ನೇತಾಜಿ ಸುಭಾಶ್ಚಂದ್ರ ಬೋಸ್ ಎಂಬ ಹೆಸರು ಭಾರತದ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಭಾರಿ ಸಂಚಲನ ಮೂಡಿಸುವಂಥದ್ದು. ಸುಭಾಶ್ಚಂದ್ರ ಬೋಸರಷ್ಟು ದೀರ್ಘಕಾಲ ಕ್ರಾಂತಿಕಾರಿ ಹೋರಾಟವನ್ನು ನಡೆಸಿದವರು ಇನ್ನೊಬ್ಬರಿಲ್ಲ. ಹಲವಾರು ಸ್ವಾತಂತ್ರ್ಯ ಹೋರಾಟಗಾರರು ತೆಗೆದುಕೊಂಡ ಹೋರಾಟದ ಮಾದರಿ ವೈವಿಧ್ಯತೆಯಿಂದ ಕೂಡಿತ್ತು. ಕುದಿರಾಂ ಬೋಸ್, ಆಜಾದ್, ಭಗತ್ ಸಿಂಗ್ ಮೊದಲಾದ ಹೋರಾಟಗಾರರು ಕ್ರಾಂತಿಕಾರಿ ಹೋರಾಟವನ್ನೇ ನಡೆಸಿದರು. ಆದರೆ ಸುಭಾಶ್ಚಂದ್ರ ಬೋಸರ ಹೋರಾಟ ಕ್ರಾಂತಿಕಾರಿಯೂ ಆಗಿತ್ತು ಪ್ರಬುದ್ಧತೆಯಿಂದಲೂ ಕೂಡಿತ್ತು ಮತ್ತು ದೀರ್ಘ ಹೋರಾಟವಾಗಿತ್ತು.
ಗಾಂಧೀಜಿಯ ಸೌಮ್ಯ ಹೋರಾಟದ ರೀತಿ ಮತ್ತು ಆರ್ಥಿಕ ಚಿಂತನೆಯನ್ನು ಒಪ್ಪಿಕೊಳ್ಳದೆ ಬೋಸರುತಮ್ಮದೇ ಹಾದಿಯಲ್ಲಿ ಮುಂದುವರಿದರು. ಗಾಂಧಿ ಮತ್ತು ಬೋಸರ ನಡುವೆ ಸೈದ್ಧಾಂತಿಕ ಬೇಧವಿತ್ತು. ಹಲವಾರು ಸಲ ತಮ್ಮ ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಬಂಧಿಸಲ್ಪಟ್ಟ ಬೋಸರು ಬಂಧನದಲ್ಲಿದ್ದುಕೊಂಡೇ ಜನರಿಂದ ರಾಜಕೀಯದಲ್ಲಿ ಆಯ್ಕೆ ಪಡೆದವರು. ನಿರಂತರ ಬಂಧನಕ್ಕೊಳಗಾದ ಬೋಸರು ತಮ್ಮ ಚಟುವಟಿಕೆಯನ್ನು ಭೂಗತವಾಗಿ ದೇಶದ ಹೊರಗಿಂದ ಮುಂದುವರೆಸುತ್ತಾರೆ. ಜರ್ಮನಿಯ ನಾಜಿ ಆಳ್ವಿಯ ಸಂಪರ್ಕ ಪಡೆದ ಬೋಸರು ಅಲ್ಲಿಂದಲೇ ಭಾರತದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಭಾಷಣಗಳನ್ನು ಹಿಂದಿ, ಇಂಗ್ಲೀಷ್ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಜರ್ಮನಿ ಪ್ರಾಯೋಜಿತ ರೇಡಿಯೋ ಮೂಲಕ ಬಿತ್ತರಿಸುತ್ತಾರೆ.
