Sunday, March 7, 2021
Home Slider ನಾಟಕದೊಳಗಿನ ನಾಟಕದ ನೆನಪಿನ ಬುತ್ತಿ

ನಾಟಕದೊಳಗಿನ ನಾಟಕದ ನೆನಪಿನ ಬುತ್ತಿ

ಉಡುಪಿ ಎಂ. ಜಿ. ಎಂ. ಕಾಲೇಜಿನಲ್ಲಿ ರಂಗ ಭೂಮಿ ಉಡುಪಿ ಸಂಸ್ಥೆ ಇವರು ರಂಗಭೂಮಿ ರಾಜ್ಯ ಮಟ್ಟದ ನಾಟಕ ಸ್ಪರ್ಧೆ ಆಯೋಜಿಸುತ್ತಿದ್ದರು.ಆಗ ಹಿರಿಯರಾದ ಆನಂದ ಗಾಣಿಗರು ಮುಖ್ಯಸ್ಥರಾಗಿದ್ದು ಪ್ರತಿ ವರ್ಷ ಹತ್ತು ದಿನಗಳ ನಾಟಕ ಸ್ಪರ್ಧೆ ನಡೆಸುತ್ತಿದ್ದರು. ಹೆಸರಾಂತ ನಾಟಕ ತಂಡಗಳು ರಾಜ್ಯದೆಲ್ಲೆಡೆಯಿಂದ ಬಂದು ಪ್ರದರ್ಶನ ನೀಡುತ್ತಿದ್ದವು. ಸ್ಪರ್ಧೆಯಲ್ಲಿ ನಾಟಕದ ಪರಿಪೂರ್ಣತೆಗೆ ಸಂಬಂಧಿಸಿದಂತೆ ಪ್ರತಿ ವಿಷಯಗಳ ವಿಭಾಗದಲ್ಲೂ ಬಹುಮಾನ ನೀಡುತ್ತಿದ್ದರು.ಈಗಲೂ ಆನಂದ ಗಾಣಿಗರ ಸ್ಮರಣೆಯಲ್ಲಿ ನಡೆಯುತ್ತಿದೆ.ಆಗ ಸುಳ್ಯದಲ್ಲಿ ರಂಗಭೂಮಿಯ ಅನುಭವಿ ಕಲಾವಿದರಾದ ಬಾಸುಮ ಕೊಡಗು ಮತ್ತು ಅವರ ಸಹೋದರಿ ಪದ್ಮಾ ಕೊಡಗು ನಾಟಕಗಳಿಗೆ ಒಳ್ಳೆಯ ನಿರ್ದೇಶನ ಮಾಡುತ್ತಿದ್ದರು. ಆಡಿದ ನಾಟಕಗಳೆಲ್ಲವೂ ಉತ್ತಮ ಪ್ರದರ್ಶನವನ್ನು ಕಂಡಿತ್ತು. ಬಾಸುಮ ಕೊಡಗು ಈಗ ಉಡುಪಿಯಲ್ಲಿ ನೆಲೆಸಿದ್ದು ರಂಗಭೂಮಿ ಪಯಣದಲ್ಲಿ ಶ್ರೇಷ್ಠ ನಾಟಕಕಾರರಾಗಿದ್ದಾರೆ. ಅವರ ನಿರ್ದೇಶನದಲ್ಲಿ ನಾವೆಲ್ಲರೂ ಸೇರಿ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುವುದೆಂದು ತೀರ್ಮಾನವಾಯಿತು. ನಂತರ ಹಗಲು ರಾತ್ರಿ ಎಂದು ನಿರಂತರ ಹತ್ತು ದಿನಗಳವರೆಗೆ ನಾಟಕ ಪ್ರಾಕ್ಟಿಸ್ ನಡೆಯಿತು. ಅಬ್ಬಾ ನನಗೆ ರಂಗಭೂಮಿಯ ಶಿಸ್ತು ಮತ್ತು ಸಂವಿಧಾನ ಬದ್ಧತೆಯ ಕಟ್ಟುನಿಟ್ಟು ಯೋಚಿಸಿದರೆ ಭಯವಾಗುತ್ತದೆ. ಅಂದರೆ ಒಂದು ಶಿಸ್ತಿನ ಚೌಕಟ್ಟಿನಲ್ಲಿ ಎಲ್ಲವೂ ನಡೆಯುತ್ತಿತ್ತು ಅಲ್ಲಿಯವರೆಗೆ ಏನೋ ಒಂದು ಹತ್ತು ನಿಮಿಷದ ಹಾಸ್ಯ ಪಂಚ್ ಇಟ್ಟುಕೊಂಡು ಎಲ್ಲರನ್ನೂ ಖುಷಿಪಡಿಸಿದ ನಮಗೆ ನಾವು ಆಡಿದ್ದೇ ನಾಟಕವಾಗಿತ್ತು.
