ನಾನು ಹೇಗೆ…
ಅವಳು ಹಾಗೆ ಇವಳು ಹೀಗೆ
ಎಂದು ಹಾರಿಸುವುದೇ ಆಯ್ತು ಕಾಗೆ
ಯೋಚಿಸಬಾರದೇಕೆ ಹೀಗೆ
ನಾನು ಹೇಗೆ..!!?!!
ಎಂದಳಾ ತುಳಸಿಪ್ರಿಯೆ ಭಗವತಿ
ಯೋಗ
ಜೀವನ ನಡೆಯಬೇಕಾದರೆ ಸರಾಗ !
ಬೇಕೇಬೇಕು ಯೋಗಾನು ಯೋಗ !
ಯೋಗವಾದರೆ ಜೀವನದ ಒಂದು ಭಾಗ !
ಆರೋಗ್ಯವಾಗುವುದು ಧುಮ್ಮಿಕ್ಕುವ ಜೋಗ !!
ಎಂದಳಾ ತುಳಸಿಪ್ರಿಯೆ ಭಗವತಿ
ನಾನಿನ್ನೂ ಮರೆತಿಲ್ಲ
ಗುಣಕ್ಕೆ ಮತ್ಸರವಿಲ್ಲ !
ದುರ್ಗುಣಕೆ ನನ್ನದು ಒಪ್ಪಿಗೆ ಇಲ್ಲ !
ಅಳತೆ ಮೀರಿ ಎಂದೂ ಪ್ರೀತಿಸುವುದಿಲ್ಲ !
ಕಾರಣವಿಲ್ಲದೆ ದ್ವೇಷಿಸುವುದೂ ಇಲ್ಲ !
ನಾನು ನಾನಾಗಿರುವ ಸೊಲ್ಲ ನಾನಿನ್ನೂ ಮರೆತಿಲ್ಲ!!
ಎಂದಳಾ ತುಳಸಿಪ್ರಿಯೆ ಭಗವತಿ
ಪ್ರದೂಷಣ
ಏನಕೇನ ಪ್ರಕಾರೇಣ !
ನಾನೂ ಆಗಬೇಕು ವಿಶೇಷಣ !
ಮಾಡಿದರೆ ನಾನೇ ಎಂಬ ಆಪೋಷನ !
ಆಗುವುದು ಪ್ರದರ್ಶನ ಬರೀ ಪ್ರದೂಷಣ !!
ಎಂದಳಾ ತುಳಸಿಪ್ರಿಯೆ ಭಗವತಿ
ನಾರಿ
ನೀನೇ ಸರಿಸರಿ ಎಂದರೆ ಸರಿ !
ಒಲಿಯುವಳು ನಾರಿ ನಗುಬೀರಿ !
ಸ್ವಲ್ಪ ಅತ್ತ ಸರಿಸರಿ ಎಂದರೆ ಹೌಹಾರಿ !
ಕಟ್ಟುವಳು ನಿನಗೊಂದು ಗೋರಿ !!
ಎಂದಳಾ ತುಳಸಿಪ್ರಿಯೆ ಭಗವತಿ
ಆತ್ಮರತಿ
ಮುಕ್ತ ಮನವಿಲ್ಲದ ಚಿಂತನೆ !
ಸರಿ-ತಪ್ಪುಗಳ ಮಥಿಸದ ವರ್ತನೆ !
ನನ್ನದೇ ಸರಿ ಎಂಬ ಧೋರಣೆ !
ಆತ್ಮರತಿಗೊಂದು ಒಳ್ಳೆಯ ಉದಾಹರಣೆ !!
ಎಂದಳಾ ತುಳಸಿಪ್ರಿಯೆ ಭಗವತಿ
ಕೆಂಬೂತ
ಬಾಳೆ ಬಾಗುವುದ ಮರೆತಿಲ್ಲ !
ಅಳೆ ಹುಳಿಯ ಬಿಟ್ಟದ್ದಿಲ್ಲ !
ಒಂದು ಮಾಡಿ ಬೀಗುವವರೇ ಎಲ್ಲ !
ಕೆಂಬೂತದ ಎದುರು ನವಿಲು ಕಾಣುವುದೇ ಇಲ್ಲ !
ಎಂದಳಾ ತುಳಸಿಪ್ರಿಯೆ ಭಗವತಿ
ನಾನು
ನನ್ನೊಳಗೆ ನಾನು ಸೇರಿದರೆ ಸೋಲು !
ನಿಮ್ಮೊಳಗೆ ನಾನು ಒಂದಾದರೆ ಗೆಲುವು !
ನಾನು ಹೋದರೆ ಸ್ವರ್ಗಕ್ಕೆ ಹೋದೇನು !
ನಾನು ಬಂದರೆ ನರಕಕ್ಕೆ ಸೇತುವಾದೇನು!!
ಎಂದಳಾ ತುಳಸಿಪ್ರಿಯೆ ಭಗವತಿ

ಉಪನ್ಯಾಸಕರು, ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