Tuesday, December 7, 2021
spot_img
Homeಅಂಕಣಕಗ್ಗದ ಸಂದೇಶ- ಹಿಗ್ಗದಿರೆ ಕುಗ್ಗದಿರೆ ಬದುಕು ಸೊಗಸು

ಕಗ್ಗದ ಸಂದೇಶ- ಹಿಗ್ಗದಿರೆ ಕುಗ್ಗದಿರೆ ಬದುಕು ಸೊಗಸು

“ಅಂದಿಗಂದಿನ ಕೆಲಸ,ಸಂದನಿತರಲಿ ತೃಪ್ತಿ|
ಕುಂದದುಬ್ಬದ ಮನಸು ಬಂದುದೇನಿರಲಿ||
ಬಂಧು ಮತಿ ಲೋಕದಲಿ, ಮುನ್ ದೃಷ್ಟಿ ಪರಮದಲಿ|
ಹೊಂದಲಿರುವುದು ಪುಣ್ಯ-ಮಂಕುತಿಮ್ಮ

  ಅಂದಿಗೆ ಅಂದಿನ ಕೆಲಸ.ದೊರಕಿದಷ್ಟರಲ್ಲಿಯೆ ತೃಪ್ತಿಯನ್ನು ಪಡಬೇಕು.ಹೆಚ್ಚು ದೊರೆತಾಗ ಹಿಗ್ಗದಾ,ಕಡಿಮೆಯಾದಾಗ  ಕುಗ್ಗದಾ ಮನಸ್ಥಿತಿಯೊಂದಿಗೆ ಜಗದ ಜನರೊಂದಿಗೆ ಸ್ಬೇಹಭಾವವನ್ನು ಬೀರಿ; ಪರತತ್ವದ ಮೇಲೆ ದೃಷ್ಟಿಯನ್ನು ಹೊಂದಿರುವವರು ಪುಣ್ಯವಂತರು ಎಂದು ಮಾನ್ಯ ಡಿ.ವಿ.ಜಿ ಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
   ದಿನದಿನದ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು.ಮಾಡಿದ ಕೆಲಸಕ್ಕೆ ಸಿಕ್ಕ ಪ್ರತಿಫಲವನ್ನು ತೃಪ್ತಿಯಿಂದ  ಅನುಭವಿಸಬೇಕು.ಸುಖ ಬಂದಾಗ ಹಿಗ್ಗಿ ಮೈ ಮರೆಯದೆ,ದುಃಖ ಬಂದಾಗ ಕುಗ್ಗದೆ ಬದುಕನ್ನು ಸಮಭಾವದಿಂದ ಸ್ವೀಕರಿಸಬೇಕು.ಫಲದ ಬಗ್ಗೆ ಚಿಂತಿಸದೆ ನಮ್ಮ ಕರ್ತವ್ಯದ ಕಡೆ  ಗಮನ ಕೊಡಬೇಕು.ಸಮಾಜದ ಬಂಧುಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರೆ ನಮ್ಮ ಕಷ್ಟ ಮತ್ತು ಸುಖವನ್ನು ಅವರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಜೀವನದ ಉದಾತ್ತವಾದ ದೃಷ್ಟಿ ಪರತತ್ವದ ಮೇಲಿರಬೇಕು.ಎಲ್ಲರ ಬದುಕಿನ ಪರಮ ಗುರಿ ಪರಮಾತ್ಮನ ಸನ್ನಿಧಾನವನ್ನು ತಲುಪುವುದು.ಅದಕ್ಕಾಗಿ ಜೀವನದಲ್ಲಿ ತೃಪ್ತಿ ಮತ್ತು ಭಗವಂತನೆಡೆ ದೃಷ್ಟಿಯನ್ನು ಹೊಂದಬೇಕು.

 " ಮರೆತುಬಿಡು ಅಂದಂದೆ ಎಲ್ಲ ಹರ್ಷವಿಷಾದ| ಹಿತ ತರುವುದೆಮಗಿಲ್ಲಿ ಸಮಚಿತ್ತವೊಂದೆ||ನಿನ್ನ ನೆಟ್ಟನೆ ನೀನು ಅರಿವುದೊಳಿತಿನ ದಾರಿ|ಚಿತ್ತ ಚಿಂತನೆ ಲೇಸು-ಮುದ್ದುರಾಮ|" ಎಂಬ ಕೆ. ಶಿವಪ್ಪನವರ ನುಡಿಯಂತೆ ಒಳಿತಿರಲಿ ಕೆಡುಕಿರಲಿ ಅದನ್ನು ಹೊತ್ತು ತಿರುಗಬಾರದು.ಚಿತ್ತ ಚಿಂತನೆಯಿಂದ ನಮ್ಮನ್ನು ನಾವು ಅರ್ಥಮಾಡಿಕೊಳ್ಳಬೇಕು.'ನಿದ್ದಗೊಮ್ಮೆ ನಿತ್ಯ ಮರಣ,ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ?' ಎಂಬ ಬೇಂದ್ರೆಯವರ ಕವಿತೆಯ ಸಾಲನ್ನು ಇಲ್ಲಿ ನೆನಪಿಸಿಕೊಳ್ಳಬಹುದು.ಭೂತ ಭವಿಷತ್ ಕ್ಕಿಂತ ವರ್ತಮಾನ ಬಹಳ ಮುಖ್ಯ.ಪ್ರತಿದಿನ ಪ್ರತಿಕ್ಷಣವನ್ನು ಆಶಾವಾದಿಯಾಗಿ ಆಹ್ಲಾದದಿಂದ ಆಸ್ವಾದಿಸುತ್ತಾ ಮುನ್ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕದ ಅಧ್ಯಕ್ಷರು

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!