ಆದರೆ ರಂಗಭೂಮಿ ಶಿಕ್ಷಣ ಅದೊಂದು ಗುಣಾತ್ಮಕ ಮತ್ತು ಮೌಲ್ಯಯುತವಾದುದು ಎಂದು ನಂತರ ತಿಳಿದಿದ್ದೆವು. ಸ್ಪರ್ಧೆಗಾಗಿ ಸಿದ್ಧಗೊಳ್ಳುವ ನಮ್ಮ ನಾಟಕ ತಂಡಕ್ಕೆ ಮೈಸೂರು.ತುಮಕೂರು ಮಂಡ್ಯದ ರಂಗತಜ್ಞರು ಗಾಯನಕ್ಕೆ ಬೆಳಕಿನ ವಿನ್ಯಾಸಕ್ಕೆ ಸಂಗೀತಕ್ಕೆ ಅಂಥ ಬಂದಿದ್ದರು. ಶಿಸ್ತಿನ ಪ್ರಾಕ್ಟಿಸ್ ನಲ್ಲಿ ಒಬ್ಬ್ಬೊಬ್ಬರ ಮುಖ ನೋಡಬೇಕಿತ್ತು, ನಗು ಅಂತೂ ಕಾಣುವುದೇ ಇಲ್ಲ ಗೌಜಿ ಗಮ್ಮತ್ತು ಅಂತೂ ಮಾಯವಾಗಿ ಬಿಟ್ಟಿತ್ತು. ನಮ್ಮ ಹಳ್ಳಿ ಭಾಷೆಯಲ್ಲಿ ಹೇಳುವುದಾದರೆ “ಎಲ್ಲವೂ ಗುಡ್ಡೆ ಹತ್ತಿತ್ತು”.ನನ್ನದೂ ಅದೇ ಸ್ಥಿತಿ ಆಗಿತ್ತು. ಆದರೆ ಉಳಿದವರ ಸ್ಥಿತಿ ನೋಡಿದಾಗ ಅವರು ನನ್ನನ್ನು ನೋಡಿ “ಎಂತಾ ಅವಸ್ಥೆ ಮಾರೆ ಇದು “ಎಂದು ಹೇಳುವಾಗ ನನಗೂ ನಗು ಭಯ ಅಳು ಜೊತೆಯಲ್ಲಿಯೇ ಬರುತ್ತಿತ್ತು. ಕೊನೆಗೆ ನಮ್ಮಲೊಬ್ಬ ಮಿತ್ರನೂ ಸಮಯದ ಹೊಂದಾಣಿಕೆ ಕಷ್ಟ ಅಂತಾ ನಾಟಕವನ್ನೇ ಬಿಟ್ಟುಬಿಟ್ಟ .ಆದರೆ ನಮಗೆ ಸಂಪೂರ್ಣ ಸಹಕಾರ ನೀಡಿದ. ಒಬ್ಬರು ದಾಮೋದರ ಅಂತಾ ನಾವೆಲ್ಲರೂ ದಾಮಣ್ಣಾ ಅಂತಲೇ ಕರೆಯುವುದು. ಆ ಮನುಷ್ಯ ಪ್ರಾಕ್ಟಿಸ್ ಗೆ ಒಂದು ದಿನ ತಡ ಆಗಿ ಬಂದುದ್ದಕ್ಕೆ ದಂಡಾ‌ಸನದ ಶಿಕ್ಷೆ ಅಂದರೆ ಹತ್ತು ‌ಸಲ ಎರಡು ಕೈ ನೆಲಕ್ಕೂರಿ ದೇಹವನ್ನು ನೇರ ಮಾಡಿ ಮೇಲೆ ಕೆಳಗೆ ಏಳಬೇಕಿತ್ತು ಆ ಪುಣ್ಯಾತ್ಮನದೂ ಸ್ವಲ್ಪ ದಡಿಯ ದೇಹವಾಗಿ ಹೊಟ್ಟೆ ಸ್ವಲ್ಪ ಜಾಸ್ತಿ ಇತ್ತು. ಅವರ ಅವಸ್ಥೆ ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತಿತ್ತು. ನಾನು ಡೈರೆಕ್ಟರ್ ಗೆ ಕಾಣದಂತೆ ದಾಮಣ್ಣನ ಅವಸ್ಥೆ ನೋಡಿ ಎಂದು ಎಲ್ಲರಿಗೂ ತಿಳಿಸಿದೆ. ಹಾಗೆಯೇ ನಗು ಕಂಟ್ರೋಲ್ ಬಾರದೇ ಜೋರಾಯಿತು. ಸಿಟ್ಟಿನಲ್ಲಿ ನನ್ನನ್ನು ನೋಡಿದ ಡೈರೆಕ್ಟರ್ ನಕ್ಕಾಗ ಅಬ್ಬಾ ಬೈಗುಳದಿಂದ ಬಚವಾದೇ ಅಂತಾ ಏನೋ ಖುಷಿಯಾಯಿತು. ಆದರೆ ಮತ್ತೆ ನಾವು ಎಲ್ಲರೂ ಹೆದರಿ ಸಮಯಕ್ಕೆ ಸರಿಯಾಗಿ ಬರುತ್ತಿದ್ದೆವು.