Tuesday, August 3, 2021
spot_img
Homeಅಂಕಣವರದಕ್ಷಿಣೆ ನಿಷೇಧ ಕಾಯ್ದೆ 1961 ? ಕುರಿತು ಕಾನೂನು ಮಾಹಿತಿ

ವರದಕ್ಷಿಣೆ ನಿಷೇಧ ಕಾಯ್ದೆ 1961 ? ಕುರಿತು ಕಾನೂನು ಮಾಹಿತಿ

  1. ಸಮಾಜದಲ್ಲಿ ಬಹಳ ವರ್ಷಗಳಿಂದಲೂ ಬೇರೂರಲ್ಪಟ್ಟು ವಧು-ವರರ ವೈವಾಹಿಕ ಜೀವನವನ್ನು ಹಾಳು ಮಾಡುತ್ತಿರುವ ಸಾಮಾಜಿಕ ಪಿಡುಗು ವರದಕ್ಷಿಣೆ'. ಇದನ್ನು ಸಮಾಜದಿಂದ ತೊಲಗಿಸಲು 1961 ರಲ್ಲಿವರದಕ್ಷಿಣೆ
    ನಿಷೇಧ ಕಾಯ್ದೆ 1961′ ಎಂಬ ಅಧಿನಿಯಮವನ್ನು ದಿನಾಂಕ 01-07-1961 ರಿಂದ ಸರಕಾರವು ಜಾರಿಗೆ ತಂದಿರುತ್ತದೆ.
  2. ಮದುವೆಗೆ ಸಂಬಂಧಪಟ್ಟಂತೆ ವರನ ಕಡೆಯವರು ವಧುವಿನ ಕಡೆಯವರಿಂದ ವರದಕ್ಷಿಣೆ ಕೇಳುವುದು, ವರದಕ್ಷಿಣೆ ತೆಗೆದುಕೊಳ್ಳುವುದು ಮತ್ತು ಅವೆರಡಕ್ಕೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರೇರೇಪಣೆ ನೀಡುವುದು ವರದಕ್ಷಿಣೆ ನಿಷೇಧ ಕಾಯ್ದೆ 1961 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ.
  3. ವರದಕ್ಷಿಣೆ ನಿಷೇದ ಕಾಯ್ದೆಯಲ್ಲಿ ವಿವರಿಸಿರುವ ಪ್ರಕಾರ ಮದುವೆ ಸಮಯ ಅಥವಾ ಮದುವೆಗಿಂತ ಮುಂಚೆ ಅಥವಾ ಮದುವೆಯ ನಂತರ ವರ ಅಥವಾ ಆತನ ತಂದೆ, ತಾಯಿ ಅಥವಾ ಆತನ ಸಂಬಂಧಿಕರು ವಧು ಅಥವಾ ಆತಳ ತಂದೆ, ತಾಯಿ ಅಥವಾ ಸಂಬಂಧಿಕರಿಂದ ನೇರವಾಗಿ ಅಥವಾ ಪರೋಕ್ಷವಾಗಿ ಒತ್ತಾಯಪೂರ್ವಕವಾಗಿ ಕೇಳಿ ಪಡಕೊಳ್ಳುವ ಬೆಲೆ ಬಾಳುವ ಯಾವುದೇ ಹಣ, ಸ್ವತ್ತು, ನಗದು ಅಥವಾ ಭದ್ರತೆಗೆ ವರದಕ್ಷಿಣೆ ಎನ್ನುತ್ತಾರೆ.
  4. ಆದರೆ ಮದುವೆ ಸಮಯದಲ್ಲಿ ವರನ ಅಥವಾ ವಧುವಿನ ಸಂಬಂಧಿಕರು ಒಬ್ಬರಿಂದ ಇನ್ನೊಬ್ಬರು ಕೇಳದೆ ಅಥವಾ ಒತ್ತಾಯಪೂರ್ವಕವಲ್ಲದೇ ಪಡೆದ ಉಡುಗೊರೆಗಳು ಕಾನೂನಿನ ಪ್ರಕಾರ ವರದಕ್ಷಿಣೆಯಾಗಿರುವುದಿಲ್ಲ.
  5. ವರದಕ್ಷಿಣೆಯನ್ನು ವಧು ಅಥವಾ ವಧುವಿನ ಕಡೆಯವರು ವರನಿಗೆ ಅಥವಾ ಆತನ ಕಡೆಯವರಿಗೆ ನೀಡಿರುವ ಸಂದರ್ಭದಲ್ಲಿ ಅಂತಹ ವರದಕ್ಷಿಣೆಗೆ ಸಂಬಂಧಪಟ್ಟ ಹಣ ಅಥವಾ ಸ್ವತ್ತು ಯಾರ ಬಳಿ ಇದ್ದರೂ ಕಾನೂನಿನ ಪ್ರಕಾರ ಅದು ವಧುವಿಗೆ ಸೇರಿದ ಸೊತ್ತಾಗಿರುತ್ತದೆ, ಹಾಗೂ ಅದನ್ನು ವಾಪಸ್ಸು ಪಡಕೊಂಡು ತನ್ನ ಇಚ್ಛೆ ಪ್ರಕಾರ ಉಪಯೋಗಿಸಿಕೊಳ್ಳುವ ಕಾನೂನು ಬದ್ಧ ಹಕ್ಕನ್ನು ವಧುವು ಹೊಂದಿರುತ್ತಾಳೆ. ಮತ್ತು ವರದಕ್ಷಿಣೆಯನ್ನು ಪಡೆದವರು ಅದನ್ನು ವಧುವಿಗೆ ವಾಪಸ್ಸು ನೀಡಬೇಕಾಗುತ್ತದೆ.
