಿಯೂ ಠಾಣೆಯಲ್ಲಿ ಸಂದರ್ಶಕರ ಪುಸ್ತಕಕ್ಕೆ ಸಹಿ ಹಾಕಿರುವುದು ದಾಖಲಾಗಿದೆ. 9-7-2021ರಂದು 4ನೇ ಬಾರಿ ಠಾಣೆಗೆ ಬಂದಿದ್ದು ಅಂದು ತನಿಖೆ ನಡೆಸುವ ಸಂದರ್ಭ ಬೆಂಗಳೂರಿನಲ್ಲಿ ದೂರು ನೀಡಿದ ಬಗ್ಗೆ ದಾಖಲೆ ನೀಡುವಂತೆ ಕೇಳಿದಾಗ ಲಾಕ್ಡೌನ್ ಕಾರಣ ಅಲ್ಲಿ ಹೋಗಿ ತರಲು ಸಾಧ್ಯವಾಗಿಲ್ಲ. ಈ ವೇಳೆ ಪೊಲೀಸರು ಯಾವುದೇ ತನಿಖೆ ನಡೆಸದೆ ನನ್ನ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿರುತ್ತಾರೆ. ಬಳಿಕ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮನೆಗೆ ಕಳುಹಿಸಿರುತ್ತಾರೆ. ಹಲ್ಲೆಗೊಳಗಾಗಿ ಆಘಾತಕ್ಕೊಳಗಾದ ನಿಟ್ಟಿನಲ್ಲಿ ಸಂಬಂಧಿಕರು ಮತ್ತು ಮಿತ್ರರು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂದವರು ತಿಳಿಸಿದರು.

ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ
ನನ್ನ ಮೇಲೆ ರಾಜ್ಯದ ಯಾವುದೇ ಠಾಣೆಯಲ್ಲಿ ದೇಶ ದ್ರೋಹದ ಕೇಸು ದಾಖಲಾಗದಿದ್ದರೂ ಶಾಸಕ ಸುನಿಲ್ ಕುಮಾರ್ ಮತ್ತು ಬಿಜೆಪಿ ಪದಾಧಿಕಾರಿಗಳು ನನ್ನನ್ನು ದೇಶದ್ರೋಹಿ ಎಂದು ಹೇಳಿಕೆ ನೀಡಿ ಮಾನಹಾನಿ ಮಾಡಿದ ಬಗ್ಗೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ.‌ ರಾಜ್ಯದಲ್ಲಿ ತನ್ನದೇ ಸರಕಾರ ಇರುವುದರಿಂದ ಶಾಸಕರು ನನ್ನ ಮೇಲೆ ಮಾಡಿದ ಗಂಭೀರ ಆರೋಪವನ್ನು ಸಾಬೀತು ಪಡಿಸಿದರೆ ನಾನು ಗಲ್ಲಿಗೇರಲು ಸಿದ್ಧ. ಇಲ್ಲವಾದಲ್ಲಿ ಅವಮಾನಕ್ಕೊಳಗಾದ ನಾನು ಅವರ ಮನೆ ಮುಂದೆ ಆತ್ಮಹತ್ಯೆ ಮಾಡುತ್ತೇನೆ. ಒಬ್ಬ ಜವಾಬ್ದಾರಿಯುತ ಶಾಸಕನಾಗಿ ರಾಜಧರ್ಮವನ್ನು ಮರೆತು ನನ್ನ ಹೆಸರಿನ ನಕಲಿ ಫೆಸ್ ಬುಕ್ ಖಾತೆಯ ಬಗ್ಗೆ ತನಿಖೆ‌ ನಡೆಸದೇ ಯಾರೋ ಕಿಡಿಗೇಡಿಗಳು ಸೃಷ್ಟಿಸಿದ ಸುಳ್ಳು ಸುದ್ದಿಗಳನ್ನು ನಂಬಿ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ದೇಶದ್ರೋಹಿ ಪಟ್ಟ ಕಟ್ಟಿರುವುದು ನನ್ನ ಕುಟುಂಬ ಹಾಗೂ ನಮ್ಮ ಸಮಾಜಕ್ಕೆ ಮಾಡಿರುವ ಘೋರ ಅನ್ಯಾಯವಾಗಿದೆ. ಇದರಿಂದಾಗಿ ಸಮಾಜದಲ್ಲಿ ನನ್ನ ಇಡೀ ಕುಟುಂಬವೇ ತಲೆ ತಗ್ಗಿಸುವಂತಾಗಿದ್ದು ಮಾಡದಿರುವ ತಪ್ಪಿಗೆ ಇಷ್ಟೊಂದು ಕಠೋರವಾದ ಶಿಕ್ಷೆ ಅನುಭವಿಸುವಂತಾಗಿದೆ. ನಿಮ್ಮ ತಪ್ಪು ನಡೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದೇನೆ‌‌ ಎನ್ನುವ ಒಂದೇ ಕಾರಣಕ್ಕಾಗಿ ಪ್ರಾಮಾಣಿಕ ಬದುಕು ನಡೆಸುತ್ತಿರುವ ನನ್ನ ಹಾಗೂ ನನ್ನ ಕುಟುಂಬದ ಮೇಲೆ ಈ ರೀತಿಯ ದೌರ್ಜನ್ಯ ನಿಮಗೆ ಶೋಭೆಯೇ ? ಎಂದು ರಾಧಾಕೃಷ್ಣ ನಾಯಕ್‌ ಪ್ರಶ್ನಿಸುತ್ತಾರೆ.
