Saturday, October 16, 2021
spot_img
Homeಸಾಹಿತ್ಯ/ಸಂಸ್ಕೃತಿಚಿತ್ತ ಚಂಚಲೆ ಅಂಬೆ

ಚಿತ್ತ ಚಂಚಲೆ ಅಂಬೆ

ಮಹಾ ಭಾರತದಲ್ಲಿ ಅತ್ಯಂತ ಕ್ಲಿಷ್ಟವಾದ ಮತ್ತು ಸಂಕೀರ್ಣವಾದ ಪಾತ್ರ ಅಂದರೆ ಅದು ಅಂಬೆಯದ್ದು! ಆಕೆ ಚಿತ್ತ ಚಾಂಚಲ್ಯ ಉಳ್ಳವಳು. ಕ್ಷಣ ಕ್ಷಣಕ್ಕೂ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವವಳು. ಈಗಿನ ಹಲವು ಆಧುನಿಕ ಹೆಣ್ಣು ಮಕ್ಕಳ ಪ್ರತಿನಿಧಿ ಆಕೆ. ಯಕ್ಷಗಾನ ಅಥವಾ ತಾಳ ಮದ್ದಲೆಯಲ್ಲಿ ಇದು ಭಾರೀ ಸವಾಲಿನ ಪಾತ್ರ. ಆಕೆಯ ಕ್ಷಿಪ್ರ ನಿಲುವುಗಳನ್ನು ಸಮರ್ಥನೆ ಮಾಡುವುದು ಕಷ್ಟ.

    ಕಾಶಿರಾಜನ ಮಗಳಾಗಿ ಸ್ವಯಂವರ ಮಂಟಪಕ್ಕೆ ಬರುವ ಮೊದಲೇ ಅವಳು ಸೌಭ ದೇಶದ ಸಾಲ್ವನಿಗೆ ಮನಸ್ಸು ಕೊಡುತ್ತಾಳೆ. ವಿಕ್ರಮವೇ ಪಂದ್ಯ ಆಗಿರುವ ಸ್ವಯಂವರ ಮಂಟಪದಲ್ಲಿ ಸಾಳ್ವ ಗೆದ್ದರೂ,  ಸೋತರೂ ಅವನನ್ನು ಕೈ ಹಿಡಿಯುವ ಭರವಸೆಯನ್ನು ಕೊಡುತ್ತಾಳೆ. ಸ್ವಯಂವರ ಮಂಟಪದಲ್ಲಿ ಭೀಷ್ಮನ ಪ್ರವೇಶ ಆದ ಕೂಡಲೇ ಎಲ್ಲಾ ಲೆಕ್ಕವೂ ತಲೆ ಕೆಳಗಾಗಿ ಬಿಡುತ್ತದೆ. ಏರಿರಿ ರಥವನು ಎಂದು ಭೀಷ್ಮ ಆಜ್ಞಾಪಿಸಿದ ಸಂದರ್ಭದಲ್ಲಿ ಸಾಲ್ವನ ಕಡೆಗೆ ಒಮ್ಮೆ ಕೂಡ ತಿರುಗಿ ನೋಡದೆ ಆಕೆ ರಥವನ್ನು ಏರುತ್ತಾಳೆ. ಹಸ್ತಿನೆಯಲ್ಲೀ  ವಿಚಿತ್ರ ವೀರ್ಯನನ್ನು ಮದುವೆ ಆಗಲು ಭೀಷ್ಮ ವಿನಂತಿ ಮಾಡಿದಾಗ ಸಾರಾಸಗಟಾಗಿ ನಿರಾಕರಿಸಿ ಮತ್ತೆ ಸಾಲ್ವನ ಅರಮನೆಗೆ ಬರುತ್ತಾಳೆ. ಅವನನ್ನು ಮದುವೆಯಾಗಲು ಒತ್ತಾಯ ಮಾಡುತ್ತಾಳೆ. ಅವನು ತಿರಸ್ಕಾರ ಮಾಡಿದಾಗ ಸಿಡಿದು ನಿಲ್ಲುತ್ತಾಳೆ. ಮತ್ತೆ ಭೀಷ್ಮನ ಬಳಿ ಬಂದು ನನ್ನನ್ನು ಮದುವೆ ಆಗು  ಅನ್ನುತ್ತಾಳೆ. ಅವನು ಪ್ರತಿಜ್ಞಾ ಬದ್ಧನಾಗಿ ನಿರಾಕರಿಸಿದಾಗ ಅವನ ಗುರುವಾದ  ಪರಶುರಾಮ ದೇವರಿಗೆ ಹೋಗಿ ದೂರು ಕೊಡುತ್ತಾಳೆ. ಅಲ್ಲಿಯೂ ಸೋಲಾದಾಗ ಒಬ್ಬ ಬೇಡನನ್ನು ಛೂ ಬಿಡುತ್ತಾಳೆ. ಎಲ್ಲಾ ದಾರಿಗಳು ಮುಚ್ಚಿ ಹೋದಾಗ  ಭೀಷ್ಮನಿಗೆ ಶಾಪ ಕೊಡುತ್ತಾ ಅಗ್ನಿ ಪ್ರವೇಶ ಮಾಡಿ ಪ್ರಾಣ ತ್ಯಾಗ ಮಾಡುತ್ತಾಳೆ. ಅಂಬೆಯ ಇಡೀ ಪಾತ್ರವೇ ಒಂದು ಅದ್ಭುತ ಹೋರಾಟದ ಚಿತ್ರಣ. ಆಕೆಯ ಅನೂಹ್ಯ ನಡೆಗಳನ್ನು ನೋಡುತ್ತ ಹೋದಂತೆ ನಮಗೆ ಸಿಟ್ಟು ಬಂದರೂ ಆಕೆಯ ಸ್ಥಾನದಲ್ಲಿ ಕೂತು ಯೋಚಿಸಿದಾಗ 'ಅಯ್ಯೋ ಪಾಪ' ಎಂದು ಅನ್ನಿಸುತ್ತದೆ. ಕೊನೆ ಕೊನೆಗೆ ಆಕೆ ಕಣ್ಣೀರು ತರಿಸಿ ಬಿಡುತ್ತಾಳೆ.

