ಆರೋಗ್ಯಧಾರ-ಆಹಾರದ ಆರು ರುಚಿಗಳು ಭಾಗ – 2

  1. ಲವಣರಸ ಅಥವಾ ಉಪ್ಪು ರುಚಿ.
    ಇದು ಅಗ್ನಿ ಹಾಗೂ ಜಲತತ್ವದಿಂದ ಉಂಟಾಗಿದೆ. ಇದು ಉಷ್ಣವೀರ್ಯದಿಂದ ಕೂಡಿದೆ. ವಾತ ದೋಷವನ್ನು ಕಡಿಮೆಗೊಳಿಸುತ್ತದೆ. ಪಿತ್ತ ಹಾಗೂ ಕಫಗಳು ದೋಷವನ್ನು ವೃದ್ಧಿಸುತ್ತದೆ. ಇದು ಜೀರ್ಣಕಾರಿ, ರುಚಿಕಾರಕ, ಪಚನಶಕ್ತಿಯನ್ನು ಹೆಚ್ಚಿಸುತ್ತದೆ. ತೇವಾಂಶವನ್ನು ಉಂಟುಮಾಡುತ್ತದೆ, ತಾಪವನ್ನು ಕಡಿಮೆಗೊಳಿಸುತ್ತದೆ. ಎಲ್ಲಾ ಸ್ರೋತಸ್ಸುಗಳನ್ನು ಶುದ್ಧ ಮಾಡುತ್ತದೆ.
    ಇದನ್ನು ಅಧಿಕ ಸೇವಿಸುವುದರಿಂದ ಪಿತ್ತ ರಕ್ತದೋಷವನ್ನು ವಿಕಾರಗೊಳಿಸುತ್ತದೆ, ಬಾಯಾರಿಕೆ ಉಂಟುಮಾಡುತ್ತದೆ, ತಲೆಸುತ್ತು, ಕುಷ್ಟರೋಗಗಳಿಗೆ ಕಾರಣವಾಗುತ್ತದೆ, ಇಂದ್ರಿಯಗಳನ್ನು ದುರ್ಬಲಗೊಳಿಸುತ್ತದೆ, ಚರ್ಮ ಶುಷ್ಕಗೊಳ್ಳುತ್ತದೆ, ಬಿಳಿಕೂದಲು ಉಂಟುಮಾಡುತ್ತದೆ, ಹೊಟ್ಟೆ ಉರಿ, ಆಂತರಿಕ ರಕ್ತಸ್ರಾವ, ಚರ್ಮವ್ಯಾಧಿ, ಇಸುಬು ಹಾಗೂ ಕೂದಲು ಉದುರುವಿಕೆ ಉಂಟುಮಾಡುತ್ತದೆ.
  2. ಕಟು ರಸ ಅಂದರೆ ಖಾರ. ಇದು ಅಗ್ನಿ ಹಾಗೂ ವಾಯು ಮಹಾಭೂತದಿಂದ ಉಂಟಾಗಿದೆ. ವಾತವನ್ನು ಕುಂಠಿತಗೊಳಿಸುತ್ತದೆ ಹಾಗೂ ಕಫವನ್ನು ನಿವಾರಿಸುತ್ತದೆ. ಇದು ಉಷ್ಣವೀರ್ಯ, ತೀಕ್ಷ್ಣ, ಲಘು ಹಾಗೂ ಶುಷ್ಕ ಗುಣದಿಂದ ಕೂಡಿದೆ . ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ನೇತ್ರರೋಗ, ಬೊಜ್ಜು, ಕ್ರಿಮಿರೋಗ, ಮುಖ ರೋಗ, ಕುಷ್ಟ ಹಾಗೂ ಉರಿಯೂತವನ್ನು ಶಾಂತಗೊಳಿಸುತ್ತದೆ.
    ಇದರ ಅಧಿಕ ಸೇವನೆಯಿಂದ ಬಾಯಾರಿಕೆ, ಮೂರ್ಛೆ, ನಿರಾಸಕ್ತಿ, ಮಾನಸಿಕ ಅಸಮತೋಲನೆ, ಉರಿ, ಬಲ ನಾಶವುಂಟಾಗುತ್ತದೆ. ಅತ್ಯಧಿಕ ಸೇವನೆಯಿಂದ ವಾತ ವಿಕಾರ ಉಂಟಾಗುವುದು ಪಾದ ಹಾಗೂ ಸೊಂಟಗಳಲ್ಲಿ ಉರಿ, ನಡುಕ, ನೋವುಂಟಾಗುವುದು. ಕಟು ರಸದ ಉದಾಹರಣೆ ಮೆಣಸಿನಕಾಯಿ, ಶುಂಠಿ ಇತ್ಯಾದಿಗಳು.
