Thursday, August 18, 2022
spot_img
Homeಅಂಕಣಕಾನೂನು ಮಾಹಿತಿ : 1988ರ ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ

ಕಾನೂನು ಮಾಹಿತಿ : 1988ರ ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ

 1. ಸಮಾಜದಲ್ಲಿ ಸಾರ್ವಜನಿಕ ಅಧಿಕಾರಿ ಅಥವಾ ಪ್ರತಿನಿಧಿ ತಾನು ಹೊಂದಿರುವ ಅಧಿಕಾರವನ್ನು ಚಲಾಯಿಸುವ ಸಂದರ್ಭದಲ್ಲಿ ತಾನು ಮಾಡುವ ಕೆಲಸಗಳಿಗೆ ಸಾರ್ವಜನಿಕರಿಂದ ಪ್ರತಿಫಲ ಅಪೇಕ್ಷಿಸುವುದು ಭ್ರಷ್ಟಾಚಾರವಾಗಿದ್ದು ಇದು ಬ್ರಿಟಿಷರ ಕಾಲದಿಂದಲೂ ಪ್ರಾರಂಭವಾಗಿ ಈಗ ಸಮಾಜ ಕಂಟಕವಾಗಿ ಬೆಳೆದಿರುವ ಹೆಮ್ಮರವಾಗಿ ನಿಂತಿದೆ.
 2. ಕಾನೂನಿನ ಚೌಕಟ್ಟಿನಲ್ಲಿ ಲಂಚ ನಿರ್ಮೂಲನೆಗೆ ಭಾರತೀಯ ದಂಡ ಸಂಹಿತೆಯಲ್ಲಿ (ಐ.ಪಿ.ಸಿ.) ಕಲಂ 161 ರಿಂದ 165ಎ ಯಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶ ಇದ್ದರೂ ಅದು ಪರಿಣಾಮಕಾರಿಯಾಗಿ ಉಪಯೋಗಕ್ಕೆ ಬರುತ್ತಿಲ್ಲ ಎಂಬ ಅಭಿಪ್ರಾಯದಿಂದ ಹಾಗೂ ಸಮಾಜದಲ್ಲಿ ಲಂಚ ನಿರ್ಮೂಲನೆಯ ಉಪಬಂಧಗಳನ್ನು ಪರಿಣಾಮಕಾರಿಯಾಗಿ ರಚಿಸುವ ಉದ್ದೇಶದಿಂದ 1947ರಲ್ಲಿ ಭ್ರಷ್ಷಾಚಾರ ಅಧಿನಿಯಮವನ್ನು ಜಾರಿಗೆ ತರಲಾಯಿತು.
 3. ನಮ್ಮ ದೇಶದ ಸ್ವಾತಂತ್ರ್ಯದ ನಂತರ ಸರ್ಕಾರದ ಹೊಸ ನೀತಿಗಳಿಂದಾಗಿ ಅನೇಕ ವಿಷಯಗಳಲ್ಲಿ ಸರ್ಕಾರದ ಅಥವಾ ಸಾರ್ವಜನಿಕ ಪ್ರಾಧಿಕಾರದ ಅನುಮತಿ, ನೆರವು, ಅವುಗಳ ಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸುವ ಸಂದರ್ಭದಲ್ಲಿ, ಸಂಬಂಧಪಟ್ಟ ಸಾರ್ವಜನಿಕ ಅಧಿಕಾರಿಗಳು ಪ್ರತಿಫಲ ಅಪೇಕ್ಷಿಸಲು ಪ್ರಾರಂಭಿಸಿದರು.
