Saturday, December 4, 2021
spot_img
Homeಅಂಕಣವೀಲುನಾಮೆ (ಉಯಿಲು)ಗೆ ಸಂಬಂಧಪಟ್ಟ ಕಾನೂನು ಮಾಹಿತಿ

ವೀಲುನಾಮೆ (ಉಯಿಲು)ಗೆ ಸಂಬಂಧಪಟ್ಟ ಕಾನೂನು ಮಾಹಿತಿ

ಯಾವುದೇ ಒಬ್ಬ ವ್ಯಕ್ತಿಯು ತನ್ನ ಜೀವಿತ ಅವಧಿಯಲ್ಲಿ ಆತನ ಆಸ್ತಿ ಕುರಿತು ಜೀವಿತಾವಧಿಯ ನಂತರದ ವಾರೀಸುದಾರಿಕೆ ಅಥವಾ ವ್ಯವಸ್ಥೆ ಬಗ್ಗೆ ಸ್ವಂತ ಇಚ್ಛೆಯಿಂದ ಮತ್ತು ಸ್ವಂತ ಬುದ್ಧಿಯಿಂದ ಕಾನೂನಿನನ್ವಯ ಮಾಡುವ ಘೋಷಣೆಗೆ ವೀಲುನಾಮೆ (ಉಯಿಲು) ಅಥವಾ ಮರಣಶಾಸನ ಎನ್ನುತ್ತಾರೆ. ವೀಲುನಾಮೆ ಲಿಖಿತ ರೂಪದಲ್ಲಿ ಇರಬೇಕು. ಆದರೆ, ವೀಲುನಾಮೆ ಘೋಷಿಸುವ ವ್ಯಕ್ತಿ ಒಂದು ವೇಳೆ ಯುದ್ಧದಲ್ಲಿ ನಿರತನಾದ ಸೈನಿಕ, ವೈಮಾನಿಕ ಅಥವಾ ನಾವಿಕನಾಗಿದ್ದರೆ ಆತನು ವಿಶೇಷ ಸಂದರ್ಭಗಳಲ್ಲಿ ಭಾಗಶಃ ಲಿಖಿತ ಮತ್ತು ಭಾಗಶಃ ಮೌಖಿಕ ಅಥವಾ ಸಂಪೂರ್ಣವಾಗಿ ಮೌಖಿಕ ವೀಲುನಾಮೆಯನ್ನು ಮಾಡಬಹುದು. ಇಂತಹ ವೀಲುನಾಮೆಗೆ “ವಿಶೇಷ ವೀಲುನಾಮೆ” ಅಥವಾ ’ಉಯಿಲು’ ಎಂದು ಭಾರತೀಯ ವಾರೀಸು ಅಧಿನಿಯಮ (ಇಂಡಿಯನ್ ಸಕ್ಷೆಶನ್ ಆಕ್ಟ್) ನಲ್ಲಿ ವ್ಯಾಖ್ಯಾನಿಸಲಾಗಿದೆ. ಕಾನೂನಿನಡಿಯಲ್ಲಿ ವೀಲುನಾಮೆಯನ್ನು ಅಪ್ರಾಪ್ತ ವಯಸ್ಕನಲ್ಲದ ಅಂದರೆ 18 ವರ್ಷ ವಯಸ್ಸನ್ನು ದಾಟಿದ ಮತ್ತು ಮಾನಸಿಕ ಸ್ವಾಸ್ಥ್ಯ ಹೊಂದಿರುವ ಮತ್ತು ಸ್ವಂತ ನಿರ್ಧಾರ ಹೊಂದುವ ಯಾವುದೇ ವ್ಯಕ್ತಿ ಮಾಡುವ ಸಾಮರ್ಥ್ಯ ಹೊಂದಿರುತ್ತಾನೆ. ಕಿವುಡ, ಮೂಗ ಅಥವಾ ಕುರುಡ ವ್ಯಕ್ತಿ ತಾನು ಮಾಡುತ್ತಿರುವ ವೀಲುನಾಮೆ ಬಗ್ಗೆ ಸಾಕಷ್ಟು ತಿಳುವಳಿಕೆ ಹೊಂದಿದ್ದಲ್ಲಿ ಅಂತಹ ವ್ಯಕ್ತಿಯೂ ಕೂಡ ಜೀವಿತಾವಧಿಯಲ್ಲಿ ತನ್ನ ಆಸ್ತಿಗೆ ಸಂಬಂಧಿಸಿದಂತೆ ವೀಲುನಾಮೆಯನ್ನು ಮಾಡಬಹುದು. ಯಾವುದೇ ವ್ಯಕ್ತಿ ಕೆಲವು ಸಮಯ ಮಾತ್ರ ಮಾನಸಿಕವಾಗಿ ಅಸ್ವಸ್ಥನಾಗಿದ್ದು ಮತ್ತೆ ಕೆಲವು ಸಮಯದಲ್ಲಿ ಸ್ವಸ್ಥನಾಗಿರುತ್ತಾನೆಯೋ ಅಂತಹ ವ್ಯಕ್ತಿ ಮಾನಸಿಕವಾಗಿ ಸ್ವಸ್ಥನಾಗಿದ್ದ ಸಮಯದಲ್ಲಿ ಮಾತ್ರ ಉಯಿಲು ಮಾಡಬಹುದಾಗಿದೆ.
