ವಿಶ್ವಕ್ಕೆ ಕನಕ: ಕನಕದಾಸ

1

ಜ್ಞಾನ ಮತ್ತು ಭಕ್ತಿಯ ಮೂಲಕ ಮುಕ್ತಿಯನ್ನು ಕಾಣಬಯಸಿದವರನ್ನು ಎರಡು ಪಂಥಗಳನ್ನಾಗಿ ವಿಂಗಡಿಸಬಹುದು. ಶಿವನ ಆರಾಧಕರನ್ನು ಶೈವಪಂಥವೆಂದು, ವಿಷ್ಣುವಿನ ಆರಾಧಕರನ್ನು ವೈಷ್ಣವ ಪಂಥವೆಂದು ಕರೆಯುವರು. ಕ್ರಿ.ಶ 12ನೇ ಶತಮಾನದಲ್ಲಿ ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ ಕ್ರಾಂತಿಯನ್ನು ನಾವು ಬಸವಣ್ಣಾದಿಗಳಿಂದ ಕಾಣಬಹುದು. ಇವರ ನೇರ ಮಾತುಗಳು ವಚನಗಳಾಗಿ ಹೊರಹೊಮ್ಮಿ ಸಾಹಿತ್ಯಕ ಕ್ರಾಂತಿಯನ್ನು ಉಂಟುಮಾಡಿದರೆ ,ವೈದಿಕ ಪರಂಪರೆಯನ್ನು ಆಚಾರ್ಯ ತ್ರಯರು ದ್ವೈತ, ಅದ್ವೈತ, ವಿಶಿಷ್ಟಾದ್ವೈತದ ಹಿನ್ನೆಲೆಯಲ್ಲಿ ಪ್ರಚುರಪಡಿಸಿದರು. ಈ ಹಿನ್ನೆಲೆಯಲ್ಲಿ ಹರಿಪಾರಮ್ಯವನ್ನು ಒಪ್ಪಿಕೊಂಡು ಭಕ್ತಿ ಸಾಧನೆ ಮಾಡಿ ದೈವಸಾಕ್ಷಾತ್ಕಾರವನ್ನು ಪಡೆದವರು ಹರಿದಾಸರು. ತತ್ವ ವಿಚಾರಗಳನ್ನು ಬದುಕಿನ ಉತ್ತಮ ಮೌಲ್ಯಗಳನ್ನು , ಸಮಾಜದ ಮೌಢ್ಯಗಳನ್ನು ನಿವಾರಿಸಲು ದಾಸ ಸಾಹಿತ್ಯದ ಮೂಲಕ ಮುಂದಾದರು.
ಅದರಲ್ಲಿಯೂ ವ್ಯಾಸರಾಯರಿಂದ ದೀಕ್ಷೆ ಪಡೆದ ಕನಕದಾಸರು ಪುರಂದರದಾಸರ ಸಮಕಾಲೀನರು ಮತ್ತು ಸಮತೂಕದವರು. ಇವರು ಸಮಾಜ ಸುಧಾರಕರಾಗಿ, ಕ್ರಾಂತಿಕಾರಿ, ವೈಚಾರಿಕ ಮನೋಧರ್ಮದವರಾಗಿ ‘ಮೋಹನ ತರಂಗಿಣಿ’, ‘ಹರಿಭಕ್ತಿಸಾರ’, ‘ನಳಚರಿತ್ರೆ’, ‘ರಾಮಧಾನ್ಯ ಚರಿತ್ರೆ’ ಮುಂತಾದ ಕಾವ್ಯಗಳನ್ನು ಬರೆದರು. ಅಲ್ಲಮನ ಬೆಡಗಿನ ವಚನಗಳಂತೆ ‘ಮುಂಡಿಗೆ’ಗಳನ್ನು ದಾಸಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆಯಾಗಿ ನೀಡಿದರು.
