Sunday, March 7, 2021
Home Slider ಕಗ್ಗದ ಸಂದೇಶ- ಮನಸೆಂಬ ಮರ್ಕಟಕ್ಕೆ ಅಂಕುಶವಿರಲಿ...

ಕಗ್ಗದ ಸಂದೇಶ- ಮನಸೆಂಬ ಮರ್ಕಟಕ್ಕೆ ಅಂಕುಶವಿರಲಿ…

“ಮನವನಾಳ್ವುದು ಹಠದ ಮಗುವಿನಾಳುವ ನಯದೆ|
ಇನಿತಿನಿತು ಸವಿಯುಣಿಸು ಸವಿಕತೆಗಳಿಂದೆ||
ಅನುಕೂಲಿಸದು ಬರಿಯ ಕೂಗು ಬಡಿತಗಳಿನದು|
ಇನಿತಿತ್ತು ಮರಸಿನಿತು – ಮಂಕುತಿಮ್ಮ||”

 ಹಠ ಮಾಡುವ ಮಗುವನ್ನು ಸಮಾಧಾನ ಪಡಿಸುವ ರೀತಿಯಲ್ಲಿ ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು  ಸ್ವಲ್ಪ ಸ್ವಲ್ಪ ಸವಿ ತಿನಿಸು ಮತ್ತು ಸವಿ ಕತೆಗಳಿಂದ ಸಂತೈಸಬೇಕು. ಗದರಿಕೆ ಅಥವಾ  ಪೆಟ್ಟು ಅನುಕೂಲಕ್ಕೆ ಬಾರದು. ಅಗತ್ಯವಾದುದನ್ನು ಕೊಟ್ಟು ಅನಗತ್ಯವಾದುದನ್ನು ಮರೆಸಿ ಹಠ ಮಾಡುವ ಮಗುವನ್ನು ಸಂತೈಸುವಂತೆ ಮನಸ್ಸನ್ನು ನಿಯಂತ್ರಿಸಿದಾಗ ಜೀವನ ಸಾರ್ಥಕವಾಗುವುದೆಂದು ಮಾನ್ಯ ಡಿ.ವಿ.ಜಿ ಈ ಮುಕ್ತಕದಲ್ಲಿ ಹೇಳಿದ್ದಾರೆ.

‘ಮನಯೇವ ಮನುಷ್ಯಾಣಾಂ, ಕಾರಣಯೋ ಬಂಧನ, ಮೋಕ್ಷಯಃ’ ಅಂದರೆ ನಮ್ಮ ಲೌಕಿಕ ಬದುಕಿನ ಬಂಧನ ಮತ್ತು ಮೋಕ್ಷ ಸಾಧನೆಗೆ ಮನಸ್ಸೇ ಕಾರಣ. ಮನಸ್ಸು ಮರ್ಕಟದಂತೆ ಚಂಚಲವಾದಾಗ ಬದುಕು ದಿಕ್ಕು ತಪ್ಪುತ್ತದೆ. ಬುದ್ಧಿಯಲಿ ತನುಮನವ ತಿದ್ದುಕೊಳುತ್ತಿರಬೇಕು ಎಂಬ ದಾಸವಾಣಿಯಂತೆ ಮನಸು ಸರಿದಾರಿಯಲಿ ಹೋಗುವಂತೆ ನೋಡಿಕೊಂಡಾಗ ಜೀವನವು ಸುಸೂತ್ರವಾಗಿ ನಡೆಯುತ್ತದೆ. ಮನಸು ಹಠಮಾಡುವ ಮಗುವಿನ ಹಾಗೆ ವರ್ತಿಸುತ್ತದೆ‌. ಅದಕ್ಕೆ ಯಾವುದು ಒಳಿತು ಯಾವುದು ಕೆಡುಕು ಎಂಬ ಅರಿವಿರುವುದಿಲ್ಲ. ಮನಸ್ಸಿನಲ್ಲಿ ಹುಟ್ಟುವ ಯೋಚನೆ ಎಂಬ ದ್ರವ್ಯದಿಂದ ವಿಷವನ್ನು ತಯಾರಿಸಬಹುದು ಅಮೃತವನ್ನು ತಯಾರಿಸಬಹುದು. ಸಕಾರಾತ್ಮಕ ಯೋಚನೆ ಬದುಕಿಗೆ ಅಮೃತವಾದರೆ ನಕಾರಾತ್ಮಕ ಯೋಚನೆ ವಿಷದಂತೆ ಕೆಡುಕನ್ನುಂಟುಮಾಡುತ್ತದೆ. ಮನಸ್ಸನ್ನು ಗೆದ್ದರೆ ಜಗವನ್ನು ಗೆದ್ದಂತೆ. ಮನಸ್ಸನ್ನು ಹತೋಟಿಯಲ್ಲಿಟ್ಟಾಗ ಬದುಕು ನಂದನವಾಗುತ್ತದೆ.
“ಮನ ಹಿಗ್ಗಿ ನಲಿದಾಗ ಅದುವೆ ಅಕ್ಷಯಪಾತ್ರೆ, ಅದುವೆ ಭಿಕ್ಷಾ ಪಾತ್ರೆ ಮನ ಕುಗ್ಗಿದಾಗ, ನೀರವತೆ ಅಕ್ಷಯತೆ ಇದೆ ಎಲ್ಲಾ ಮನದಲ್ಲೆ, ಪೂರ್ಣ ಸೃಷ್ಟಿಯೊ ಮನಸು-ಮದ್ದುರಾಮ” ಎಂಬ ಕೆ.ಶಿವಪ್ಪನವರ ಮಾತಿನಂತೆ ಮನಸು ಸೃಷ್ಟಿಯ ವಿಶೇಷ. ಮಾನಸಿಕವಾಗಿ ಸಬಲರಾದಾಗ ಬದುಕು ಗಟ್ಟಿಯಾಗುತ್ತದೆ. ಒಳಿತು ಮತ್ತು ಕೆಡುಕು ಎರಡೂ ನಮ್ಮ ಮನದಲ್ಲೆ ಇದೆ. ಮನಸನ್ನು ಶುದ್ಧ ಹಾಗು ಉಲ್ಲಸಿತವಾಗಿ ಇಟ್ಟುಕೊಂಡಾಗಲೇ ನಾವು ಮಾಡುವ ಕಾರ್ಯಗಳೆಲ್ಲವು ಸಾರ್ಥಕವಾಗುವುದು. ಮನಸ್ಸಿನಲ್ಲಿ ಉದಿಸುವ ಯೋಚನೆಗಳೆ ನಮ್ಮ ಬದುಕನ್ನು ರೂಪಿಸುವುದು. ಧನಾತ್ಮಕ ಯೋಚನೆ ಮಾತು ಮತ್ತು ಕೆಲಸಗಳಿಂದ ನಮ್ಮ ವ್ಯಕ್ತಿತ್ವ ವಿಕಸನವಾಗುವುದು. ಈ ನಿಟ್ಟಿನಲ್ಲಿ ಡಿ.ವಿ.ಜಿ ಯವರ ಸಂದೇಶದಂತೆ ಮನಸನ್ನು ನಿಯಂತ್ರಿಸಿ ಸನ್ಮಾರ್ಗದಲ್ಲಿ ನಡೆದಾಗ ಜೀವನ ಪಾವನವಾಗುವುದು.

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷರು

ಪ್ರಭಾಕರ ಶೆಟ್ಟಿ ಕೊಂಡಳ್ಳಿ


1 COMMENT

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
https://youtu.be/47zKJ8cyugc
error: Content is protected !!