 4. ಹೀಗೆ ಪ್ರಾರಂಭವಾದ ಲಂಚಾವತಾರ ಹೆಮ್ಮರವಾಗಿ ಬೆಳೆದು ಎಲ್ಲೆಡೆ ಆವರಿಸಿಕೊಂಡು ಬಿಟ್ಟಿತು. ಜನನ ಪತ್ರ (ಬರ್ತ್ ಸರ್ಟಿಫಿಕೇಟ್) ಪಡೆಯಲು, ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು, ಉದ್ಯೋಗ ಪಡೆಯಲು, ಪಡಿತರ ಚೀಟಿ ಪಡೆಯಲು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು, ಅಸ್ವಾಭಾವಿಕ ಮರಣವಾದಾಗ ಶವ ಪರೀಕ್ಷೆ ಮಾಡಲು, ಸ್ಥಿತಿ ನಿರ್ಮಾಣವಾಗಿಬಿಟ್ಟಿತು. ನ್ಯಾಯಯುತವಾಗಿ ನಾಗರಿಕರಿಗೆ ಸಿಗಬೇಕಾದ ಸೌಕರ್ಯ, ಸವಲತ್ತುಗಳು ಹಾಗೂ ಸಹಾಯಗಳನ್ನು ಪಡೆಯಲು ಸಂಬಂಧಿಸಿದ ಸಾರ್ವಜನಿಕ ಅಧಿಕಾರಿಗಳಿಗೆ ಲಂಚ ಕೊಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿತು.
 5. ಇಂತಹ ಪರಿಸ್ಥಿತಿಯನ್ನು ಹಂತ ಹಂತವಾಗಿ ನಿರ್ಮೂಲನ ಮಾಡಿ ಜನರು ತಮಗೆ ನ್ಯಾಯಬದ್ಧವಾಗಿ ಸಿಗಬೇಕಾದ ಸವಲತ್ತು, ಸೌಕರ್ಯ ಹಾಗೂ ಸಹಾಯಗಳನ್ನು ಯಾವುದೇ ಅಡೆ ತಡೆಯಿಲ್ಲದೆ, ಭ್ರಷ್ಟ ಅಧಿಕಾರಿಗಳ ಕಾಟವಿಲ್ಲದೆ, ಸುಲಭವಾಗಿ ಪಡೆಯುವಂತಾಗಲಿ ಎಂಬ ಉದ್ದೇಶದಿಂದಲೇ 1947ರ ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮಕ್ಕೆ ಬದಲಿಗೆ ಕ್ರೋಢಿಕರಿಸಿದ ಮತ್ತು ಪರಿಷ್ಕøತ ಅಧಿನಿಯಮ ತರುವ ಉದ್ದೇಶದಿಂದ 1988ರ ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮವನ್ನು ಜಾರಿಗೆ ತರಲಾಗಿದೆ.
 6. ಯಾವುದೇ ಸರ್ಕಾರಿ ನೌಕರ ಇಲ್ಲವೇ ಸಾರ್ವಜನಿಕ ಸೇವಕ ಅಥವಾ ಸಾರ್ವಜನಿಕ ಪ್ರತಿನಿಧಿ ತಾನು ಹೊಂದಿರುವ ಅಧಿಕಾರದಿಂದ ನ್ಯಾಯವಾಗಿ ನಿರ್ವಹಿಸಬೇಕಾದ ಕರ್ತವ್ಯಕ್ಕೆ ವೇತನದ ಹೊರತಾಗಿ ಇತರ ಯಾವುದೇ ರೂಪದಲ್ಲಿ ಅನಧಿಕೃತವಾಗಿ ಪ್ರತಿಫಲವನ್ನು ಪಡೆದರೆ ಅದು ಭ್ರಷ್ಟಾಚಾರವೆಂಬ ಸಾಮಾನ್ಯ ಅರ್ಥ. ಪ್ರತಿಫಲವು ಹಣದ ರೂಪದಲ್ಲಿರಬಹುದು ಇಲ್ಲವೇ ವಸ್ತು, ಉಡುಗೊರೆ, ಬಳುವಳಿ ಇವುಗಳ ರೂಪದಲ್ಲಿಯೂ ಇರಬಹುದು. ಮಾಡಿದ ಕಾರ್ಯಕ್ಕೆ ಪ್ರತಿಫಲವಾಗಿ ವಸ್ತು, ಆಸ್ತಿ, ನೌಕರಿ, ನೇಮಕಾತಿ ಕೊಡುವುದೂ ಇರಬಹುದು ಇಲ್ಲವೇ ಯಾರಿಗಾಗಿ ಅಂತಹ ಸಾರ್ವಜನಿಕ ಸೇವೆ ಮಾಡುತ್ತಾನೋ ಅದಕ್ಕೆ ಪ್ರತಿಫಲವಾಗಿ ತಾನು ಕಾನೂನಿನಲ್ಲಿ ಸ್ವೀಕರಿಸಬಾರದ ಯಾವುದೇ ವಸ್ತು/ಸೇವೆ ಇವುಗಳನ್ನು ಸ್ವೀಕರಿಸಿದಾಗ ಅದು ಭ್ರಷ್ಟಾಚಾರವೆನಿಸಿಕೊಳ್ಳಬಹುದು. ಸಾರ್ವಜನಿಕ ಸೇವಕ ಇಂತಹ ಪ್ರತಿಫಲ ಬೇರೆಯವರ ಮುಖಾಂತರ ಪಡೆದರೂ ಸಹ ಆತನು ಸ್ವತಃ ಜವಾಬ್ದಾರನಾಗುತ್ತಾನೆ. ಮತ್ತು ಆತನಿಗೆ ಸಹಕರಿಸಿದ ಮಧ್ಯವರ್ತಿ ಸಹ ಇಂತಹ ಕಾನೂನು ಬಾಹಿರ ಕೆಲಸಕ್ಕೆ ಸಹಕರಿಸಿದ್ದಕ್ಕೆ ಶಿಕ್ಷಾರ್ಹ ಅಪರಾಧಕ್ಕೆ ಗುರಿಯಾಗಬೇಕಾಗುತ್ತದೆ.
 7. ಸಾರ್ವಜನಿಕ ಸೇವಕ ಯಾರು ಎಂಬುದನ್ನು ಈ ಅಧಿನಿಯಮದಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರಿ ನೌಕರರಲ್ಲದೆ, ಪಂಚಾಯಿತಿ, ಪುರಸಭೆ, ನಗರಸಭೆ ಮುಂತಾದ ಸ್ಥಳೀಯ ಸಂಸ್ಥೆಗಳ ನೌಕರರು, ರಾಜ್ಯ ಇಲ್ಲವೇ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ನಿಗಮಗಳು ಅಂದರೆ ಬಿ.ಡಿ.ಎ. ಬೆಂಗಳೂರು ಒಳಚರಂಡಿ ಮಂಡಳಿ ಮುಂತಾದವು, ನ್ಯಾಯಾಧೀಶರು, ನ್ಯಾಯಾಲಯದಿಂದ ನೇಮಕ ಮಾಡಲ್ಪಟ್ಟ ಕಮೀಷನರ್, ರಿಸೀವರ್ ಮುಂತಾದ ಅಧಿಕಾರಿಗಳು, ಕೃಷಿ, ಕೈಗಾರಿಕೆ, ವಾಣಿಜ್ಯ, ಬ್ಯಾಂಕಿಂಗ್ ಕಾರ್ಯಗಳಲ್ಲಿ ತೊಡಗಿರುವ ಹಾಗೂ ಸರ್ಕಾರದಿಂದ ಅನುದಾನ ಪಡೆಯುವ ಸಹಕಾರಿ ಸಂಘಗಳ ಅಧ್ಯಕ್ಷ, ಕಾರ್ಯದರ್ಶಿ ಅಥವಾ ಇತರ ಪದಾಧಿಕಾರಿಗಳು, ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಬೋಧಕ ವರ್ಗದವರು, ರಾಜ್ಯ ಇಲ್ಲವೇ ಕೇಂದ್ರ ಸರ್ಕಾರದಿಂದ ಆರ್ಥಿಕ ಸಹಾಯ ಪಡೆಯುತ್ತಿರುವ ಅಥವಾ ಪಡೆದ ಶೈಕ್ಷಣಿಕ ವೈಜ್ಞಾನಿಕ ಮುಂತಾದ ಸಂಸ್ಥೆಗಳ ನೌಕರರು ಮತ್ತು ಪದಾಧಿಕಾರಿಗಳೂ ಸಹ ‘ಸಾರ್ವಜನಿಕ ಸೇವಕ’ ಈ ವ್ಯಾಖ್ಯೆಯ ವ್ಯಾಪ್ತಿಗೆ ಬರುತ್ತಾರೆ.