 ನನಗಿರುವ ಯಕ್ಷಗಾನದ ಕಡಿಮೆ ಜ್ಞಾನದಲ್ಲಿ ಅಂಬೆಯ ಪಾತ್ರದಲ್ಲಿ ವಿಜೃಂಭಿಸಿದವರು ಮಂಕುಡೇ ಸಂಜೀವ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾಯರು, ಕೋಟ ವೈಕುಂಠ, ಕೆರೆಮನೆ ಶಿವಾನಂದ ಹೆಗಡೆ, ಮಂಟಪ ಪ್ರಭಾಕರ ಉಪಾಧ್ಯಾಯರು, ರಾಮ ನಾಯರಿ ಮೊದಲಾದವರು.  ಇತ್ತೀಚಿನ ವರ್ಷಗಳಲ್ಲಿ ಶಶಿಕಾಂತ್ ಶೆಟ್ಟಿ ಕಾರ್ಕಳ, ಯಲಗುಪ್ಪ ಸುಬ್ರಮಣ್ಯ ಹೆಗಡೆ  ಅವರು ಈ ಪಾತ್ರದಲ್ಲಿ ಅದ್ಭುತ ಪರಕಾಯ ಪ್ರವೇಶವನ್ನು ಮಾಡುತ್ತಿದ್ದಾರೆ.  

ಈ ಪಾತ್ರವನ್ನು ಅಜರಾಮರ ಗೊಳಿಸಿದ ಎಲ್ಲಾ ಕಲಾವಿದರಿಗೆ ನನ್ನ ನಮನಗಳು.

ರಾಜೇಂದ್ರ ಭಟ್‌ ಕೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!