Saturday, October 16, 2021
spot_img
Homeಅಂಕಣಕಗ್ಗದ ಸಂದೇಶ…ಕಾಯಕದಲ್ಲೇ ಕೈಲಾಸವು…

ಕಗ್ಗದ ಸಂದೇಶ…ಕಾಯಕದಲ್ಲೇ ಕೈಲಾಸವು…


“ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು|ದೊರೆತುದ ಹಸಾದವೆಂದುಣ್ಣು ಗೊಣಗಿಡದೆ||
ಧರಿಸು ಲೋಕದ ಬರವ ಪರಮಾರ್ಥವನು ಬಿಡದೆ|
ಹೊರಡು ಕರೆ ಬರಲು ಅಳದೆ-ಮಂಕುತಿಮ್ಮ|”

    ನಾವು ಮಾಡುವ  ಸಣ್ಣ ಕೆಲಸವನ್ನು ಕೂಡ ಮನಸ್ಸಿಟ್ಟು ಮಾಡಬೇಕು.ದೊರೆತ ಪ್ರತಿಫಲವನ್ನು ಭಗವಂತನು ಅನುಗ್ರಹಿಸಿದ ಪ್ರಸಾದವೆಂದು ಭಾವಿಸಿ ಅದನ್ನು ಭಕ್ತಿಯಿಂದ ಸ್ವೀಕರಿಸಬೇಕು.ಲೌಕಿಕವಾದ ಜವಾಬ್ದಾರಿಯನ್ನು ಪರಮಾರ್ಥವನ್ನು ಬಿಡದೆ ನಿರ್ವಹಿಸಬೇಕು.ಕೊನೆಯಲ್ಲಿ ಹಂತಕನ ಕರೆ ಬಂದಾಗ ದುಃಖಿಸದೆ ನಗುನಗುತಾ ತೆರಳಬೇಕು ಎಂದು ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ ಯವರು ಹೇಳಿದ್ದಾರೆ.
   
ಮಾಡುವ ಕೆಲಸ ಫಲಪ್ರದವಾಗಬೇಕಾದರೆ ಮನಸ್ಸಿಟ್ಟು ಮಾಡಬೇಕು.ನೆನೆದ ಕೆಲಸಕ್ಕೆ ಮನವೆ ಸಹಾಯ ಎಂಬಂತೆ ಕೆಲಸ ಸಣ್ಣದಿರಲಿ ದೊಡ್ಡದಿರಲಿ ಅದನ್ನು ಆಸಕ್ತಿಯಿಂದ ಮತ್ತು ನನಗಾಗಿ ನನ್ನ ಒಳಿತಿಗಾಗಿ ಎಂಬ ಭಾವನೆಯಿಂದ ಮಾಡಬೇಕು.'ಒಂದು ರೈಲ್ವೆ ಕ್ರಾಸಿಂಗ್ ಗುಡಿಸುವುದೇ ಇರಲಿ  ಜಗತ್ತಿನಲ್ಲಿ ಇಷ್ಟು ಸ್ವಚ್ಛವಾದ ರೈಲ್ವೆ ಕ್ರಾಸಿಂಗ್ ಎಲ್ಲಿಯೂ ಇಲ್ಲ ಎನ್ನುವಂತೆ ನೋಡಿಕೊ ನೀನು ಜೀವನದಲ್ಲಿ ಉನ್ನತ ಮಟ್ಟಕ್ಕೇರುತ್ತೀಯ' ಎಂಬ ಗಾಂಧೀಜಿಯ ಮಾತು ನೀನು ಏನು ಕೆಲಸ ಮಾಡುತ್ತಿ ಎನ್ನುವುದಕ್ಕಿಂತ ಅದನ್ನು ಹೇಗೆ ಮಾಡುತ್ತಿ ಎನ್ನುವುದು ಮುಖ್ಯ ಎನ್ನುವುದನ್ನು ತಿಳಿಸುತ್ತದೆ.

“ಕಾಯಕದ ಪರಿಯೆಲ್ಲ ದೇವ ದರುಶನಕಾಗಿ,ಮಿಗಿಲಾದ ಅನುಭೂತಿ ಕಾಣ್ಕೆ ಸಲುವಾಗಿ,ಶಿವದಾರಿಯೆಂದರದು ಸತ್ಯಸಾಕ್ಷಾತ್ಕಾರ,ಅರಿವೆ ಗುರು ಶಿವಪಥಕೆ-ಮುದ್ದುರಾಮ”ಎಂಬ ಕವಿ ಕೆ.ಶಿವಪ್ಪನವರ ನುಡಿಯಂತೆ ಪ್ರತಿ ಕೆಲಸವು ಮೋಕ್ಷ ಸಾಧನೆಯ ಮಾರ್ಗವೆಂದು ಭಾವಿಸಬೇಕು.ಮಾಡುವ ಪ್ರತಿ ಕೆಲಸದಲ್ಲಿ ಶ್ರದ್ಧೆ ಮತ್ತು ಭಕ್ತಿ ಸೇರಿದಾಗ ಸತ್ಫಲ ಖಂಡಿತ ದೊರೆಯುತ್ತದೆ.
‘ಕರ್ಮಣ್ಯೇವಾಧಿಕಾರಸ್ಥೇ ಮಾ ಫಲೇಸು ಕದಾಚನ|’ ಎಂಬ ಗೀತೆಯ ಮಾತಿನಂತೆ ಫಲದ ಬಗ್ಗೆ ಯೋಚನೆ ಮಾಡದೆ ಪ್ರತಿಯೊಂದು ಕೆಲಸವನ್ನು ನಿಷ್ಠೆಯಿಂದ ಮಾಡಬೇಕು.’ಕಾಯಕವೇ ಕೈಲಾಸ’ವೆಂದು ಸಾರಿದ ಬಸವಣ್ಣನವರು ಕೆಲಸದಲ್ಲಿ ಮೇಲು ಕೀಳೆಂಬುದಿಲ್ಲ ಪ್ರತಿ ಕೆಲಸವು ಪವಿತ್ರವೆಂಬ ಭಾವನೆಯಿಂದ ಮಾಡಬೇಕು ಎಂದಿದ್ದಾರೆ.ನಾವು ಯಾರೂ ಶಾಶ್ವತವಲ್ಲ‌,ಆದರೆ ಈ ಜೀವನದ ಕೊನೆಯೆಂದು ಎನ್ನುವುದು ಯಾರಿಗೂ ತಿಳಿದಿಲ್ಲ.ಕೊನೆಯವರೆಗೂ ಕರ್ತವ್ಯ ನಿಷ್ಠೆಯನ್ನು ಮೆರೆದು ಸಂತೋಷದಿಂದ ತೆರಳಿದಾಗ ಜೀವನ ಸಾರ್ಥಕವಾಗುವುದು
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು,ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್.

1 COMMENT

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!