ಕನಕದಾಸರ ಕೀರ್ತನೆ ಮತ್ತು ಕಾವ್ಯಗಳಲ್ಲಿ ಬಂಡಾಯದ ದನಿ, ಸಾಮಾಜಿಕ ಕಳಕಳಿ, ವಿಡಂಬನಾ ಚಾತುರ್ಯವಿದೆ. ಇವರ ವ್ಯಕ್ತಿತ್ವವನ್ನು ಗುರುತಿಸುವಲ್ಲಿ ತೀರ ಕೆಳವರ್ಗದಿಂದ ಬಂದವರೆಂಬುದು ಮುಖ್ಯ ಸಂಗತಿಯಾಗಿದೆ. ದಾಸಪಂಥದ ಪದ್ಮವ್ಯೂಹವನ್ನು ಪ್ರವೇಶಿಸಿದ ಏಕೈಕ ಶೂದ್ರರೆಂದರೆ ಕನಕದಾಸರು. ಇವರು ದಾಸ ಸಾಹಿತ್ಯದ ಸುವರ್ಣ ಯುಗ ಪ್ರವರ್ತಕರಲ್ಲೊಬ್ಬರು. ಇವರು ಯಾವ ಮತವನ್ನೂ ಬಿಡದೆ, ಯಾವ ಮತಕ್ಕೂ ಅಂಟಿಕೊಳ್ಳದೆ ಸಕಲ ತತ್ವಗಳನ್ನೂ ಮೀರಿ, ನಿರ್ದಿಗಂತವಾಗಿ,ವಿಶ್ವಮಾನವರಾಗಿ ವಿಜ್ರಂಭಿಸಿದರು.
ಪ್ರಾರಂಭದಲ್ಲಿ ದ್ವೈತ ಭಾವದ ಹರಿನಾಮಸ್ಮರಣೆ ಮಾಡಿದ ಕನಕದಾಸರು ಭಕ್ತಿ, ಆತ್ಮಶೋಧನೆ, ಆತ್ಮಸಮರ್ಪಣೆ, ನೀತಿಬೋಧನೆಗಳ ಮೂಲಕ ಅದ್ವೈತ ಸಿದ್ಧಿಯ ನೆಲೆಯನ್ನು ಏರಿದರು.
“ತಲ್ಲಣಿಸದಿರು ಕಂಡ್ಯ ತಾಳು ಮನವೆ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ” ಎನ್ನುವಲ್ಲಿ ಶ್ರೀ ಹರಿಯನ್ನು ಸಾಕ್ಷಾತ್ಕರಿಸಿಕೊಳ್ಳುವ,‌ ಅವನನ್ನು ಎಲ್ಲೆಡೆ ಕಾಣುವ ಅವನ ಸಂಗಸುಖವನ್ನು ಅನುಭವಿಸುವ ಕಾತರವನ್ನು ಕಾಣುತ್ತೇವೆ. ಇಲ್ಲಿ ವೃಕ್ಷಕ್ಕೆ ನೀರೆರೆದವರು; ಪಕ್ಷಿಗಳಿಗೆ ಅನ್ನವಿತ್ತವರು; ಕಪ್ಪೆಗಳಿಗೆ ಆಹಾರ ತಂದಿತ್ತವರು ಯಾರು? ಎಂಬ ಬೆರಗಿನ ಪ್ರಶ್ನೆಗಳಿಗೆ ‘ಹುಟ್ಟಿಸಿದ ದೇವ ತಾ ಹೊಣೆಗಾರ’ ಎಂಬ ಉತ್ತರವನ್ನು ಕಂಡುಕೊಳ್ಳುತ್ತಾರೆ.
‘ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯ’
‘ದಾನ ಧರ್ಮವ ಮಾಡಿ ಸುಖಿಯಾಗು ಮನವೇ’
‘ತನು ನಿನ್ನದು ಜೀವ ನಿನ್ನದು’ ಎಂಬ ಕೀರ್ತನೆಗಳಲ್ಲಿ ಮನದ ಹೊಯ್ದಾಟ ಎದ್ದು ಕಾಣುತ್ತದೆ. ಆತ್ಮ ಶೋಧನೆ ಪ್ರತಿಯೊಬ್ಬ ಸಾಧಕನೂ ಕೈಗೊಳ್ಳಬೇಕಾದ ಸಾಧನ. ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳದಿರುವುದೇ ಅವರ ಆತ್ಮಶೋಧನೆಗೆ ನಿದರ್ಶನ .
‘ಎಳ್ಳು ಕಾಳಿನಷ್ಟು ಭಕುತಿ ಎನ್ನೊಳಗಿಲ್ಲ’
‘ಮಾಯಾ ಪಾಶದೊಳಗೆ ಸಿಲುಕಿಸುವಂತ ಪಂಚೇಂದ್ರಿಯಗಳು’ ಇಂತಹ ಕೀರ್ತನೆಗಳಲ್ಲಿ ಸಮರ್ಪಣ ದೃಷ್ಟಿಯನ್ನು ಕಾಣಬಹುದು.ಭಗವಂತನಿಗಾಗಿ ಅನುದಿನ ಅಂಗಲಾಚಿದರೂ ಅವನು ದರ್ಶನವೀಯದಿದ್ದಾಗ ಭಕ್ತನಲ್ಲಿ ಸಹಜವಾಗಿಯೇ ಛಲ ತಲೆಯೆತ್ತುತ್ತದೆ. ಅವನು ಪ್ರತಿಭಟನೆಯ ರೂಪ ತಾಳುತ್ತಾನೆ.
