ಬೆಂಗಳೂರು: ಒಂದು ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ನಡೆಸಲು ನಿರ್ಧರಿಸಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ್ದ ಪದವಿ-ಸ್ನಾತಕೋತ್ತರ ವಿದ್ಯಾರ್ಥಿಗಳು ಇದೀಗ ಸರ್ಕಾರದ ನಡೆ ವಿರುದ್ಧ ಸಹಿ ಸಂಗ್ರಹದ ಅಭಿಯಾನವನ್ನು ಆರಂಭಿಸಿದೆ.
ಆಲ್-ಇಂಡಿಯಾ ಡೆಮಾಕ್ರೆಟಿಕ್ ವಿದ್ಯಾರ್ಥಿಗಳ ಸಂಘಟನೆ ಆನ್’ಲೈನ್ ಮೂಲಕ ಈ ಅಭಿಯಾನವನ್ನು ಆರಂಭಿಸಿದ್ದು, ಸಾಕಷ್ಟು ವಿದ್ಯಾರ್ಥಿಗಳು ಪರೀಕ್ಷೆ ವಿರುದ್ಧ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಭಿಯಾನ ಆರಂಭವಾಗಿ 3 ದಿನಗಳು ಕಳೆದಿದ್ದು, ಈಗಾಗಲೇ 7,500 ವಿದ್ಯಾರ್ಥಿಗಳು ಪರೀಕ್ಷೆ ವಿರುದ್ಧ ಸಹಿ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಸಿಕೆ ಹಾಕುವವರೆಗೆ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಅಥವಾ ಪರೀಕ್ಷೆಗಳಿಗೆ ಹಾಜರಾಗಲು ಸಿದ್ಧರಿಲ್ಲ ಎಂದು ಆಲ್-ಇಂಡಿಯಾ ಡೆಮಾಕ್ರೆಟಿಕ್ ವಿದ್ಯಾರ್ಥಿಗಳ ಸಂಘಟನೆಯ ಸದಸ್ಯರು ಹೇಳಿದ್ದಾರೆ.
ನೂತನ ಸೆಮಿಸ್ಟರ್ ಪಠ್ಯಬೋಧನೆಗಳು ಆರಂಭವಾಗಿರುವ ನಡುವಲ್ಲೇ ಹಿಂದಿನ ಸೆಮಿಸ್ಟರ್’ನ ಪರೀಕ್ಷೆ ಬರೆಯುವಂತೆ ಹೇಗೆ ಹೇಳುತ್ತಾರೆ. ಇದು ನಿಜಕ್ಕೂ ಅವೈಜ್ಞಾನಿಕ ನಿರ್ಧಾರವಾಗಿದೆ ಎಂದು ಮೈಸೂರು ಜಿಲ್ಲೆಯ ಆಲ್-ಇಂಡಿಯಾ ಡೆಮಾಕ್ರೆಟಿಕ್ ವಿದ್ಯಾರ್ಥಿಗಳ ಸಂಘಟನೆಯ ಅಧ್ಯಕ್ಷ ಸುಭಾಷ್ ಬಿ.ಜೆ ಅವರು ಹೇಳಿದ್ದಾರೆ.
ಸರ್ಕಾರವು ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಗಳನ್ನು ಹೇರಿದ್ದು, ಈ ಬೆಳವಣಿಗೆ ವಿದ್ಯಾರ್ಥಿಗಳು ಆತಂಕಕ್ಕೊಳಗಾಗುವಂತೆ ಮಾಡಿದೆ.
ಹೀಗಾಗಿ ರಾಜ್ಯದ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ಡಿಪ್ಲೊಮ ಹಾಗೂ ಫಾರ್ಮಸಿ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಸರ್ಕಾರಕ್ಕೆ ಹಿಂದಿನ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ.
ಹಲವು ರೀತಿಯಲ್ಲಿ ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ತಟ್ಟುವಂತೆ ಮಾಡಲು ವಿದ್ಯಾರ್ಥಿಗಳು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆನ್ಲೈನ್ ಚಳುವಳಿ, ಪ್ರಾತಿನಿಧಿಕವಾಗಿ ಕಾಲೇಜು, ವಿವಿಗಳ ಮುಂದೆ ಚಳುವಳಿ, ಪ್ರಾಂಶುಪಾಲರಿಗೆ, ವಿವಿಯ ಕುಲಪತಿಗಳಿಗೆ ಮನವಿ ಪತ್ರ ಸಲ್ಲಿಕೆ ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಕೆ ಸೇರಿ ಹಲವರು ರೀತಿಯ ಪ್ರಯತ್ನಗಳು ನಡೆಯುತ್ತಲೇ ಇವೆ.