ಆಗ್ನೇಯ ಏಷ್ಯಾದಲ್ಲಿ ಜಪಾನ್ ದಾಳಿ ನಡೆಸಿ ತನ್ನ ಯಜಮಾನ್ಯವನ್ನು ಸ್ಥಾಪಿಸಿದ ವರ್ಷಗಳ ನಂತರ 1943ರಲ್ಲಿ ಟೋಕಿಯೋ ತಲುಪಿ ಪೂರ್ವ ಏಷ್ಯಾದಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳುತ್ತಾರೆ. ವಿಶೇಷವೆಂದರೆ ಎರಡನೇ ಮಹಾಯುದ್ಧದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಪರ ಹೋರಾಡಿದಭಾರತೀಯ ಸೈನಿಕರು ಹೊರದೇಶದಲ್ಲಿ ಯುದ್ಧ ಕೈದಿಗಳಾಗಿದ್ದರು. ಆ ಯುದ್ಧ ಕೈದಿಗಳನ್ನು ಒಟ್ಟು ಸೇರಿಸಿ ಸುಮಾರು 40,000 ಸಾವಿರ ಸೈನಿಕರ “ಭಾರತೀಯ ರಾಷ್ಟ್ರೀಯ ಸೇನೆಯನ್ನು” ( ಆಜಾದ್ ಹಿಂದ್ ಪೌಜ್) ಕಟ್ಟಿದ ಅಪ್ರತಿಮ ನಾಯಕ. ಇದು ಭಾರತದ ಯಾವ ಸ್ವಾತಂತ್ರ್ಯ ಹೋರಾಟಗಾರರೂ ಮಾಡಲಾಗದ ಸಾಹಸ. ಈ ಸೇನೆಯು ಜಪಾನ್ ಸೇನೆಯ ಸಹಯೋಗದೊಂದಿಗೆ ಬ್ರಿಟಿಷರನ್ನು ಭಾರತದಿಂದ ಓಡಿಸಲು ರಂಗೂನ್ಗೆ ಬಂದು ತಲುಪಿತು. ಭಾರತದ ನೆಲವನ್ನು ತಲುಪಿ ಇಂಪಾಲಕ್ಕೆ ತೆರಳುವ ಹಾದಿಯಲ್ಲಿ ಬ್ರಿಟಿಷರು ವೈಮಾನಿಕಬಲವಿಲ್ಲದ ಜಪಾನ್ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯನ್ನು ಹಿಮ್ಮೆಟ್ಟಿಸುತ್ತಾರೆ. ಮುಂದೆ 2ನೇ ಮಹಾಯುದ್ಧದಲ್ಲಿ ಜಪಾನ್ ಸೋಲು ಕಾಣುವ ಮೂಲಕ ಬೋಸರ ಕನಸು ಭಗ್ನವಾಗುತ್ತದೆ. ಮುಂದೆ ಬೋಸರ ಸಂಶಯಾತ್ಮಕ ಸಾವು ಸಂಭವಿಸುತ್ತದೆ. ಆದಾಗ್ಯೂ ಭಾರತೀಯ ರಾಷ್ಟ್ರೀಯ ಸೇನೆ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿರುವುದು ಇತಿಹಾಸದುದ್ದಕ್ಕೂ ರಾರಾಜಿಸುತ್ತದೆ. ಮತ್ತೊಂದು ಕಡೆ ಬೋಸರ ಉದ್ದೇಶ ಬ್ರಿಟೀಷರನ್ನ ಭಾರತದಿಂದ ಹೊರದೂಡುವುದಾಗಿತ್ತು ಎನ್ನುವುದು ಗಾಂಧೀಜಿಗೂ ತಿಳಿದಿತ್ತು. ಒಂದು ವೇಳೆ ಬೋಸ್ ಸೇನೆ ಭಾರತಕ್ಕೆ ಬಂದರೆ ಬ್ರಿಟಿಷರನ್ನು ಅವರೇ ಹೊರಗಟ್ಟಬಹುದು, ಭಾರತದಲ್ಲಿ ಬ್ರಿಟಿಷರಿದ್ದರಷ್ಟೇ ಅದು ಸಾಧ್ಯ. ಆ ಹಿನ್ನಲೆಯಲ್ಲಿ ಬೋಸರ ಸೇನೆ ಭಾರತ ಪ್ರವೇಶಿಸುವುದನ್ನ ತಡೆಯಲೆಂದೇ ಗಾಂಧೀಜಿ “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ” ಚಳವಳಿಯನ್ನು 1942ರಲ್ಲಿ ಪ್ರಾರಂಭಿಸಿದರು ಎನ್ನುವ ಅಪವಾದ ಮತ್ತು ಟೀಕೆಯು ಕೂಡ ಗಾಂಧೀಜಿ ಮೇಲಿದೆ.
