ಹಾಸನ: ಎಚ್.ಡಿ. ದೇವೇಗೌಡ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ ಶಾಪ ಕಾಂಗ್ರೆಸ್ಗೆ ತಟ್ಟಿದೆ. ಹಾಗಾಗಿಯೇ ಪಕ್ಷಕ್ಕೆ ಈ ಸ್ಥಿತಿ ಬಂದಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಉಳಿಯಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ. ಅವರು ಇಲ್ಲದಿದ್ದರೇ ಕಾಂಗ್ರೆಸ್ ಎಂದೋ ನಿರ್ನಾಮವಾಗುತ್ತಿತ್ತು ಸಿದ್ದರಾಮಯ್ಯ ಕೈ ಬಿಟ್ಟರೆ ಈಗಲೂ ಪಕ್ಷ ಮುಳುಗುತ್ತೆ. ಸದ್ಯ ಕಾಂಗ್ರೆಸ್ ಅನ್ನು ಶೇಕಡಾ 70ಕ್ಕೆ ತಂದು ನಿಲ್ಲಿಸಿದ್ದಾರೆ. ಈ ವಿಚಾರವನ್ನು ನೇರವಾಗಿಯೇ ಹೇಳುತ್ತೇನೆ ಎಂದು ಸಿದ್ದರಾಮಯ್ಯ ಪರ ರೇವಣ್ಣ ಬ್ಯಾಟಿಂಗ್ ಮಾಡಿದ್ದಾರೆ.
ಸಿದ್ದರಾಮಯ್ಯನವರಿಂದಾಗಿಯೇ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಎಪ್ಪತ್ತು ಸ್ಥಾನವನ್ನು ಗೆದ್ದಿತ್ತು. ಸಿದ್ರಾಮಣ್ಣ ಏನಾದರೂ ಇರದಿದ್ದರೆ ಕಾಂಗ್ರೆಸ್ ಝೀರೋ ಆಗುತ್ತಿತ್ತು ಎಂದು ರೇವಣ್ಣ ಹೇಳಿದರು.
ಜನರ ಜೀವ ಉಳಿಸುವ ಕಡೆ ಗಮನ ಹರಿಸುವ ಬದಲು ಪ್ರಚಾರಕ್ಕಾಗಿ ನಿತ್ಯ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ಮಾಡಿದ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿ.ಎಂ ಯಡಿಯೂರಪ್ಪ ಅಧಿಕಾರದಿಂದ ಕೆಳಗೆ ಇಳಿಯುತ್ತಾರಾ ಎಂದು ಪ್ರಶ್ನಿಸಿದರು.