ಇದು ನಾಟಕದ ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನು ಕಲಿಸಿತು.ಇಂದಿಗೂ ಸಹಕಾರಿಯಾಯಿತು. ನಾಟಕದ ಪ್ರದರ್ಶನದ ದಿನವೂ ಹತ್ತಿರ ಬಂತು ಈಗೀಗ ನಾವು ರಾತ್ರಿ ಸ್ವಲ್ಪ ಹೆಚ್ಚು ಹೊತ್ತು ಪ್ರಾಕ್ಟಿಸ್ ಮಾಡಲೇ ಬೇಕಾಯಿತು.ಬೆಳಿಗ್ಗೆ ಸಂಜೆ ಅಂಥ ವ್ಯಾಯಾಮ ರಂಗಸಜ್ದಿಕೆ ವೇಷಭೂಷಣ ಮೇಕಪ್ ಎಲ್ಲವೂ ತರಬೇತಿ ಪಡೆಯುತ್ತಲೇ ಮತ್ತೆ ನಾಟಕ ಅಭ್ಯಾಸ ಮಾಡುತ್ತಿದ್ದೆವು. ಅಂತೂ ಕೊನೆಗೆ ನಿದ್ದೆ ಅರೆಬರೆನೇ ಆಯಿತು. ಅದೂ ಅಲ್ಲದೇ ನಾವು ಪ್ರತಿಯೊಬ್ಬರೂ ಮೊದಲಾಗಿ ನಾಟಕದಲ್ಲಿ ಪಾತ್ರ ಮಾಡುವುದು.

ಅರೇ ಹೇಳ್ತಾ ಹೇಳ್ತಾ ನಾಟಕದ ಹೆಸರು ಹೇಳೆ ಇಲ್ಲ ಅಲ್ವಾ, ಹೆಸರಾಂತ ನಾಟಕಾರ ಪ್ರೊ. ಸತ್ಯನಾರಾಯಣ ರಾವ್ ಆಣತಿಯವರ “ಜೇತವನ” ಕನ್ನಡ ನಾಟಕ. ಇದು ಬುದ್ಧನ ಶಾಂತಿ ಪ್ರೇಮ ಅಹಿಂಸೆಗೆ ಸಂಬಂಧಿಸಿದ ನಾಟಕ. ನನ್ನದು ಕಾವಲುಗಾರನ ಪಾತ್ರ. ಅಂತೂ ನಾವು ನಮ್ಮ ಪ್ರದರ್ಶನದ ದಿನ ಮಧ್ಯಾಹ್ನ ಎರಡು ಗಂಟೆಗೆ ಸುಳ್ಯದಿಂದ ಎಲ್ಲ ಸಿದ್ಧತೆಯೊಂದಿಗೆ ಉಡುಪಿ ಕಡೆಗೆ ಹೊರಟೆವು. ಉಡುಪಿಯ ಎಂ. ಜಿ. ಎಂ. ಕಾಲೇಜಿಗೆ ಬಂದಿಳಿದೆವು.ನಾಟಕ ಹಿಂದಿನ ದಿನ ಕೂಡ ಸುಳ್ಯದಲ್ಲೇ ರಿಹರ್ಸಲ್ ‌ಸಿದ್ಧತೆಯಲ್ಲಿ ಒಂದು ನಾಟಕ ಪ್ರದರ್ಶನ ಮಾಡಿದೆವು.ಇದು ರಂಗಭೂಮಿಯ ಸಂವಿಧಾನವೂ ಹೌದು. ನಾಟಕ ನಡೆಯಿತು.ಸಣ್ಣ ಪುಟ್ಟ ತಪ್ಪುಒಪ್ಪುಗಳನ್ನೆಲ್ಲ ನಿರ್ದೇಶಕರು ಸೂಚಿಸಿದರು.ನಾವು ತಿದ್ದಿಕೊಂಡೆವು.ಆ ದಿನ ಕೂಡ ನಿದ್ದೆ ಮಾಡುವಾಗ ತಡವಾಗಿತ್ತು.
