ಹೆಬ್ರಿ : ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯನವನ ಲೋಕಾರ್ಪಣೆ

ಮಂಕಿ ಪಾರ್ಕ್‌ ಸ್ಥಾಪನೆ ನಿಟ್ಟಿನಲ್ಲಿ ತಜ್ಞರ ಸಮಿತಿ ರಚನೆ – ಸಚಿವ ಅರವಿಂದ ಲಿಂಬಾವಳಿ

ಹೆಬ್ರಿ : ರೈತರ ಬೆಳೆಯನ್ನು ಮಂಗಗಳ ಕಾಟದಿಂದ ರಕ್ಷಿಸುವ ಸಲುವಾಗಿ ಮಂಕಿ ಪಾರ್ಕ್‌ ಸ್ಥಾಪಿಸುವ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ರಚಿಸಲಾಗುವುದು. ಆ ಮೂಲಕ ರೈತರ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಅವರು ಶನಿವಾರ ಹೆಬ್ರಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ನಿರ್ಮಾಣವಾದ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯನವನ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ನಾವು ಅರಣ್ಯ ಮತ್ತು ಪ್ರಾಣಿ ಸ್ನೇಹಿಗಳಾಗಿ ಕೆಲಸ ಮಾಡಿ ಅಭಿವೃದ್ದಿಗೆ ಕೈಜೋಡಿಸಬೇಕಿದೆ. ಕಾನೂನಿನ ನೆಪದಲ್ಲಿ ಅಭಿವೃದ್ಧಿಗೆ ಅಡ್ಡಿ ಪಡಿಸಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದ ಲಿಂಬಾವಳಿ ಡೀಮ್ಡ್‌ ಫಾರೆಸ್ಟ್‌ ಸಮಸ್ಯೆಯನ್ನು ವಿಶೇಷ ಮುತುವರ್ಜಿ ವಹಿಸಿ ನಿವಾರಿಸಲಾಗುವುದು. ಹೆಬ್ರಿ ಮುನಿಯಾಲು ವಿದ್ಯುತ್‌ ಲೈನ್‌ಗೆ ಸಂಬಂಧಿಸಿದಂತೆ ಇರುವ ಅರಣ್ಯ ಇಲಾಖೆಯ ತೊಡಕು ಬಗೆಹರಿಸಲಾಗುವುದು ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವಿ. ಸುನಿಲ್‌ ಕುಮಾರ್‌, ಹೆಬ್ರಿ ಹಾಗೂ ಕಾರ್ಕಳ ತಾಲೂಕನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆ ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ. ಹೆಬ್ರಿಯ ಉದ್ಯಾನವನವನ್ನು ಹೆಬ್ರಿಯ ಆಸ್ತಿ ಎಂದು ನಿರ್ವಹಿಸಿ ನಿರ್ವಹಿಸಬೇಕಿದೆ ಎಂದರು. ಪಾರ್ಕ್‌ ಸ್ಥಾಪನೆಯ ಹಿಂದೆ ಶ್ರಮಿಸಿದ ಹೆಬ್ರಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಜಯಕರ ಪೂಜಾರಿ ಅವರ ಶ್ರಮವನ್ನು ಶಾಸಕರು ಶ್ಲಾಘಿಸಿದರು.
ಕುಂದಾಪುರ ಡಿಎಫ್‌ಒ ಆಶೀಷ್‌ ರೆಡ್ಡಿ ಮಾತನಾಡಿ, ೧೦ ವರ್ಷದ ಹಿಂದೆ ಪಾರ್ಕ್‌ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಎರಡು ವರ್ಷದ ಹಿಂದೆ ಕಾರ್ಯ ಪೂರ್ಣಗೊಂಡಿತ್ತು. ಇದೀಗ ಅಧಿಕೃತವಾಗಿ ಉದ್ಘಾಟನೆಯಾಗಿದೆ. ಮುಂದಿನ ಪೀಳಿಗೆ ಅರಣ್ಯ ಮತ್ತು ಪರಿಸರವನ್ನು ಉಳಿಸಬೇಕೆಂಬ ಇರಾದೆಯಲ್ಲಿ ಹಸಿರು ಉದ್ಯಾನವನ ನಿರ್ಮಾಣ ಮಾಡಲಾಗಿದೆ ಎಂದರು.
ಪಾರ್ಕ್‌ನ ಸಾಕ್ಷ್ಯ ಚಿತ್ರ ನಿರ್ಮಿಸಿದ ಛಾಯಗ್ರಾಹಕ ಮೂಡಬಿದಿರೆಯ ರವಿ ಕೋಟ್ಯಾನ್‌ ಅವರನ್ನು ಸಚಿವರು ಇದೇ ಸಂದರ್ಭ ಗೌರವಿಸಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಹೆಬ್ರಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಜಯಕರ ಪೂಜಾರಿ, ಗ್ರಾಮ ಪಂಚಾಯತ್‌ ಅಧ್ಯಕ್ಷೆ ಮಾಲತಿ, ನಾಡ್ಪಾಲಿನ ದಿನೇಶ ಹೆಗ್ಡೆ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಮಿಲ್ಲೋ ಟ್ಯಾಗೋ, ಪ್ರಕಾಶ್‌ ನೆಟಾಲ್ಕರ್‌, ರುಥ್ರೇನ್‌, ಡಾ. ಪ್ರಶಾಂತ್‌ ಪಿಕೆಎಂ, ಹೆಬ್ರಿ ವಲಯ ಅರಣ್ಯಾಧಿಕಾರಿ ಅನಿಲ್‌ ಕುಮಾರ್‌, ವಿವಿಧ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಹರೀಶ್ ಪೂಜಾರಿ, ಹೆಬ್ರಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಮೇಶ ಪೂಜಾರಿ ಉಪಸ್ಥಿತರಿದ್ದರು. ಕಬ್ಬಿನಾಲೆ ಸೀತಾರಾಮ ಹೆಬ್ಬಾರ್‌ ನಿರೂಪಿಸಿ ಆರ್‌ಎಫ್‌ಒ ದಿನೇಶ್‌ ಕುಮಾರ್‌ ವಂದಿಸಿದರು.





























































































































































































































error: Content is protected !!
Scroll to Top