 8. ಈ ಅಧಿನಿಯಮದ ಪ್ರಕಾರ ಸಾರ್ವಜನಿಕ ಸೇವಕರ ಭ್ರಷ್ಟಾಚಾರವನ್ನು ಎರಡು ರೀತಿಯಲ್ಲಿ ಪರಿಗಣಿಸಬಹುದು. ಮೊದಲನೆಯದು ನೇರವಾದ ಭ್ರಷ್ಟಾಚಾರ, ಅಂದರೆ ನ್ಯಾಯಯುತವಾದ ಸಂಬಳ ಇಲ್ಲವೇ ಸಂಭಾವನೆಯ ಹೊರತಾಗಿ ಲಂಚ ಇಲ್ಲವೇ ಪ್ರತಿಫಲವನ್ನು ಕೇಳುವುದು ಇಲ್ಲವೇ ಸ್ವೀಕರಿಸುವುದು. ಎರಡನೆಯದು ಭ್ರಷ್ಟಾಚಾರ ಎಂದು ಪರಿಗಣಿಸಬಹುದಾದ ಸಾರ್ವಜನಿಕ ಸೇವಕರ ಭ್ರಷ್ಟಾಚಾರದ ದುರ್ನಡತೆ.
 9. ಸಾರ್ವಜನಿಕ ಸೇವಕನೆನಿಸಿಕೊಂಡಿರುವ ಯಾವುದೇ ವ್ಯಕ್ತಿಯು ತನ್ನ ಕರ್ತವ್ಯ ನಿರ್ವಹಿಸಲು ಇಲ್ಲವೇ ಆ ಕರ್ತವ್ಯದಡಿಯಲ್ಲಿ ಮಾಡಬೇಕಾದ ಕೆಲಸವನ್ನು ಮಾಡದೇ ಇರಲು ಪ್ರತಿಫಲ ಅಪೇಕ್ಷಿಸಿದರೆ ಹಾಗೂ ಯಾವುದೇ ರೂಪದಲ್ಲಿ ಅದನ್ನು ಸ್ವೀಕರಿಸಲು ಪ್ರಯತ್ನಪಟ್ಟರೆ ಇಲ್ಲವೇ ಸ್ವೀಕರಿಸಿದರೆ ಅದಕ್ಕೆ ಈ ಅಧಿನಿಯಮದ ಕಲಂ 7ರ ಕೆಳಗೆ ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಅಂತಹ ಶಿಕ್ಷೆ ಕನಿಷ್ಠ ಆರು ತಿಂಗಳುಗಳ ಕಾರಾಗೃಹವಾಸದಿಂದ ಹಿಡಿದು ಗರಿಷ್ಠ 5 ವರ್ಷಗಳ ಕಾರಾಗೃಹವಾಸದವರೆಗೆ ಇದ್ದು ಜೊತೆಗೆ ದಂಡವನ್ನು ವಿಧಿಸಲಾಗುವುದು. ಸಂಬಂಧಿಸಿದ ಸಾರ್ವಜನಿಕ ಸೇವಕರಿಂದ ಮೇಲ್ಕಂಡ ಅಪರಾಧ ಘಟಿಸಲಿ ಘಟಿಸದಿರಲಿ, ಅಂತಹ ಕಾರ್ಯಗಳಿಗೆ ಪ್ರೇರಣೆ ಇಲ್ಲವೇ ಸಹಾಯ ನೀಡುವ ವ್ಯಕ್ತಿಗಳೂ ಸಹ ಇದೇ ಶಿಕ್ಷೆಗೆ ಗುರಿಯಾಗುತ್ತಾರೆ. ಈ ಬಗೆಗೆ ದೂರು ಸಲ್ಲಿಸಲು ಅನುಕೂಲವಾಗುವಂತೆ ಕರ್ನಾಟಕದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿಯೂ ಲೋಕಾಯುಕ್ತ ಪೊಲೀಸ್ ಕಛೇರಿ ತೆರೆಯಲಾಗಿದ್ದು ಪೊಲೀಸ್ ಠಾಣೆಯ ದರ್ಜೆಯನ್ನು ಅದಕ್ಕೆ ನೀಡಲಾಗಿದೆ. ಆ ಕಾರಣ ಆ ಕಛೇರಿಯ ಮುಖ್ಯಸ್ಥರು ಇಂತಹ ದೂರುಗಳನ್ನು ಸ್ವೀಕರಿಸಿ ತನಿಖೆ ನಡೆಸುವ ಅಧಿಕಾರವನ್ನು ಹೊಂದಿರುತ್ತಾರೆ.