ಯಾವುದೇ ವ್ಯಕ್ತಿಯು ತಾನು ಸೇವಿಸುವ ಅಮಲು ಪದಾರ್ಥ ಅಥವಾ ಯಾವುದೇ ರೀತಿಯ ಅನಾರೋಗ್ಯದಿಂದಾಗಿ, ಇತರ ಯಾವುದೇ ಕಾರಣದಿಂದಾಗಿ ಸ್ವಂತ ನಿರ್ಧಾರ ಹೊಂದುವ ಅಥವಾ ಸರಿಯಾದ ತಿಳುವಳಿಕೆ ಇಲ್ಲದ ಸ್ಥಿತಿಯಲ್ಲಿದ್ದಾಗ ವೀಲುನಾಮೆಯನ್ನು ಬರೆಸಿಡುವಂತಿಲ್ಲ. ಬೇರೆ ವ್ಯಕ್ತಿಗಳ ಬೆದರಿಕೆ, ಒತ್ತಡ, ಮರಳು ಮಾತಿಗೆ ಅಥವಾ ಮೋಸಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಮಾಡಿದ ವೀಲುನಾಮೆ ಕಾನೂನು ಪ್ರಕಾರ ಊರ್ಜಿತವಾಗುವುದಿಲ್ಲ.
ವೀಲುನಾಮೆ ಮಾಡಲು ಕಾನೂನಿನನ್ವಯ ಸಮರ್ಥರಲ್ಲದವರ, ಅಂದರೆ ಅಪ್ರಾಪ್ತ ವಯಸ್ಕರ ಅಥವಾ ಬುದ್ದಿಭ್ರಮಣೆಯಾದವರ ಪರವಾಗಿ ಅವರ ಪಾಲಕರು ಅಥವಾ ಪೋಷಕರು ಉಯಿಲು ಮಾಡುವಂತಿಲ್ಲ.

ವೀಲುನಾಮೆ ಮಾಡುವಾಗ ಅಗತ್ಯವಾಗಿ ಪಾಲಿಸಬೇಕಾದ ನಿಯಮಗಳು

ವೀಲುನಾಮೆ ಬರವಣಿಗೆಯಲ್ಲಿಯೇ ಇರಬೇಕು. ಸಾಧ್ಯವಾದರೆ ಅದನ್ನು ಬರೆದಿಡುವ ವ್ಯಕ್ತಿ ತನ್ನ ಸ್ವಂತ ಕೈ ಬರಹದಲ್ಲಿಯೇ ಬರೆಯುವುದು ಸೂಕ್ತ. ವೀಲುನಾಮೆಯನ್ನು ತನಗೆ ತಿಳಿದಿರುವ ಯಾವುದೇ ಭಾಷೆಯಲ್ಲಿ ಮತ್ತು ಯಾವುದೇ ಶೈಲಿಯಲ್ಲಿ ಬರೆಯಬಹುದು. ಕಡ್ಡಾಯವಾಗಿ ಛಾಪಾ ಕಾಗದದ (ಸ್ಟ್ಯಾಂಪ್ ಪೇಪರ್) ಮೇಲೆಯೇ ಬರೆಯಬೇಕೆಂಬ ನಿಯಮ ಇರುವುದಿಲ್ಲ. ಸಾಧಾರಣ ಕಾಗದದ ಮೇಲೆ ಸಹ ಬರೆಯಬಹುದಾಗಿದೆ. ವೀಲುನಾಮೆಯ ಪ್ರತಿ ಪುಟದ ಮೇಲೆ ಬರೆದಾತ ಸಹಿಯನ್ನು ಮಾಡಬೇಕು. ತನ್ನ ಹೆಬ್ಬೆರಳಿನ ಗುರುತನ್ನು ಹಾಕಬೇಕು. ದಸ್ತಾವೇಜಿಗೆ ಕನಿಷ್ಠ ಇಬ್ಬರು ವ್ಯಕ್ತಿಗಳು ಸಾಕ್ಷಿಗಳಾಗಿ ಸಹಿ ಮಾಡಬೇಕು.
