Wednesday, December 7, 2022
spot_img
Homeಸಾಹಿತ್ಯ/ಸಂಸ್ಕೃತಿತುಳಸಿ ಪೂಜೆಯ ಮಹತ್ವ

ತುಳಸಿ ಪೂಜೆಯ ಮಹತ್ವ

ದೀಪಾವಳಿ ಹಬ್ಬದ ಸಡಗರ ಮುಗಿಯುವುದು ತುಳಸಿ ಪೂಜೆಯೊಂದಿಗೆ.ಚಾಂದ್ರಮಾನ ಕಾರ್ತಿಕ ಮಾಸದ 12ನೇ ದಿವಸ ಅಂದರೆ ಉತ್ಥಾನ ದ್ವಾದಶಿಯಂದು ಈ ಹಬ್ಬವನ್ನು ಆಚರಿಸುತ್ತೇವೆ.
ಮನೆಯಂಗಳದಲ್ಲಿ ಕಂಗೊಳಿಸುವ ತುಳಸಿ ಕಟ್ಟೆಗೆ ಈ ದಿನ ಮದುವಣಗಿತ್ತಿಯ ಶೃಂಗಾರ.ಕಟ್ಟೆಯ ಸುತ್ತ ರಂಗುರಂಗಿನ ರಂಗೋಲಿಯ ಚಿತ್ತಾರ.ಬೆಟ್ಟದ ನೆಲ್ಲಿ, ಹುಣಸೆ ಮರದ ಕೊಂಬೆಗಳಿಂದ ಹಚ್ಚಹಸುರಿನ ಚಪ್ಪರ, ಸುತ್ತಲೂ ಮಾವಿನ ಎಲೆಯ ತೋರಣದ ಓರಣದಿಂದ ವಿಶೇಷ ಅಲಂಕಾರವನ್ನು ಮಾಡುತ್ತೇವೆ. ಬೃಂದಾವನದ ಸುತ್ತ ದೀಪ ಪ್ರಜ್ವಲಿಸಿ ಸನ್ಮಂಗಳತೆಯನ್ನು ಕೋರುತ್ತೇವೆ.ಧಾರ್ಮಿಕ ಹಬ್ಬ ಎಂದಾಕ್ಷಣ ಅದರ ಹಿಂದೆ ಒಂದು ಪೌರಾಣಿಕ ಕಥಾಹಂದರವಿರುತ್ತದೆ.ಹೀಗೆ ತುಳಸಿ ಪೂಜೆಯ ಹಿಂದೆ ಹಲವಾರು ಕತೆಗಳಿವೆ.ಅದರಲ್ಲಿ ತುಳಸಿ ವಿವಾಹದ ಆಚರಣೆಯ ಹಿಂದಿರುವ ಒಂದು ಸುಂದರ ಕಥಾಮಾಲೆ ಇಲ್ಲಿದೆ.
ವೃಂದಾ ಎಂಬ ಹೆಸರಿನ ವಿಷ್ಣು ಭಕ್ತೆ ತುಳಸಿ ಗಿಡವಾಗಿ ಜನ್ಮ ತಳೆದ ಕಥೆ ಇದಾಗಿದೆ.ರಾಕ್ಷಸ ಕುಲದ ನೀಚ ರಾಜ ಜಲಂಧರನ ಮಡದಿಯಾದ ಈಕೆ ಪತಿವ್ರತಾ ಶಿರೋಮಣಿಯಾಗಿದ್ದಳು. ಸತಿಯ ಪಾತಿವ್ರತ್ಯದ ಫಲದಿಂದ ತನಗೆ ಸೋಲೇ ಇಲ್ಲ ಎಂದು ಈ ರಾಜ ಬೀಗುತ್ತಿದ್ದ.ದೇವತೆಗಳಿಗೆ ತೊಂದರೆ ಕೊಡುತ್ತಿದ್ದ. ಈತನ ಉಪಟಳ ಹೆಚ್ಚಾಗುತ್ತಿದ್ದಂತೆ ದೇವತೆಗಳೆಲ್ಲ ಶಿವನ ಮೊರೆ ಹೋಗಿ ಈತನಿಂದ ಪಾರು ಮಾಡುವಂತೆ ಗೋಗರೆದರು. ಆಗ ಪರಶಿವನು ವಿಷ್ಣುವಿನ ಬಳಿಗೆ ಹೋಗಿ ಸಮಸ್ಯೆಗೆ ಪರಿಹಾರ ಕೇಳಿದ. ಆಗ ವಿಷ್ಣು ಜಲಂಧರನ ರೂಪ ತಾಳಿ ವೃಂದೆಯ ಪಾತಿವ್ರತ್ಯಕ್ಕೆ ಭಂಗ ತರುತ್ತಾನೆ.ಆ ಸಂದರ್ಭದಲ್ಲಿ ಶಿವನು ಜಲಂಧರನ ಸಂಹಾರ ಮಾಡಿದ.