 10. ಯಾವುದೇ ಸಂದರ್ಭದಲ್ಲಿ ನೇರವಾಗಿ ಲಂಚ ತೆಗೆದುಕೊಂಡ ಘಟನೆಯಲ್ಲದೆ ಬೇರೆ ರೀತಿಯ ಭ್ರಷ್ಟಾಚಾರ ರೂಪದ ದುರ್ನಡತೆಯ ಬಗೆಗೆ ಸಾರ್ವಜನಿಕ ಸೇವಕರಿಗೆ ಶಿಕ್ಷೆ ಹಾಗೂ ದಂಡವನ್ನು ಈ ಅಧಿನಿಯಮದ ಕಲಂ 13ರಲ್ಲಿ ವಿಧಿಸಲಾಗಿದೆ. ತಾನು ಮಾಡುವ ಕರ್ತವ್ಯಕ್ಕೆ ಸಾಮಾನ್ಯವಾಗಿ ಲಂಚ ಅಥವಾ ಪ್ರತಿಫಲ ಕೇಳುವ, ಕೇಳಲು ಪ್ರಯತ್ನಿಸುವ ಇಲ್ಲವೇ ನಂತರ ಸ್ವೀಕರಿಸಲೊಪ್ಪುವ ಸಾರ್ವಜನಿಕ ಸೇವಕ, ತಾನು ಮಾಡುವ ಕರ್ತವ್ಯದ ಬದಲಿಗೆ ಆ ಕೆಲಸ ಮಾಡಿಸಿಕೊಂಡವನಿಂದ ಸೂಕ್ತ ಬೆಲೆ ಕೊಡದೆ ವಸ್ತುವನ್ನು ಪಡೆಯುವುದು, ತನ್ನ ಸ್ವಾಧೀನಕ್ಕೆ ಕೊಟ್ಟ ಯಾವುದೇ ವಸ್ತು ಇಲ್ಲವೇ ಆಸ್ತಿಯನ್ನು ದುರುಪಯೋಗ ಪಡಿಸಿಕೊಳ್ಳುವುದು ಇಲ್ಲವೇ ತನ್ನ ಉಪಯೋಗಕ್ಕೆ ಪರಿವರ್ತಿಸಿಕೊಳ್ಳುವುದು, ಭ್ರಷ್ಟಾಚಾರ ರೂಪದ ದುರ್ನಡತೆಯೆನಿಸಿಕೊಳ್ಳುತ್ತದೆ. ಅಡ್ಡ ಮಾರ್ಗದಿಂದ ತನಗಾಗಲೀ ಇಲ್ಲವೇ ತನ್ನ ಪರವಾಗಿ ಬೇರೆ ಯಾರಾದರೂ ಆಗಲೀ ಬೆಲೆಯುಳ್ಳ ವಸ್ತುವನ್ನು ಇಲ್ಲವೇ ಹಣವನ್ನು ಇಲ್ಲವೇ ಹಣಕ್ಕೆ ಸಮನಾದ ಪ್ರತಿಫಲವನ್ನು ಪಡೆಯುವುದೂ ಸಹ ಇಂತಹ ದುರ್ನಡತೆಯ ವ್ಯಾಪ್ತಿಯಲ್ಲಿ ಬರುತ್ತವೆ.