ಒಂದು ವೇಳೆ ನಾನೇ ಸೈನಿಕರ ವಿರುದ್ಧ ಪೋಸ್ಟ್ ಮಾಡಿದ್ದು ಹೌದಾದರೆ ಬೆಂಗಳೂರಿನ ಠಾಣೆಯಲ್ಲಿ ಹೇಳಿಕೆ ಪಡೆದು ಯಾವುದೇ ಪ್ರಕರಣ ದಾಖಲಿಸದಿರಲು ಕಾರಣವೇನು ? ಘಟನೆ ನಡೆದು ಒಂದು ವರ್ಷವಾಗುತ್ತಾ ಬಂದರೂ ನಾನೇ ಖುದ್ದಾಗಿ ಠಾಣೆಗೆ ಬರುವವರೆಗೆ ಪೊಲೀಸರು ಮೌನ ವಹಿಸಿದ್ದು ಯಾಕೆ ? ನನ್ನ ತನಿಖೆ ನಡೆಸಿದ ಎಸ್‌ಐ ಮಧು ಅವರಿಗೆ ನಾನೇ ತಪ್ಪು ಮಾಡಿದ್ದೇನೆಂದು ಖಚಿತವಾಗಿದ್ದರೆ, ನನ್ನ ಮೇಲೆ ಕೇಸು ದಾಖಲಿಸದೇ ಹೇಳಿಕೆಯನ್ನೂ ಪಡೆಯದೇ ನನ್ನನ್ನು ಮನೆಗೆ ಕಳುಹಿಸಲು ಕಾರಣವೇನು ? ನಾನು ಪೊಲೀಸರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾದ ನಂತರ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದೇನೆಂದು ತಪ್ಪು ದೂರು ದಾಖಲಿಸಲು ಯಾರ ಒತ್ತಡವಿತ್ತು ? ನನ್ನ ನಕಲಿ ಫೇಸ್ ಬುಕ್ ಖಾತೆಯ ಬಗ್ಗೆ ದೂರು ನೀಡಿ ವರ್ಷವಾಗುತ್ತಾ ಬಂದರೂ ಆ ಬಗ್ಗೆ ಯಾಕೆ ತನಿಖೆಯಾಗುತ್ತಿಲ್ಲ‌ ? ನಾನೇನಾದರೂ ದೇಶ ದ್ರೋಹದ ಕೆಲಸ ಅಥವಾ ಸೈನಿಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕಿದ್ದು ಸಾಬೀತಾದರೆ ಯಾವುದೇ ಶಿಕ್ಷೆ ಎದುರಿಸಲು ಸಿದ್ದನಿದ್ದೇನೆ. ಆದರೆ, ಶಾಸಕರು ಅಥವಾ ಅವರ ದೇಶದ್ರೋಹಿ ಎಂದು ಹೇಳುವವರು‌ ಯಾವುದೇ ಪವಿತ್ರ ಸ್ಥಳದಲ್ಲಿ ಪ್ರಮಾಣಿಸಲು ಸಿದ್ಧರಿದ್ದರೆಯೇ ಎಂದು ರಾಧಾಕೃಷ್ಣ ನಾಯಕ್‌ ಸವಾಲು ಹಾಕಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!