  6. ಒಂದು ವೇಳೆ ವರನ ಕಡೆಯವರು ವರದಕ್ಷಿಣೆಯನ್ನು ವಿವಾಹದ ದಿನಾಂಕದಿಂದ ಮೊದಲು ಪಡಕೊಂಡಿದಲ್ಲಿ ಅದನ್ನು ವಿವಾಹದ ದಿನಾಂಕದಿಂದ 3 ತಿಂಗಳ ಅವಧಿಯ ಒಳಗಾಗಿ ಹಾಗೂ ವರದಕ್ಷಿಣೆಯನ್ನು ವಿವಾಹದ
    ಸಮಯದಲ್ಲಿ ಅಥವಾ ಆ ನಂತರ ಪಡಕೊಂಡಲ್ಲಿ ಆ ರೀತಿಯಾಗಿ ಪಡಕೊಂಡ ದಿನಾಂಕದಿಂದ 3 ತಿಂಗಳ ಅವಧಿಯ ಒಳಗಾಗಿ ಹಾಗೂ ಒಂದು ವೇಳೆ ವರದಕ್ಷಿಣೆಯನ್ನು ಪಡೆದ ಸಂದರ್ಭದಲ್ಲಿ ವಧು ಮೈನರ್ ಆಗಿದ್ದಲ್ಲಿ ಆತಳಿಗೆ
    18 ವರ್ಷ ದಾಟಿದ 3 ತಿಂಗಳ ಅವಧಿಯ ಒಳಗಾಗಿ ವರನ ಕಡೆಯವರು ವಧುವಿನ ಕಡೆಯವರಿಂದ ಪಡೆದ ವರದಕ್ಷಿಣೆಯನ್ನು ವಧುವಿಗೆ ವಾಪಸ್ಸು
    ನೀಡಬೇಕಾಗುತ್ತದೆ.
  7. ಮೇಲ್ಕಾಣಿಸಿದಂತೆ ನಿರ್ದಿಷ್ಟ ಅವಧಿಯ ಒಳಗಾಗಿ ವರನ ಕಡೆಯವರು ತಾವು ಪಡೆದುಕೊಂಡ ವರದಕ್ಷಿಣೆಯನ್ನು ವಧುವಿಗೆ ಹಿಂತಿರುಗಿಸಲು ವಿಫಲರಾದಲ್ಲಿ ಕಾನೂನು ಪ್ರಕಾರ ಕನಿಷ್ಠ 6 ತಿಂಗಳಿಂದ 2 ವರ್ಷಗಳ ಅವಧಿಯವರೆಗಿನ ಜೈಲು ಶಿಕ್ಷೆ ಮತ್ತು ದಂಡನೆ ಅನುಭವಿಸಬೇಕಾಗುತ್ತದೆ.
  8. ಮೇಲ್ಕಾಣಿಸಿದಂತೆ ವರದಕ್ಷಿಣೆಯನ್ನು ಹಿಂತಿರುಗಿಸುವ ಮೊದಲೇ ವಧು ಮೃತಪಟ್ಟಲ್ಲಿ ಆಕೆಯ ವಾರೀಸುದಾರರು ವರದಕ್ಷಿಣೆಯನ್ನು ವಾಪಸ್ಸು ಕೇಳುವ ಹಕ್ಕು ಹೊಂದಿರುತ್ತಾರೆ.
  9. ಒಂದು ವೇಳೆ ವರದಕ್ಷಿಣೆ ನೀಡಿದ ನಂತರ ಆ ವಿವಾಹಿತ ಮಹಿಳೆ ವಿವಾಹದ ದಿನಾಂಕದಿಂದ 7 ವರ್ಷಗಳ ಅವಧಿಯೊಳಗೆ ಅಸ್ವಾಭಾವಿಕವಾಗಿ ಮರಣ ಹೊಂದಿದರೆ ಆ ಸಂದರ್ಭದಲ್ಲಿ ಆತಳ ಮಕ್ಕಳು ಅಥವಾ ಆಕೆಯ ತಂದೆ ತಾಯಿ ವರದಕ್ಷಿಣೆಯನ್ನು ವಾಪಸ್ಸು ಕೇಳುವ ಹಕ್ಕು ಹೊಂದಿರುತ್ತಾರೆ.