 11. ಸಾಮಾನ್ಯವಾಗಿ ಯಾರಿಂದ ಲಂಚ ಇಲ್ಲವೇ ಪ್ರತಿಫಲವನ್ನು ಪಡೆಯಲಾಗುತ್ತದೆಯೋ ಅವರು ಅನೇಕ ಕಾರಣಗಳಿಂದಾಗಿ ದೂರು ಕೊಡದೇ ಹೋಗಬಹುದು. ತಮಗಾದ ಅನುಕೂಲತೆಯನ್ನು ತಪ್ಪಿಸಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಅಂತಹ ವ್ಯಕ್ತಿ ದೂರು ಕೊಡಲಿಕ್ಕಿಲ್ಲ. ಕೆಲವು ಸಲ ಬೇರೆ ಅನಾನುಕೂಲತೆಗಳನ್ನು ತಪ್ಪಿಸಿಕೊಳ್ಳಲು ಇಲ್ಲವೇ ಈ ಕಾನೂನಿನ ಬಗೆಗೆ ಅರಿವಿಲ್ಲದೆ ದೂರು ಕೊಡದೇ ಹೋಗಬಹುದು. ಹೀಗೆ ಹಲವು ಕಾರಣಗಳಿಂದ ಯಾವುದೇ ಸಾರ್ವಜನಿಕ ಸೇವಕನ ಭ್ರಷ್ಟಾಚಾರ ಬೆಳಕಿಗೆ ಬರದೆ ತನ್ನ ದುಷ್ಟ ವರ್ತನೆಯನ್ನು ಅವು ಅಬಾಧಿತವಾಗಿ ಮುಂದುವರಿಸಿಕೊಂಡು ಹೋಗಿ ಅಪಾರ ಸಂಪತ್ತನ್ನು ಗಳಿಸುವ ಸಾಧ್ಯತೆಯಿದೆ. ಇದನ್ನು ಗಣನೆಗೆ ತಂದುಕೊಂಡು ಈ ಅಧಿನಿಯಮದಲ್ಲಿ ಒಂದು ಉಪಬಂಧವನ್ನು ಕಲ್ಪಿಸಲಾಗಿದೆ.
 12. ಯಾವ ಸಾರ್ವಜನಿಕ ಸೇವಕನು ತನ್ನ ಇಲ್ಲವೇ ತನ್ನ ಪರವಾಗಿ ಬೇರೊಬ್ಬ ವ್ಯಕ್ತಿಯ ಹೆಸರಿನಲ್ಲಿ ಹಣ, ವಸ್ತು, ಆಸ್ತಿ ಮುಂತಾದವುಗಳನ್ನು ಹೊಂದಿದ್ದು, ತನ್ನ ಅಧಿಕಾರಾವಧಿಯಲ್ಲಿ ಆತನು ತನ್ನ ಆದಾಯಕ್ಕೆ ಮೀರಿದ ಹಣ, ವಸ್ತು, ಆಸ್ತಿಯನ್ನು ಅವನು ಹೊಂದಿದ್ದರೆ ಅದನ್ನು ಕ್ರಿಮಿನಲ್ ದುರ್ವರ್ತನೆಯೆಂದು ಪರಿಗಣಿಸಿ ಕನಿಷ್ಠ ಒಂದು ವರ್ಷದಿಂದ ಹಿಡಿದು ಗರಿಷ್ಠ 7 ವರ್ಷದವರೆಗೆ ವಿಸ್ತರಿಸಬಹುದಾದ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಲಾಗುವುದಲ್ಲದೆ ದಂಡವನ್ನೂ ವಿಧಿಸಲಾಗುವುದು. ಇದಲ್ಲದೆ ಆತನ ಆದಾಯಕ್ಕೆ ಮೀರಿ ಆತ ಹೊಂದಿದ್ದ ಹಣ, ಆಸ್ತಿ ಹಾಗೂ ವಸ್ತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!