ಕೊರೋನಾ ಸಂಕಷ್ಟ: ರೈತರಿಗೆ ಶೂನ್ಯಬಡ್ಡಿದರದಲ್ಲಿ ಅಲ್ಪಾವಧಿ ಬೆಳೆ ಸಾಲ: ಸಿಎಂ ಯಡಿಯೂರಪ್ಪ

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಕೋವಿಡ್ ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವ ಉದ್ದೇಶವನ್ನು ಹೊಂದಿದ್ದು, 30.26 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ. 19,370 ಕೋಟಿ ಅಲ್ಪಾವಧಿ ಬೆಳೆ ಸಾಲ ಮತ್ತು 60 ಲಕ್ಷ ರೈತರಿಗೆ ಶೇ. 3ರ ಬಡ್ಡಿ ದರದಲ್ಲಿ 1,440 ಕೋಟಿ ಮಧ್ಯಮಾವಧಿ/ ದೀರ್ಘಾವಧಿ ಸಾಲ ವಿತರಣೆ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ.

ರೈತರಿಗೆ ಮತ್ತು ಸ್ತ್ರೀ ಶಕ್ತಿ ಗುಂಪುಗಳಿಗೆ ಸಾಲ ವಿತರಿಸುವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ‘60 ಲಕ್ಷ ರೈತರಿಗೆ ಶೇ 3 ಬಡ್ಡಿ ದರದಲ್ಲಿ  1,440 ಕೋಟಿ ಮಧ್ಯಮಾವಧಿ, ದೀರ್ಘವಾಧಿ ಸಾಲ ವಿತರಿಸಲು ಗುರಿ ಹೊಂದಲಾಗಿದೆ’ ಎಂದೂ ತಿಳಿಸಿದರು.

ಅಲ್ಲದೆ, 2021–22ನೇ ಸಾಲಿನಲ್ಲಿ 40 ಲಕ್ಷ ಸ್ತ್ರೀ ಶಕ್ತಿ ಗುಂಪುಗಳಿಗೆ  1,400 ಕೋಟಿ ಸಾಲ ಗುರಿ ಹೊಂದಲಾಗಿದೆ. ಮೇ ಅಂತ್ಯಕ್ಕೆ 6,700 ಗುಂಪುಗಳಿಗೆ  233. 33 ಕೋಟಿ ಸಾಲ ವಿತರಿಸಲಾಗಿದೆ ಎಂದೂ ವಿವರಿಸಿದರು. 

ರಾಜ್ಯದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಈವರೆಗೆ 2.50 ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ರಚನೆ ಮಾಡಲಾಗಿದ್ದು, 32 ಲಕ್ಷ ಸದಸ್ಯರಿದ್ದಾರೆ. ಕಳೆದ ವರ್ಷ ಕೃಷಿ ಕ್ಷೇತ್ರದಲ್ಲಿ 25. 67 ಲಕ್ಷ ರೈತರಿಗೆ  16,451 ಕೋಟಿ ಅಲ್ಪಾವಧಿ ಸಾಲ, 52 ಸಾವಿರ ರೈತರಿಗೆ 1260.12 ಕೋಟಿ ಮಧ್ಯಮಾವಧಿ, ದೀರ್ಘಾವಧಿ ಸಾಲ ವಿತರಿಸುವ ಗುರಿಗೆ ಎದುರಾಗಿ ಶೇ 114ರಷ್ಟು ಸಾಧನೆ ಮಾಡಲಾಗಿದೆ. 57 ಲಕ್ಷ ರೈತರಿಗೆ ಹೈನುಗಾರಿಕೆಗೆ  105.64 ಕೋಟಿ ಸಾಲ ನೀಡಲಾಗಿದೆ’ ಎಂದರು.

ನಮ್ಮದು ರೈತಪರ ಸರ್ಕಾರ. ಕೃಷಿ, ಆರೋಗ್ಯ ಮತ್ತು ಶಿಕ್ಷಣ ನಮ್ಮ ಸರ್ಕಾರದ ಆದ್ಯತೆಯ ಕ್ಷೇತ್ರಗಳು. ಎಲ್ಲರಿಗೂ ನಾನು, ನನಗಾಗಿ ಎಲ್ಲರೂ ಎಂಬ ಸಹಕಾರಿ ತತ್ವದಡಿ ಸ್ವಾಲಂಬಿ ಜೀವನ ನಡೆಸಲು ಸಾಲ ಸೌಲಭ್ಯ ನೀಡಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಕೊರತೆ ಇಲ್ಲ’ ಎಂದೂ ಮುಖ್ಯಮಂತ್ರಿ ತಿಳಿಸಿದರು. ನಾವು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದ ಮತ್ತು ಯೋಜನೆಗಳೊಂದಿಗೆ ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಅವಕಾಶವಿದೆ ಎಂದು ಅವರು ಹೇಳಿದರು.





























































































































































































































error: Content is protected !!
Scroll to Top