Tuesday, August 3, 2021
spot_img
Homeಅಂಕಣಕಗ್ಗದ ಸಂದೇಶ-ಪರಹಿತಾರ್ಥಕ್ಕಿಲ್ಲದ ಶರೀರವಿದೇತಕೆ?

ಕಗ್ಗದ ಸಂದೇಶ-ಪರಹಿತಾರ್ಥಕ್ಕಿಲ್ಲದ ಶರೀರವಿದೇತಕೆ?

“ಪರಹಿತದ ಮಾತಿರಲಿ ಪರರಿನೇ ಜೀವಿಪನು|
ನರಜಂತು;ಪಶುಪಕ್ಷಿ ಕೀಟ ಮೀನ್ಗಳವೋಲ್||
ಪರರಿನೆಳಸದೇನನುಂ ಪರರಿಗುಪಕರಿಪ|
ತರುಜನ್ಮವದು ಪುಣ್ಯ-ಮಂಕುತಿಮ್ಮ|”

ಇತರರಿಗೆ ಉಪಕಾರ  ಮಾಡುವ ಮಾತು ಬಿಡಿ; ಮನುಷ್ಯ ಪಶು ಪಕ್ಷಿ  ಕೀಟ ಮೀನುಗಳಂತೆ ಇತರರಿಂದಲೇ ಜೀವನ ನಡೆಸುವನು.ಪರರಿಂದ ಏನನ್ನು ಬಯಸದೆ ಪರರಿಗೆ ಉಪಕಾರ ಮಾಡುವ ಮರದ ಜನ್ಮ ಸಾರ್ಥಕವೆಂದು ಮಾನ್ಯ ಡಿ.ವಿ.ಜಿ ಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
"ಪರೋಪಕಾರಾರ್ಥಂ ಇದಂ ಶರೀರಂ" ಅಂದರೆ ಮಾನವನ ಶರೀರವಿರುವುದೇ ಪರೋಪಕಾರಕ್ಕಾಗಿ ಎಂದು. 'ಪರಹಿತಾರ್ಥಕ್ಕಿಲ್ಲದವನ ಶರೀರವೇತಕೆ?' ಎಂದು ದಾಸರು ಕೇಳಿದ್ದಾರೆ. ಮಾನವನ ಜೀವನ ಸಾರ್ಥಕತೆ ಇರುವುದು ಪರೋಪಕಾರದಲ್ಲಿ.ಆದರೆ ಮನುಷ್ಯ ಪಶು ಪಕ್ಷಿ ಕೀಟ ಮೀನುಗಳಂತೆ ತನ್ನ ಬದುಕನ್ನು ಸೀಮಿತಗೊಳಿಸಿಕೊಂಡಿದ್ದಾನೆ. ತಮ್ಮ ರಕ್ಷಣೆ ಮಾಡಿಕೊಳ್ಳುವುದು, ತಮಗೆ ಬೇಕಾದ ಆಹಾರವನ್ನು ಕಂಡುಕೊಳ್ಳುವುದು ಮತ್ತು ಸಂತಾನೋತ್ಪತ್ತಿ ಮಾಡುವುದು ಹೀಗೆ ಸಾಮಾನ್ಯವಾಗಿ ಎಲ್ಲಾ ಜೀವಿಗಳಿಗೆ ಬದುಕು ಈ ಮೂರಕ್ಕೆ ಸೀಮಿತವಾಗಿರುತ್ತದೆ. ಆದರೆ ಜೀವಿಗಳಲ್ಲಿ ಶ್ರೇಷ್ಠನಾದ ಮಾನವ ಇಷ್ಟಕ್ಕೆ ಸೀಮಿತವಾಗಬಾರದು. ಪರೋಪಕಾರಕ್ಕೆ ತನ್ನ ಬದುಕನ್ನು ಅರ್ಪಿಸಿಕೊಂಡ ಮರ ನಮಗೆ ಮಾದರಿಯಾಗಬೇಕು. "ನೆರಳನಿನಿತನು ಕೊಡುವ ದಣಿವನಿನಿತನು ಕಳೆವ| ತಿರೆಯ ಪಯಣದ ಹೊರೆಯನಿನಿತನು ಸುಳುವೆನಿಪಾ|| ತರುವಾಗಿ ಮನೆಯ ಒಳಗೋ ಹೊರಗೋ ಬೆಳೆಯುತಿರೆ| ವರಧರ್ಮವದೆಲವೊ-ಮಂಕುತಿಮ್ಮ" ಎಂದು ಡಿವಿಜಿಯವರೆ ತಮ್ಮ ಇನ್ನೊಂದು ಕಗ್ಗದಲ್ಲಿ ಒಂದು ಮರ ನಮಗೆ ಯಾವ ರೀತಿಯಲ್ಲಿ‌ ಉಪಕಾರಿಯಾಗಿದೆ ಎನ್ನುವುದನ್ನು ಮನೋಜ್ಞವಾಗಿ ತಿಳಿಸಿದ್ದಾರೆ.

‘ತನಗಾಗಿ ಬದುಕಿದರೆ ಬದುಕಿದ್ದು ಸತ್ತಂತೆ, ಯಾರು ಇತರರಿಗಾಗಿ ಬದುಕುತ್ತಾರೋ ಅವರದ್ದೇ ನಿಜವಾದ ಬದುಕು’ ಎಂದು ಪ್ರಾಜ್ಞರಾದ ನರಸಿಂಹಯ್ಯನವರು ಹೇಳಿದ್ದಾರೆ. “ಬಗ್ಗಿ ತಾ ಕೈಕೊಟ್ಟು ಬಿದ್ದವರನೆತ್ತಿದರೆ| ಎತ್ತರದ ಮನುಜ ನೀ ನೋವಿನಿಳೆಯಲಿ| ನೆರವು ಹರಿಗೋಲಾಗು ಸಂಕಟದ ನದಿಯಲ್ಲಿ| ಈಜು ಪರಹಿತಕಾಗಿ-ಮುದ್ದುರಾಮ’ ಎಂಬ ಕೆ. ಶಿವಪ್ಪನವರ ಕವಿವಾಣಿಯಂತೆ ಜೀವನದಲ್ಲಿ ನಮ್ಮ ಕೈಲಾದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದಾಗ, ಸಮಾಜದ ಹಿತಕ್ಕಾಗಿ ಶ್ರಮಿಸಿದಾಗ ಜೀವನ ಸಾರ್ಥಕವಾಗುವುದಲ್ಲವೆ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು ಸಾಹಿತ್ಯ ಪರಿಷತ್ ಕಾರ್ಕಳ ಘಟಕ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!