ಅದೇನೇ ಇದ್ದರೂ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಿರುವುದು ಗಾಂಧೀಜಿಯ ಅಹಿಂಸಾ ತತ್ವದ ಮೂಲಕ. ಅದೇ ಕಾರಣಕ್ಕೆ ಗಾಂಧೀಜಿ ರಾಷ್ಟ್ರಪಿತನಾದರು. ಇನ್ನೊಂದು ಆಯಾಮದಲ್ಲಿ ಯೋಚಿಸುವುದಾದರೆ ಎರಡನೇ ಮಹಾಯುದ್ಧದಲ್ಲಿ ಬಹುತೇಕ ಆಗ್ನೇಯ ಏಷ್ಯಾದಲ್ಲಿ ಜಪಾನ್ ವಿರುದ್ದ ಹಿನ್ನಡೆಯನ್ನು ಕಂಡ ಬ್ರಿಟನ್ ಬರ್ಮ ಯುದ್ಧದಲ್ಲೂ ಒಂದು ವೇಳೆ ಜಪಾನ್ ವೈಮಾನಿಕವಾಗಿ ಸಶಕ್ತವಾಗಿದ್ದರೆ ಬ್ರಿಟಿಷರು ಭಾರತವನ್ನು ತೊರೆದು ಹೋಗುವ ಅನಿವಾರ್ಯತೆ ಉಂಟಾಗುತಿತ್ತು. ಆ ಮೂಲಕ 1944ರಲ್ಲೇ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕೀರ್ತಿ ಭಾರತೀಯ ರಾಷ್ಟ್ರೀಯ ಸೇನೆ ಮತ್ತು ನೇತೃತ್ವ ವಹಿಸಿದ ಸುಭಾಶ್ಚಂದ್ರ ಬೋಸರದಾಗುತಿತ್ತು. ಆಗ ರಾಷ್ಟ್ರಪಿತನ ಪದವಿಯಿಂದ ಗಾಂಧೀಜಿ ಖಂಡಿತವಾಗಿಯೂ ವಂಚಿತರಾಗುತ್ತಿದ್ದರು.
ಡಾ| ನಾರಾಯಣ ಶೇಡಿಕಜೆ
ಪ್ರಾಂಶುಪಾಲರು- ಕ್ರೈಸ್ಟ್ ಕಿಂಗ್ ಕಾಲೇಜ್,ಕಾರ್ಕಳ

ಒಳ್ಳೆ ಲೇಖನ ಸರ್, ಎಲ್ಲಾ ಲೇಖಕರಲ್ಲೂ ಒಬ್ಬೊಬ್ಬ ವ್ಯಕ್ತಿ ವಿಶೇಷ ಹೋರಾಟಗಾರರಾಗಿ ಕಾಣುತ್ತಾರೆ. ತಮಗೂ ಬೋಸ್ ರವರು ಹಾಗೆ ಕಂಡಿದ್ದಾರೆ. ಆದರೆ ‘ರೇ’ ಎನ್ನುವ ಪದವೇ ನಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಲೇಖಕನ ಅಭಿಪ್ರಾಯಕ್ಕೆ ಜಾಗ ಕಲ್ಸುಪಿತ್ತದೆ. ಒಟ್ಟಾರೆ ಹೊಸ ನೋಟವನ್ನು ಬೀರಿದೆ.
Anyway there is no record of anybody conferring “Rashtra pitha” to Gandhiji. No legal standing.