ಈ ಸಾಕ್ಷಿದಾರರು ವೀಲು ಬರೆಸಿಡುವ ವೀಲುನಾಮೆ ದಸ್ತಾವೇಜಿಗೆ ಸಹಿ ಅಥವಾ ಹೆಬ್ಬೆಟ್ಟು ಗುರುತು ಮಾಡಿದ್ದನ್ನು ಪ್ರತ್ಯಕ್ಷವಾಗಿ ನೋಡಿರಬೇಕು. ಉಯಿಲು ಮೂಲಕ ಯಾವುದೇ ವಿಧದ ಪ್ರಯೋಜನವನ್ನು ಪಡೆಯುವ ವ್ಯಕ್ತಿ ಸಾಕ್ಷಿ ಹಾಕುವಂತಿಲ್ಲ. ಆಸ್ತಿಗಳ ಮತ್ತು ಅವುಗಳ ಮೇಲೆ ಹಕ್ಕು ಪಡೆಯುವ ವ್ಯಕ್ತಿಗಳ ವಿವರಗಳನ್ನು ಸ್ಪಷ್ಟವಾಗಿ ಮತ್ತು ಸರಿಯಾಗಿ ನಮೂದಿಸಬೇಕು. ತನ್ನ ವೀಲುನಾಮೆಯಲ್ಲಿ ವಿವರಿಸಿದ ಆಸ್ತಿಗಳ ಮೇಲೆ ಸಂಪೂರ್ಣವಾದ ಹಕ್ಕನ್ನು ಹೊಂದಿರಬೇಕು. ಒಂದು ವೇಳೆ ಆತ ತನ್ನ ಜಂಟಿ ಹಕ್ಕಿನ ಆಸ್ತಿಯ ಕುರಿತು ಉಯಿಲು ಬರೆಸಿರುವ ಸಂದರ್ಭದಲ್ಲಿ ಆತನ ಅಂಶದ ಹಕ್ಕಿನ ಕುರಿತು ಅಂತಹ ದಾಖಲೆಯನ್ನು ಬರೆದಿಡಬಹುದು. ಒಬ್ಬ ಮಹಮ್ಮದೀಯನು ತನ್ನ ಒಟ್ಟು ಆಸ್ತಿಯ ಮೂರನೇ ಒಂದು ಭಾಗಕ್ಕೆ ಸಂಬಂಧಿಸಿದಂತೆ ಮಾತ್ರ, ವೀಲುನಾಮೆ ಮಾಡುವ ಹಕ್ಕುಳ್ಳವನಾಗಿರುತ್ತಾರೆ. ಉಯಿಲು ಮಾಡಿದ್ದರಿಂದಾಗಿ ಯಾವುದೇ
ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಅಂದರೆ ತಾನು ಬದುಕಿರುವ ಸಮಯ ತನ್ನ ಆಸ್ತಿಯ ಮೇಲಿನ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಯಾವುದೇ ಒಂದು ವೀಲುನಾಮೆ ಸದರಿ ದಾಖಲೆಯನ್ನು ಬರೆಸಿಡುವ ವ್ಯಕ್ತಿಯ ಮರಣಾ ನಂತರ ಜ್ಯಾರಿಗೆ ಬರುವುದು.
