Thursday, August 5, 2021
spot_img
Homeಅಂಕಣಕಗ್ಗದ ಸಂದೇಶ-ಪ್ರಯತ್ನದಿಂದಲೇ ಸಿಗುವುದು ಅನುಭವ…

ಕಗ್ಗದ ಸಂದೇಶ-ಪ್ರಯತ್ನದಿಂದಲೇ ಸಿಗುವುದು ಅನುಭವ…

“ಅರೆದಿನದ ನಮ್ಮ ಯತ್ನದಿನದೇನಹುದೆನ್ನದಿರು,|
ಕಿರುದುಮೊಡಗೂಡಿರಲು ಸಿರಿಯಹುದು ಬಾಳ್ಗೆ||
ಪರಿಪೋಷಿಸದೆ ನಿನ್ನೊಡಲ ದಾರಿಮರದ ಫಲ|
ಕಿರು ಜಾಜಿ ಸೊಗಗೊಡದೆ-ಮಂಕುತಿಮ್ಮ”

‌‌‌‌ನಾವು ಮಾಡುವ ಪ್ರಯತ್ನ ಬಹಳ ಸಣ್ಣದು. ಇದರಿಂದ ಏನು ಪ್ರಯೋಜನವಾಗಬಹುದು ಎನ್ನುವ ಭಾವನೆ ಬೇಡ. ಏಕೆಂದರೆ ಸಣ್ಣ ಸಣ್ಣ ಸಾಧನೆಗಳಿಂದಲೆ ಬಾಳು ಸಮೃದ್ಧವಾಗುವುದು. ದಾರಿಯ ಬದಿಯಲ್ಲಿರುವ ಸಾಲು ಮರಗಳು ನಮಗೆ ನೆರಳನ್ನು ಮತ್ತು ಫಲವನ್ನು ನೀಡಿ ಪರಿಪೋಷಿಸುತ್ತವೆ.ಜಾಜಿಯ ಹೂವು ಸಣ್ಣದಾದರೂ ಸುಗಂಧವನ್ನು ನೀಡುವುದಿಲ್ಲವೆ? ಎಂದು ಜಗತ್ತಿನಲ್ಲಿ ನಮ್ಮಚಿಕ್ಕಚಿಕ್ಕ ಕೆಲಸದಿಂದಲೂ ಬಾಳಿಗೆ ಒಂದು ಅರ್ಥವನ್ನು ಕಂಡುಕೊಳ್ಳಬಹುದು ಎನ್ನುವುದನ್ನು ಮಾನ್ಯ ಡಿ.ವಿ.ಜಿ ಯವರು ಈ ಮುಕ್ತಕದಲ್ಲಿ ತಿಳಿಸಿದ್ದಾರೆ.
ನಮ್ಮದು ಅರ್ಧ ದಿನದ ಪ್ರಯತ್ನ ಇದರಿಂದ ಏನು ಪ್ರಯೋಜನವಾಗಬಹುದು? ಎಂದು ಸಂಶಯ ಪಡಬಾರದು.ಯಾಕೆಂದರೆ ನಮ್ಮ ಪ್ರತಿ ಪ್ರಯತ್ನವು ಒಂದು ಅನುಭವವನ್ನು ಕೊಡುತ್ತದೆ. ಸಣ್ಣಸಣ್ಣ ಪ್ರಯತ್ನಗಳೇ ನಮ್ಮಸಾಧನೆಗೆ ಪೂರಕವಾಗುವುದು. ಜೀವನದಲ್ಲಿ ನಮಗೆ ಎರಡು ಆಯ್ಕೆಗಳಿರುತ್ತವೆ. ಒಂದು Act ಅಂದರೆ ಅಭಿನಯ. ಇನ್ನೊಂದು Action ಅಂದರೆ ಕ್ರಿಯೆ. ಜೀವನದಲ್ಲಿ ಅನುಭವ ಸಿಗುವುದು ಅಭಿನಯದಿಂದ ಅಲ್ಲ ಕ್ರಿಯೆ ಅಂದರೆ ಕೆಲಸ ಮಾಡುವುದರಿಂದ. ಅನುಭವವೇ ನಮ್ಮ ಬದುಕನ್ನು ಬದಲಾಯಿಸುವುದು. ಪ್ರಯತ್ನ ಮಾಡದೆ ಅನುಭವ ಸಿಗದು. ನಿರಂತರ ಪ್ರಯತ್ನಶೀಲತೆ ನಮ್ಮ ಬದುಕಿಗೆ ಮೆರುಗನ್ನು ನೀಡುವುದು.
“ಬೀಜ ಬಿತ್ತದೆ ಬರಿದೆ ಮುಗಿಲ ನೋಡುವೆ ಏಕೆ? ಮಳೆ ಬಂದರೇನು ಸುಖ ಏನಿರದ ನೆಲಕೆ? ದುಡಿಮೆಯಿಂದಲೇ ಅನ್ನ, ಅನ್ನದಿಂದಲೆ ಶಕ್ತಿ, ಮಾಡೊಂದು ಕಾರ್ಯವನು-ಮುದ್ದುರಾಮ” ಎಂಬ ಕೆ.ಶಿವಪ್ಪನವರ ನುಡಿಯಂತೆ ಬದುಕಿನಲ್ಲಿ ದುಡಿಮೆಗೆ ಪ್ರಾಶಸ್ತ್ಯ ನೀಡಬೇಕು. ಸಕಾರಾತ್ಮಕ ಮನೋಭಾವದೊಂದಿಗೆ ನಿರಂತರ ಪ್ರಯತ್ನಶೀಲರಾದಾಗ ಜೀವನ ಸಾರ್ಥಕವಾಗುವುದು.

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಘಟಕ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!