ಇದೀಗ ನಮ್ಮ ನಾಟಕ ಸ್ಪರ್ಧೆ ಸಂಜೆ ಆರು ಗಂಟೆಯ ಸಮಯ. ಪ್ರೇಕ್ಷಕರು ಹತ್ತು ರೂಪಾಯಿ ನೀಡಿ ನಾಟಕ ವೀಕ್ಷಣೆಗೆ ಸಿದ್ಧರಾದರು. ನಮ್ಮ ತಂಡದಲ್ಲಿ ಕಲಾವಿದನಾಗಿ ರಾಮಣ್ಣ ತಂಬಿನಡ್ಕ ಎಂಬ ಹಿರಿಯ ಮಿತ್ರರಿದ್ದರು. ಮುಗ್ಧತೆಯ ಮನುಷ್ಯ, ಗೆಳೆತನ ,ನಾಟಕದ ಹುಚ್ಚು ,ಮತ್ತೆ ಸಹಾಯಗುಣ ಈ ಮನುಷ್ಯ ವಿಶೇಷ ಗುಣ. ನಾನೂ ಮತ್ತು ಅವರೂ ಯಾವಾಗಲೂ ಜೊತೆಯಲ್ಲಿಯೇ ಇರುತ್ತಿದ್ದೆವು. ಗಮ್ಮತ್ತೆಂದರೆ ಆ ಪುಣ್ಯಾತ್ಮನಿಗೂ ನಾಟಕದಲ್ಲಿ ಕಾವಲುಗಾರ ಪಾತ್ರ. ಕೈಯಲ್ಲಿ ದೊಡ್ಡ ಕೋಲು ಹಿಡಿದು ನಿಲ್ಲುವುದು. ಪುಣ್ಯಾತ್ಮನಿಗೆ ಬೀಡಿ ಸೇದುವುದು ಒಂದು ಚಟವಾಗಿತ್ತು. ಅನತಿ ದೂರದಲ್ಲಿ ನಿಂತರೆ ಕೈಯಲ್ಲಿ ಒಂದು ಉರಿಸಿದ ಬೀಡಿ ಇದ್ದೇ ಇರುತ್ತಿತ್ತು. ಎಲ್ಲಿಯವರೆಗೆ ಅಂದರೆ ಅವರ ಪಾತ್ರ ಪ್ರವೇಶವಾಗುವವರೆಗೆ ಕೈಯಲ್ಲಿದ್ದ ಬೀಡಿಯ ಮೂತಿ ಕೆಂಪಾಗಿರುತ್ತಿತ್ತು. ಆಗ ನಾನೂ ಆಗಾಗ ಹೇಳುತ್ತಿದ್ದೆ “ಇನ್ನೂ ಟ್ರೈನ್ ನಿಲ್ಲಲಿ ಸ್ವಾಮಿ, ಈಗ ಪ್ರದರ್ಶನ ಆರಂಭವಾಗಿದೆ ಇನ್ನೂ ನಿಮ್ಮ ಪಾತ್ರದ ಪ್ರವೇಶ ಸಮಯ” ಅಂತಾ ಆಗಾಗ ಹೇಳುತ್ತಿದ್ದೆ. ಅಯ್ಯೋ ದೇವಾ…. ಇನ್ನೇನೂ ಇವರ ಪ್ರವೇಶ ಆಗಬೇಕು, ಲೈಟ್ ಆನ್ ಆಗಿ ಎರಡೂ ಐದು ಸೆಕೆಂಡು ಆದರೂ ಪುಣ್ಯಾತ್ಮನ ಪ್ರವೇಶವಿಲ್ಲ. ನೋಡಿದರೆ ಬೀಡಿ ಸೇದುವ ಸ್ಪರ್ಧೆ ಯಲ್ಲಿರುವಂತೆ ಹೊಗೆ ಭಾರೀ ಹೋಗ್ತಾ ಇದೆ. ಆಷ್ಟರಲ್ಲಿ ತುಮಕೂರಿನ ಆನಂದರು ಸಹ ಡೈಕ್ಟಕರ್ ಅವರು ಕಣ್ಣು ಕೆಂಪಾಗಿಸಿಕೊಂಡು.. ಬಂದು “ರಾಮಣ್ಣ…. ನಿಮ್ಮ ಪ್ರವೇಶ ಏನೂ ಮಾಡುತ್ತಿದ್ದೀರಿ” ಅಂತಾ ಹೇಳಿದ್ದೇ ತಡ ಈ ಮನುಷ್ಯ ಕೋಲು ಬಿಟ್ಟು ಬಂದು ಪುನಃ ಎದ್ದು ಬಿದ್ದು ಬಂದು ಇದ್ದ ಎರಡೇ ಡೈಲಾಗ್ ಹೇಗಾದರೂ ತಡಬಡಾಯಿಸಿ ಹೇಳಿಯೇ ಬಿಟ್ಟರು. ನಾವಂತೂ ಗಂಭೀರ ನಾಟಕ ನಡೆಯುತ್ತಲೇ ಇದೆ ಉಳಿದವರು ರಂಗ ಹಿಂದೆಯಿಂದಲೇ ಮುಸಿ ಮುಸಿ ಅಂತಾ ನಗುತ್ತಲೇ ಇದ್ದೆವು. ಈ ಪುಣ್ಯಾತ್ಮ ಕೊನೆಗೆ ಹಿಂದೆ ಬಂದು “ನನ್ನ ಸೀನ್ ಇನ್ನೂ ಲೇಟ್ ಇದೆ ಅಂತಾ ಭಾವಿಸಿದ್ದೆ” ಎಂದು ಹೇಳಿದಾಗ ನಮಗೆ ಮತ್ತೆ ನಗು ಅಂತೂ ನಾಟಕ ಮುಗಿಯಿತು. ಆದರೆ ನಾಟಕದಲ್ಲಿ ನಮಗೆ ಪ್ರಥಮ ಬಹುಮಾನ ಬರಲಿಲ್ಲ ಆದರೆ ಉತ್ತಮ ನಿರ್ದೇಶನ ಬೆಳಕು ಸಂಗೀತ ವಿಭಾಗದಲ್ಲಿ ಬಂದಿತ್ತು.
