ಹೆಬ್ರಿ : ಕಳೆದ 1 ವರ್ಷದಿಂದ ಬಟ್ಟೆ ವ್ಯಾಪಾರಸ್ಥರು, ಟೈಲರ್ಸ್, ಚಮ್ಮಾರರು, ಸವಿತಾ ಸಮಾಜದವರು, ಚಿನ್ನದ ಕೆಲಸ ಮಾಡುವ ಕುಶಲಕರ್ಮಿಗಳು, ಸ್ಟುಡಿಯೋ, ಪ್ರಿಂಟಿಂಗ್ ಪ್ರೆಸ್, ಎಲೆಕ್ಟ್ರಾನಿಕ್ಸ್ ಅಂಗಡಿಯವರು ಸಂಕಷ್ಟದಲ್ಲಿದ್ದಾರೆ. ಅಂಗಡಿ ತೆರೆಯಲು ಅವಕಾಶವಿಲ್ಲದೇ ಇಂತಹ ಉದ್ಯಮಿಗಳು ನಷ್ಟ ಅನುಭವಿಸುತ್ತಿದ್ದಾರೆ. ಇವರೆಲ್ಲರ ಸಾಲ ಮನ್ನಾ ಮಾಡುವಂತೆ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಒತ್ತಾಯಿಸಿದರು.
ಸೋಮವಾರ ಹೆಬ್ರಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಸಣ್ಣ ವ್ಯಾಪಾರಸ್ಥರ ಬದುಕು ತುಂಬಾ ಕಷ್ಟಕರವಾಗಿದೆ. ಬಾರ್, ಮದ್ಯದಂಗಡಿ ತೆರೆಯಲು ಅವಕಾಶವಿದೆ. ಅಲ್ಲಿ ಕೊರೋನಾ ಹರಡುವುದಿಲ್ಲವೇ ?
ಸಣ್ಣ ವ್ಯಾಪಾರಸ್ಥರ ಮಳಿಗೆಯಿಂದ ಮಾತ್ರ ಕೊರೊನಾ ಹರಡುವುದೇ ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದರು.
ಸಣ್ಣ ವ್ಯಾಪಾರಸ್ಥರ ಕುರಿತು ಜಿಲ್ಲಾಧಿಕಾರಿಯವರು ಗಂಭೀರವಾಗಿ ಯೋಚಿಸಬೇಕು. ಸಂಸದರು, ಶಾಸಕರು, ಜನಪ್ರತಿನಿಧಿಗಳು ಜನರ ಬಗ್ಗೆ ಚಿಂತಿಸದೇ ಕುರ್ಚಿ ಉಳಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದಾರೆ ಎಂದವರು ದೂರಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ ಶೆಟ್ಟಿ, ಕಾಂಗ್ರೆಸ್ನ ಪ್ರಮುಖರಾದ ವರಂಗ ಲಕ್ಷ್ಮಣ ಆಚಾರ್ಯ, ಶಶಿಕಲಾ ಡಿ.ಪೂಜಾರಿ, ಹೆಚ್.ಬಿ. ಸುರೇಶ್, ಎಚ್. ಜನಾರ್ಧನ್, ಸಂತೋಷ ಕುಮಾರ್ ಶೆಟ್ಟಿ ಅಜೆಕಾರ್, ಅಶ್ವಿನಿ ಮುದ್ರಾಡಿ, ನಾಗರಾಜ ಭಂಡಾರಿ ಪತ್ರಿಕಾಗೋಷ್ಠಿಯಲ್ಲಿದ್ದರು.