Thursday, August 5, 2021
spot_img
Homeಅಂಕಣಕಗ್ಗದ ಸಂದೇಶ- ಪರರ ಏಳ್ಗೆಗೆ ಮತ್ಸರ ಪಡದಿರೆ…

ಕಗ್ಗದ ಸಂದೇಶ- ಪರರ ಏಳ್ಗೆಗೆ ಮತ್ಸರ ಪಡದಿರೆ…

“ತನಗೆ ಬಾರದ ಲಾಭ ತನಯನಿಗೆ ಬಂದಾಗ|
ಜನಕನ್ ಅದು ತನದೆಂದು ಸಂತಸಿಪ ತೆರದಿ||
ಜಗದೊಳಾರ್ಗಾವ ಸೊಗವಾದೊಡಂ ತನದೆನ್ನು|
ತನುಭವಿಪನೋ ಜ್ಞಾನಿ-ಮಂಕುತಿಮ್ಮ”.

ಒಬ್ಬ ತಂದೆ ತಾನು ಮಾಡದ ಸಾಧನೆಯನ್ನೋ,ಗಳಿಸದಾ ಯಶಸ್ಸನ್ನೋ,ಅನುಭವಿಸದಾ ಸಂತೋಷವನ್ನೋ ತನ್ನ ಮಗನಿಗೆ ದೊರೆತಾಗ ತನಗೆ ದೊರಕಿದಷ್ಟು ಸಂತೋಷ ಪಡುತ್ತಾನೆ. ಅಂತೆಯೆ ಜಗತ್ತಿನಲ್ಲಿ ಯಾರಿಗೆ ಆಗಲಿ ಯಾವುದೇ ರೀತಿಯ ಸಂತೋಷವಾದರೂ ಅದನ್ನು ನೋಡಿ ತನಗೆ ಆದ ಸಂತೋಷವೆಂದು ಭಾವಿಸುವವನೆ ನಿಜವಾದ ಜ್ಞಾನಿಯೆಂದು ಮಾನ್ಯ ಡಿ‌ವಿ.ಜಿ ಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.


ತಂದೆಯಾದವನು ತನ್ನ ಮಗ ಅಥವಾ ಮಗಳ ಹಿತವನ್ನು ಹಾಗೂ ಉನ್ನತಿಯನ್ನು ಬಳಸುವುದು ಸಹಜ. ಮಕ್ಕಳ ಸಾಧನೆಯನ್ನು ನೋಡಿ ಯಾವ ತಂದೆಯು ಮತ್ಸರ ಪಡುವುದಿಲ್ಲ. ದ್ವೇಷ ಸಾಧಿಸುವುದಿಲ್ಲ.ಅವರ ಸುಖ ಸಂತೋಷವೆ ತಮ್ಮ ಸುಖ ಸಂತೋಷವೆಂದು ಭಾವಿಸುತ್ತಾರೆ.ತಂದೆಯ ಈ ಗುಣ ನಮಗೆ ಮಾದರಿಯಾಗಬೇಕು. ಸಮಾಜದಲ್ಲಿ ಯಾರಿಗೆ ಯಾವುದೇ ರೀತಿಯ ಸಂತೋಷವಾದರೂ ಅದು ತಮಗೆ ಆದ ಸಂತೋಷವೆಂದು ಭಾವಿಸಬೇಕು. ಇತರರ ಏಳ್ಗೆ ಮತ್ತು ಸಂತೋಷವನ್ನು ಬಯಸಿದಾಗ ನಮಗೂ ಒಳ್ಳೆಯದಾಗುತ್ತದೆ. ಮತ್ಸರಪಟ್ಟರೆ ನಮಗೇ ಹಾನಿಯಾಗುವುದು. ಹಾಗಾಗಿ ಪರರ ಹಿತವೇ ನಮ್ಮ ಹಿತವೆಂದು ಭಾವಿಸುವವನು ನಿಜವಾದ ಜ್ಞಾನಿ ಎಂದು ಹೇಳಿದ್ದಾರೆ.
‘ಮಾಗದಿದ್ದರೆ ಮನಸು ಯಾರು ತಿದ್ದಿದರೇನು?, ನೀ ನಿನ್ನ ಅರಿಯಲಿಕೆ ನೀನೆ ಗುರು ನಿನಗೆ! ಇಳೆಯಿಂದ ಜಲವೆದ್ದು ಆವಿಯಾಸರೆ ಮುಗಿಲು, ಲೋಕದಲಿ ಅರಿವೆ ಗುರು-ಮುದ್ದುರಾಮ’ ಎಂಬ ಕೆ. ಶಿವಪ್ಪನವರ ನುಡಿಯಂತೆ.ನಮ್ಮ ಮನಸ್ಸನ್ನು ನಾವೇ ತಿದ್ದಿಕೊಳ್ಳಬೇಕು. ಅರಿವನ್ನು ಹೊಂದಬೇಕು.ನಮ್ಮ ಮನಸ್ಸಲ್ಲಿರುವ ದ್ವೇಷ ಮತ್ಸರಗಳು ನಮ್ಮನ್ನೆ ಸುಡುತ್ತವೆ. ಇನ್ನೊಬ್ಬರ ಒಳಿತನ್ನು ಒಳ್ಳೆಯದನ್ನು ಗುರುತಿಸಿ ಗೌರವಿಸಿದಾಗ ನಮ್ಮಲ್ಲಿರುವ ಒಳ್ಳೆಯತನ ಜಾಗೃತವಾಗುತ್ತದೆ.ಸದಾ ಕಾಲ ಅನ್ಯರನ್ನು ನೋಡಿ ಅವರಲ್ಲಿರುವುದು ನನ್ನಲ್ಲಿ ಇಲ್ಲ ಎಂದು ಕೊರಗಿದರೆ ಬಾಳು ಗೋಳಾಗುತ್ತದೆ. ಅನ್ಯರ ಸುಖ ಸಂತೋಷ ನಮ್ಮದೆಂದು ಭಾವಿಸಿ ಸಂಭ್ರಮಿಸುವ ಮನೋಭಾವ ಬೆಳೆಸಿಕೊಂಡಾಗಲೇ ಜೀವನ ಸಾರ್ಥಕವಾಗುವುದಲ್ಲವೆ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕ


LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!