  3. ತಿಕ್ತರಸ ಅಥವಾ ಕಹಿರುಚಿ. ಇದು ಆಕಾಶ ಹಾಗೂ ವಾಯು ತತ್ವದಿಂದ ಉಂಟಾಗಿದೆ. ಇದು ಶುಷ್ಕ, ಶೀತ ಹಾಗೂ ಲಘು ಗುಣದಿಂದ ಕೂಡಿದೆ. ವಾತವನ್ನು ಹೆಚ್ಚಿಸುತ್ತದೆ ಹಾಗೂ ಪಿತ್ತ ಕಫಗಳನ್ನು ಶಮನಗೊಳಿಸುತ್ತದೆ. ಇದು ರುಚಿಕರವಲ್ಲ ಆದರೆ ಅರುಚಿಯನ್ನು ದೂರಮಾಡುತ್ತದೆ. ವಿಷ, ಕ್ರಿಮಿ, ಮೂರ್ಚೆ, ಜ್ವರ, ಉರಿ, ಬಾಯಾರಿಕೆ, ತುರಿಕೆಯನ್ನು ನಷ್ಟ ಮಾಡುತ್ತದೆ. ಚರ್ಮ ವ್ಯಾಧಿಯನ್ನು ನಿವಾರಿಸುತ್ತದೆ, ತಿಂದ ಆಹಾರವನ್ನು ಜೀರ್ಣಿಸುತ್ತದೆ. ಮೇದಸ್ಸು, ಮಾಂಸ, ಮಜ್ಜೆ, ಬೆವರು, ಮೂತ್ರ ಹಾಗೂ ಮಲಗಳನ್ನು ಒಣಗಿಸುತ್ತದೆ. ಇದರ ಅಧಿಕ ಸೇವನೆಯಿಂದ ರಕ್ತ, ಮಾಂಸ, ಮೇದಸ್ಸು, ಮೂಳೆ, ಮಜ್ಜೆ ಹಾಗೂ ಶುಕ್ರವನ್ನು ಒಣಗಿಸುತ್ತದೆ. ಶಕ್ತಿಯನ್ನು ಕಡಿಮೆಗೊಳಿಸುತ್ತದೆ ಮೈ ಹಾಗೂ ವಾತ ವಿಕಾರಗಳನ್ನು ಉಂಟುಮಾಡುತ್ತದೆ. ತಿಕ್ತ ರಸಕ್ಕೆ ಉದಾಹರಣೆ ಹಾಗಲಕಾಯಿ.
  4. ಕಷಾಯ ರಸ ಅಥವಾ ಒಗರು ರುಚಿ. ಇದು ಪೃಥ್ವಿ ಹಾಗೂ ವಾಯು ತತ್ವ ದಿಂದ ಕೂಡಿದೆ. ಇದು ಗುರು, ಶುಷ್ಕ ಹಾಗು ಶೀತಗುಣಗಳಿಂದ ಕೂಡಿದೆ. ಇದು ಸ್ರೋತಸ್ಸುಗಳನ್ನು ಸಂಕುಚಿತಗೊಳಿಸುತ್ತದೆ. ಧಾತುಗಳಿಂದ ದ್ರವಾಂಶವನ್ನು ಹೀರುತ್ತದೆ. ಪಿತ್ತವನ್ನು ನಿವಾರಿಸುತ್ತದೆ, ಮಲಬದ್ದತೆಯನ್ನು ಉಂಟುಮಾಡುತ್ತದೆ. ಇದರ ಅಧಿಕ ಸೇವನೆಯಿಂದ ಬಾಯಿ ಒಣಗುತ್ತದೆ, ಹೃದಯಬೇನೆ ಹೆಚ್ಚಾಗುತ್ತದೆ, ಚರ್ಮ ಕಾಂತಿಹೀನವಾಗುತ್ತದೆ, ಸುಸ್ತು, ವಾತ ರೋಗಗಳನ್ನುಂಟು ಮಾಡುತ್ತದೆ.

ಎಲ್ಲರೂ ಆರೂ ರಸವುಳ್ಳ ಆಹಾರವನ್ನು ನಿತ್ಯವೂ ಸೇವಿಸುವುದು ಹಿತಕರ. ನಿಮ್ಮ ವಯಸ್ಸಿಗೆ ತಕ್ಕಂತೆ ಋತುವಿಗೆ ತಕ್ಕಂತೆ ನಿಮ್ಮ ದೇಹ ಪ್ರಕೃತಿಗೆ ತಕ್ಕಂತೆ ಆರು ರಸಗಳ ಸಂಯೋಜನೆಯ ಆಹಾರವನ್ನು ಸೇವಿಸಿ ಆರೋಗ್ಯದಿಂದಿರಿ.

ಡಾ. ಹರ್ಷಾ ಕಾಮತ್





























































































































































































































error: Content is protected !!
Scroll to Top