ನಾವು ಸುಳ್ಯಕ್ಕೆ ಬರುವಾಗ ರಾತ್ರಿ ಮೂರು ಗಂಟೆ.ಆಗಿತ್ತು. ಕೆಲವರು ಮನೆಗೆ ಹೋದರು. ನಾವು ನಾಲ್ಕು ಮಂದಿ ಬಾಸುಮ ಕೊಡಗು ಅವರ ಆರ್ಟ್ಸ್ ರೂಂನ ಪಕ್ಕದಲ್ಲೇ ಇರುವ ರೂಂನಲ್ಲಿ ಮಲಗಿದೆವು. ಮಲಗಿದ್ದೇ ತಡ ನಿದ್ದೆ ಗಡದ್ದಾಗಿ ಬಂತು. ಸ್ವಲ್ಪ ಹೊತ್ತಿನಲ್ಲಿಯೇ ನಮ್ಮ ಗ್ರಹಚಾರವೋ ಜವನ ಬಾಧೆಯೋ ಏನೋ ಇಡೀ ಕಟ್ಟಡವೇ ಕುಸಿಯಲಾರಂಭಿಸಿತು. ನಾನು ಇದ್ದಕ್ಕಿದ್ದಂತೆ ಎದ್ದು “ಏಳಿ ಏಳಿ ಕಟ್ಟಡ ಬೀಳುತ್ತಿದೆ” ಎಂದು ರಾಮಣ್ಣನನ್ನು ಎಲ್ಲರನ್ನು ಮುಟ್ಟಿ ಕರೆದು ಎಬ್ಬಿಸಿ ಹಾಸಿದ ಮತ್ತೆ ಹೊದ್ದಿರುವ ಬಟ್ಟೆಯನ್ನು ಸುರುಟಿ ಹೊರಗೆ ಓಡಲು ‌ಹೆಜ್ಜೆ ಹಾಕಿದೆ ಆಗಲೇ ರಾಮಣ್ಣನಿಗೆ ನನ್ನ ಕಾಲು ತಾಗಿ ಎಚ್ಚರವಾಯಿತು.ಏನೂ ?ಏನೂ.?ಎಲ್ಲಿ? ಕಟ್ಟಡ ಬಿತ್ತು ಅಂತಾ ನನ್ನ ಹಿಡಿದು ನಿಲ್ಲಿಸಿದರು. ನನಗಂತೂ ನಿದ್ದೆಗಣ್ಣಿನಲ್ಲಿ ಬದುಕಿದೆಯಾ ಬಡಜೀವ ಅಂತಾ ಓಡಿ ಹೋಗಿ ಬಚಾವಾಗುವುದೇ ಇತ್ತು ಹೊರತು ವಿವರಿಸಲು ಸಮಯ ಮತ್ತು ತಾಳ್ಮೆಯೂ ಇರಲಿಲ್ಲ. ರೂಂ ಸೆಟರ್ ಎಳೆದಾಗಂತೂ ಎಲ್ಲರಿಗೂ ಎಚ್ಚರವಾಯಿತು. ಹೊರಗೆ ಹೊರಡುತ್ತಲೇ ನೋಡುತ್ತೇನೆ. ಅಬ್ಬಾ ಅಚ್ಚರಿಯೇ ಕಾದಿತ್ತು ಅಂದರೆ ಅಂತಹುದೇನೂ ಅನಾಹುತ ನಡೆದಿರಲಿಲ್ಲ ನಿದ್ದೆಯ ಮಂಪರಿನಲ್ಲಿ ಕಟ್ಟಡ ಕುಸಿಯುವ ಕನಸು ಬಿದ್ದಿತ್ತು ಅಷ್ಟೇ. ನಾನು ಆ ಕನಸಿಗೆ ನಿದ್ದೆಯಲ್ಲಿ ಎದ್ದು ಹೊರಟಿದ್ದೆ ಅಷ್ಟೇ…
ಈ ಘಟನೆಯನ್ನು ಮಿತ್ರ ರಾಮಣ್ಣ ಈಗಲೂ ಭೇಟಿಯಾದಾಗೆಲ್ಲಾ ನೆನಪಿಸಿ ನಗುತ್ತಾರೆ.ಅವತ್ತು ನೀನು ಎದ್ದು ಬಟ್ಟೆ ಸುತ್ತಿ ಹೊರಟ್ಟದ್ದು ಎಲ್ಲಿಗೆ ಅಂತಾ ಕೇಳ್ತಾರೆ. ಅದಕ್ಕೆ ನಾನು ನಿನ್ನೆ ಕಂಡ ಕನಸೇ ಈಗ ನೆನಪಾಗ್ತಿಲ್ಲ ರಾಮಣ್ಣ ಇನ್ನೂ ಆ ದಿನಗಳ ಕನಸಿನ ಕಥೆ ಹೇಗೆ ನೆನಪಾಗುತ್ತದೆ ?ಎಂದು ಹೇಳಿದಾಗ ಇಬ್ಬರೂ ಜೋರಾಗಿ ನಗಾಡಿದೆವು. ಆದರೆ ಆ ಘಟನೆಯ ನೆನಪುಗಳ ಮಾತೇ ಒಂದು ತರ ಮಧುರ.
ಗಣೇಶ್ ಜಾಲ್ಸೂರು
ಶಿಕ್ಷಕರು ಭುವನೇಂದ್ರ ಹೈಸ್ಕೂಲ್ ಕಾರ್ಕಳ

ಗಣೇಶ್ ಜಾಲ್ಸೂರು

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
https://youtu.be/47zKJ8cyugc
error: Content is protected !!