  10. ನಾನು ಮದುವೆಯಾಗಿ 7 ವರ್ಷದ ಅವಧಿಯ ಒಳಗೆ ವಿವಾಹಿತ ಮಹಿಳೆಯು ಅಸಹಜ ರೀತಿಯಾಗಿ ಅಥವಾ ಅಸ್ವಾಭಾವಿಕವಾಗಿ ಮೃತ ಪಟ್ಟಲ್ಲಿ ಮತ್ತು ಆಕೆಯ ಸಾವಿಗೀಡಾಗುವ ನಿಕಟಪೂರ್ವದಲ್ಲಿ ಆಕೆಯ ಗಂಡ ಅಥವಾ ಗಂಡನ ಸಂಬಂಧಿಕರು ವರದಕ್ಷಿಣೆಯ ಬೇಡಿಕೆಯ ಕಾರಣದಿಂದ ಆಕೆಯನ್ನು ಮಾನಸಿಕವಾಗಿ ಅಥವಾ ದೈಹಿಕವಾಗಿ ಹಿಂಸೆ ನೀಡಿದ್ದ ಬಗ್ಗೆ ಸಾಕ್ಷ್ಯಾಧಾರವಿದ್ದಲ್ಲಿ ಕಾನೂನಿ ಪ್ರಕಾರ ಆಕೆಯ ಸಾವು `ವರದಕ್ಷಿಣೆ ಸಾವು’ ಎಂದು ಪರಿಗಣಿಸಬೇಕಾಗುತ್ತದೆ. ಮತ್ತು ಅಪರಾಧವು ಸಾಬೀತಾದಲ್ಲಿ ಸಂಬಂಧಪಟ್ಟವರು ಕನಿಷ್ಠ 7 ವರ್ಷಗಳಿಂದ ಜೀವಾವಧಿ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಶಿಕ್ಷಾರ್ಹ ಅಪರಾಧಕ್ಕೆ ಒಳಗಾಗ ಬೇಕಾಗುತ್ತದೆ.
  11. ವರದಕ್ಷಿಣೆ ನಿಷೇದ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಯಲ್ಲಿ ತರಲು ವರದಕ್ಷಿಣೆ ನಿಷೇದ ಕಾಯ್ದೆಯ ಪ್ರಕಾರ ವರದಕ್ಷಿಣೆ ನಿಷೇದ ಅಧಿಕಾರಿಗಳನ್ನು ನೇಮಕ ಮಾಡುವ ಅಧಿಕಾರವನ್ನು ಆಯಾಯ ರಾಜ್ಯ
    ಸರಕಾರ ಹೊಂದಿರುತ್ತದೆ.
  12. ವರದಕ್ಷಿಣೆಗೆ ಸಂಬಂಧಪಟ್ಟ ಅಪರಾಧ ಕೃತ್ಯದಿಂದಾಗಿ ನೊಂದಿರುವ ವಿವಾಹಿತ ಮಹಿಳೆ ಅಥವಾ ಆತಳ ಸಂಬಂಧಿಕರು ಸಂಬಂಧಪಟ್ಟವರ ವಿರುದ್ಧ ನೇರವಾಗಿ ಪೋಲಿಸರಿಗೆ ದೂರು ಸಲ್ಲಿಸಬಹುದು. ಮತ್ತು ಮಾನ್ಯತೆ ಹೊಂದಿರುವ ಸಮಾಜ ಅಭಿವೃದ್ಧಿ ಸಂಸ್ಥೆ ಅಥವಾ ಸಂಘಟನೆಗಳ ಮುಖಾಂತರ ದೂರನ್ನು ಸಲ್ಲಿಸಬಹುದು.
  13. ಸಾಮಾನ್ಯವಾಗಿ ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಪಟ್ಟ ದೂರಿನ ವಿಚಾರಣೆಯನ್ನು ಗರಿಷ್ಠ 3 ತಿಂಗಳ ಅವಧಿಯ ಒಳಗಾಗಿ ದೂರು ಪಡಕೊಂಡ ವರದಕ್ಷಿಣೆ ನಿಷೇದ ಅಧಿಕಾರಿ ಮುಗಿಸಬೇಕಾಗುತ್ತದೆ. ಮತ್ತು ಮೇಲ್ನೋಟಕ್ಕೆ ಅಪರಾಧಕ್ಕೆ ಸಂಬಂಧಪಟ್ಟ ಸಾಕ್ಷಿ ಅಥವಾ ಪುರಾವೆ ಕಂಡು ಬಂದಲ್ಲಿ ಸಂಬಂಧಪಟ್ಟ ಪೋಲಿಸ್ ಅಧಿಕಾರಿಯು ಅಪರಾಧವೆಸಗಿದ ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಮಾಡಿ ಅವರ ವಿರುದ್ಧ ಅಂತಿಮ ವರದಿಯನ್ನು (ಚಾರ್ಜ್ ಶೀಟ್)
    ಸಂಬಂಧಪಟ್ಟ ನ್ಯಾಯಾಲಯಕ್ಕೆ ದಾಖಲು ಮಾಡಬೇಕಾಗುತ್ತದೆ.
ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 96116 82681

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!