ಅಷ್ಟರಲ್ಲಿ ಸತ್ಯಾಂಶ ವೃಂದೆಗೆ ಗೊತ್ತಾಗಿ ವಿಷ್ಣುವಿಗೆ ಕಪ್ಪು ಕಲ್ಲಾಗಿ (ಸಾಲಿಗ್ರಾಮ) ಹೋಗುವಂತೆ ಶಾಪ ನೀಡಿ ಪತಿಯ ಚಿತೆಗೆ ಹಾರಿ ಪ್ರಾಣಬಿಡುತ್ತಾಳೆ.ತನ್ನ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ವಿಷ್ಣು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ ಭೂಲೋಕದಲ್ಲಿ ನೆಲೆಯಾಗುವಂತೆ ಮಾಡಿ ಉತ್ಥಾನ ದ್ವಾದಶಿಯಂದು ಸಾಲಿಗ್ರಾಮ ಮತ್ತು ತುಳಸಿಗೆ ವಿವಾಹವಾಗಲಿ ಎಂದು ಹರಸುತ್ತಾನೆ. ಇದನ್ನು ಭಕ್ತಿ ಭಾವದಿಂದ ಮಾಡಿದವರ ಬಾಳು ಹಸನಾಗಲಿ ಎಂದು ವರವಗೈಯುತ್ತಾನೆ.
ಈ ಕಥಾಹಂದರದ ಪುಣ್ಯದ ಫಲವು ದೊರಕಲೆಂದು “ತುಳಸಿ ಕಾನನಂ ಯತ್ರ ಯತ್ರ ಪದ್ಮವ ನಾನಿಚ ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:” ಎಂದು ಭಕ್ತಿಭಾವದಿಂದ ತುಳಸಿ ಕಟ್ಟೆಯ ಪ್ರದಕ್ಷಿಣೆ ಹಾಕಿದಾಗ ನಮ್ಮ ಬಾಳು ಪಾವನವಾಗುತ್ತದೆ. ಮನೆಯಂಗಳದಿ ಮುಸ್ಸಂಜೆಯ ಸಮಯದಲ್ಲಿ ಮನೆಯ ಸದಸ್ಯರು ಎಲ್ಲಾ ಒಂದಾಗಿ ತುಳಸಿ ಮತ್ತು ವಿಷ್ಣುವನ್ನು ಸ್ಮರಣೆ ಮಾಡುತ್ತಾ ಅಕ್ಷತೆ ಕುಂಕುಮ ಹೂವುಗಳನ್ನು ಅರ್ಪಿಸಿ ಪೂಜೆ ಮಾಡಬೇಕು. ಸರ್ವೇ ಜನೋ ಸುಖಿನೋ ಭವಂತು ಎಂದು ಮನಸಾರೆ ಬೇಡಬೇಕು. ಆಗ ನಮ್ಮ ಮನೆ ಮನ ಬೃಂದಾವನದಂತೆ ಪಾವನವಾಗುತ್ತದೆ.
ಸವಿತಾ (ಪೆನ್ ಟೀಂ ಸದಸ್ಯೆ)

1 COMMENT

  1. ಮೇಡಂ ನಮಸ್ತೆ, ಜಲಂಧರನನ್ನು ನಾಶ ಮಾಡಲು ಅವನ ಹೆಂಡತಿಯಾದ ವೃಂದಾಳ ಮೇಲೆ ಅತ್ಯಾಚಾರ ಮಾಡುವುದು ಶೋಭೆ ತರುವ ವಿಚಾರ ಅಲ್ಲವೇ. ಈ ರೀತಿ ದೇವತೆಗಳು ಹೆಣ್ಣನ್ನು ಅತ್ಯಾಚಾರಮಾಎಉವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ನನ್ನ ಪ್ರಶ್ನೆ ಮೇಡಂ ಒಬ್ಬ ವಿದ್ಯಾರ್ಥಿಯಾಗಿ, ತಾವು ಶಿಕ್ಷಕರಾಗಿ ಉತ್ತರಕೊಡಿ ಎಂದು ಬಯಸುವ. ಇಂತಿ ಸಾಹಿತ್ಯದ ವಿದ್ಯಾರ್ಥಿ

LEAVE A REPLY

Please enter your comment!
Please enter your name here

Most Popular

error: Content is protected !!