‘ಆವ ಸಿರಿಯಲಿ ಎನ್ನ ಮರೆತೆ, ದೇವ ಜಾನಕೀರಮಣ ಪೇಳು’
‘ಆರು ಬದುಕಿದರಯ್ಯ ಹರಿ ನಿನ್ನ ನಂಬಿ’
‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ’
ಇವುಗಳಲ್ಲೆಲ್ಲ ಭಕ್ತಿ, ಸಾತ್ವಿಕ ಕ್ರೋಧವಿದೆ. ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ‘ ಎಂದು ಲೋಕ ಜೀವನವನ್ನು ವ್ಯಾಖ್ಯಾನ ಮಾಡುತ್ತಾರೆ. ‘ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ’ ಎಂಬುದರಲ್ಲಿಯೂ ಅವರ ಮನೋಭಾವದ ಪರಿಪಕ್ವತೆ ಎದ್ದು ಕಾಣುತ್ತವೆ.
ಇವೆಲ್ಲ ಕನಕದಾಸರ ಅಂದಿನ ಸಮಾಜದ ಸಾಂಸ್ಕೃತಿಕ ದಾಖಲೆಗಳಾಗಿವೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಣ್ದೆರೆದು ನೋಡಿದ ಅವರು ಜಾತಿ ಮತಗಳ ತಾರತಮ್ಯಗಳನ್ನು ಧರ್ಮದ ಆಚರಣೆಯ ಹಿನ್ನೆಲೆಯಲ್ಲಿರುವ ಕಟಿಲ ಕುಹಕಗಳನ್ನೂ, ಶೋಷಣೆಯನ್ನು ಕಂಡು ಕೆರಳುತ್ತಾರೆ. ಅನೇಕ ಕೀರ್ತನೆಗಳಲ್ಲಿ ಕಂಡುಬರುವ ಅವರ ಕಟುವಾದ ಮಾತುಗಳ ಹಿಂದೆ ಅವರ ವೈಚಾರಿಕ ಮನೋಧೈರ್ಯ ಮಿಂಚುತ್ತದೆ. ಕನಕದಾಸರು ತಮ್ಮ ಸಾಧನೆಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ‘ಕನಕ’ಗಳನ್ನು ಶಾಶ್ವತವಾಗಿ ನೀಡಿದ್ದಾರೆ.

ರಾಜೀವ್‌ ಶೇಡಿಮನೆ, ಶಿಕ್ಷಕರು (ಸದಸ್ಯರು, ಪೆನ್‌ ಟೀಮ್‌-ಕಾರ್ಕಳ)


---
Previous articleನಿಟ್ಟೆ : ಕಾರು ಸ್ಕೂಟರ್‌ಗೆ ಡಿಕ್ಕಿ -ಸ್ಕೂಟರ್‌ ಸವಾರ ಸಾವು
Next articleಕಾರ್ಕಳ ರೋಟರಿ ಕ್ಲಬ್ ವತಿಯಿಂದ ಉಚಿತ ವಾಹನ ಮಾಲಿನ್ಯ ತಪಾಸಣೆ

1 COMMENT

LEAVE A REPLY

Please enter your comment!
Please enter your name here