ಉಯಿಲನ್ನು ಕಡ್ಡಾಯವಾಗಿ ನೋಂದಣಿ (ರಿಜಿಸ್ಟ್ರೇಷನ್) ಮಾಡಿಸಬೇಕೆಂಬ ನಿಯಮ ಇರುವುದಿಲ್ಲ. ಆದರೆ, ನೋಂದಣಿ ಮಾಡುವುದರಿಂದ ಅಂತಹ ನೋಂದಾಯಿತ ವೀಲುನಾಮೆ ಬಗ್ಗೆ ಅನುಮಾನ ಬಹುಮಟ್ಟಿಗೆ ಕಡಿಮೆಯಾಗುತ್ತದೆ. ಮಾತ್ರವಲ್ಲದೇ ವೀಲುನಾಮೆ ಮೂಲಪ್ರತಿ ಕಳೆದು ಹೋದ ಸಂದರ್ಭದಲ್ಲಿ ಅದರ ಧೃಢೀಕೃತ ನಕಲನ್ನು ಸಂಬಂಧಪಟ್ಟ ನೋಂದಣಾಧಿಕಾರಿ ಕಚೇರಿಯಿಂದ ಪಡೆದು ಜಾರಿಗೆ ತರಬಹುದು. ವೀಲುನಾಮೆ ಮಾಡಿದ ನಂತರ ಆ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಯಾವುದೇ ರೀತಿಯಲ್ಲಿ  ತಿದ್ದುಪಡಿಯನ್ನು ತರುವ ಹಕ್ಕನ್ನು ಹೊಂದಿರುತ್ತಾನೆ. ಯಾವುದೇ ಒಂದು ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ತಾನು ಬರೆಸಿಟ್ಟ ಉಯಿಲನ್ನು ರದ್ಧುಪಡಿಸಿ ತನಗೆ ಸರಿ ಕಂಡ ರೀತಿಯಲ್ಲಿ ಯಾರ ಹೆಸರಲ್ಲಿಯೂ ಬೇರೆ ಉಯಿಲನ್ನು ಬರೆಸಿಡಬಹುದು. ಒಮ್ಮೆ ರದ್ಧುಪಡಿಸಿದ ವೀಲುನಾಮೆಯನ್ನು ಊರ್ಜಿತಗೊಳಿಸಲಾಗುವುದು. ಆದರೆ ಆ ವೀಲುನಾಮೆಯಲ್ಲಿನ ಅಂಶಗಳನ್ನೇ ಅಳವಡಿಸಿ ಬೇರೆ ಪ್ರತ್ಯೇಕವಾದ ಮತ್ತೊಂದು ವೀಲುನಾಮೆಯನ್ನು ಬರೆಸಿಡಬಹುದು. ಯಾವುದೇ ಒಂದು ವೀಲುನಾಮೆ ಕಾನೂನುಬದ್ಧವಾಗಿ ಸಾಬೀತಾಗಬೇಕಾದರೆ ಅದನ್ನು ಸಂಬಂಧಪಟ್ಟ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಿ ಅದರಲ್ಲಿನ ಸಾಕ್ಷಿಗಳ ಹೇಳಿಕೆಯನ್ನು ನ್ಯಾಯಾಲಯಕ್ಕೆ ನೀಡಿ ಸಿವಿಲ್ ನ್ಯಾಯಾಲಯದಿಂದ ಸೂಕ್ತ ಆದೇಶವನ್ನು ಪಡೆಯಬೇಕಾಗುತ್ತದೆ. ವೀಲುನಾಮೆನ ನೈಜತೆಯನ್ನು ನಿರ್ಧರಿಸುವ ಅಧಿಕಾರ ಯಾವುದೇ ಕಂದಾಯ ನ್ಯಾಯಾಲಯಕ್ಕಾಗಲೀ ಅಥವಾ ಕಂದಾಯ ಅಧಿಕಾರಿಗಳಿಗಾಗಲೀ ಇರುವುದಿಲ್ಲ. ಹೀಗಾಗಿ ಸಿವಿಲ್ ನ್ಯಾಯಾಲಯದಿಂದ ಸೂಕ್ತ ಆದೇಶವನ್ನು ಹೊಂದಿರದ ವೀಲುನಾಮೆಯ ಆಧಾರದಲ್ಲಿ ಯಾವುದೇ ಒಂದು ಆಸ್ತಿಯ ಆರ್‍ಟಿಸಿ ಅಥವಾ ಖಾತೆ ಬದಲಾವಣೆ ಮಾಡುವ ಅಧಿಕಾರ ಕಂದಾಯ ನ್ಯಾಯಾಲಯಕ್ಕಾಗಲೀ ಅಥವಾ ಕಂದಾಯ ಅಧಿಕಾರಿಗಳಿಗಾಗಲೀ ಇರುವುದಿಲ್ಲ.

ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ: 98452 32490/ 9611682681

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!