Saturday, December 4, 2021
spot_img
Homeಅಂಕಣಕಗ್ಗದ ಸಂದೇಶ- ರಸಪಾಕವಿದು ಅಳು ನಗು

ಕಗ್ಗದ ಸಂದೇಶ- ರಸಪಾಕವಿದು ಅಳು ನಗು

“ಅಳಬೇಕು ನಗಬೇಕು ಸಮತೆ ಶಮವಿರಬೇಕು|
ಹೊಳೆಯ ನೆರೆಯವೊಲು ಹೃದಯರಸ ಹರಿಯಬೇಕು||
ಅಲೆಯಿನಲುಗದ ಬಂಡೆಯವೊಲಾತ್ಮವಿರಬೇಕು|
ತಿಳಿದವರ ಚರಿತವದು-,ಮಂಕುತಿಮ್ಮ”

     ಜೀವನದಲ್ಲಿ ದುಃಖವಾದಾಗ ಅಳಬೇಕು, ಸಂತೋಷವಾದಾಗ ನಗಬೇಕು.ಮನಸ್ಸಿನಲ್ಲಿ ಸಮಾಧಾನ ಮತ್ತು ಶಾಂತಿ ಇರಬೇಕು. ಯಾವುದನ್ನೂ ಮನಸ್ಸಿನಲ್ಲಿ ಹಿಡಿದಿಟ್ಟುಕೊಳ್ಳದೆ  ಹೊಳೆಯಲ್ಲಿ ಬರುವ ಪ್ರವಾಹದಂತೆ ಹೃದಯದ ರಸ ಸರಾಗವಾಗಿ ಹರಿಯುವಂತಾಗಬೇಕು.ಆದರೆ ಆತ್ಮ ಮಾತ್ರ ಅಲೆಗೆ ಅಲುಗದ ಬಂಡೆಯಂತೆ ನಿಶ್ಚಲವಾಗಿರಬೇಕು.ಮನಸ್ಸಿನಲ್ಲಿ ಸದಾ ನೆಮ್ಮದಿ ಇರಬೇಕು.ಇದು ನಿಜವಾದ ಜ್ಞಾನಿಗಳ ಗುಣವೆಂದು ಮಾನ್ಯ ಡಿ.ವಿ.ಜಿ ಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ಕಷ್ಟಸುಖ ಮತ್ತು ನೋವು ನಲಿವು ಎಲ್ಲರ ಜೀವನದ ಅನಿವಾರ್ಯ ಅಂಗಗಳು.ಇದನ್ನು ನಾವು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು.ಅಳು ನಗು ಎರಡನ್ನು ಮನಸ್ಸಿನಲ್ಲಿ ಹಿಡಿದಿಟ್ಟುಕೊಳ್ಳದೆ ಮುಕ್ತವಾಗಿ ಹರಿಯಲು ಬಿಡಬೇಕು.ಮನಸ್ಸಿನ ಮೇಲಿನ ಹಿಡಿತ ಮತ್ತು ಮಾನಸಿಕ ನೆಮ್ಮದಿ ಬಿಡಬಾರದು.ಜೀವನದಲ್ಲಿ ಎದುರಾಗುವ ಎಲ್ಲವನ್ನು ಸಹಿಸಿಕೊಳ್ಳುವ ಆತ್ಮಶಕ್ತಿ ನಮ್ಮದಾಗಬೇಕು.ಇದೆಲ್ಲವನ್ನು ಸಾಧಿಸಿದವನು ನಿಜವಾದ ಜ್ಞಾನಿ ಆಗುತ್ತಾನೆ.
  'ನೆನೆದಂತೆ ಇದೆ ಮನಸು ನೋವಿರಲಿ ನಲಿವಿರಲಿ| ನೆನಪು ಮಾಸದ ತೆರದಿ ಚಿತ್ರ ಹೊಸತಿರಲಿ| ನೆನಪೆ ಚಿರ ಸೌಭಾಗ್ಯ ಗತಕಾಲದನಿಸಿಕೆಗೆ| ನೆನಪು ಹಸಿರಾಗಿರಲಿ-ಮುದ್ದುರಾಮ' ಎಂಬ ಕೆ. ಶಿವಪ್ಪನವರ ನುಡಿಯಂತೆ ನೋವು ಮತ್ತು ನಲಿವು ಎರಡರಲ್ಲಿಯೂ ಸವಿಯಿದೆ ಸೊಗಸಿದೆ.ನಾವು ಅದನ್ನು ಯಾವ ಮನಸ್ಥಿತಿಯಲ್ಲಿ ಸ್ವೀಕರಿಸುತ್ತೇವೆ ಎನ್ನುವುದರ ಮೇಲೆ ನಿಂತಿದೆ.'ನಗುವಿಗಿಂತ ಕಣ್ಣೀರೆ ಸತ್ಯಕ್ಕೆ ಸನಿಹವಾದದ್ದು.ನಾವು ಯಾರನ್ನು ಬೇಕಾದರೂ ನೋಡಿ ನಗಬಹುದು ಆದರೆ ಕಣ್ಣೀರು ಹಾಗಲ್ಲ ನಮ್ಮ ಹೃದಯ ತಟ್ಟಿದವರಿಗೆ ಮಾತ್ರ ಅದು ಸ್ಪಂದಿಸುತ್ತದೆ' ಸಕಾರಾತ್ಮಕವಾಗಿ ಸ್ವೀಕರಿಸಿದರೆ ಡಿವಿಜಿಯವರೆ ಹೇಳುವಂತೆ ನಗುವು ಒಂದು ರಸಪಾಕ ಅಳುವು ಒಂದು ರಸಪಾಕ.ಆನಂದಿಂದ ಹಿಗ್ಗಿ ಮೈ ಮರೆಯದ ದುಗುಡದಿಂದ ಕುಗ್ಗದ ಸಮಭಾವದ ಸಮರಸದ ಗಟ್ಟಿತನ ನಮ್ಮದಾದಾಗ ಜೀವನ ಸಾರ್ಥಕವಾಗುವುದಲ್ಲವೆ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!